ಬಿಜೆಪಿ ನಿಷ್ಠಾವಂತರಿಗೆ ಪ್ರತಾಪಗೌಡ ಪಾಟೀಲರಿಂದ ಮೋಸ- ಬಸನಗೌಡ ತುರ್ವಿಹಾಳ

e-ಸುದ್ದಿ, ಮಸ್ಕಿ
ಪ್ರತಾಪಗೌಡ ಪಾಟೀಲ ಮೂಲ ಬಿಜೆಪಿಗರಿಗೆ ಅನ್ಯಾಯ ಮಾಡಿ ಮೂಲೆಗುಂಪಾಗುವಂತೆ ಮಾಡಿದ್ದನ್ನು ವಿರೋಧಿಸಿ ಕಾರ್ಯಕರ್ತರಿಗೆ ನ್ಯಾಯ ಕೊಡಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವೆ. ಕಳೆದ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ನನಗೆ 60 ಸಾವಿರ ಜನ ಆಶೀರ್ವಾದ ಮಾಡಿದ್ದೀರಿ ಅವರ ಋಣ ತೀರಿಸುವದು ನನ್ನ ಕರ್ತವ್ಯವಾಗಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಹತ್ತಿರದ ಬಯಲು ಜಾಗದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಆರ್.ಬಸನಗೌಡ ತುರ್ವಿಹಾಳ ಮಾತನಾಡಿದರು. ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ಪ್ರತಾಪಗೌಡ ಪಾಟೀಲ ಪಕ್ಷದಲ್ಲಿ ತನ್ನ ಹಿಂಬಾಲಕರನ್ನು ಮುನ್ನಲೆಗೆ ತಂದು ಮೂಲ ಬಿಜೆಪಿಯವನ್ನು ಕಡೆಗಣಿಸಿದ್ದರು. ಕಾರ್ಯಕರ್ತರು ಬಿಜೆಪಿಯಲ್ಲಿ ಇರುವುದು ಬೇಡ ಕಾಂಗ್ರೆಸ್ ಸೇರಲು ಸೂಚಿಸಿದ್ದು ಅವರ ಅಭಿಮಾನಕ್ಕೆ ಮಣಿದು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ಮಸ್ಕಿ ಕ್ಷೇತ್ರದ ಮಗನಾಗಿ ಅಭಿವೃದ್ದಿ ಕೆಲಸಮಾಡುವುದಾಗಿ ಆರ್.ಬಸನಗೌಡ ತುರ್ವಿಹಾಳ ಪ್ರತಿಜ್ಞೆ ಮಾಡಿದರು.
ಕೆಪಿಸಿಸಿ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದ ಧ್ವಜವನ್ನು ಆರ್‍ಬಸನಗೌಡ ತುರ್ವಿಹಾಳ ಅವರಿಗೆ ಕೊಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.


ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಎಸ್.ಬೋಸರಾಜ್ ಮಾತನಾಡಿ ಪ್ರತಾಪಗೌಡ ಪಾಟೀಲ ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕನಾಗಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವುದು ಬಿಟ್ಟು ಸ್ವಾರ್ಥಕ್ಕಾಗಿ ಬಿಜೆಪಿಗೆ ಮಾರಾಟವಾಗುವ ಮೂಲಕ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ ಎಂದು ತೀಕ್ಷ್ಣವಾಗಿ ಟೀಕಿಸಿದರು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಪ್ರತಾಪಗೌಡ ಪಾಟೀಲ ಅಧಿಕಾರದ ದುರಾಸೆಗಾಗಿ ಪಕ್ಷಾಂತರ ಮಾಡುತ್ತಲೇ ರಾಜಕೀಯ ಮಾಡುವ ಕನಸು ಕಾಣುತ್ತಿದ್ದಾರೆ. ಮೊದಲು ಬಿಜೆಪಿಯಲ್ಲಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸೂಚನೆ ಅರಿತು ನಮ್ಮನ್ನೆಲ್ಲಾ ಪುಸಲಾಯಿಸಿ ಕಾಂಗ್ರೆಸ್ ಪಕ್ಷಕ್ಕೆ ಬಂದರು. ಕಾಂಗ್ರೆಸ್ ಪಕ್ಷದಿಂದ ಎರಡು ಬಾರಿ ಗೆದಿದ್ದರು. ಈಗ ಅಧಿಕಾರ ಮತ್ತು ಹಣದ ದುರಾಸೆಗಾಗಿ ಪಕ್ಷಕ್ಕೆ ಮೋಸ ಮಾಡಿದ್ದಾರೆ, ಅಂತವರಿಗೆ ತಕ್ಕ ಪಾಠವನ್ನು ಈ ಚುನಾವಣೆಯಲ್ಲಿ ಕಲಿಸಬೇಕು ಎಂದರು,
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು. ಈಶ್ವರ ಖಂಡ್ರೆ, ಸತೀಶ ಜಾರಕಿ ಹೊಳೆ, ಶಾಸಕ ಅಮರೇಗೌಡ ಪಾಟೀಲ, ರಾಘವೇಂದ್ರ ಹಿಟ್ನಾಳ, ಎನ್.ಎಸ್.ಬೋಸರಾಜ್, ಇದ್ದರು.
——————–

ಹರಿದು ಬಂದ ಜನ ಸಾಗರ
ಮಸ್ಕಿ ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಮತ್ತು ಬಸನಗೌಡ ತುರ್ವಿಹಾಳ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಕ್ಕೆ ಜನ ಸಾಗರದಂತೆ ಹರಿದು ಬಂದಿತು.
120*200 ಅಡಿಯ ದೊಡ್ಡ ಪೆಂಡಾಲ್‍ನಲ್ಲಿ ಜನ ತುಂಬಿ ತುಳುಕುತ್ತಿತ್ತು. ಪೆಂಡಾಲ ಹೊರಗಡೆ, ರಸ್ತೆಯುದ್ದಕ್ಕು ಜನ ಜಮಾಯಿಸಿದ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ ಮಾತನಾಡುವಾಗ ಬಿಜೆಪಿ ಸರ್ಕಾರವನ್ನು, ಪ್ರತಪಾಗೌಡ ಪಾಟೀಲರನ್ನು ಟೀಕೆ ಮಾಡುವಾಗ ಸಭೀಕರು ಪ್ರತಿಕ್ರಿಸುತ್ತ ಪುಷ್ಟಿ ಕೊಡುತ್ತಿದ್ದರು

Don`t copy text!