ಮಹಿಳಾ ದಿನಾಚರಣೆಯಂದು ವಿಶೇಷ ವ್ಯಕ್ತಿಯ ಪರಿಚಯ
ಬಾಳ ಬಂಡಿಯ ಸಾರಥಿ
ಆಧುನಿಕ ಜೀವನ ಶೈಲಿಯಲ್ಲಿ ಕುಟುಂಬ ನಿರ್ವಹಣೆ ಒಂದು ಸವಾಲಾಗಿದೆ.ಏನೆಲ್ಲಾ ಸೌಲಭ್ಯಗಳಿದ್ದರು ಮನೆ ಮಕ್ಕಳನ್ನು ನಿರ್ವಹಿಸುವುದು ತುಂಬಾ ಕಷ್ಟವೆನ್ನುವಂತಾಗಿದೆ. ಆದರೆ ಅದು ಕೆಲವೆ ಕೆಲವರಿಗೆ ಮಾತ್ರ ಅನ್ವಯಿಸುತ್ತದೆ. ಇನ್ನು ಕೆಲವರಿಗೆ ವಿಶೇಷವಾಗಿ ಮಹಿಳೆಗೆ ಎಂತಹುದೆ ಪರಿಸ್ಥಿತಿ ಇದ್ದರೂ ಸರಿ ತನ್ನ ಕುಟುಂಬ ವನ್ನು ತಾನು ಸಮರ್ಥವಾಗಿ ನಡೆಸಿಕೊಂಡು ಹೋಗಬಲ್ಲೆ ಎನ್ನುವ ಎದೆಗಾರಿಕೆ ಇರುತ್ತದೆ.
ಅಂಥದ್ದರಲ್ಲಿ ಆದಾಯ ಎಷ್ಟೆ ಕಡಿಮೆ ಇದ್ದರು ಪತಿಯ ಹೆಗಲಿಗೆ ಹೆಗಲು ಕೊಟ್ಟು ಬಾಳ ರಥ ಎಳೆಯುವ ಮನೋಸ್ಥೈರ್ಯ ಹೊಂದಿದ ಹೆಣ್ಣುಮಕ್ಕಳಿಗೇನು ನಮ್ಮ ಸಮಾಜದಲ್ಲಿ ಕಡಿಮೆ ಇಲ್ಲಾ.
ವಿಶೇಷ ಮಹಿಳೆಯ ಪರಿಚಯವೆ ಈ ಬರಹದ ಉದ್ದೇಶ.ಅಂತರಾಷ್ಟೀಯ ಮಹಿಳಾ ದಿನಾಚರಣೆ ಈ ಸಂದರ್ಭದಲ್ಲಿ ಇಂದು ನಾನು ಪರಿಚಯಿಸಲಿರುವ ಮಹಿಳೆಯ ಸಾಧನೆ ಸಾರ್ಥಕ ಎನ್ನಿಸುತ್ತದೆ. ಅವರೆ ಶ್ರೀಮತಿ ಮೋಹಿನಿ ರಾಜು ರಾವಳೋಜಿ
ಬೆಳಗಾವಿ ನಗರ ನಿವಾಸಿ.ಓದಿದ್ದು ಮ್ಯಾಟ್ರಿಕ್ ಮಾತ್ರ.
ಮಾಡುತ್ತಿರುವ ಕೆಲಸ ಅಮೇಜಾನ್ ಸಂಸ್ಥೆಯ ಬೆಳಗಾವಿ ನಗರದಲ್ಲಿ ಕೋರಿಯರ್ ಕೆಲಸ.ಒಂದು ಕ್ಷಣ ತಮಗೆಲ್ಲಾ ಆಶ್ಚರ್ಯ ವಾಗಬಹುದು ಹೆಣ್ಣುಮಗಳೊಬ್ಬಳು ಮನೆಮನೆಗೆ ಹೋಗಿ ವಸ್ತುಗಳನ್ನು ತಲುಪಿಸುವ ಕೋರಿಯರ್ ಕೆಲಸ ಮಾಡುವುದು ಸರಳವಾದ ಕೆಲಸವೆ ಅಂತಾ.
ಆಧುನಿಕತೆಯ ಇಂದಿನ ದಿನಗಳಲ್ಲಿ ಮಹಿಳೆ ಮಾಡದ ಕೆಲಸಗಳೆ ಇಲ್ಲಾ ಎನ್ನುವುದು ನಿಜ.ಆದರೆ ಇವರು ಮಾಡುವ ಕೆಲಸ ವಿಶೇಷ ಎನ್ನಿಸಲು ಕಾರಣ ,ಇವರು ತಮ್ಮ ಒಂಬತ್ತು ತಿಂಗಳ ಹಸುಕಂದನನ್ನು ಎದೆಗೆ ಕಟ್ಟಿಕೊಂಡು ತಮ್ಮ ದ್ವಿಚಕ್ರ ವಾಹನದ ಮೂಲಕ ಈ ಕೋರಿಯರ್ ಕೆಲಸ ಮಾಡುತ್ತಿರುವುದನ್ನು ನೋಡಿದರೆ ಎಂಥವರ ಮನವು ಕರಗುವುದು.
ಉಳ್ಳವರ ಮನೆಗಳಲ್ಲಿ ಸಕಲ ಸವಲತ್ತು ಗಳ ಮಧ್ಯೆ ಇರುವ ಒಂದೆ ಒಂದು ಕೂಸನ್ನು ನೋಡಿಕೊಳ್ಳಲು ಮನೆಮಂದಿಯೊಂದಿಗೆ ಇಬ್ಬರು ಕೆಲಸದವರು ಇದ್ದೆ ಇರುತ್ತಾರೆ. ಎಳೆ ಮಕ್ಕಳನ್ನು ನೋಡಿಕೊಳ್ಳುವುದು ಇಂದಿನ ತಾಯಿಂದಿರಿಗೆ ಕಠಿಣ ಕೆಲಸವಾಗಿದೆ.ತಾಯಿ ಆದವಳು ಸದಾ ತನ್ನ ಮಗುವಿನ ಆರೋಗ್ಯ ಊಟ ಉಪಚಾರದ ಕಡೆಗೆ ವಿಶೇಷ ಗಮನ ಇರಿಸುವುದು ಜಗದ ಎಲ್ಲಾ ತಾಯಂದಿರ ಮೂಲಗುಣವಾಗಿದೆ.ಎಂಥ ಪರಸ್ಥಿತಿಯಲ್ಲಿಯು ಮಗುವಿನ ಕ್ಷೇಮವನ್ನೆ ಬಯಸುವ ತಾಯಿ ಮಮತೆಗೆ ಸಮನಾದದ್ದು ಏನು ಇಲ್ಲಾ.
ಇದೆ ವಿಷಯ ಕುರಿತು ಮೋಹಿನಿಯವರನ್ನು
ಮಾತನಾಡಿಸಿದಾಗ…..
ಈ ಕೆಲಸಾ ಮಾಡತಾ ಮಗುವನ್ನು ನೋಡಿಕೊಳ್ಳುವುದು ಕಷ್ಟ ಎನ್ನಿಸುವುದಿಲ್ಲವಾ? ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ನಿಜಕ್ಕೂ ದಂಗಾಗಿಸಿತು.ನನ್ನ ಮಗುವನ್ನು ನೋಡಿಕೊಳ್ಳುವುದು ತಾಯಿಯಾಗಿ ನನ್ನ ಜವಾಬ್ದಾರಿ.ಮನೆಯಲ್ಲಿ ಬಿಟ್ಟು ಬಂದರೆ ನೋಡಿಕೊಳ್ಳುವವರು ಯಾರು ಇಲ್ಲಾ ,ಬೇಬಿ ಸೆಂಟರಗಳಿಗೆ
ಬಿಟ್ಟು ಬರುವ ಮನಸ್ಸು ಇಲ್ಲಾ.ಮಗುವನ್ನು ಬಿಟ್ಟು ಕೆಲಸಕ್ಕೆ ಬಂದರೆ ಮನಸ್ಸೆಲ್ಲಾ ಮಗುವಿನ ಕಡೆಗೆ ಇರುತ್ತದೆ,ಸರಿಯಾಗಿ ಕೆಲಸಮಾಡಲು ಆಗದು.ಅದಕ್ಕೆ ನನ್ನ ಮಗುವನ್ನು ನನ್ನ ಜೊತೆ ಕರೆತರುವೆ.ನನಗೇನು ಇದು ಕಷ್ಟ ಅನ್ನಿಸುವುದೆ ಇಲ್ಲಾ. ಸಮಯಕ್ಕೆ ಸರಿಯಾಗಿ ಮಗುವಿಗೆ ಹಾಲುಣಿಸಿ ಕರೆತರುವೆ.ಅದು ಮಲಗಿ ಏಳುವ ಹೊತ್ತಿಗೆಲ್ಲಾ ನನ್ನ ಕೆಲಸ ಮುಗಿಸಿ ಮನೆಗೆ ಮರಳುವೆ.ನನಗೆ ಇದೆಲ್ಲಾ ತುಂಬಾ ಸರಳ.
ಮೊದಲಿನಿಂದಲು(2016) ಈ ಕೆಲಸದಲ್ಲಿ ಇರುವುದರಿಂದ ಬಹಳಷ್ಟು ಜನರ ಪರಿಚಯ ನನಗಿದೆ ಎಲ್ಲರು ನನ್ನನ್ನು ಪ್ರೀತಿ ಆದರದಿಂದ ಕಾಣುತ್ತಾರೆ ಬಹು ಮುಖ್ಯವಾಗಿ ನನ್ನನ್ನು ಗೌರವದಿಂದ ಕಾಣುತ್ತಾರೆ. ಇದು ನನಗೆ ತುಂಬಾ ಖುಷಿ ಎನ್ನಿಸುತ್ತದೆ.ಎಂದು ಹೇಳುವಾಗ ಅವರ ಮಾತಿನಲ್ಲಿ ನಿಖರತೆ ಧೈರ್ಯ ಸಾಹಸ ಹೆಮ್ಮೆ ಎಲ್ಲವು ಕಾಣುತ್ತದೆ. ಹೆಣ್ಣು ತಾಳ್ಮೆಯಲಿ ಧರಣಿಯಂತೆ ಅವಳು ಮನಸಿಟ್ಟು ಮಾಡುವ ಯಾವುದೆ ಕೆಲಸ ಎಷ್ಟೆ ಕಷ್ಠದ್ದಾದರೂ ನಿಷ್ಠೆ ಇಂದು ಮಾಡಿ ಗೆಲ್ಲುತ್ತಾಳೆ.
ಈ ಹೆಣ್ಣುಮಗಳನ್ನು ನೋಡುತ್ತಿದ್ದರೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕಣ್ಣಮುಂದೆ ಬರುತ್ತಾರೆ.ಬೆನ್ನಿಗೆ ಮಗುವನ್ನು ಕಟ್ಟಿಕೊಂಡು ಸಮರಾಂಗಣದಲ್ಲಿ ಖಡ್ಗ ಝಳಪಿಸಿ ಕಲಿತನದಿಂದ ವೈರಿಗಳ ಸದೆಬಡೆಯಲು ಅವರು ಹೋರಾಡಿದರೆ ಇವರು ಬಾಳ ಬಂಡಿಯನ್ನು ಎಳೆಯಲು ಮಗುವನ್ನು ಎದೆಗಪ್ಪಿ ಹೋರಾಡುತ್ತಿರುವಂತೆ ಅನ್ನಿಸುತ್ತದೆ.
ಮನೆಮನೆಗೆ ಸುತ್ತಿ ಮಾಡುವ ಈ ಕೆಲಸ ಇವರಿಗೆಂದು ಭಾರ ಅನ್ನಿಸಲೆ ಇಲ್ಲಾ ಅನ್ನುವಂತೆ ಮುಖದ ಮೇಲೆ ಸದಾ ನಗು ಇರುತ್ತದೆ.
ತಾವೆನೆಂದು ಜಗಕೆ ತೋರಿಸಲು ತಮ್ಮೆಲ್ಲಾ ಅಧಿಕಾರ ಅಂತಸ್ತು ಪದವಿ ಪ್ರಶಸ್ತಿಗಳ ಬೆನ್ನು ಹತ್ತುವವರ ಮಧ್ಯೆ
ಪರಿಪೂರ್ಣ ಮಹಿಳೆ ಎಂದರೆ ತಾನೆ ಎಂಬುದನ್ನು ಬದುಕಿತೋರಿಸುತ್ತಿರುವ ಶ್ರೀಮತಿ ಮೋಹಿನಿ ನಿಜಕ್ಕೂ ಮಾದರಿ ಮಹಿಳೆ. ನಮ್ಮೇಲ್ಲರ ಮಧ್ಯೆ ಇದ್ದರೂ
ಇವರನ್ನು ಗುರುತಿಸುವ ಸಮಯ ಇಗ ಒದಗಿ ಬಂದಿರುವುದು ಸುಸಮಯ ಎನ್ನಿಸುತ್ತದೆ.
ಒಂಬತ್ತು ತಿಂಗಳು ಮಗುವನ್ನು ತನ್ನೆದುರಲ್ಲಿ ಹೊತ್ತು ನಡೆವ ತಾಯಿ ಹೆತ್ತ ನಂತರವು ಎದೆಗಪ್ಪಿ ಬೆಳೆಸುವುದು ಅದು ಕೇವಲ ಹೆಣ್ಣಿಗೆ ಮಾತ್ರ ಸಾಧ್ಯ. ತಮಗಿರುವ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸ್ವಂತದ್ದು ಎನಲು ಒಂದು ಪುಟ್ಟ ಕನಸಿನ ಮನೆ ಇದೆ ಇವರ ಗುರಿ.ತಾವು ತಮ್ಮ ಪತಿ ಕಡಿಮೆ ಶಿಕ್ಷಣ ಪಡೆದ ಕಾರಣ ಉತ್ತಮ ಸಂಬಳದ ಕೆಲಸ ಪಡೆಯಲಾಗದ ಪರಸ್ಥಿತಿ ತಮ್ಮ ಮಕ್ಕಳಿಗೂ ಬರಬಾರದು ಎಂಬ ಮುಂದಾಲೋಚನೆ ಇವರದ್ದು. ಅದಕ್ಕಾಗಿ ಪತಿ ರಾಜು ಅವರ ಸಣ್ಣ ಸಂಬಳ ಸಾಲದು , ಹೆಚ್ಚಿನದನ್ನು ಭರಿಸಲು ಅವರು ವಿಶೇಷವಾದ ಈ ಶ್ರಮದ ಕೆಲಸದಲ್ಲಿ ತೊಡಗಿ ಅದರಲ್ಲಿ ಯಶಸ್ವಿಗೊಂಡಿರುವ ಶ್ರೀಮತಿ ಮೋಹಿನಿ
ಅವರಿಗೆ ಈ ಬರಹದ ಮೂಲಕ ಅಭಿನಂದನೆ ಸಲ್ಲಿಸುವೆ.
ಲೇಖಕರು : ಶ್ರೀಮತಿ ಆಶಾ ಎಸ್ ಯಮಕನಮರಡಿ
ಬೆಳಗಾವಿ