ನನ್ನವ್ವ
ಬೆಳಗಿನಲಿ ಬೇಗ ಎದ್ದು ಒಲೆಗುಂಡಿಗೆ ಕೆಮ್ಮಣ್ಣು ಬಳಿದು ಸಾರಿಸುವಳು
ಹಸಿ ಸೌದೆಯಲಿ ಉರಿ ಊದುತ ಅಡುಗೆ ಮಾಡುವಳು
ಇನಿತು ಹುಸಿ ಮುನಿಸು ತೋರಿಸದೆ ನಕ್ಕು ನಗಿಸುವಳು
ಇದ್ದಲಿನ ಮಸಿ ಮುಖ ಕೈಗೆ ಮೆತ್ತಿದರೂ ನೋಡಳಿವಳು
ಇಂಥಾ ಸಹನೆ ಸಮಾಧಾನ ಕೊಟ್ಟವರಾರು
ಮುಂಜಾನೆಯಿಂದ ದುಡಿದು ದಣಿದರೂ ಹುಶ್ ಅನ್ನಲ್ಲ
ಅವಡ ಗಚ್ಚಿ ಅಡ್ಡ ಸೆರಗ ಕಟ್ಟಿದರೆ ಕೆಲಸ ಚೊಕ್ಕ
ಹಣಿ ಮೇಲಿನ ಬೆವರಿಗೂ ಇವಳ ನೋಡಿ ಬೆರಗು ನನಗೂ ದಾದ ಇಟ್ಟಿಲ್ಲಾ
ಅಂಗಳದಾಗಿನ ರಂಗೋಲಿ ಯಜಮಾನಿ ಹೆಂಗಂತ ಹೇಳ್ತೃತಿ
ನಡುಮನೆ, ಹುಸಿ,ಪಡಸಾಲೆ ಎಲ್ಲಾ ಇವಳ ಕೈ ಚಳಕದಾಗ ಝಳ ಝಳ
ಬಂದ ಹೋದ ಮನಿಮಂದಿಗೆಲ್ಲ ಅನ್ನಪೂರ್ಣೇಶ್ವರಿ.
ಬ್ಯಾಸರಿಸದೆ ಅತ್ತಿ ಕಾಲ ಒತ್ತಿ, ನೆತ್ತಿಗೆ ಎಣ್ಣೆ ಹಾಕಿ ಎರೆಯುವ ತಾಯವ್ವ.
ಮಾವ ಮನೆ ಮುಂದೆ ಕುಂತ್ರೆ ತಲೆ ತುಂಬ ಸೆರಗು ಹೊದ್ದು ಒಳಗ ಬರ್ತಾಳ.
ಆಟಾ ಆಡಿ ಜಗಳಾ ಕಾದ ಬಂದ ಮಕ್ಕಳಿಗೆ ರಮಿಸಿ ಉಣ್ಣಿಸಿ ಲಾಲಿ ಹಾಡ್ತಾಳ.
ದುಡಿದು ಬಂದ ಪತಿರಾಯ ಸಿಟ್ಟು ಮಾಡಿದರೂ ಸೆರಗಿಲೆ ಗಾಳಿ ಹಾಕಿ ಉಣ್ಣಾಕ ಇಕ್ತಾಳ
ನಾದಿನಿ ನ್ಯಾಯ ಮಾಡಿ ಕಸದಾಗ ಬಂದು ಕುಂತರೂ ನಯವಾಗಿ ತಲೆ ಸವರ್ತಾಳ.
ಮೈದುನ ಹೊತ್ತು ಮೀರಿ ಬಂದರೂ ಊಟಕ್ಕಿಕ್ಕುವ ವಾತ್ಸಲ್ಯಮಯಿ.
ದನದ ಹಕ್ಯಾಗ ಹೊಕ್ಕು ಮೇವು ಹಾಕಿ ಮೈದೊಡವಿ ಕರ ಬಿಟ್ಟು ಹಾಲ ಹಿಂಡುವಳು
ಸಗಣಿ ಗಂಜಲ ಎತ್ತಿ ಸ್ವಚ್ಛ ಮಾಡಿ ಹೊರಗೆ ಹೊತ್ತಹಾಕುವಳು
ಗ್ವಾದಲಿ ಗೂಡಿಸಿ ಮೇವು ಕೊರೆದು ಹೊಟ್ಟು ಹಾಕಿ ಒಟ್ಟುವಳು
ದನ ಬಿಟ್ಕೊಂಡು ಬುತ್ತಿ ಕಟ್ಟಿಕೊಂಡು ಹಳ್ಳದಾಗ ನಡದ ಹೊಲ ಸೇರುವಳು.
ಆಳುಗಳ ಜೊತೆ ತಾನು ಹತ್ತಿ ಬಿಡಿಸಿ,ಕಳೆ ಕೆತ್ತಿ ಒಂದಾಳಿನ ಕೆಲಸ ಮಾಡುವಳು
ಸೂರ್ಯ ನಡುನೆತ್ತಿಗೆ ಬಂದಾಗ ಬುತ್ತಿ ಉಂಡು ತತ್ರಾಣಿಯ ತಂಪ ನೀರು ಕುಡಿವಳು
ಹೊತ್ತು ಹೊರಳಿ ಹೆಡಮೂರಗಿ ಹಾಕಿದಾಗ ಗಂಟ ಮೇವ ಹೊತ್ಕೊಂಡು ಮರಳುವಳು.
ಕೈಕಾಲು ಮುಖ ತೊಳೆದು ವಿಭೂತಿ ಹಚ್ಚಿಕೊಂಡು ಸಂಜಿ ದೀಪಾ ಬೆಳಗುವಳು.
ಹಬ್ಬ-ಹರಿದಿನಗಳು ಬಂದಾಗ ಸುಳ್ಳಿಹೋಳಗಿ,ಎಣ್ಣಿಹೋಳಗಿ ತಯಾರು
ಹಪ್ಪಳ ಸಂಡಿಗೆ ಉಪ್ಪಿನಕಾಯಿ,ಶ್ಯಾವಿಗೆ ಓಣಿ ಓರಗಿತ್ತೆರ ಕೂಡಿಕೊಂಡು ಮಾಡ್ತಾಳೆ.
ದೇವರ ದಿಂಡರು, ಪೂಜೆ ಪುನಸ್ಕಾರ ದಾಸೋಹ ನಿತ್ಯದಿ ನಿರತಳು.
ಹೊಲಿಗೆ, ಹೆಣಿಕೆ, ಕಸೂತಿ ಕರಕುಶಲ ಕಲೆಗಳು ಕರಗತವು ಅವ್ವಳಿಗೆ .
ಇವೆಲ್ಲವೂ ಬಲ್ಲ ಬೆಲ್ಲದಂತ ಅವ್ವಾ ನನ್ನವ್ವಾ…
ಇವಳಿಗೆ ಇವಳೇ ಸಮಾನಳು…
–ಜಯಶ್ರೀ ಭ ಭಂಡಾರಿ.
ಬಾದಾಮಿ.