*ಸ್ವಾಮಿರಾವ ಕುಲಕರ್ಣಿ’
ಮಸ್ಕಿ ತಲೇಖಾನದ ಪರುಷ ಬಟ್ಟಲು
ಪರುಷಮಣಿ ಸನ್ನಿಧಿಯ ತವನಿಧಿ
ಸಾಹಿತ್ಯ ಸಂಗೀತದ ದಿವ್ಯ ಚೇತನವು
ಸ್ವಾಮಿರಾವ ಕುಲಕರಣಿ ಎಂಬ ದಿವ್ಯ
ಸನ್ನಿಧಾನದ ಆನಂದದ ಸೊಬಗು!
ರಾಯಚೂರು ದಾಸ ಸಾಹಿತ್ಯದ ತವರೂರು
ಅಮೋಘ ತೊಟ್ಟಿಲ ಐತಿಹ್ಯದ ಪುಣ್ಯರಸ
ದಾಸಾಮೃತ ಪಂಚಾಮೃತದ ಕಡೆಗೋಲು
ಲೋಲಗಾನ ಹರಿ ಗೋವಿಂದ ಸಂಭ್ರಮ!
ವೈಕುಂಠಪತಿ ನೆಲೆಸಿದ ನಿಜ ಹೊನ್ನ ತೇರು ಅದುವೇ
ಅರಳುಮಲ್ಲಿಗೆ ಪಾರ್ಥಸಾರಥಿಯ ಚೈತನ್ಯದಾಮೃತ
ಅದಕೆ ಬೇಕೇ ಬೇಕು ಸ್ವಾಮಿರಾಯರೆಂಬ ಬೆಳದಿಂಗಳು
ಎಲ್ಲ ಸೇರಿ ಆಗಿ ಹೋಯಿತು ಕೃಷ್ಣ ರಸಾಯನ ತೀರ್ಥ!
ಗುರುವ ಒಲಿಸಿ ಸಾಹಿತ್ಯ ರಸದೌತಣವ
ಧರಣಿಯಲಿ ಕಾಮಧೇನು ಕಲ್ಪವೃಕ್ಷದ
ತೆರದಿ ಎಲ್ಲರಿಗೂ ಕೃಪೆದೋರಿದ ಬೆಳಕು
ಎಂತು ಪೊಗಳಲಿ ಗುರು ಗುರುರಾಯರನು!
ಅಣ್ಣ ವಿಠ್ಠಲರಾಯರ ಪ್ರೀತಿ ಅನುಬಂಧ
ತವಗ ಭೀಮಸೇನರಾಯರ ಹಾರೈಕೆಯ
ನಾರಾಯಣನ ಅಪರಿಮಿತ ಹರ್ಷ ಸುಧೆ
ಶಿರಪುರ ಪ್ರಕಾಶನದ ಹರ್ಷೋದ್ಗಾರವು!
ಕಕ್ಕ ಗೋವಿಂದರಾಯರ ಗಮಕ ವಾಚನ
ಅಪ್ಪ ಭೀಮಶೇನರಾಯರ ವ್ಯಾಖ್ಯಾನವ
ಕೇಳಿ ಕಲಿಯುಗ ದ್ವಾಪರವಾಯಿತು ಇಲ್ಲಿ
ಕೀರ್ತಿನಾಥ ಕುರ್ತಕೋಟಿ ಅವರ ಕಂಠದೀ
ಬಂದ ಕುಮಾರವ್ಯಾಸ ಭಾರತ ಶ್ರೇಷ್ಠತೆಯಲಿ!
‘ತಿಳಿದಿತ್ತೆಂದರೆ ತಿಳಿಸಿ ಹೇಳಣ್ಣ’ಎಂದ ಕಾರಂತ
ಶಿವರಾಮರ ಪರುಷ ಬಟ್ಟಲು ತುಂಬಿ ತುಳುಕಿ
ಹರಿಯಿತು ಕನ್ನಡ ಸಾಹಿತ್ಯ ಸಂಘದ ಹೃದಯದಿ
ಮಳೆಯಲೂ ಸಾಹಿತ್ಯ ರಸಗವಳದ ಆಸ್ವಾದನೆ
ಕಡಲತೀರ ಭಾರ್ಗವರೊಡನಾಟದ ರಾಗಾಲಾಪ!
ಬೆಟ್ಟವೇರಿ ಹೆಬ್ಬಂಡೆಯಲಿ ಅರಳಿತು ಮಲ್ಲಿಗೆ
ದೀಪ ಬೆಳಗಿಸಿತು ಕಾವ್ಯದ ಜೊತೆ ರಂಗಸಂಗ
ಕಲಾವಿದರ ನಟನೆ ಹೃದಯದಿ ಅಚ್ಚೊತ್ತಿತು
ಕಲಬುರಗಿ ಕಲರವವಾಯಿತು ಖುಷಿ ಖುಷಿ
ಚೆನ್ನೈ ನಾಟಕ ಒದಗಿಸಿತು ಗಾನ ಕೋಗಿಲೆ
ಪಿಬಿ ಶ್ರೀನಿವಾಸರ ಭೇಟಿ ಸಂಗೀತ ಸಂಗಮ
ರಸಬಾಳೆ ಪ್ರೀತಿಯ ಮಗಳು ಅಮೃತಳಂತೆ!
ಸವಿತಾ ಬಾಳ ಸಂಜೀವಿನಿ ಜೊತೆ ಅಮೃತಾ
ಅಳಿಯ ಪ್ರವೀಣ ತಂಗಿ ಭೀಮಬಾಯಿ ಪುತ್ರ
ಅಡವಿರಾಯರ ಪ್ರೀತಿ ಅಂತ:ಕರುಣದಲಿ
ಪವನ ಪ್ರದೀಪ ನಮಿತಾ ಬೆಳಕಿನ ಪಾಯಸ
ನಾರಾಯಣನೇ ಸರ್ವಸ್ವ ಸ್ವಾಮಿರಾಯರಿಗೆ!
ಕನ್ನಡ ಸಾರಸ್ವತ ಲೋಕಕೆ ಅರ್ಪಿಸಿದಿರಿ ನೀವು
ಗದ್ಯ ಪದ್ಯ ನಾಟಕ ದಾಸ ಸಾಹಿತ್ಯದ ಜಾತ್ರೆತೇರು
ಆಕಾಶವಾಣಿ ದೂರದರ್ಶನಕೂ ಸೈ ಎಂದಿರಲ್ಲ
ಸಾಕ್ಷ್ಯಚಿತ್ರ ಸಿನೇಮಾ ಧಾರಾವಾಹಿ ಚೈತ್ರವನ!
ಸುಗಮ ಸಂಗೀತದ ಶಿಬಿರದ ಮಂದಹಾಸದಲಿ
ಬಿಕೆ ಸುಮಿತ್ರ ಇಂದು ನಾಗರಾಜ ಮುದ್ದುಕೃಷ್ಣರು
ಅಲೆ ಅಲೆ ಸಂಗೀತದ ಸುರನದಿ ಹರಿಯಿತಲ್ಲವೋ
ಇದು ನೂತನ ವಿದ್ಯಾಲಯಕೆ ಇದು ಕಿರೀಟ ನೋಡಿ
ಸಂಗೀತ ವಿಭಾಗದ ಬಡಿಗೇರರು ಕಳಶಪ್ರಾಯರು!
ಸ್ವಾಮಿರಾಯರ ಜೀವನ ಪಥ ಸಾಗಿತು ಕಲಬುರಗಿಯ
ನೂತನ ಪದವಿ ಕಾಲೇಜಿನಲಿ ಕನ್ನಡ ಉಪನ್ಯಾಸಕರಾಗಿ
ಜನಾನುರಾಗಿ ಪ್ರಾಂಶುಪಾಲರಾಗಿ ಸತತ ದಶಕಗಳ ಕಾಲ
ಸಹಸ್ರಾರು ವಿದ್ಯಾರ್ಥಿಗಳ ಮನದಿ ಸ್ಥಿರವಾಗಿ ನೆಲೆಸಿದರು!
ಮಿಂಚಿನ ಹೊಳೆ ಹರಿದ ರೀತಿಯ ವಾಗ್ಮಿ ಇವರು
ಪರಮ ಮಂಗಲ ಗಾನಋಷಿಯ ಸಂತಸ ಹರಡಿ
ಲಿಂಗದ್ಹಳ್ಳಿಯಲಿ ಭಾವೈಕ್ಯದ ಆನಂದಂ ಬೀಜ ಬಿತ್ತಿ
ಬೆಳಕಾದರು ನೋಡಿ ಎಲ್ಲ ಮನುಕುಲದ ಸಂತತಿಗೆ
ಇದೇ ಅಲ್ಲವೆ ಅಂತರಂಗದ ಕದ ತೆರೆದ ಮಹಾದ್ವಾರ?
‘ದಾಸಕೂಟ’ದ ಪುರಂಧರ ಕನಕ ಜಗನ್ನಾಥದಾಸರು
ವಿಜಯ ಗೋಪಾಲ ಮಹೀಪತಿ ಆನಂದ ದಾಸ
ಸುರಪುರದ ವೇಣುಗೋಪಾಲನ ನೋಡಿರೈ ನೀವು
ನಕ್ಷತ್ರ ಲೋಕದ ಮಿಂಚು ಆಗಸದಲಿರುವ ಕಾಂತಿ
ಕರುಣವೇ ನೀವಾಗಿ ಭುವಿಗೆ ಅವತರಿಸಿದ ದೇವ
ದುಷ್ಟ ಹರಣ ಶಿಷ್ಟರಕ್ಷಕರು ದಾಸಾಮೃತ ಸತ್ಯಪಥಿ!
ರಾಜ್ಯೋತ್ಸವ ಪ್ರಶಸ್ತಿ ಬಂದು ಸಂತಸ ತಂತು
ರಾಯಚೂರು ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆ
ಜಿಲ್ಲಾ ಕಸಾಪ ದಕ್ಷಿಣ ವಲಯದ ಕಲಬುರಗಿ
ವಿಜಯ ಶಾಮರ ಸುಂದರ ಸೊಗಸಿನ ಜೇನು
ವಿಭಾಗ ಮಟ್ಟದ ದಾಸ ಸಾಹಿತ್ಯ ಸಮ್ಮೇಳನದ
ಸವಾ೯ಧ್ಯಕ್ಷತೆಯು ಎಪ್ಪತ್ತರ ಮಾಣಿಕ್ಯ ಗಂಧ!
ಮಂತ್ರಾಲಯ ಪ್ರಭು ಜ್ಞಾನ ದೀವಿಗೆ ಬೆಳಗಿದಂತೆ
ಲೋಕ ತುಂಬಿತು ದಾಸವರೇಣ್ಯರ ಹಾಡು ನರ್ತನ
ವೃಂದಾವನದೀ ಸೂರ್ಯಪ್ರಭೆಯ ತಪಜ್ಯೋತಿ
ದಿಗ್ದಿಗಂತದಿ ಮಂಗಳಾರತಿಯ ಮಂಗಳ ಪ್ರಭೆಯು!
ಸಾಲು ದೀಪಗಳ ಹಚ್ಚಿ ನಿಂತ ಸಂತ ರಾಮದಾಸ
ಹುತ್ತಗಟ್ಟಿದ ಚಿತ್ತ ಕೆತ್ತಿದ ಶಿವೋ ಲೀಲಾಮೃತವು
ಕಾವ್ಯದ ಸೆಲೆ ಅಮೃತಕೆ ಹಾರುವ ದೇವನ ಲೀಲೆ
ಬಯಲು ಬಯಲಾಯಿತು ಪ್ರಭುವಿನ ಚಿತ್ತಭಿತ್ತಿ!
ಜಗದ ಶಾಶ್ವತ ಬೆರಗು ದಾಸ ಸಾಹಿತ್ಯದ ರಥವು
ನೆಲಬಾನುಗಳ ಉತ್ಕಟ ಪ್ರೀತಿ ಪರುಷಮಣಿಯು
ಶಬ್ಧದೊಳಗಣ ನಿಶ್ಯಬ್ಧದ ಕಾಂತಿಯ ರತ್ನಗಣಿಯ
ಮನ ಬಂದ ಪರಿಯಲಿ ಹರಡಿದ ಒಲವಿನ ಒರತೆ!
ಹೂವ ಮೇಲಿನ ಮಂಜು ಹನಿಯ ಪರಿ ಗುರುವು
ಇದ್ದು ಇಲ್ಲದಂತೆ ಇಲ್ಲದೇಯೂ ಇರುವಂತೆ ನೋಡು
ಎನಿತು ಜನುಮದ ಪುಣ್ಯಗಳ ಜಾತ್ರೆ ಫಲವಿದೋ
ಲಲಿತ ಕಲೆಗಳ ಆಶಾಕಿರಣವೇ ತಾನಾಗಿ ಬಂದಿಹುದು!
ಆನು ಒಲಿದಂತೆ ಹಾಡುವೆನೆಂದ ಸೃಜನಶೀಲನೇ
ಶ್ರೇಷ್ಠತೆಯ ವ್ಯಸನದ ರೂವಾರಿ ಈ ಅಂತ:ಕರುಣಿ
ಲಿಂಗದಳ್ಳಿಯ ಧ್ಯಾನದ ತುತ್ತೂರಿಯ ತಪ:ತೇರು
ಎಲ್ಲ ಹಿರಿಯರ ಪುಣ್ಯ ಅದಕೇ ಪಡೆದೆವು ನಾವು!
ಸಮತೆ ಮಮತೆಗಳೆಂಬ ರಂಗವಲ್ಲಿಯನಿಟ್ಟು
ನಿಜ ಭಕುತರ ಕಾಯುವ ತವನಿಧಿ ನೀನಲ್ಲವೆ?
ವಿಶ್ವಚೈತನ್ಯ ಪಿಂಜಾರ ಬಡೇಸಾಬರ ನೆಲಜಲವು
ಶತಮಾನಗಳ ಬೆಳಕಿನ ದಿವ್ಯಆತ್ಮಸಾಕ್ಷಾತ್ಕಾರವು!
ಸೂರ್ಯನ ಒಲಿಯ ಮ್ಯಾಲಿನ ಧಗಧಗ ಬೆಂಕಿ
ಹೊತ್ತಿತೋ ಬೆಂದು ಪಾಕವಾಯ್ತು ಪುಣ್ಯರಸ
ಭೀಮಸೇನರಾಯರ ದಿವ್ಯ ಮೂರುತಿ ಮೂಡಿ
ಸ್ವಾಮಿರಾವ ಕಿರುತಿ ಹರಡಿತು ದಿಗ್ದಿಗಂತದಲಿ!
ಅನುಭಾವದ ಭಾವ ಮೈದೋರಿದೆ ಜಗವೆಲ್ಲಾ
ಭಕ್ತಿ ರಸದ ದೀಪ ಬೆಳಗಿದೆ ನೋಡೋ ದೇವಾ
ಭಜನಿ ಮ್ಯಾಳದ ಹಾಡು ನಕ್ಷತ್ರರಾಶಿ ತಾಕಿದೆ
ಸಾವಿರದ ಸೂರ್ಯನ ಶಕ್ತಿ ರಾಮದಾಸರಂತೆ!
ದೇವ ಎಲ್ಲೆಡೆ ಗೋಚರಿಸಿ ಮೊಳಗಿತು ಜೈಕಾರ
ನಿಜಾಲ್ಲಮ ಗುಹೇಶ್ವರನ ಬಯಲ ವ್ಯಾಖ್ಯಾನ
ಅರಿವಿನ ಬೆರಗು ಮೂಡಿತಲ್ಲಿಯ ಉಸಿರಿನಲಿ
ರಾಮದಾಸ ಬಡೇಸಾಬರ ಹೆಬ್ಬಂಡೆ ಆಲಯದಿ!
ಕಲ್ಲು ಕರಗುವ ಸಮಯ ಮಮಕಾರದ ಸಂತೆ
ಎಲ್ಲ ಸತ್ಯ ದರ್ಶನವು ಜನನ ಮರಣವೇ ಸಾಕ್ಷಿ
ಆಧ್ಯಾತ್ಮದುತ್ತುಂಗದ ಸಂಗ ಸಜ್ಜನರ ಸಹವಾಸ
ಸದಾ ಸೆಳೆಯುತಿದದು ರಂಗಭೂಮಿ ಮುಗಿಲಿಗೆ!
ದೇವ ಲೀಲೆ ಅಲ್ಲಿ ಎಲ್ಲೆಲ್ಲಿಯೂ ಇಲ್ಲ ಇಲ್ಲಿ ಇದೆ
ಮಂದಹಾಸದ ಆತ್ಮಸಾಕ್ಷಾತ್ಕಾರದೀ ‘ಕನಕಶ್ರೀ ‘
ಅಂತರಾತ್ಮದ ಅಕ್ಷಯದಾಕಾಶವೇ ಸಾಕ್ಷಿ ಇದಕೆ
ಅಂತರಂಗ ಕದದ ಮಾತಿದು ಹೃದಯದ ಕನ್ನಡಿ!
ಜಗದ ಜೀವವೇ ಅರಳುಮಲ್ಲಿಗೆ ದಿವ್ಯ ಸ್ಪರ್ಶ
ಬೆಳಗು ತುಳುಕಿತು ಸಾವಿರ ದೇಗುಲಗಳ ಕಂಡು
ದಿವ್ಯ ಭಕ್ತಿಗೆ ಮಣಿಯಿತು ಪರುಷಮಣಿ ಬಟ್ಟಲು
ಆಗಸದಿ ನಕ್ಷತ್ರ ಬೆಳಗುತಿದೆ ಕಬ್ಬಿಗೆ ಜೇನಿಟ್ಟಂತೆ!
ನಿಶ್ಯಬ್ಧ ಶಬ್ಧಗಳ ದಾಸರ ಮಕರಂದವನು
ಸವಿದವನು ಅನುಭಾವದ ಜೌನ್ನತ್ಯದ ಶಿಖರ
ಅದಕೇನೂ ಬೇಕಿಲ್ಲ ಹೆಚ್ಚು ಪರಿಶ್ರಮ ನಿನಗೆ
ಅವನಲ್ಲಿಯೇ ಲೀನವಾಗು ಹೆಪ್ಪಿಟ್ಟ ಕಡಲಂತೆ!
-ಶ್ರೀನಿವಾಸ ಜಾಲವಾದಿ
ಸುರಪುರ
9886563179