ಆಯ್ದಕ್ಕಿ ಮಾರಯ್ಯ
ಕಾಯಕಕ್ಕಿಂತ ಮಿಗಿಲಾದ ಪೂಜೆಯಿಲ್ಲ, ಕಾಯಕಕ್ಕಿಂತ ಮಹತ್ವದ ನೇಮವಿಲ್ಲ, ಕಾಯಕ ಮನುಷ್ಯನ ಘನತೆ, ಕಾಯಕ ಮನುಷ್ಯನ ಧರ್ಮ ಎನ್ನುತ್ತ ಕಾಯಕ-ದಾಸೋಹ ಕ್ರಿಯೆಗಳನ್ನೇ ಉಸಿರಾಡಿದ ನಮ್ಮ ಶರಣ ದಂಪತಿಗಳು ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ.
ಶರಣ ಪರಂಪರೆಯು ಕಾಯಕಕ್ಕೆ ಕೊಟ್ಟ ಮಹತ್ವ ಅದ್ಭುತವಾದದ್ದು. ಅವರು ಪರಿಚಯಿಸಿದ ಕಾಯಕ-ದಾಸೋಹ ತತ್ವ ಎಲ್ಲ ಕಾಲದಲ್ಲಿಯೂ ಎಲ್ಲರಿಗೂ ಆದರ್ಶಪ್ರಾಯವಾದದ್ದು. ವಾಸ್ತವವಾಗಿ ಕಾಯಕದ ಪೂರ್ಣ ಸ್ವರೂಪವನ್ನು ನಿತ್ಯ ಜೀವನದ ಆಚರಣೆಯಲ್ಲಿ ಸಾಧಿಸಿ, ಅದನ್ನು ಅನುಸರಿಸಿದವ ಮಾರಯ್ಯ. ಆತನ ಪತ್ನಿ ಲಕ್ಕಮ್ಮನಂತೂ ಕಾಯಕ ನಿಷ್ಥೆಯೇ ಮೈವೆತ್ತ ಮೂರ್ತಿ. ಒಮ್ಮೆ ಮಾರಯ್ಯ ಅಗತ್ಯಕ್ಕಿಂತ ಹೆಚ್ಚಿನ ಅಕ್ಕಿಯನ್ನು ಮನೆಗೆ ತಂದಾಗ ಆ ಹೆಚ್ಚಾದ ಅಕ್ಕಿಯ ಆಶೆ ನಮಗೆ ಬೇಡ, ಅದನ್ನು ಶಿವನು ಮೆಚ್ಚುವುದಿಲ್ಲ, ಮರಳಿ ಸುರಿದು ಬಾ ಎಂದು ಪತಿಗೆ ತಿಳಿಹೇಳಿದ ದಿಟ್ಟತನ ಆಕೆಯದು. ಅಂದಂದಿನ ಕಾಯಕವನ್ನು ಅಂದಂದೇ ಮಾಡಿ ಶುದ್ಧರಾಗಬೇಕು ಎಂಬ ನಿಷ್ಠೆಯಿಂದ ತಮ್ಮ ಸಾಧನೆಯ ಫಲವನ್ನು ಲೋಕಕ್ಕೆ ವಿನಿಯೋಗಿಸಿದ ಈ ದಂಪತಿಗಳು ಅದ್ವಿತೀಯ ವಚನಕಾರರೂ ಹೌದು.
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನನಾಗಿ ಕಲ್ಯಾಣದಲ್ಲಿದ್ದ ಶರಣ ಮಾರಯ್ಯ ಅನುಭವ ಮಂಟಪದ ಅನುಭಾವಿಗಳಲ್ಲಿ ಒಬ್ಬ. ಬಸವಣ್ಣನವರ ಮಹಾಮನೆಯ ಮುಂದೆ ಚೆಲ್ಲಿದ ಅಕ್ಕಿಯನ್ನು ಆಯುವುದು ಆತನ ಕೆಲಸ ಎಂದು ವಿದ್ವಾಂಸರು ಹಲವು ಕಡೆ ಉಲ್ಲೇಖಿಸಿದ್ದಾರೆ. ಆದರೆ ಆಯ್ದಕ್ಕಿ ಎಂದರೆ ‘ಆಯ’ ದ ಅಕ್ಕಿ. ಅಂದರೆ ಕೂಲಿಗಾಗಿ ಕಾಳು ಎಂಬ ಮಾತಿನಂತೆ ಕೂಲಿಯ ಅಕ್ಕಿಯಿಂದ ದಾಸೋಹ ನಡೆಸುತ್ತ ಆಯ್ದಕ್ಕಿ ಮಾರಯ್ಯನಾದ ಎಂಬುದು ಸೂಕ್ತ ಮತ್ತು ಸತ್ಯ ಎಂದು ಹಲವು ವಿದ್ವಾಂಸರ ವಾದ.
ಮಾರಯ್ಯ ಮೂಲತ: ರಾಯಚೂರು ಜಿಲ್ಲೆ, ಲಿಂಗಸಗೂರು ತಾಲೂಕಿನ ಅಮರೇಶ್ವರ ಗ್ರಾಮದವನು ಎಂದು ಉಲ್ಲೇಖಿತವಾಗಿದೆ. “ಅಮರೇಶ್ವರಲಿಂಗ” ಎಂಬ ಅಂಕಿತದಿಂದ ಈತ ಬರೆದ ಒಟ್ಟು ೩೨ ವಚನಗಳು ದೊರೆತಿವೆ. ಒಮ್ಮೆ ಅನುಭವ ಮಂಟಪದಲ್ಲಿ ಕಾಯಕವನ್ನು ಕುರಿತು ಶರಣ ಮಾರಯ್ಯ ಎತ್ತಿದ ಸಂದೇಹವನ್ನು, ಅದಕ್ಕೆ ಅಲ್ಲಮಪ್ರಭುಗಳು ಕೊಟ್ಟ ಉತ್ತರವನ್ನು ಶೂನ್ಯಸಂಪಾದನೆ ಬಹಳ ಅರ್ಥವತ್ತಾಗಿ ಚಿತ್ರಿಸಿದೆ. “ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು” ಎನ್ನುವ ವಚನದಲ್ಲಿ ವ್ಯಕ್ತಿಯು ತಾನು ಕೈಕೊಂಡಿರುವ ಕಾಯಕದಲ್ಲಿ ತಲ್ಲೀನತೆಯಿಂದ ತೊಡಗಿಕೊಳ್ಳಬೇಕೆಂಬುದನ್ನು ಈ ವಚನದಲ್ಲಿ ಹೇಳಲಾಗಿದೆ. ಕಾಯಕವೇ ಕೈಲಾಸವಾದುದರಿಂದ ಗುರು ಲಿಂಗ ಜಂಗಮ ಈ ತ್ರಿವಿಧ ದಾಸೋಹದ ಹಂಗಾದರೂ ಏತಕ್ಕೆ ಎಂಬ ವಾದವಿದೆ.
ವಚನ:
ಭಕ್ತರಿಗೆ ಬಡತನವುಂಟೆ? ಸತ್ಯರಿಗೆ ಕರ್ಮವುಂಟೆ?
ಚಿತ್ತಮುಟ್ಟಿ ಸೇವೆ ಮಾಡುವ ಭಕ್ತಂಗೆ ಮರ್ತ್ಯ
ಕೈಲಾಸವೆಂಬುದುಂಟೆ?
ಆತನಿದ್ದುದೆ ಸುಕ್ಷೇತ್ರ,
ಆತನಂಗವೆ ಅಮರೇಶ್ವರ ಲಿಂಗದ ಸಂಗಸುಖ..
ಶರಣರ ಹಿರಿಮೆಯನ್ನು ಈ ವಚನದಲ್ಲಿ ಹೇಳಲಾಗಿದೆ. ಭಕ್ತನಾದವನಿಗೆ ಬಡತನವೆಂದೂ ಕಾಡದು. ಆತ ಹೃದಯ ಶ್ರೀಮಂತ. ಸತ್ಯ ನಿಷ್ಠರಿಗೆ ಹಿಂದಿನ ಜನ್ಮಗಳ ಕರ್ಮಫಲಗಳು ಅನ್ವಯಿಸಲಾರವು. ಯಾರು ಅತ್ಯಂತ ನಿಷ್ಠೆಯಿಂದ ಲಿಂಗಪೂಜೆ, ಜಂಗಮ ದಾಸೋಹ ಮಾಡುವರೋ ಅಂತವರಿಗೆ ಇದು ಭುವಿ, ಇದು ಕೈಲಾಸ ಎಂಬ ಭೇದ ಕಾಣದು. ಅಂತಹ ಶರಣರು ಎಲ್ಲಿ ಇರುವರೋ ಅದೇ ಸುಕ್ಷೇತ್ರವಾಗಿರುತ್ತದೆ. ಆತನ ಕಾಯವೇ ಪರಮಾತ್ಮನಿಗೆ ಸಂಗಸುಖವಾಗುತ್ತದೆ ಎಂಬುದು ಈ ವಚನದ ಒಟ್ಟು ತಾತ್ಪರ್ಯ.
ಅಂದಂದಿನ ಕಾಯಕವನ್ನು ಅಂದಂದೇ ಮಾಡಿ ಶುದ್ಧರಾಗಬೇಕು ಎಂಬ ನಿಸ್ವಾರ್ಥ ನಿಷ್ಠೆಯಿಂದ ತಮ್ಮ ಸಾಧನೆಯ ಫಲವನ್ನು ಲೋಕಕ್ಕೆ ವಿನಿಯೋಗಿಸಿದ ಮಾರಯ್ಯ ದಂಪತಿಗಳು ಶಿವಶರಣರಲ್ಲಿ ಒಂದು ಪ್ರಮುಖ ಸ್ಥಾನ ಪಡೆದಿದ್ದಾರೆ.
–ಶ್ರೀಮತಿ ಉಮಾ ಬಾಗಲಕೋಟ, ಧಾರವಾಡ