ಸ್ಮರಣೆ
ಕೆಲಸಾ ಮಾಡೂದ ಬಿಟ್ಟ ನನಗ ಬೇರೆ ಕೆಲಸಾನೇ ಇಲ್ಲ
ಎಂದ ವಚನ ಸಾಹಿತ್ಯ ಚಿಂತಕ ಮತ್ತು ಸಂಶೋಧಕ
ಡಾ. ಎಂ. ಎಂ. ಕಲಬುರ್ಗಿಯವರು
ಪೂರ್ಣ ಹೆಸರು : ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿ
ಹುಟ್ಟಿದ ದಿನಾಂಕ : 28.11.1938. ಗುಬ್ಬೇವಾಡ, ಸಿಂದಗಿ ತಾಲೂಕ, ವಿಜಯಪುರ ಜಿಲ್ಲೆ
ತಂದೆ : ಮಡಿವಾಳಪ್ಪ. ಸ್ವಗ್ರಾಮ: ಯರಗಲ್ಲ, ಸಿಂದಗಿ ತಾ|| ವಿಜಯಪುರ ಜಿಲ್ಲೆ
ತಾಯಿ : ಗುರಮ್ಮ. ಸ್ವಗ್ರಾಮ: ಗುಬ್ಬೇವಾಡ, ಸಿಂದಗಿ ತಾ|| ವಿಜಯಪುರ ಜಿಲ್ಲೆ
ಧರ್ಮಪತ್ನಿ : ಉಮಾದೇವಿ (06.02.1966 ರಲ್ಲಿ ಮದುವೆ)
ಮಕ್ಕಳು : ಶ್ರೀವಿಜಯ (ಮಗ)
ಪೂರ್ಣಿಮಾ, ಪ್ರತಿಮಾ, ರೂಪದರ್ಶಿ (ಹೆಣ್ಣುಮಕ್ಕಳು)
ಸೊಸೆ : ಶಿಲ್ಪಾ
ಮೊಮ್ಮಕ್ಕಳು : ಕ್ಷಮಾ, ಶುಭಕೀರ್ತಿ, ಶ್ರೀಚಂದ್ರ, ಅಮೋಘವರ್ಷ, ಅಮೃತವರ್ಷ,
ತೇಜಸ್ವಿ, ಮನೋಜ್ಷ.
ಲಿಂಗೈಕ್ಯ : 30.08.2015 (ಧಾರವಾಡ).
ಕಲಬುರ್ಗಿ ಅನ್ನೋ ಹೆಸರು ಕಿವಿ ಮ್ಯಾಲ ಬಿದ್ದ ಕೂಡಲೇ ವಚನ ಸಾಹಿತ್ಯದ ಆರಾಧಕರ ಹೃದಯದಲ್ಲಿ ಸಣ್ಣನೆಯ ತಂಗಾಳಿ ಸೂಸುವದರಲ್ಲಿ ಸಂಶಯವೇ ಬೇಡಾ. ವಚನ ಸಾಹಿತ್ಯದಲ್ಲಿ ಸಂಶೋಧನೆ, ಸಾಹಿತ್ಯ ರಚನೆ, ಹಲವಾರು ವಿಧ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಕೊಡುಗೆ ನೀಡಿ ತಮ್ಮ ಇಡೀ ಜೀವನವನ್ನೇ ಶರಣ ಸಿದ್ಧಾಂತಕ್ಕೆ ಮುಡುಪಾಗಿಟ್ಟು ಮಹಾನ್ ಸಾಧನೆ ಮಾಡಿದ ಡಾ. ಮಲ್ಲೇಶಪ್ಪಾ ಮಡಿವಾಳಪ್ಪಾ ಕಲಬುರ್ಗಿಯವರು 28.11.1938 ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ “ಗುಬ್ಬೇವಾಡ” ಗ್ರಾಮದಲ್ಲಿ ಜನಿಸಿದರು. ಗುಬ್ಬೇವಾಡ ಡಾ. ಎಂ. ಎಂ. ಕಲಬುರ್ಗಿಯವರ ತಾಯಿ ಗುರಮ್ಮನವರ ತವರೂರು. ಸುಸಂಸ್ಕೃತ ಮನೆತನದ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಯರಗಲ್ಲ ಗ್ರಾಮದವರಾದ ಶ್ರೀ ಮಡಿವಾಳಪ್ಪ ಇವರ ತಂದೆ ಮತ್ತು ತಾಯಿ ಶ್ರೀಮತಿ ಗುರಮ್ಮನವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಯರಗಲ್ಲಿನಲ್ಲಿ ಪಡೆದ ಡಾ. ಎಂ. ಎಂ. ಕಲಬುರ್ಗಿಯವರು ಮಾಧ್ಯಮಿಕ ಶಿಕ್ಷಣವನ್ನು ಸಿಂದಗಿಯಲ್ಲಿ ಪೂರೈಸಿದರು. ಎಸ್.ಎಸ್.ಎಲ್.ಸಿ ಯಲ್ಲಿ ಸಿಂದಗಿ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ಪ್ರತಿಭಾವಂತರು. 1960 ರಲ್ಲಿ ವಿಜಯಪುರದ ವಿಜಯಾ ಕಾಲೇಜಿನಿಂದ ಬಿ.ಎ ಪದವಿ ಮತ್ತು 1962 ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಮ್.ಎ ಪದವಿಗಳನ್ನು ಪ್ರಥಮ ಸ್ಥಾನ ಗಳಿಸುವುದರ ಜೊತೆಗೆ ಜಯಚಾಮರಾಜ ಒಡೆಯರ ಸ್ಮಾರಕ ಸುವರ್ಣ ಪದಕದೊಂದಿಗೆ ಪಾಸಾದರು. ಡಾ. ಅರ್.ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ” ಮಹಾಪ್ರಭಂಧಕ್ಕೆ 1970 ರಲ್ಲಿ ಪಿ.ಎಚ್.ಡಿ ಗೌರವ ಪಡೆದರು.
1962 ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ಡಾ. ಎಂ. ಎಂ. ಕಲಬುರ್ಗಿಯವರು ಮುಂದೆ 1966 ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ “ಕನ್ನಡ ಅಧ್ಯಯನ ಪೀಠ” ದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. 1998-2001 ಅವಧಿಯಲ್ಲಿ ಡಾ. ಎಂ. ಎಂ. ಕಲಬುರ್ಗಿಯವರು ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ ಕುಲಪತಿಗಳಾಗಿದ್ದರು. ಅನೇಕ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ ಡಾ. ಎಂ. ಎಂ. ಕಲಬುರ್ಗಿಯವರು ಒಟ್ಟು 39 ವಸಂತಗಳನ್ನು ಅಧ್ಯಾಪಕ ವೃತಿಯಲ್ಲಿಯೇ ಕಳೆದಂಥ ಮಹಾನುಭಾವರು.
ಡಾ. ಎಂ. ಎಂ. ಕಲಬುರ್ಗಿಯವರು ಕನ್ನಡ ನಾಡು ಕಂಡ ಅಪ್ರತಿಮ ಸಾಹಸಿ ಸಾಹಿತಿಗಳು. ಅದಮ್ಯ ಚೇತನದ ಚಿಲುಮೆಯಾಗಿದ್ದಂಥ ಡಾ. ಎಂ. ಎಂ. ಕಲಬುರ್ಗಿಯವರು ಬರೆದ ಸಂಶೋಧನೆಗಳ, ಪುಸ್ತಕಗಳ, ಬಿಡಿ ಬರಹಗಳ ಸಂಖ್ಯೆಯನ್ನು ನೆನಪಿಸಿಕೊಂಡರೆ ದಂಗಾಗಿ ಬಿಡುತ್ತೇವೆ. ಒಟ್ಟು 115 ಪುಸ್ತಕಗಳು, 700 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇದರಲ್ಲಿ ಶಾಸನಗಳನ್ನು ಕುರಿತು 10 ಪುಸ್ತಕಗಳು, 17 ಸಂಶೋಧನಾ ಗ್ರಂಥಗಳು, ಶಾಸ್ತ್ರ ಸಾಹಿತ್ಯ ಕುರಿತು ಬರೆದ ಪುಸ್ತಕಗಳು 6, ಸಂಪಾದಿತ ಕೃತಿಗಳು 50, 4 ಅಭಿನಂದನಾ ಗ್ರಂಥಗಳ ಸಂಪಾದನೆ, 14 ವಿವಿಧ ಸಂಸ್ಮರಣಾ ಗ್ರಂಥಗಳು, 2 ಜಾನಪದ ಸಾಹಿತ್ಯದ ಕೃತಿಗಳು ಒಂದೇ ಎರಡೇ ಹೇಳತಾ ಹೋದರೆ, ಬರೀತಾ ಹೋದರೆ ಪಟ್ಟಿ ಬೆಟ್ಟದಷ್ಟು ಸಾಗುತ್ತಾ ಹೋಗುತ್ತದೆ. ಸಾಹಿತ್ಯ ರಚನೆಯನ್ನು ಪ್ರೀತಿಸುವ ಮತ್ತು ದಣಿವರಿಯದೇ ಬರೆದ ವ್ಯಕ್ತಿ ಪ್ರಾಯಶಃ ಡಾ. ಎಂ. ಎಂ. ಕಲಬುರ್ಗಿಯವರು ಒಬ್ಬರೇ ಅಂದರೂ ತಪ್ಪಾಗಲಾರದು.
ಡಾ. ಎಂ. ಎಂ. ಕಲಬುರ್ಗಿಯವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನ ಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರ, ಜಾನಪದ, ಸ್ಥಳ ನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡಿದ್ದರೂ, ಅವರ ಪ್ರೀತಿ, ಒಲವು, ಸಂಶೋಧನೆ ಮತ್ತು ಆರಾಧನೆ ವಚನ ಸಾಹಿತ್ಯದ ಕಡೆಗೆ ಹೆಚ್ಚಾಗಿತ್ತು. ಅವರ ನಡೆ ನುಡಿಗಳಲ್ಲಿ ಬಸವಾದಿ ಶರಣರು ಕಂಡಂಥ ಅನುಭಾವಿಕ ಹಿನ್ನೆಲೆಯನ್ನು ನಾವು ಕಾಣಬಹುದು.
ಕಳೆದ 40 ವರ್ಷ ನಿರಂತರವಾಗಿ ಡಾ. ಎಂ. ಎಂ. ಕಲಬುರ್ಗಿಯವರು ತಮ್ಮ ಆಸಕ್ತಿಯ ಕ್ಷೇತ್ರವಾದ ಸಂಶೋಧನೆಯಲ್ಲಿ ತೊಡಗಿಸಿಕೊಂಡವರು. ಅವರ ಪಿ.ಎಚ್.ಡಿ. ಪ್ರಭಂಧ “ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ” ದಿಂದ ಪ್ರಾರಂಭವಾದ ಅವರ ಸಂಶೋಧನಾ ಕಾರ್ಯ ನಿರಂತವಾಗಿ ಸಾಗಿ ಬಂದಿತ್ತು. ಮಾರ್ಗ, ಐತಿಹಾಸಿಕ ಸಂಶೋಧನಾ ಗ್ರಂಥಗಳು ಇದಕ್ಕೆ ಸಾಕ್ಷಿ. 700 ಕ್ಕೂ ಹೆಚ್ಚು ಲೇಖನಗಳು ಇದಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ. ಶಾಸನ ವ್ಯಾಸಂಗ, ಶಾಸನ ಸಂಪದ, ಧಾರವಾಡ ಜಿಲ್ಲೆಯ ಶಾಸನ ಸೂಚಿ ಇವು ಅವರ ಶಾಸನ ಸಂಶೋಧನೆಗೆ ಹಿಡಿದ ಕೈಗನ್ನಡಿ ಕೃತಿಗಳು. ಡಾ. ಎಂ. ಎಂ. ಕಲಬುರ್ಗಿಯವರ ಸಮಗ್ರ ಸಾಹಿತ್ಯ ಚಿತ್ರಣದ ಪಟ್ಟಿಯನ್ನು ಕೊಡುವ ಪ್ರಯತ್ನ.
1. ಸಂಶೋಧನೆ :
1973 : ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ.
1979 : ಸಾಹಿತ್ಯ ಸಂಪಾದನೆ
1988-2016 : ಮಾರ್ಗ: 8 ಸಂಪುಟಗಳು.
1991 : ವಚನ ಸಾಹಿತ್ಯದ ಪ್ರಾಚೀನ ಆಕರ ಕೋಶ
2005 : ಶುದ್ಧಶೈವ ಮತ್ತು ಗೋಳಕೀಮಠ ಸಂಪ್ರದಾಯ
2005 : ವೀರಶೈವ ಇತಿಹಾಸ ಮತ್ತು ಭೂಗೋಲ
ಸಂಶೋಧನಾ ಪ್ರಬಂಧದಲ್ಲಿ ಮೈಲಿಗಲ್ಲು ಎಂದೇ ಬಿಂಬಿತವಾದ “ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ” ಡಾ. ಎಂ. ಎಂ. ಕಲಬುರ್ಗಿಯವರ ಪಿ.ಎಚ್.ಡಿ ಮಹಾಪ್ರಬಂಧ. ಕ್ರಿ.ಶ 850 ರಲ್ಲಿ ಶ್ರೀವಿಜಯ ಎನ್ನುವ ಕವಿಯಿಂದ ರಚನೆಯಾದ ಕನ್ನಡದ ಪ್ರಪ್ರಥಮ ಕೃತಿಯೆಂದು ತಿಳಿಯಲಾಗಿದೆ. ನೃಪತುಂಗ (ರಾಷ್ಟ್ರಕೂಟರ ಅರಸು), ಅವನ ಆಸ್ಥಾನದಲ್ಲಿದ್ದ ಕವೀಶ್ವರ ಅಥವಾ ಶ್ರೀವಿಜಯ ಇವರು ರಚಿಸಿರಬಹುದೆಂದು ವಿದ್ವಾಂಸರಲ್ಲಿ ಗೊಂದಲವಿದ್ದರೂ ಶ್ರೀವಿಜಯ ಎನ್ನುವ ಕವಿಯಿಂದ “ಕವಿರಾಜಮಾರ್ಗ” ಕೃತಿ ರಚನೆಯಾಗಿದೆ ಎಂದು ಬಹುತೇಕ ವಿದ್ವಾಂಸರ ಅಭಿಪ್ರಾಯ. ಈ ಕೃತಿಕಾರ ತನಗಿಂತಲೂ ಹಿಂದೆ ಆಗಿಹೋದ ಕವಿಗಳನ್ನು ಇದರಲ್ಲಿ ಉಲ್ಲೇಖ ಮಾಡತಾನೆ. ಕನ್ನಡ ನಾಡಿನ ಪರಂಪರೆ, ಸಂಸ್ಕೃತಿ, ಭಾಷೆ ಮತ್ತು ಇತಿಹಾಸಗಳ ಮೇಲೆ ಬೆಳಕು ಚೆಲ್ಲುವುದರಿಂದ ಕವಿರಾಜಮಾರ್ಗ ಕೃತಿ ಬಹಳಷ್ಟು ಚರ್ಚೆಗೆ ಬಂದಿದೆ. ಇದರಿಂದಾಗಿ ಕವಿರಾಜಮಾರ್ಗ ಕೃತಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಇಂತಹ ಒಂದು ಸವಾಲಿನ ಗ್ರಂಥವನ್ನು ತಮ್ಮ ಸಂಶೋಧನೆಗೆ ಬಳಸಿಕೊಂಡು ಅದಕ್ಕೆ ನ್ಯಾಯ ಒದಗಿಸಿದ್ದು ಡಾ. ಎಂ. ಎಂ. ಕಲಬುರ್ಗಿಯವರ ಸಾಹಸೀ ಮನೋಭಾವಕ್ಕೆ ಹಿಡಿದ ಕನ್ನಡಿ ಎನ್ನಬಹುದು.
ವಚನ ಸಾಹಿತ್ಯ ಸಂಶೋಧನೆಗಳು ಮತ್ತು ವೀರಶೈವರ ಇತಿಹಾಸಗಳನ್ನು ತಿಳಿಸುವ ಸಂಶೋಧನೆಗಳು ಸಾಹಿತ್ಯದ ವಿದಾರ್ಥಿಗಳಿಗೆ ಸಿಕ್ಕಂಥ ಭಂಡಾರವೇ ಅಂತ ಹೇಳಬಹುದು. ಇನ್ನು ವಚನ ಸಾಹಿತ್ಯ, ಶರಣ ತತ್ವಗಳು, ವಿವಿಧ ಧರ್ಮಗಳ ಐತಿಹಾಸಿಕ ಮತ್ತು ಸಂಪ್ರದಾಯಗಳ ಮೈಲಿಗಲ್ಲುಗಳನ್ನು ಕಟ್ಟಿಕೊಡುವಲ್ಲಿ ಅವರ “ಮಾರ್ಗ” ವೆನ್ನುವ ಎಂಟೂ ಸಂಪುಟಗಳು ಅತ್ಯಂತ ಮಾರ್ಗದರ್ಶಿ ಸಂಶೋಧನೆಗಳೆಂದು ಬಿಂಬಿತವಾಗಿವೆ.
2. ದಾಖಲೆಯನ್ನು ತಿಳಿಸುವ ಸಾಹಿತ್ಯ :
1994 : ಕನ್ನಡದ ಕೈಫಿಯತ್ತುಗಳು
2008 : ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ದಾಖಲು ಸಾಹಿತ್ಯ
ಕಾಲ ಕಾಲಕ್ಕೆ ಮುಂದುವರೆದ ಮತ್ತು ಸಾಗಿಬಂದ ಅನೇಕ ಸಾಹಿತ್ಯಿಕ, ಐತಿಹಾಸಿಕ, ಸಾಮಾಜಿಕ ಮತ್ತು ಧಾರ್ಮಿಕ ಚೈತನ್ಯಗಳನ್ನು ದಾಖಲಿಸುವ ಪರಂಪರೆ ಪ್ರಪಂಚದ ಆರಂಭದಿಂದಲೂ ಬಂದಿದೆ. ಇದು ಮೌಖಿಕವಾಗಿಯೂ ಇರಬಹುದು ಅಥವಾ ಬರಹ ರೂಪದಲ್ಲಿಯಾದರೂ ಇರಬಹುದು. ಈ ನಿಟ್ಟನಲ್ಲಿಯೂ ಕೂಡ ಡಾ. ಎಂ. ಎಂ. ಕಲಬುರ್ಗಿಯವರು ಕೆಲಸ ಮಾಡಿದ್ದಾರೆ. “ಕರ್ನಾಟಕದ ಕೈಫಿಯತ್ತುಗಳು” ಎನ್ನುವ ಕೃತಿಯಲ್ಲಿ ಕೈಫಿಯತ್ತುಗಳ ಚರಿತ್ರೆ ಮತ್ತು ಅಧ್ಯಯನಕ್ಕೆ ಉಪಯುಕ್ತವಾದ ಮಾಹಿತಿಯನ್ನೊಳಗೊಂಡ ಲೋಕವನ್ನೇ ತೆರೆದಿಟ್ಟಿದ್ದಾರೆ. ಏಡೆಯೂರು ಶ್ರೀ ಸಿದ್ಧಲಿಂಗೇಶ್ವರರಿಂದ ಗದಗದಲ್ಲಿ ಸ್ಥಾಪಿತವಾದ “ಶ್ರೀ ಜಗದ್ಗುರು ತೋಂಟದಾರ್ಯ ಮಠಕ್ಕೆ ಸಂಭಂದಪಟ್ಟಂತೆ “ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ದಾಖಲು ಸಾಹಿತ್ಯ” 16 ನೇ ಶತಮಾನದಿಂದ 19 ನೇ ಶತಮಾನದವರೆಗೂ ಸಾಗಿಬಂದ ದಾರಿಯನ್ನು ತಿಳಿಸುವಲ್ಲಿ ಅಮೋಘ ಪಾತ್ರ ವಹಿಸಿದೆ. ಅವರ ಈ ಎರಡು ಕೃತಿಗಳು ಅಧ್ಯಯನಶೀಲ ಸಾಹಿತ್ಯದ ಮನಸುಗಳಿಗೆ ಅತ್ಯಂತ ಉಪಯುಕ್ತ ಮಾಹಿತಿ ನೀಡುವ ಕೃತಿಗಳು.
3. ಶಾಸನಶಾಸ್ತ್ರ :
1968 : ಬಸವಣ್ಣನವರನ್ನು ಕುರಿತು ಶಾಸನಗಳು
1968 : ಶಾಸನ ಸಂಪದ
1970 : ಶಾಸನಗಳಲ್ಲಿ ಶಿವಶರಣರು
1974 : ಶಾಸನ ವ್ಯಾಸಂಗ – ಭಾಗ-1
1975 : ಶಾಸನ ವ್ಯಾಸಂಗ – ಭಾಗ-2
1975 : ಧಾರವಾಡ ಜಿಲ್ಲೆಯ ಶಾಸನ ಸೂಚಿ
1975 : ಧಾರವಾಡ ತಾಲೂಕಿನ ಶಾಸನಗಳು
1976 : ಬಿಜಾಪೂರ ಜಿಲ್ಲೆಯ ಶಾಸನ ಸೂಚಿ
1980 : ಸಮಾಧಿ, ಬಲಿದಾನ, ವೀರ ಮರಣ ಸ್ಮಾರಕಗಳು
2012 : ಮಹಾರಾಷ್ಟ್ರದ ಶಾಸನಗಳು
ಕತ್ತಲೆಯಲ್ಲಿದ್ದವನಿಗೆ ನಸು ಬೆಳಕು ಕಂಡರೆ ಅವನಿಗೆ ಅದೇ ಶಿವನ ಪ್ರಕಾಶ ಎನ್ನುವುದನ್ನು ನಮ್ಮ ಜಾನಪದರು ಹೇಳುವುದನ್ನು ಓದಿದ್ದೇವೆ. ಈ ಶಾಸನಗಳೂ ಹಾಗೇನೆ. ನಮ್ಮ ಇತಿಹಾಸ ಮತ್ತು ಬೆಳವಣಿಗೆಯನ್ನು ಇವುಗಳ ಮೂಲಕ ಹುಡುಕುವ ಸಾಹಸ ಸಾಹಿತ್ಯ ಪ್ರಿಯರ ಹುಟ್ಟುಗುಣ. ಡಾ. ಎಂ. ಎಂ. ಕಲಬುರ್ಗಿಯವರು ಬಹಳಷ್ಟು ಶ್ರಮವಹಿಸಿ, ಪ್ರಯಾಣ ಮಾಡಿ ಶಾಸನಗಳನ್ನು ಹೆಕ್ಕಿ ತೆಗೆದು ಅವುಗಳನ್ನು ಕ್ರೋಢೀಕರಿಸಿ ಗ್ರಂಥರೂಪದಲ್ಲಿ ಪ್ರಕಟಿಸಿದ್ದಾರೆ. ಇವುಗಳು ವಚನ ಸಾಹಿತ್ಯ ಕುರಿತಾದ ಸಂಶೋಧನೆಗಳು. ಈ ಗ್ರಂಥಗಳು ನಾಡಿನ ಸಂಸ್ಕೃತಿ, ಪರಂಪರೆ, ವಚನ ಸಾಹಿತ್ಯ ಮತ್ತು ಶರಣರ ಕುರಿತಾದ ಮಾಹಿತಿಗಳನ್ನು ನೀಡುವಲ್ಲಿ ಅತ್ಯಂತ ಮಹತ್ವದ ಆಕರಗಳು. ಬಸವಾದಿ ಶರಣರ ಕುರಿತಾದ ಶಾಸನಗಳು, ಧಾರವಾಡ ಮತ್ತು ವಿಜಯಪುರ ಜಿಲ್ಲೆಯ ಶಾಸನಗಳು, ಧಾರವಾಡ ತಾಲೂಕಿನ ಶಾಸನಗಳು, ಮಹಾರಾಷ್ಟ್ರದ ಶಾಸನಗಳು ಮತ್ತು ಇನ್ನಿತರ ಗ್ರಂಥಗಳ ಪ್ರಕಟಣೆ ಎಂಥ ಅದ್ಭುತ ಕೆಲಸ. ಇದು ಡಾ. ಎಂ. ಎಂ. ಕಲಬುರ್ಗಿಯವರ ಶಕ್ತಿ ಮತ್ತು ಸಾಹಸ.
4. ವಿವಿಧ ಶೈಕ್ಷಣಿಕ ಶಿಸ್ತುಗಳನ್ನು ಕುರಿತ ಗ್ರಂಥಗಳು :
1972 : ಕನ್ನಡ ಗ್ರಂಥ ಸಂಪಾದನಶಾಸ್ತ್ರ
1993 : ಕನ್ನಡ ಹಸ್ತಪ್ರತಿ ಶಾಸ್ತ್ರ
1992 : ಕನ್ನಡ ಸಂಶೋಧನ ಶಾಸ್ತ್ರ
1995 : ಕನ್ನಡ ಸ್ಥಳನಾಮ ವಿಜ್ಞಾನ
1974 : ಪ್ರತಿಬಿಂಬ (ಶಬ್ದಮಣಿ ದರ್ಪಣ ವಿವೇಚನೆ)
1990 : ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ
1992 : ಸ್ವಾದಿ ಅರಸು ಮನೆತನ
1994 : ಸಾರಂಗಶ್ರೀ
ವಿವಿಧ ಮೂಲಗಳಿಂದ ಹರಿದು ಬಂದ ಸಾಹಿತ್ಯ ಅಧ್ಯಯನವು ಒಂದು ಪ್ರಾಕಾರವನ್ನೇ ಸೃಷ್ಟಿಸಿತು. ಈ ದಿಸೆಯಲ್ಲಿ ಡಾ. ಎಂ. ಎಂ. ಕಲಬುರ್ಗಿಯವರು ಮಾಡಿದ ಸಾಹಸವೇ ಗ್ರಂಥಗಳನ್ನು ಸಂಪಾದನೆಯನ್ನು ಮಾಡಿರುವುದು. ಗ್ರಂಥ ಸಂಪಾದನಾ ಶಾಸ್ತ್ರ, ಹಸ್ತಪ್ರತಿ ಶಾಸ್ತ್ರ, ಸಂಶೋಧನಾ ಶಾಸ್ತ್ರ, ಪ್ರತಿಬಿಂಬವೆನ್ನುವ ಶಬ್ದಗಳ ಸಂಗ್ರಹಣೆ, ಕೆಳದಿ ಅರಸರ ಸಮಗ್ರ ಅಧ್ಯಯನ, ಸ್ವಾದಿ ಅರಸು ಮನೆತನದ ಅಧ್ಯಯನ ಮತ್ತು ಸಾರಂಗಶ್ರೀ ಎನ್ನುವ ವಿವಿಧ ಆಯಾಮಗಳನ್ನು ತೆರೆದಿಡುವ ಅದ್ಭುತ ಕೆಲಸವನ್ನು ಮಾಡಿದ್ದಾರೆ. ಈ ಮೂಲಕ ಶಾಸ್ತ್ರ ಅಧ್ಯಯನಕ್ಕೆ ಒತ್ತು ಕೊಟ್ಟವರು ಡಾ. ಎಂ. ಎಂ. ಕಲಬುರ್ಗಿಯವರು. ಇಂಥ ಕ್ರಿಯಾಶೀಲ ಕಾರ್ಯಕ್ಕೆ ಮನ್ನಣೆ ಎಂಬಂತೆ 1997 ರಲ್ಲಿ ತಮಿಳುನಾಡಿನ ತಂಜಾವೂರಿನಲ್ಲಿ ನಡೆದ “ಅಖಿಲ ಭಾರತ ನಾಮ ವಿಜ್ಞಾನ ಸಮ್ಮೇಳನ” ದ ಅಧ್ಯಕ್ಷತೆ ಇವರನ್ನು ಅರಸಿ ಬಂದಿತು. ಇದರ ಜೊತೆಗೆ ಇನ್ನೂ ಹಲವು ಸಮ್ಮೇಳನಗಳಲ್ಲಿ ಅಧ್ಯಕ್ಷತೆ ವಹಿಸಿದ ಕೀರ್ತಿ ಡಾ. ಎಂ. ಎಂ. ಕಲಬುರ್ಗಿಯವರಿಗೆ ಸಂದಿವೆ.
1994 : ಕರ್ನಾಟಕ ಇತಿಹಾಸ ಸಮ್ಮೇಳನ–ಸಂಡೂರು.
1997 : ಅಖಿಲ ಭಾರತ ನಾಮ ವಿಜ್ಞಾನ ಸಮ್ಮೇಳನ–ತಂಜಾವೂರು, ತಮಿಳುನಾಡು.
2003 : ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ–ಬಾಗಲಕೋಟೆ
2004 : ಶ್ರೀಕೃಷ್ಣ ಪಾರಿಜಾತ ಸಮ್ಮೇಳನ–ಮಹಾಲಿಂಗಪುರ
2005 : ಸರ್ವಧರ್ಮ ಸಾಹಿತ್ಯ ಸಮ್ಮೇಳನ–ಧರ್ಮಸ್ಥಳ
2005 : ಹಸ್ತಪ್ರತಿ ಸಮ್ಮೇಳನ–ಹಂಪಿ
2012 : ಆಳ್ವಾಸ್ ನುಡಿಸಿರಿ ಸಮ್ಮೇಳನ–ಮೂಡಬಿದರಿ
2013 : ಹಾಲುಮತ ಸಂಸ್ಕೃತಿ ಸಮ್ಮೇಳನ–ಹಂಪಿ
2013 : ಹಾಲುಮತ ಸಂಸ್ಕೃತಿ ಸಮ್ಮೇಳನ–ಗಂಗಾವತಿ
5. ಸೃಜನಶೀಲ ಬರಹಗಳು :
1997 : ನೀರು ನೀರಡಿಸಿತ್ತು (ಕವನ)
1995 : ಕೆಟ್ಟಿತ್ತು ಕಲ್ಯಾಣ (ನಾಟಕ)
2005 : ಖರೆ ಖರೆ ಸಂಗ್ಯಾ ಬಾಳ್ಯಾ (ಸಣ್ಣಾಟ)
ಮಾನವನ ನಾಗರೀಕತೆಯಿಂದ ಹಿಡಿದು ಇಂದಿನವರೆಗೂ ಬಂದಂಥಾ ಸಾಹಿತ್ಯ ಪ್ರಾಕಾರಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದದ್ದು ಸೃಜನಶೀಲ ಸಾಹಿತ್ಯ. ಬಂಡೆಯ ಮೇಲೆ ಬರೆದಿಡುವದರಿಂದ ಹಿಡಿದು ಕ್ರಿಯೋಲ್ ನಂಥಾ ಸಂಜ್ಞಾ ಪ್ರಾಕಾರದ ಭಾಷೆಯಿಂದ ಹಿಡಿದು ಇಲ್ಲಿನವರೆಗೂ ಬರೆದಂಥ ಸಾಹಿತ್ಯ ಪ್ರಾಕಾರಗಳಲ್ಲಿ ಅತ್ಯಂತ ಜನಪ್ರಿಯ ಸಾಹಿತ್ಯ. ಡಾ. ಎಂ. ಎಂ. ಕಲಬುರ್ಗಿಯವರು “ನೀರು ನೀರಡಿಸಿತ್ತು” ಎನ್ನುವ ಕವನ ಸಂಕಲನ, “ಕೆಟ್ಟತ್ತು ಕಲ್ಯಾಣ” ಎನ್ನುವ ನಾಟಕ ಮತ್ತು “ಖರೆ ಖರೆ ಸಂಗ್ಯಾ ಬಾಳ್ಯಾ” ಎನ್ನುವ ಸಣ್ಣಾಟ ಕೃತಿಗಳನ್ನು ರಚಿಸಿ ಖ್ಯಾತಿಯಾದವರು. ಈ ಮೂಲಕ ಸೃಜಶೀಲ ಸಾಹಿತ್ಯದ ಪ್ರಾಕಾರದಲ್ಲಿಯೂ ತಮ್ಮ ಛಾಫನ್ನು ಮೂಡಿಸಿದವರು ಡಾ. ಎಂ. ಎಂ. ಕಲಬುರ್ಗಿಯವರು.
6. ಗ್ರಂಥಸಂಪಾದನೆ :
1972 : ಮಲ್ಲಿನಾಥ ಪುರಾಣ ಸಂಗ್ರಹ
1972 : ಬಸವ ಸ್ತೋತ್ರದ ವಚನಗಳು
1976 : ಶಿವಯೋಗ ಪ್ರದೀಪಿಕಾ
1977 : ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ
1978 : ಕೊಂಡಗುಳಿ ಕೇಶಿರಾಜನ ಕೃತಿಗಳು
1978 : ಬಸವಣ್ಣನ ಟೀಕಿನ ವಚನಗಳು ಭಾಗ-1 ಮತ್ತು ಭಾಗ-2
1980 : ಆದಯ್ಯನ ಲಘು ಕೃತಿಗಳು
1983 : ಸಿರುಮನಾಯಕನ ಸಾಂಗತ್ಯ
1994 : ಗೊಲ್ಲಸಿರುಮನ ಕಥೆ
1999 : ಹರಿಹರನ ರಗಳೆಗಳು
1999 : ಕೊಂಡಗುಳಿ ಕೇಶಿರಾಜ ಕೃತಿಗಳು
1999 : ವಚನ ಶಾಸ್ತ್ರ ಸಾರ
2004 : ಸಿದ್ಧಮಂಕ ಚರಿತೆ
2006 : ಧರ್ಮದ್ರಷ್ಟಾರ ಹರ್ಡೇಕರ ಮಂಜಪ್ಪ
2007 : ಗುಂಡಬಸವೇಶ್ವರ ಚರಿತ್ರೆ
2007 : ಡಾ. ಫ. ಗು. ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟ
2008 : ಹಳೆಯ ಕುಮಾರರಾಮನ ಸಾಂಗತ್ಯ
2011 : ಕೊಡೇಕಲ್ ವಚನ ವಾಕ್ಯ
2012 : ವಚನ
2012 : ಕನ್ನಡ ಶರಣರ ಕಥೆಗಳು
2015 : ಕಿತ್ತೂರು ಸಂಸ್ಥಾನ ಸಾಹಿತ್ಯ
2016 : ಅರಟಾಳ ರುದ್ರಗೌಡರ ಚರಿತ್ರೆ
7. ಸಂಪಾದಿತ ಗ್ರಂಥಗಳು :
1981 ; ಬಸವ ಮಾರ್ಗ ಭಾಗ-1 ಮತ್ತು ಭಾಗ-2
1985 : ಬಸವ ಮಾರ್ಗ ಭಾಗ-3
1999 : ಪ್ರಾಚೀನ ಕರ್ನಾಟಕದ ಆಡಳಿತ ವಿಭಾಗಗಳು
1990 : ವಚನ ಸಾಹಿತ್ಯ ಪ್ರಕಟಣೆಯ ಇತಿಹಾಸ
1995 : ಬೀಳಗಿ ಅರಸು ಮನೆತನ
1995 : ಸ್ವಾದಿ ಅರಸು ಮನೆತನ
1998 : ಭಾರತ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ-ಲಿಂಗಾಯತರ ಪಾತ್ರ
1998 : ಮಾನಸೋಲ್ಲಾಸ
1993 : ಬಸವಣ್ಣನವರ ವಚನ ಸಂಪುಟ (ಮುಂದೆ ಇದು ಪರಿಷ್ಕರಣೆಯಾಗಿ “ಸಮಗ್ರ
ವಚನ ಸಂಪುಟ” ಎನ್ನುವ ಹೆಸರಿನೊಂದಿಗೆ 2016 ರಲ್ಲಿ ಪ್ರಕಟವಾಯಿತು)
2014 : ಏಕೋತ್ತರ ಶತಸ್ಥಲ
ಸಾಹಿತ್ಯ ಲೋಕದಲ್ಲಿ ಗ್ರಂಥ ಸಂಪಾದನೆ ಮಾಡುವುದು ಅತ್ಯಂತ ಕ್ಲಿಷ್ಟಕರ ಸಂಗತಿ. ಮೂಲ ಆಶಯಕ್ಕೆ ಧಕ್ಕೆ ಬಾರದಂತೆ ಚಿತ್ರಿಸುವುದು ಕಠಿಣ ಕಾರ್ಯ. ಸುಮಾರು 35 ಕ್ಕೂ ಹೆಚ್ಚು ಗ್ರಂಥ ಸಂಪಾದನೆಯನ್ನು ಮಾಡಿರುವ ಡಾ. ಎಂ.ಎಂ. ಕಲಬುರ್ಗಿಯವರು ಗ್ರಂಥ ಸಂಪಾದನೆಯನ್ನು ನೀರು ಕುಡಿದಷ್ಟೇ ಸಲೀಸಾಗಿ ಮಾಡಿ ಕನ್ನಡ ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಅವರ ಸಾಹಿತ್ಯಿಕ ದೈತ್ಯ ಶಕ್ತಿಯ ಅನಾವರಣ ಇಲ್ಲಿ ಆಗುತ್ತದೆ ಎಂದರೆ ತಪ್ಪಾಗಲಾರದು ಎನ್ನುವಷ್ಟು ಕೆಲಸ ಮಾಡಿದ್ದಾರೆ.
8. ಜಾನಪದ :
1995 : ಜಾನಪದ ಮಾರ್ಗ
1978 : ಉತ್ತರ ಕರ್ನಾಟಕದ ಜನಪದ ಸಾಹಿತ್ಯ
ಯಾವುದೇ ದೇಶದ ಸಂಪತ್ತು ಅಂದರೆ ಅಲ್ಲಿನ ಜನಪದ ಸಾಹಿತ್ಯ ಅಂದರೆ ತಪ್ಪಾಗಲಾರದು. ನಮ್ಮ ಸಂಸ್ಕೃತಿ, ಪರಂಪರೆ, ಸಾಮಾಜಿಕ ವ್ಯವಸ್ಥೆ, ಆಯಾ ಕಾಲಘಟ್ಟದ ಸೊಗಡುಗಳನ್ನು ಹಿಡಿದಿಡುವುದೇ ಜಾನಪದ ಸಾಹಿತ್ಯ. ಅತ್ಯಂತ ಶ್ರೀಮಂತ ಪರಂಪರೆಯ ಸಾಹಿತ್ಯ ಪ್ರಾಕಾರ ಜಾನಪದ ಸಾಹಿತ್ಯ. ಜಾನಪದ ಸಾಹಿತ್ಯದಲ್ಲಿಯೂ ಕೂಡ ಎರಡು ಪುಸ್ತಕಗಳನ್ನು ಪ್ರಕಟ ಮಾಡಿದ್ದಾರೆ ಡಾ. ಎಂ. ಎಂ. ಕಲಬುರ್ಗಿಯವರು. ಉತ್ತರ ಕರ್ನಾಟಕದ ಜನಪ್ರಿಯ ಜಾನಪದ ಸಾಹಿತ್ಯ ಮತ್ತು ಕಾವ್ಯ ಸಂಪದವನ್ನು ಚಿತ್ರೀಕರಿಸುವ “ಉತ್ತರ ಕರ್ನಾಟಕದ ಜನಪದ ಸಾಹಿತ್ಯ” ಹಾಗೂ “ಜಾನಪದ ಮಾರ್ಗ” ಗಳು ಅತ್ಯಂತ ಮಹತ್ವದ ಪುಸ್ತಕಗಳು. ಅದ್ಭುತ ನೆಲೆಗಟ್ಟಿನಲ್ಲಿ ಮೂಡಿಬಂದ ಈ ಎರಡೂ ಪುಸ್ತಕಗಳು ಜಾನಪದ ಅಧ್ಯಯನಕ್ಕೆ ಪೂರಕ ಪುಸ್ತಕಗಳು.
ಐತಿಹಾಸಿಕ ಚರಿತ್ರೆಗಳು, ವಚನ ಸಾಹಿತ್ಯ ಮತ್ತು ಬಸವಾದಿ ಶರಣರ ಚರಿತ್ರೆಗಳನ್ನು ಪಸರಿಸುವ ನಿಟ್ಟಿನಲ್ಲಿ ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಸಾಹಸಿ ಡಾ. ಎಂ. ಎಂ. ಕಲಬುರ್ಗಿಯವರು. ಅವುಗಳಲ್ಲಿ “ಲಿಂಗಾಯತ ಅಧ್ಯಯನ ಸಂಸ್ಥೆ”-ತೋಂಟದಾರ್ಯ ಮಠ:ಗದಗ, “ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆ” – ಆನಂದಪುರ ಮಠ:ಶಿವಮೊಗ್ಗ, “ಶರಣ ಸಂಸ್ಕೃತಿ ಅಕಾಡೆಮಿ”- ನಿಡಸೋಸಿ, “ಸ್ವರವಚನ ಮಾಲೆ”-ಸುತ್ತೂರು ಮಠ:ಮೈಸೂರು ಪ್ರಮುಖವಾದವು.
ಡಾ. ಎಂ. ಎಂ. ಕಲಬುರ್ಗಿಯವರು ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಸಾಹಿತ್ಯಿಕ ಯೋಜನೆಗಳಾದ “ಸಮಗ್ರ ವಚನ ಸಂಪುಟ” ಮತ್ತು “ಸಮಗ್ರ ದಾಸ ಸಾಹಿತ್ಯ” ದ ನೇತೃತ್ವ ವಹಿಸಿದ್ದರು. ಅಪಾರ ಶ್ರಮವಹಿಸಿ ಕನ್ನಡ ಸಾರಸ್ವತ ಲೋಕದಲ್ಲಿ ವಿಜ್ರಂಭಿಸಿದ ಡಾ. ಎಂ. ಎಂ. ಕಲಬುರ್ಗಿಯವರಿಗೆ ಹರಿದು ಬಂದ ಪ್ರಶಸ್ತಿ ಗೌರವಗಳು ಅನೇಕ. ಡಾ. ಎಂ. ಎಂ. ಕಲಬುರ್ಗಿಯವರಿಗೆ ಸಂದ ಗೌರವಗಳು ಅನ್ನೋದಕ್ಕಿಂತ ಈ ಪ್ರಶಸ್ತಿಗಳಿಗೆ ಒಂದು ಮೌಲ್ಯಗಳನ್ನು ಒದಗಿಸಿದವು ಎಂದರೆ ಅತಿಶಯೋಕ್ತಿಯೇನಲ್ಲಾ.
ಆರು ಪುಸ್ತಕಗಳಿಗೆ “ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ”
• 1970 – ಶಾಸನಗಳಲ್ಲಿ ಶಿವಶರಣರು
• 1974 – ಶಾಸನ ವ್ಯಾಸಂಗ
• 1980 – ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು
• 1989 – ಮಾರ್ಗ ಸಂಪುಟ-2 (ವಿಶೇಷ ಗ್ರಂಥ ಬಹುಮಾನ)
• 1990 – ಚನ್ನಬಸವಣ್ಣನವರ ಷಟಸ್ಠಲ ವಚನ ಮಹಾಸಂಪುಟ
• 1994 – ಕನ್ನಡ ಹಸ್ತಪ್ರತಿ ಶಾಸ್ತ್ರ
ವಿಶ್ವಮಾನವ ಪ್ರಶಸ್ತಿ (1990 ರಲ್ಲಿ)
ರಾಜ್ಯೋತ್ಸವ ಪ್ರಶಸ್ತಿ (1991 ರಲ್ಲಿ)
ವರ್ಧಮಾನ ಪ್ರಶಸ್ತಿ (1994 ರಲ್ಲಿ)
ಪಂಪ ಪ್ರಶಸ್ತಿ (1996 ರಲ್ಲಿ)
ಜಾನಪದ ಮತ್ತು ಯಕ್ಷಗಾನ ಅಕಾಡೆಮಿ “ಜಾನಪದ” ಪ್ರಶಸ್ತಿ (1997 ರಲ್ಲಿ)
ರಾಷ್ಟ್ರೀಯ ಬಸವ ಪುರಸ್ಕಾರ (2014 ರಲ್ಲಿ)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2006 ರಲ್ಲಿ ಮಾರ್ಗ-4 ಕೃತಿಗೆ )
ರಾಷ್ಟ್ರೀಯ ಬಸವ ಪುರಸ್ಕಾರ (2014 ರಲ್ಲಿ)
ಅಪಾರ ಶಿಷ್ಯವೃಂದ, ಸಾಹಿತ್ಯ ಸ್ನೇಹಿತರನ್ನು ಗಳಿಸಿದ್ದ ಡಾ. ಎಂ. ಎಂ. ಕಲಬುರ್ಗಿಯವರಿಗೆ, ಅವರ ಆತ್ಮೀಯ ಬಳಗ ಮತ್ತು ಸಂಘ ಸಂಸ್ಥೆಗಳು ಅರ್ಪಿಸಿದ ಗೌರವಪೂರ್ವಕ ಗ್ರಂಥಗಳು ಅತ್ಯಮೂಲ್ಯವಾದ ಕೊಡುಗೆಗಳು :
1990 : ವಿಶ್ವಮಾನವ ಪ್ರಶಸ್ತಿ ವಿಜೇತ ಎಂ ಎಂ ಕಲಬುರ್ಗಿ ಅವರ ಸಾಧನೆ ಸಿದ್ಧಿ
ಜೆ. ಶಶಿಧರ ಪ್ರಸಾದ-ಮೈಸೂರು
1998 : ಮಹಾಮಾರ್ಗ (ಷಷ್ಠಿಪೂರ್ತಿ ಅಭಿನಂದನಾ ಗ್ರಂಥ)
ಸದಾನಂದ ಕನವಳ್ಳಿ, ವೀರಣ್ಣಾ ರಾಜೂರ
1998 : ಕಲಬುರ್ಗಿ-60
ಬಾಳಣ್ಣ ಶೀಗೀಹಳ್ಳಿ, ಜಿ.ಎಂ ಹೆಗಡೆ
1998 : ಹಾದಿಯ ಹೆಜ್ಜೆಗಳು-ಡಾ. ಎಂ ಎಂ ಕಲಬುರ್ಗಿ ಮಾರ್ಗದ ಮಾಹಾಕಾವ್ಯಗಳು
ನೆಲೆ ಪ್ರಕಾಶನ ಸಿಂದಗಿ
1999 : ಸಮಗ್ರ ಸಂಶೋಧಕ ಎಂ ಎಂ ಕಲಬುರ್ಗಿ
ಡಾ. ಜೆ. ಎಂ ನಾಗಯ್ಯ
2000 : ಮಾರ್ಗಕಾರ ಕಲಬುರ್ಗಿ
ಕರ್ನಾಟಕ ಸಂಘ, ಕೆ. ಆರ್. ಬೆಲ್ಲದ ಕಾಲೇಜು ಮುಂಡರಗಿ.
2000: ಹಾದಿಯ ಹೆಜ್ಜೆಗಳು-ಡಾ. ಎಂ ಎಂ ಕಲಬುರ್ಗಿ ಮಾರ್ಗದ ಮಾಹಾಕಾವ್ಯಗಳು
ವಿಕಾಸ ಪ್ರಕಾಶನ ಹೊಸಪೇಟೆ.
ವಚನ ಸಾಹಿತ್ಯವನ್ನು 24 ಭಾಷೆಗಳಲ್ಲಿ ಭಾಷಾಂತರ ಮಾಡುವಾಗಿನ ಕಷ್ಟಗಳನ್ನು ಬಹಳಷ್ಟು ಭಾಷಣಗಳಲ್ಲಿ ಹೇಳಿದ್ದನ್ನು ನಾವು ಕೇಳಿದ್ದೇವೆ. “ಸೆರಗೊಡ್ಡಿ ಬೇಡುವೆನು”, “ಗಂಡರ ಗಂಡ” ಈ ವಾಕ್ಯಗಳನ್ನು ಹೇಗೆ ಇಂಗ್ಲೀಷಿಗೆ ಭಾಷಾಂತರಿಸಬೇಕು. ಪಾಶ್ಚಾತ್ಯರು ಧರಿಸುವ ಉಡುಪಿಗೆ ಸೆರಗೇ ಇಲ್ಲಾ, ಅವರಿಗೆ ಹೆಂಗ ತಿಳಿಸಬೇಕು. “ಅತ್ಯಂತ ವಿನಯದಿಂದ ಬೇಡಿಕೊಳ್ಳುತ್ತೇನೆ” ಅಂತ ತಿಳಿಸುವ ಭಾಷಾಂತರ ಬರಬೇಕು. “ಗಂಡರ ಗಂಡ” ಇದನ್ನ Husband of husbands ಅಂತ ಭಾಷಾಂತರ ಮಾಡಿದರ ಅರ್ಥಾನ ಇಲ್ಲ, ಬಲಶಾಲಿ ಅನ್ನುವ ಕಲ್ಪನೆ ಪಾಶ್ಚಾತ್ಯರಿಗೆ ಬರುವ ಹಾಗೆ ಹೇಳಬೇಕು. ಇಂಥಾ ಸಮಸ್ಯೆಗಳನ್ನು ಅವರು ಬಹಳಷ್ಟು ಭಾಷಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಭಾಷಾಂತರ ಮಾಡುವಾಗ ವ್ಯವಹಾರಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎನ್ನುವುದು ಅವರ ಸ್ಪಷ್ಠ ಅಭಿಮತವಾಗಿತ್ತು ಮತ್ತು ಅವರು ಭಾಷಾಂತರ ಮಾಡುವಾಗ ಅನುಸರಿಸಿದ್ದರೂ ಕೂಡ.
ಡಾ. ಎಂ. ಎಂ. ಕಲಬುರ್ಗಿಯವರು ಕನ್ನಡ ಸಾಹಿತ್ಯದ ಮೂಲಕ ಕನ್ನಡ ಸಾರಸ್ವತ ಲೋಕದ ವೈಭವವನ್ನು ದೇಶ ವಿದೇಶಗಳಿಗೆ ಅನಾವರಣ ಮಾಡಿದ ಮತ್ತು ದಟ್ಟವಾದ ಪ್ರಭಾವವನ್ನು ಬೀರಿದ ವ್ಯಕ್ತಿ. 20 ನೇ ಶತಮಾನದ ಉತ್ತರಾರ್ಧ ಮತ್ತು 21 ನೇ ಶತಮಾನದ ಪೂರ್ವಾರ್ಧದ ಸಂಕ್ರಮಣ ಕಾಲಘಟ್ಟದಲ್ಲಿ ವಚನ ಸಾಹಿತ್ಯಕ್ಕೆ ಹೆಮ್ಮರವಾಗಿ ನೆರಳು ನೀಡಿದಂಥ ಮಹಾನ್ ವಿದ್ವಾಂಸ. ಸಂಶೋಧಕ, ವಿಮರ್ಶಕ, ಚಿಂತಕ ಹಾಗೂ ಸಾಹಿತ್ಯದ ಆರಾಧಕರು. ನಾವಿಂದು ವಚನ ಸಾಹಿತ್ಯದ ಕಂಪನ್ನು ಉಸಿರಾಡಿಸುತ್ತಿದೇವೆ ಎಂದರೆ ಅದಕ್ಕೆ ಡಾ. ಫ. ಗು. ಹಳಕಟ್ಟಿ ಮತ್ತು ಡಾ. ಎಂ. ಎಂ, ಕಲಬುರ್ಗಿಯವರ ದಣಿವರಿಯದ ಕೊಡುಗೆಗಳಿಂದ ಸಾಧ್ಯವಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲಾ.
ಡಾ. ಎಂ. ಎಂ. ಕಲಬುರ್ಗಿಯವರ ಶಿಷ್ಯವೃಂದ ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಬಹುದೊಡ್ಡ ಕೊಡುಗೆ. ಅಧ್ಯಾಪಕರಲ್ಲಿಯೇ ಅತ್ಯಂತ ಶಿಸ್ತಿನ ಗುರುಗಳಾಗಿದ್ದರು. ಅವರು 14 ಸಂಶೋಧನಾ ಪಿ.ಎಚ್.ಡಿ ಅಧ್ಯಯನಕ್ಕೆ ಮಾರ್ಗದರ್ಶಕರು ಮತ್ತು 4 ಎಮ್.ಫಿಲ್ ಸಂಶೋಧನೆಗಳಿಗೆ ಮಾರ್ಗದರ್ಶಕರಾಗಿದ್ದರು. ಅವರ ಶಿಷ್ಯರನ್ನು ತಯಾರು ಮಾಡಿದ ರೀತಿ ಅನನ್ಯವಾದ್ದು.
ಪಿ.ಎಚ್ .ಡಿ. ಮಾರ್ಗದರ್ಶನ :
1981: ಡಾ. ಚೆನ್ನಕ್ಕ ಎಲಿಗಾರ – ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ.
1982: ಡಾ. ಬಿ. ಆರ್. ಹಿರೇಮಠ – ಶಾಸನಗಳಲ್ಲಿ ಕರ್ನಾಟಕದ ವರ್ತಕರು.
1985: ಡಾ. ಶ್ರೀರಾಮ ಇಟ್ಟಣ್ಣವರ – ಶ್ರೀಕೃಷ್ಣ ಪಾರಿಜಾತ: ಒಂದು ಅಧ್ಯಯನ.
1987: ಡಾ. ಜೆ. ಎಮ್. ನಾಗಯ್ಯ – ಆರನೆಯ ವಿಕ್ರಮಾದಿತ್ಯನ ಶಾಸನಗಳು: ಒಂದು
ಅಧ್ಯಯನ.
1988: ಡಾ. ಬಿ. ಕೆ. ಹಿರೇಮಠ – ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ.
1988: ಡಾ. ಬಸವಲಿಂಗ ಸೊಪ್ಪಿಮಠ – ಕೊಡೆಕಲ್ಲ ಬಸವಣ್ಣ: ಒಂದು ಅಧ್ಯಯನ.
1989: ಡಾ. ಬಿ. ಎಸ್. ಶೇಠೆ – ಕರ್ನಾಟಕದ ಸತಿಪದ್ದತಿ: ಒಂದು ಅಧ್ಯಯನ.
1992: ಡಾ. ಶ್ರೀನಿವಾಸ ಕುಲಕರ್ಣಿ – ಕುಮಾರವ್ಯಾಸನ ರೂಪಕಗಳು: ಒಂದು ಅಧ್ಯಯನ.
1993: ಡಾ. ಸಿ. ವಿ. ಪ್ರಭುಸ್ವಾಮಿಮಠ – ಬಸವಣ್ಣನವರ ವಚನಗಳ ಸಾಹಿತ್ಯಿಕ ಅಧ್ಯಯನ.
1997: ಡಾ. ಸದಾನಂದ ಪಾಟೀಲ – ಹರಿಹರನ ರಗಳೆಗಳು: ಒಂದು ಸಾಂಸ್ಕೃತಿಕ
ಅಧ್ಯಯನ.
2000: ಡಾ. ಕೆ. ವೈ. ನಾರಾಯಣಸ್ವಾಮಿ – ನೀರು: ಒಂದು ಅಧ್ಯಯನ.
2002: ಡಾ. ಸಾವುಕಾರ ಎಸ್. ಕಾಂಬಳೆ – ಲಿಂಗಾಯತ ಅಸ್ಪೃಶ್ಯರು
(ಉರಿಲಿಂಗಪೆದ್ದಿ ಸಂಪ್ರದಾಯದ ಅಭ್ಯಾಸ).
2003: ಡಾ. ಮಹಾದೇವ ಜ. ಜಿಡ್ಡಿಮನಿ – ಕುಮಾರವ್ಯಾಸನ ಭೀಷ್ಮ.
2016: ಡಾ. ಬಿ. ರಾಜಶೇಖರಪ್ಪ – ಚಿತ್ರದುರ್ಗ: ಒಂದು ಅಧ್ಯಯನ.
ಎಂ.ಫಿಲ್ :
1. ವಿಜಯಶ್ರೀ ಹಿರೇಮಠ: ಸಂಪಾದನ ಸಮಯ.
2. ಗಾಯತ್ರಿ ಹಿರೇಮಠ: ಎ.ಟಿ.ಸಾಸನೂರ ಬದುಕು ಸಾಧನೆ.
3. ಎಸ್. ಎಲ್. ನಾಟಿಕಾರ: ಸಿಡಿ ಸಂಪ್ರದಾಯ.
4. ಎಸ್. ಪಿ. ಗೌಡರ: ಕ್ರೈಸ್ತ ಪಾದ್ರಿಗಳು.
5.
“ಸಂಶೋಧನೆಯ ಭಾಷೆ ಅಲಂಕಾರಕವೂ ಆಗಿರಬಾರದು, ಶುಷ್ಕವೂ ಆಗಿರಬಾರದು. ನೇರ, ಸ್ಪಷ್ಟ ಪರಿಣಾಮಕಾರಿಯಾಗಿರಬೇಕು” ಎನ್ನುವುದನ್ನು ಡಾ. ಎಂ. ಎಂ. ಕಲಬುರ್ಗಿಯವರು ಮಾರ್ಗದರ್ಶನ ಮಾಡುವಾಗ ಪದೇ ಪದೇ ಹೇಳುತ್ತಿದ್ದುದನ್ನು ಅವರ ಶಿಷ್ಯರು ಈಗಲೂ ಮೆಲುಕು ಹಾಕುತ್ತಾರೆ.
ಎರಡು ನೈಜ ಘಟನೆಗಳನ್ನು ನೆನಪಿಗೆ ಬಂದಿವೆ. ಅವುಗಳನ್ನು ಇಲ್ಲಿ ಪ್ರಸ್ತಾಪಿಸುವ ಮೂಲಕ ಡಾ. ಎಂ. ಎಂ. ಕಲಬುರ್ಗಿಯವರ ಘನ ವ್ಯಕ್ತಿತ್ವವನ್ನು ಮೆಲುಕು ಹಾಕಲು ಬಯಸುತ್ತೇನೆ. ಡಾ. ಎಂ. ಎಂ. ಕಲಬುರ್ಗಿಯವರು ನಮ್ಮ ತಂದೆ ಶ್ರೀ ಈಶ್ವರ ಕಮ್ಮಾರ ಅವರಿಗೆ ಗುರುಗಳಾಗಿದ್ದವರು. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ 1969-71 ನೇ ಸಾಲಿನಲ್ಲಿ ಎಮ್. ಏ ವಿದ್ಯಾರ್ಥಿಯಾಗಿದ್ದರು ನಮ್ಮ ತಂದೆ.
1984 ರಲ್ಲಿ ಕವನ ಸಂಕಲನ ಬರೆದು ಅದಕ್ಕೆ ಮುನ್ನುಡಿ ಬರೆಯಲು ಡಾ. ಎಂ. ಎಂ. ಕಲಬುರ್ಗಿಯವರಿಗೆ ಕೊಟ್ಟು ಬಂದಿದ್ದರು. ಮುಂದೆ ಒಂದು ರವಿವಾರ ಸಂಜೆ ಡಾ. ಎಂ. ಎಂ. ಕಲಬುರ್ಗಿಯವರು ನಮ್ಮ ಮನೆಗೆ ಬಂದರು. ಬಂದವರೇ ನಮ್ಮ ತಂದೆ ಬರೆದ ಕವನ ಸಂಕಲನವನ್ನು ಜೋರಾಗಿ ಟೇಬಲ್ ಮೇಲೆ ಕುಟ್ಟಿದರು. ಅವತ್ತು ಭಾಳ ಸಿಟ್ಟಿನಲ್ಲೇ ಬಂದಿದ್ದರು. “ಏನೋ ಕಮ್ಮಾರ ನಾ ಹಿಂಗ ಕಲಿಸೇನೇನು. ಎಷ್ಟು ತಪ್ಪು ಬರೆದಿದ್ದೀಯಾ” ಅಂತಾ ಭಾಳ ಬೈದರು. ನನಗ ಇನ್ನೂ ಚುಲೋ ನೆನಪೈತಿ. ನಮ್ಮ ತಂದೆ ಥರಾ ಥರಾ ನಡುಗತಾ ಇದ್ದರು. ಆ ಮ್ಯಾಲ ಶಾಂತ ಆಗಿ ಹೇಳಿದರು. ನೀ ನನ್ನ ಪ್ರೀತಿಯ ಶಿಷ್ಯಾ, ಇದರಾಗ ತಪ್ಪ ಅದಾವ ಖರೇ ಆದರ ತಿದ್ದೂಣಂತ ಘಾಬರಿ ಆಗಬ್ಯಾಡಾ ಅಂತ ಹೇಳಿ ಸಂಜೆ ಏಳು ಘಂಟೇಯಿಂದ ಬೆಳಗಿನ ಜಾವ ನಾಲ್ಕು ಘಂಟೆವರೆಗೂ ಕೂತು ಎಲ್ಲಾ ತಪ್ಪುಗಳನ್ನ ಸರಿಪಡಿಸಿ, 4 ರಿಂದ 6 ರವರೆಗು ಅಂದರೆ ಕೇವಲ ಎರಡೇ ತಾಸು ವಿರಾಮ ಮಾಡಿ ಹೋದರು.
ಇನ್ನೊಂದು ಪ್ರಸಂಗ. ಧಾರವಾಡದಲ್ಲಿ 20.08.2012 ರಲ್ಲಿ ನಮ್ಮ ತಂದೆಯವರಿಗೆ ಅವರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಮಾಡಿದ ಅನುಪಮ ಮತ್ತು ಜೀವಮಾನದ ಶ್ರೇಷ್ಠ ಸೇವೆಗೆ ಸನ್ಮಾನ ಮಾಡಿದ ಸಂದರ್ಭ. ಅದರ ಅಧ್ಯಕ್ಷತೆಯನ್ನು ಡಾ. ಎಂ. ಎಂ. ಕಲಬುರ್ಗಿಯವರು ವಹಿಸಿದ್ದರು. ಭಾಷಣದಲ್ಲಿ ಅವರು ಹೇಳಿದ ಒಂದು ಮಾತು ಎಲ್ಲ ಸಭಿಕರನ್ನು ಒಂದು ಕ್ಷಣ ಆಶ್ಚರ್ಯ ಮತ್ತು ತಬ್ಬಿಬ್ಬು ಮಾಡಿತು. ಅದೇ ದಿನ ನಿಗದಿಯಾಗಿದ್ದ ರಾಷ್ಟ್ರಪತಿಯವರ ಜೊತೆಗಿನ ಭೆಟ್ಟಿಯನ್ನು ಮುಂದೂಡಿದ್ದರಂತೆ. ನನ್ನ ಶಿಷ್ಯನ ಸನ್ಮಾನ ನಾನೇ ಮಾಡಬೇಕೆಂಬ ಹಂಬಲ ಮತ್ತು ಆಸೆ ಡಾ. ಎಂ. ಎಂ. ಕಲಬುರ್ಗಿಯವರಿಗಿತ್ತು.
ಅಂದರೆ ಡಾ. ಎಂ. ಎಂ. ಕಲಬುರ್ಗಿಯವರು ತಮ್ಮ ಶಿಷ್ಯರ ಬಗ್ಗೆ ಎಷ್ಟು ಕಾಳಜಿ ಇತ್ತು ಎನ್ನುವುದಕ್ಕೆ ಈ ಎರಡು ಘಟನೆಗಳು ಸಾಕ್ಷಿ. ಅಂಥ ಸಹೃದಯದ ವ್ಯಕ್ತಿ ಅವರು. ಒಂದು ಮುನ್ನುಡಿ ಬರೆದು ಸಾಗ ಹಾಕಬಹುದಿತ್ತು. ಆದರೆ ಎಲ್ಲವೂ ಅಚ್ಚುಕಟ್ಟಾಗಿರಬೇಕು, ತಮ್ಮ ಶಿಷ್ಯರನ್ನು ಯಾರೂ ಬೆರಳೆತ್ತಿ ತೋರಿಸಬಾರದು ಎನ್ನುವ ಅಗಾಧ ಪ್ರೀತಿ ಡಾ. ಎಂ. ಎಂ. ಕಲಬುರ್ಗಿಯವರದು. ಇನ್ನು ರಾಷ್ಟ್ರಪತಿಗಳ ಭೆಟ್ಟಿಯನ್ನೂ ಮುಂದೂಡಿ ಶಿಷ್ಯನ ಸನ್ಮಾನಕ್ಕೆ ಆಗಮಿಸಿದ್ದು ಇದರ ಒಂದು ಅದ್ಭುತ ನಿದರ್ಶನ.
30.08.2015 ರಂದು ಧಾರವಾಡದ ಅವರ ಸ್ವಗೃಹದಲ್ಲಿಯೇ ದುರುಳರ ಗುಂಡೇಟಿನಿಂದ ಹತ್ಯೆಯಾಗಿದ್ದು ಜನಮಾನಸದಲ್ಲಿ ಉಳಿದಿರುವ ವಿಷಾದದ ಸಂಗತಿ. ಎಂಥ ದುರಂತ ನೋಡಿ, ಇಡೀ ಸಮಷ್ಠಿ ಸಂಕುಲವನ್ನು ತಮ್ಮವರೆಂದು ತಿಳಿದು ಬದುಕಿದ ಶರಣ ಜೀವಿ ಡಾ. ಎಂ. ಎಂ. ಕಲಬುರ್ಗಿಯವರ ಕೊನೆ ಈ ರೀತಿ ಆಗುವುದೆಂದು ಯಾರು ಊಹಿಸಿರಲಿಲ್ಲ.
ನನ್ನ ಬಲ ನನ್ನ ಛಲ | ನೀರು ಗೊಬ್ಬರ ನನಗೆ ||
ನಾನು ಹುಟ್ಟಿದ್ದು | ಸಾಯಲಿಕ್ಕೆ ಅಲ್ಲ ||
ಸೂರ್ಯ ಚಂದ್ರರ | ಕೂಡ ಬದುಕಲಿಕ್ಕೆ ||
ನಿಜ ಸೂರ್ಯ ಚಂದ್ರರಿರುವವರೆಗೆ ಡಾ. ಎಂ. ಎಂ, ಕಲಬುರ್ಗಿಯವರು ಪ್ರತಿಯೊಬ್ಬ ಕನ್ನಡ ಸಾಹಿತ್ಯದ ಮತ್ತು ವಚನ ಸಾಹಿತ್ಯದ ಆರಾಧಕರ ಹೃದಯದಲ್ಲಿ ಉಳಿಯುತ್ತಾರೆ. ಡಾ. ಎಂ. ಎಂ, ಕಲಬುರ್ಗಿಯವರು ನಡೆದಾಡುವುದನ್ನು ನಿಲ್ಲಿಸಿರಬಹುದು ಆದರೆ ನಮ್ಮನ್ನು ಮುನ್ನಡೆಸುವುದನ್ನು ನಿಲ್ಲಿಸಿಲ್ಲ. ಇವರ ಕಾಲಘಟ್ಟದಲ್ಲಿ ನಾವಿದ್ದೆವು ಎನ್ನುವುದು ನಮ್ಮ ಸೌಭಾಗ್ಯ.
ಸಂಗ್ರಹ ಮತ್ತು ಲೇಖನ :
-ವಿಜಯಕುಮಾರ ಕಮ್ಮಾರ, ತುಮಕೂರು
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com
_—————————————–