ನನ್ನಂತರಂಗದ ಗೂಡು

ನನ್ನಂತರಂಗದ ಗೂಡು

ಮಲ್ಲೆಮಾಲೆಯಲಿ ಹೆರಳ ಹೆಣಿಕೆಯಲಿ ನವಿರಾದ ನವುರಿನಲಿ
ಹಣೆಯ ಶೃಂಗಾರದ ಕುಂಕುಮದಲಿ
ಹೊಳೆಯುವ ಮೂಗಿನ ನತ್ತಿನಲಿ
ಹಚ್ಚುವ ಕೆನ್ನೆಯ ಅರಸಿನದಲಿ
ಹೇಳಲಾರದ ಸಂಭ್ರಮವೊ ಸಂಭ್ರಮ ನನ್ನಂತರಂಗದ
ಗೂಡಲಿ

ನೀನಿಲ್ಲದಲಿ ಏನಿಲ್ಲ ಸೊಗಸು
ನೀನಿದ್ದರೆ ಮನಸ್ಸೆಲ್ಲ ಹೊಂಗನಸು
ಹೃದಯದ ಸಂಭ್ರಮವೆಲ್ಲ ನನಸು
ಹಗಲುರಾತ್ರಿ ತಿಳಿಯದ ಮುನಿಸು
ಹರಡೈತೆ ಸುತ್ತೆಲ್ಲ ನಿನ್ನಾಗಮನದ
ತಳಮಳದ ತಲ್ಲಣದ ಸಂಚಲನ
ನನ್ನಂತರಂಗದ ಗೂಡು

ಕನ್ನಡಿಯ ಮುಂದೆ ನಿಂತಾಗಲೊಮ್ಮೆ
ಕನಸಿನ ಲೋಕಕೆ ಜಾರುವೆ ಕಾರಣ
ಕಂಗಳು ಕನ್ನಡಿಯಲಿ ನಿನ್ನನೆ ಕಂಡು
ಸಂಭ್ರಮಿಸುತ್ತವೆ ಕನ್ನಡಿಗೂ ನಿನ್ನದೆ ಧ್ಯಾನ
ಕಿಟಕಿ ಬಾಗಿಲುಗಳಿಲ್ಲದ ಗೂಡು ನನ್ನಂತರಂಗ

ನನ್ನೆಲ್ಲ ಸಂತಸ ಸಂಭ್ರಮಗಳನು
ನಿನ್ನೆದುರು ನಿವೇದಿಸುವ ನಿನಾದ
ಒಳಒಳಗೆ ಒಪ್ಪವಾಗಿ ಓರಣವಾಗಿ
ಓತಪ್ರೋತಗಳಾಗಿ ನಲಿಯುತಿವೆ ನಲ್ಲನೆ
ನಖಶಿಖಾಂತ ಶಬರಿಯಾಗಿದೆ
ನನ್ನಂತರಂಗದ ಗೂಡು

ಹೇ ಗೆಳೆಯನೆ ಸಂಭ್ರಮ ಸರಿಯುವ ಮುನ್ನ…
ಸಡಗರ ಸಜೆಯಾಗೋ ಮುನ್ನ..
ಸಂಕಟ ಸಂದಿಗ್ಧವಾಗೋ ಮುನ್ನ…
ಸಂಜೆ ಸೂರ್ಯ ಜಾರೋ ಮುನ್ನ..
ಮೌನ ಮ್ಲಾನವಾಗುವ ಮುನ್ನ……
ನನ್ನಂತರಂಗದ ಗೂಡು ಸೇರು ಬಾ


ಜಯಶ್ರೀ ಭ ಭಂಡಾರಿ.
ಬಾದಾಮಿ.

Don`t copy text!