ಅಕ್ಕನೊಂದಿಗೆ ಯುಗಾದಿಯ ಸಂಭ್ರಮ
ವಸಂತ ರುತುವಿನಾರಂಭ!
ಚೈತ್ರ ಮಾಸದ ಮೊದಲ ದಿನ!
ಯುಗಾದಿ ಹಬ್ಬದ ಹೊಸ ವರ್ಷದಾಚರಣೆಯ ಸಡಗರ!
ಬಲಿತ ಮಾವಿನ ಹುಳಿ, ಸಿಹಿ ಹಣ್ಣಾಗುವ ಸನ್ನಾಹದಲಿ!
ಬೇವಿನ ಕಡು ಕಹಿ, ಸಿಹಿಯಾಗಿಸುವ ಜೀವನದ ಸತ್ಯಕ್ಕೆ ಸಾಕ್ಷಿಯಾದ ಹಬ್ಬ!
ಇಂತಹ ಸಮಯದಲ್ಲಿ ನಿಸರ್ಗದ ವಚನಗಳ ಒಡತಿ ಅಕ್ಕಮಹಾದೇವಿಯ ನೆನಪು. ಇದು ವಸಂತ ರುತುವಿನ ಮಾವನ್ನು ಎಂಜಲು ಮಾಡಿದ ಕೋಗಿಲೆಯ ಕುಹೂ ಕುಹೂ ಆಹ್ಲಾದದಂತೆ! ಮನುಕುಲಕೆ ಮೈ ನವಿರೇಳಿಸುವ ರೋಮಾಂಚನ ನೀಡುವ ಕ್ಷಣ!
ಅಕ್ಕಮಹಾದೇವಿಗೂ ಪ್ರಕೃತಿಗೂ ಅವಿನಾಭಾವ ನಂಟು. ಅವಳಿಗೆ ನಿಸರ್ಗದಲ್ಲಿ ಅದಮ್ಯ ಪ್ರೀತಿ, ಭಕ್ತಿ, ನಂಬಿಕೆ! ಗಿಡ-ಗಂಟೆ, ಪಶು-ಪಕ್ಷಿ, ಬೆಟ್ಟ-ಗುಡ್ಡ, ಹಳ್ಳ-ಕೊಳ್ಳ, ಗಿಡ-ಮರ ಇತ್ಯಾದಿಗಳೆಲ್ಲಾ ಅವಳ ವಚನಗಳಲ್ಲಿ ಸುಂದರ ಪ್ರತಿಮೆಗಳಾಗಿ, ಆಕರ್ಷಕ ರೂಪಕಗಳಾಗಿ, ಅರ್ಥಪೂರ್ಣ ಹೋಲಿಕೆಗಳಾಗಿ, ಒಡಮೂಡುತ್ತ ಚುಂಬಕದಂತೆ ಇಂದಿಗೂ ಸೆಳೆಯುತ್ತ ಬಂದಿವೆ. ಅದಕ್ಕೆ ಕಾರಣ ಅವಳಲ್ಲಿರುವ ಪಂಚೇಂದ್ರಿಯಗಳ ‘ಅನುಭವ’ದ ಹಂತ ಮೀರಿದ ‘ಅನುಭಾವ’ ಸ್ಥಿತಿ. ಹಾಗೆಯೇ ಪಂಚಭೂತಗಳಿಗೆ ಹತ್ತಿರವಾದ ಅನ್ಯೋನ್ಯತೆಯ ಅನನ್ಯತೆ!
ಚಿಲಿಮಿಲಿ ಎಂದೋದುವ ಗಿಳಿಗಳಿರಾ
ನೀವು ಕಾಣಿರೆ ನೀವು ಕಾಣಿರೆ?
ಸರವೆತ್ತಿ ಪಾಡುವ ಕೋಗಿಲೆಗಳಿರಾ
ನೀವು ಕಾಣಿರೆ ನೀವು ಕಾಣಿರೆ?
ಎರಗಿ ಬಂದಾಡುವ ತುಂಬಿಗಳಿರಾ
ನೀವು ಕಾಣಿರೆ ನೀವು ಕಾಣಿರೆ?
ಕೊಳನತಡಿಯೊಳಾಡುವ ಹಂಸೆಗಳಿರಾ
ನೀವು ಕಾಣಿರೆ ನೀವು ಕಾಣಿರೆ?
ಗಿರಿ ಗಹ್ವರದೊಳಗಾಡುವ ನವಿಲುಗಳಿರಾ
ನೀವು ಕಾಣಿರೆ ನೀವು ಕಾಣಿರೆ?
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ?
ಅಕ್ಕನ ಅನೇಕ ಪ್ರಕೃತಿ ವಚನಗಳಲ್ಲಿ ಇದೊಂದೇ ಒಂದು ವಚನ ಸಾಕು, ಬೆಸೆದ ಆ ನಂಟನು ಅರಿಯಲು. ಈ ನಿಸರ್ಗ ಯಾವತ್ತೂ ಅವಳ ಸಂಗಾತಿ. ತನ್ನ ಆತ್ಮ ಸಂಗಾತಿಯ ಶೋಧವನು ಗಿಳಿ, ಕೋಗಿಲೆ, ದುಂಬಿ, ಹಂಸ, ನವಿಲುಗಳಿಗೆ ನಿವೇದಿಸಿಕೊಳ್ಳುವ ಪರಿ ಬೆರಗು ಮೂಡಿಸುವಂತಹದು. ನಾವು ಸಾಮಾನ್ಯರಿಗೆ ಇದೊಂದು ಮರುಳುತನವೆ ಸರಿ. ಈ ನಿಗೂಢ ಬಯಲಾಗಲು ನಾವೂ ಬಯಲಾಗಬೇಕಾದೀತು!
ಈಳೆ ನಿಂಬೆ ಮಾವು ಮಾದಲಕೆ
ಹುಳಿ ನೀರನೆರೆದವರಾರಯ್ಯಾ?
ಕಬ್ಬು ಬಾಳೆ ಹಲಸು ನಾರಿವಾಳಕ್ಕೆ
ಸಿಹಿ ನೀರನೆರೆದವರಾರಯ್ಯಾ?
ಕಳವೆ ರಾಜಾನ್ನ ಶಾಲ್ಯನ್ನಕ್ಕೆ
ಓಗರದ ಉದಕವನೆರೆದವರಾರಯ್ಯಾ?
ಮರುಗ ಮಲ್ಲಿಗೆ ಪಚ್ಚೆ ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲ ಒಂದೆ ನೆಲ ಒಂದೆ ಆಕಾಶ ಒಂದೆ
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿರ್ದಡೇನು?
ತನ್ನ ಪರಿ ಬೇರೆ
ಅಕ್ಕನ ಅನುಭಾವದಲೆಗೆ ಈ ಸೃಷ್ಟಿಯ ಗುಟ್ಟನ್ನು ತಿಳಿಯುವ ಅದಮ್ಯ ಹಂಬಲ. ಅವನೇ ನಿರ್ಮಿಸಿದ ಪ್ರಪಂಚದಲ್ಲಿ ಅವನು ಅಡಗಿಕೊಂಡ ಪರಿಗೆ ಬೆರಗಾಗುತ್ತಾಳೆ. ಎಲ್ಲಾ ಹೂ – ಹಣ್ಣುಗಳು, ಒಂದೇ ನೀರು, ಭೂಮಿ, ಆಕಾಶ, ಗಾಳಿ, ಬೆಳಕನ್ನೇ ಅವಲಂಬಿಸಿದ್ದರೂ ವಿವಿಧ ರೂಪದಲ್ಲಿ ಹೊರಹೊಮ್ಮುತ್ತವೆ. ಅದೇ ರೀತಿ ಈ ಜಗತ್ತಿನಲ್ಲಿರುವ ಎಲ್ಲಾ ಜೀವ ರಾಶಿಗಳು ಬದುಕು ಸಾಗಿಸುತ್ತಿದ್ದರೂ, ಎಲ್ಲರ ಮಧ್ಯೆ ಅವನ ರೀತಿಯೇ ಬೇರೆ. ಪ್ರಕೃತಿಯ ವೈವಿಧ್ಯತೆ ಮತ್ತು ವೈಶಿಷ್ಟ್ಯಗಳಲ್ಲಿ ಪರಮಾತ್ಮನನ್ನು ಕಾಣುವ ಅಚಲತೆ. ಹಾಗೆಯೇ ಅಲ್ಲಿಯ ದೃಷ್ಟಾಂತಗಳ ಮೂಲಕ ಚೆನ್ನಮಲ್ಲಿಕಾರ್ಜುನನ ಇರವನ್ನು ಚಿತ್ರಿಸುತ್ತ ಅನಾವರಣಗೊಳಿಸುವ ವಿಸ್ಮಯ!
ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜಿದಂತೆ
ಭಾವದ ಮರೆಯ ಬ್ರಹ್ಮನಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು!
ನೆಲ ನಿಧಾನಕೆ ಸುತ್ತುತ್ತಿರುವಂತೆ, ಹಣ್ಣಿನಲ್ಲಡಗಿದ ರುಚಿಯಂತೆ, ಗಣಿಯಲ್ಲಡಗಿದ ಚಿನ್ನದಂತೆ, ಎಳ್ಳಿನೊಳಗಿನ ಎಣ್ಣೆಯಂತೆ, ಮರದೊಳಗಿರುವ ಕಿಚ್ಚಿನಂತೆ, ಮನುಷ್ಯನ ಭಾವನೆಯೊಳಗಿರುವ ಹೊಸ ಸೃಷ್ಟಿಯ ಸೃಜನಶೀಲತೆಯಂತೆ, ಎಲ್ಲೆಡೆಯೂ ಚೆನ್ನಮಲ್ಲಿಕಾರ್ಜುನನಿದ್ದಾನೆ. ಅವನ ನಿಲುವು ಹೀಗೇ ಇರಬಹುದೆಂದು ಹುಡುಕಿಕೊಂಡು ಹೋಗಿ, ಅರಿಯುವ ಪ್ರಯತ್ನ ಮಾಡಬಾರದು. ಅವನು ನಮ್ಮೊಳಗೇ ಇದ್ದಾನೆ ಎಂದು ಅಕ್ಕ ಬಹಳ ಸೂಕ್ಷ್ಮವಾಗಿ, ನವಿರಾದ ಹೋಲಿಕೆಗಳನ್ನು ಕೊಡುತ್ತ, ಸ್ಪಷ್ಟವಾದ ತನ್ನ ಅನುಭಾವದ ಮಾರ್ಗದಲ್ಲಿ ಮುಂದೆ ಸಾಗುತ್ತಾಳೆ.
ಅಕ್ಕ ಇಡೀ ನಿಸರ್ಗವನ್ನು ತನ್ನದಾಗಿಸಿಕೊಳ್ಳಲು ಹೇಗೆ ಸಾಧ್ಯವಾಯಿತು? ಎನ್ನುವ ಪ್ರಶ್ನೆ ನಮ್ಮನ್ನು ಕಾಡಿದರೆ ಒಳಿತು. ಅಕ್ಕ ಒಂದಿಷ್ಟು ಹತ್ತಿರವಾಗಬಹುದು. ಅವಳು ಮನುಷ್ಯನ ಆದಿ ಮತ್ತು ಅಂತ್ಯವನ್ನು ಪ್ರಕೃತಿಯೊಂದಿಗೆ ಸಮೀಕರಿಸಿ ಅರ್ಥೈಸಿಕೊಂಡವಳು. ತನು ಕದಳಿ ಮನ ಕದಳಿ ಎಂದವಳು.
ಪೃಥ್ವಿ ಪೃಥ್ವಿಯ ಕೂಡದ ಮುನ್ನ
ಅಪ್ಪು ಅಪ್ಪುವ ಕೂಡದ ಮುನ್ನ
ತೇಜ ತೇಜವ ಕೂಡದ ಮುನ್ನ
ವಾಯು ವಾಯುವ ಕೂಡದ ಮುನ್ನ
ಆಕಾಶ ಆಕಾಶವ ಕೂಡದ ಮುನ್ನ
ಪಂಚೇಂದ್ರಿಯಂಗಳೆಲ್ಲ ಹಂಚುಹರಿಯಾಗದ ಮುನ್ನ ಚೆನ್ನಮಲ್ಲಿಕಾರ್ಜುನಂಗೆ ಶರಣೆನ್ನಿರೆ.
ಮನುಷ್ಯನಲ್ಲಿರುವ ಪಂಚೇಂದ್ರಿಯಗಳನ್ನು ಪ್ರಕೃತಿಯಲ್ಲಿರುವ ಪಂಚಭೂತಗಳೊಂದಿಗೆ ಸಮೀಕರಿಸಿದ ವಚನವಿದು. ಮನುಷ್ಯನ ಒಳಹೊರಗು, ಅಂತರಂಗ ಬಹಿರಂಗ, ಶರಣರ ಬಯಲು ಮತ್ತು ಆಲಯ, ಇವನ್ನೆಲ್ಲಾ ಅರಿಯುವ ಪ್ರಯತ್ನದಲಿ ಉತ್ತರ ಸಿಗಬಹುದು. ಅಂದರೆ ಪಂಚೇಂದ್ರಿಯಗಳು ಪಂಚಭೂತಗಳಲಿ ಲೀನವಾಗುವ ಸ್ಥಿತಿಯ ಪರಿಜ್ಞಾನ. ಈ ವಾಸ್ತವ ದರ್ಶನವೇ ಅಕ್ಕನ ಪ್ರಕೃತಿ ಪ್ರೀತಿ, ಪ್ರಕೃತಿ ಭಕ್ತಿ! ಅಕ್ಕ ಪ್ರಕೃತಿಯನ್ನು ನೋಡುವ ಅನುಭಾವದ ದೃಷ್ಟಿಕೋನ, ನಮಗೆ ಸುಂದರ ಕಲ್ಪನೆ ಎನಿಸಬಹುದು. ಅವಳ ಕಾವ್ಯ ಶಕ್ತಿಗೆ ಮನಸೂರೆಗೊಂಡು ಮಾರು ಹೋಗಬಹುದು. ಈ ದ್ರಾಕ್ಷಿ ಹುಳಿ ಎಂದು ಅರಿವಿಗೆ ಬಾರದೆ ಸುಮ್ಮನಾಗಬಹುದು. ಆದರೆ ಅಕ್ಕನನ್ನು ತಲುಪುವುದು ಅಷ್ಟು ಸುಲಭವಲ್ಲ, ಈ ನಿಸರ್ಗದಷ್ಟೇ ವಿಸ್ಮಯ! ಇದು ಅಕ್ಕನ ವ್ಯಕ್ತಿತ್ವ.
ಪ್ರತಿ ವರ್ಷದ ಯುಗಾದಿಗೆ ಎಲ್ಲವೂ ಹೊಸತು. ಹೊಸ ಚಿಗುರು, ಹೊಸ ಬೆಳೆ, ಹೊಸ ಫಸಲು, ಯುಗಾದಿಗೆ ನಿಸರ್ಗ ತನ್ನ ಆರಂಭದ ನಾವೀನ್ಯತೆ ತೋರುತ್ತದೆ. ಇದು ಎಲ್ಲರ ಮೈ ಮನಗಳಲಿ ಸಂತಸ ಸೃಷ್ಟಿಸುವ ಸಮಯ. ಹಾಗೆಯೇ ಅಕ್ಕನ ವಚನಗಳು ಪ್ರತಿ ಓದಿಗೂ ಹೊಸ ಅನುಭವ, ಅನುಭಾವ ನೀಡುವ ಚಿರನೂತನ ಸಂತಸ!
–ಸಿಕಾ