ಶ್ರೀ ರೇವಣಸಿದ್ಧರು
“ಶರಣರ ನೆನೆದರ
ಸರಗೀಯ ಇಟ್ಟಂಗ
ಅರಳ ಮಲ್ಲಿಗೆ ಮುಡಿದಂಗ
ಶರಣರ ನೆನೆಯೋ ಎಲೆ ಮನವೇ “
ಎಂಬ ಜನಪದಿಗರ ಉಕ್ತಿಯಂತೆ
ಶರಣರ ನೆನೆದರೆ ಸೊಬಗು ,ಸಮೃದ್ಧಿ, ಅರಿವಿನ ಅನುಭಾವ ಜೀವನದಲ್ಲಿ ತುಂಬಿಕೊಳ್ಳುತ್ತದೆ. ಇದು ನನ್ನ ಸ್ವಂತ ಅನುಭವ.
ರೇವಣಸಿದ್ದರು ಶರಣರ ಹಿರಿಯ ಸಮಕಾಲೀನರಾಗಿದ್ದು ಇವರ ಕಾಲವನ್ನು ಇತಿಹಾಸಕಾರರು ಕ್ರಿ. ಶ 1100 ರಿಂದ 1167 ರವರೆಗೆ ಎಂದು ಗುರುತಿಸಿದ್ದಾರೆ.
ಹಾಲುಮತ ಕುರುಬ ಜನಾಂಗದ ಕುಲಗುರು ರೇವಣಸಿದ್ದರೂ/ ರೇವಣಸಿದ್ಧರಿಗೆ- ಸಿದ್ದೇಶ್ವರ, ಕರಿಸಿದ್ದೇಶ್ವರ, ಕಾಡುಸಿದ್ದೇಶ್ವರ, ಚೆನ್ನಮಲ್ಲೇಶ, ಮಳೆಯ ಮಲ್ಲೇಶ, ಸಿದ್ದರಾಮಯ್ಯ, ದೊಡ್ಡಯ್ಯ, ಭೀಮೇಶ್ವರ, ಹಾಗೂ ಡಿಳ್ಳೆಪ್ಪ ಎಂಬ ಹೆಸರುಗಳುಂಟು.
ಶ್ರೀ ಸಿದ್ದೇಶ್ವರರು ಚಿಕ್ಕಂದಿನಲ್ಲಿ ತಂದೆ-ತಾಯಿಗಳನ್ನು ಕಳೆದುಕೊಂಡು ನಾಥಪಂಥದ ಅನುಯಾಯಿಯಾಗಿದ್ದು ಉತ್ತರ ಭಾರತವನ್ನೆಲ್ಲ ಸಂಚರಿಸಿದ್ದಾರೆಂದು ನವನಾಥರ ಚರಿತ್ರೆ ತಿಳಿಸುತ್ತದೆ. ನಾಥಪಂಥದ ಸಿದ್ಧಾಂತಗಳು ಹಿಡಿಸದೆ ರೇವಣಸಿದ್ದನು ಕೊಲ್ಲಿಪಾಕಿಯ ಸೋಮೇಶ್ವರನ ಸನ್ನಿಧಾನದಲ್ಲಿ ಶೈವಶಿದ್ಧ ಪಂಥವನ್ನು ಸ್ವೀಕರಿಸುತ್ತಾರೆ. ಇದನ್ನು ಹರಿಹರ ಕವಿಯು ಲಿಂಗೋದ್ಭವ ಎಂಬುದು, ರೇವಣಸಿದ್ದೇಶ್ವರರ ರಗಳೆ ಎಂಬ ಕಾವ್ಯದಲ್ಲಿ ವಿವರಿಸಿದ್ದಾರೆ.
ಹುಟ್ಟುವಾಗಲೇ ಕಂತೆ (ಕಂಬಳಿ) ವಜ್ರಕುಂಡಲ ,ಲಾಕುಲ (ಯೋಗದಂಡ) ಪಾವುಗೆ(ಮರದ ಪಾದರಕ್ಷೆ) ಕೋವಣ (ಲಂಗೂಟೇ) ಧರಿಸುವುದು ಅಸಾಧ್ಯವಾದುದರಿಂದ ನಾವು ಇದು ರೇವಣಸಿದ್ಧರು ನಾಥಪಂಥದಿಂದ ಶರಣ/ಶಿದ್ಧ ಪಂಥಕ್ಕೆ ಮತಾಂತರ ಪ್ರಕ್ರಿಯೆ ಎಂದು ವೈಜ್ಞಾನಿಕವಾಗಿ ಯೋಚಿಸಬಹುದು.
ನಾಥಶಿದ್ಧನಿಗೂ ರೇವಣಸಿದ್ದರಿಗೂ, ಅಲ್ಲಮರಿಗೂ ಮೊದಲಾದ ಶೈವಸಿದ್ಧರಿಗೂ ಸಂಬಂಧವಿರಬೇಕು. ಇವರೆಲ್ಲರೂ ಮೊದಲು ನಾಥಸಿದ್ದರೆ ಆಗಿದ್ದರು ಎಂದು ಹಲವಾರು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ರೇವಣಸಿದ್ದರು ಹಾಲುಮತ ಕುರುಬ ಜನಾಂಗಕ್ಕೆ ಸೇರಿದವರೆಂದು ಕರ್ನಾಟಕದ ಪ್ರಸಿದ್ಧ ವಿದ್ವಾಂಸರಾದ ಡಾ. ಎಂಎಂ ಕಲಬುರ್ಗಿ ಪ್ರತಿಪಾದಿಸಿದ್ದಾರೆ. (ಮಾರ್ಗ ಸಂಪುಟ ನಾಲ್ಕು)_ ರೇವಣಸಿದ್ದರು ಕುರುಬ ಜನಾಂಗ ಮೂಲದವನು ಎಂದು ಮಹಾರಾಷ್ಟ್ರದ ಪ್ರಸಿದ್ಧ ವಿದ್ವಾಂಸರಾದ ಡಾ. ರಾಮಚಂದ್ರ ಚಿಂತಾಮಣಿ ಡೇರೇ ಅವರು ರೇವಣಸಿದ್ಧರ ಸ್ಥಾನ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಅಪ್ಪಾಚಿವಾಡಿ ಎಂದು ಸ್ಪಷ್ಟಪಡಿಸಿದ್ದಾರೆ.
ರೇವಣಸಿದ್ದರು ದುಗ್ಧ (ಹಾಲು) ಸಂಪ್ರದಾಯದ ಧನಗಾರ (ಕುರುಬ) ಮೂಲದ ಪೂಜನೀಯ ವ್ಯಕ್ತಿ ಎಂದು ಅಭಿಪ್ರಾಯ ಪಡುತ್ತಾರೆ. ನಾತಪಂಥದ ಸಿದ್ದರಾಮಯ್ಯ/ ರೇವಣಸಿದ್ದರೂ ಅನೇಕ ಸಿದ್ದಿಗಳನ್ನು ಹೊಂದಿದ್ದರೆಂದು ನವನಾಥರ ಚರಿತ್ರೆ ತಿಳಿಸುತ್ತದೆ. ವೈದ್ಯಶಾಸ್ತ್ರದಲ್ಲಿಯೂ ಅಪ್ರತಿಮ ಸಿದ್ಧಿಯನ್ನು ಪಡೆದಿದ್ದರೂ ಎಂಬುದಕ್ಕೆ ತಮ್ಮ ಮಗ ರುದ್ರಮುನಿಯ ಮೂರು ತಿಂಗಳ ಪಿಂಡವನ್ನು ತಮ್ಮ ಪತ್ನಿ ಸುಂದರನಾಚಿಯ ಗರ್ಭದಿಂದ ತೆಗೆದು ಪೋಷಿಸಿ ಬೆಳೆಸಿದರು ಎಂಬುದು ಪ್ರತ್ಯಕ್ಷ ಸಾಕ್ಷಿ ಒದಗಿಸುತ್ತದೆ.
ಇವರು ಬಹುತೇಕ ರಾಜ ಮಹಾರಾಜರಿಂದ ಪೂಜಿತರಾದವರು ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಬಿಜ್ಜಳ ತನ್ನ ಮಗಳನ್ನು ಶ್ರವಣಬೆಳಗೊಳ ಮೊದಲಾದ ಕಡೆಗೆ ತೀರ್ಥಯಾತ್ರೆಗೆ ಕಳಿಸುವಾಗ ರೇವಣಸಿದ್ಧರನ್ನು ಜೊತೆ ಮಾಡಿ ಕಳಿಸುತ್ತಿದ್ದರೆಂಬ ಸಂಗತಿ ಬಿಜ್ಜಳ ಚರಿತ್ರೆಯಿಂದ ತಿಳಿದು ಬರುತ್ತದೆ.
ದೇವಗಿರಿ ಯಾದವರ ಐದನೇ ಬಿಲ್ಲಮಲ್ಲನಿಗೆ ರಾಜಗುರುವಾಗಿ ಪರೋಕ್ಷವಾಗಿ ರಾಜ್ಯವಾಳಿದ ಸಂಗತಿಯನ್ನು ಇಂದಿಗೂ ಹಳೆ ಮೈಸೂರು ಕಡೆಯ ಕುರುಬರ ಮದುವೆಗಳಲ್ಲಿ ವಧು ವರರಿಗೆ ಹೇಳುವ ಆಶೀರ್ವಚನದಲ್ಲಿ ಬರುವ “ಬಿಲ್ಲರಾಜ್ಯವನಾಳಿ” ಎಂಬ ಮಾತಿನಿಂದ(ಮಂತ್ರ) ಇದಕ್ಕೆ ರುಜುವಾತುವಾಗುತ್ತದೆ.
ಯಾದವರ ಆಧೀನ ರಾಜನಾದ ಶಿಲಾಹಾರ ವಂಶದ ವಿಕ್ರಮಾದಿತ್ಯ ಸಿದ್ದಗಿರಿಯಲ್ಲಿ ರೇವಣಸಿದ್ದರಿಗೆ ಒಂದು ಮಠ ಕಟ್ಟಿಸಿ ಕೊಟ್ಟಿರುವುದಕ್ಕೆ ಸಾಕ್ಷಿ ಇದೆ. ಹಾಗೆಯೇ ಮೂರನೆಯ ಕುಲೋತ್ತುಂಗ ಚೋಳ ಹಳೆಯ ಮೈಸೂರಿನ ಭಾಗವನ್ನು ಆಳುವಾಗ (ರೇವಣಸಿದ್ದ ಎರಡನೆಯ ಚೋಳನ ಮಗಳು ಸೌಂದರಿಯನ್ನು ಮದುವೆಯಾಗಿದ್ದರು) ರೇವಣಸಿದ್ದರಿಗೆ ಆನೇಕಲ್ ರಾಜಪುರದಲ್ಲಿ ಒಂದು ಗುರುಮಠ ಕಟ್ಟಿಸಿ ಕೊಟ್ಟಿರುವದಕ್ಕೆ ಆಧಾರವಿದೆ. ಚೋಳ ರಾಜನ ಆಧೀನ ರಾಜನಾದ ತೆಂಗಿನಕಲ ಚಾಮರಾಜ ರೇವಣಸಿದ್ದೇಶ್ವರರ ಬೆಟ್ಟಕ್ಕೆ ಅಡಿಯಿಂದ ಮುಡಿಯವರಿಗೆ ಮೆಟ್ಟಿಲನ್ನು ಕಟ್ಟಿಸಿ, ಶಿವಲಿಂಗಗಳ ಪ್ರತಿಷ್ಠಾಪನೆಯ ಕಾರ್ಯ ದೊಡ್ಡ ರೇವಣಾರಾಧ್ಯ ಹಾಗೂ ಚಿಕ್ಕ ರೇವಣಾರಾಧ್ಯ (ರುದ್ರಮುನಿ) ರ ಸಾನಿಧ್ಯದಲ್ಲಿ ನೆರವೇರಿಸುವುದನ್ನು ಭೀಮೇಶಾದ್ರಿ ಪುರಾಣವು ದಾಖಲಿಸುತ್ತದೆ.
ಹಾಗೆಯೆ ಉಜ್ಜನೀಪುರದ ವರಾಧೀಶನಾದ ಗುತ್ತಲದ ವಿಕ್ರಮಾದಿತ್ಯನಿಗೆ ಕತ್ತಿ ಕೊಟ್ಟಿದ್ದನ್ನು (ಕತ್ತಿ ಇಲ್ಲಿ ರಾಜಕೀಯ ಶಕ್ತಿಗೆ ಸಂಕೇತ) ಗ್ರಂಥಗಳು ದಾಖಲಿಸುತ್ತವೆ. ಇವರ ಹೆಸರಿನಲ್ಲಿರುವ ಮಠಗಳು, ದೇವಾಲಯಗಳು, ಗುಡ್ಡಗಳು ,ಕೊಳ್ಳಗಳು ಇವರ ಸಿದ್ದಿ, ಪ್ರಸಿದ್ಧಿ ,ಪ್ರಭಾವ ಮತ್ತು ಜನಪ್ರಿಯತೆಗೆ ಪ್ರತಿಕವಾಗಿವೆ. ರೇವಣಸಿದ್ದರು ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಕರ್ತರೂ ಆಗಿದ್ದರಂಬುದಕ್ಕೆ ಹರಿಹರ ಕವಿಯ “ಕಾವ್ಯ ವರ್ಣನೆ“ಯಲ್ಲಿ ಅವರ ಸಾಮಾಜಿಕ ಕೆಲಸ ಕಾರ್ಯಗಳ ಮಾಹಿತಿಯನ್ನು ಒದಗಿಸುತ್ತದೆ. ಇವರು ಪಂಚಾಚಾರ್ಯರಲ್ಲಿ ಒಬ್ಬರೆಂದು ಪರಿಗಣಿಸುತ್ತಾ ಅವರನ್ನು ರೇಣುಕಾಚಾರ್ಯರೆಂದು ಪ್ರಚಾರ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ರೇವಣಸಿದ್ದರು ಶರಣ ಸಂಪ್ರದಾಯದ ಪುರೋಹಿತಶಾಹಿ ವಿರೋಧಿಗಳೆಂಬುದಕ್ಕೆ ಅವರು ಹುಟ್ಟುಹಾಕಿದ ಕುರುಬರ ಕುಲಗುರುಗಳ ಸಂಪ್ರದಾಯವಾದ ಒಡೆಯರು ಸಾಕ್ಷಿಯಾಗಿದ್ದಾರೆ.
ಸಂಸ್ಕೃತ ಮಂತ್ರಗಳಿಗೆ ಬದಲಾಗಿ ಅಚ್ಚ ಕನ್ನಡ ಮಂತ್ರಗಳನ್ನು ರಚಿಸಿ ಕುರುಬರ ಮದುವೆಯಲ್ಲಿ ಪಠಣ ಮಾಡಿ ಪ್ರಗತಿಪರ ಮಾಂಗಲ್ಯ ಧಾರಣವನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಕುರುಬರ ಗುರುಗಳಾದ “ಒಡೆಯರ“ರು ಸಾಮಾಜಿಕ ,ಧಾರ್ಮಿಕ ಆಚರಣೆಯಲ್ಲಿ ಕಂಡುಬರುವ ಕಾಲಿಲ್ಲದ ಐನೋರು ಮತ್ತು ಒಡೆಯರಮ್ಮನಿಗೆ ಇರುವ ಸ್ವಾತಂತ್ರ್ಯ ಗೌರವಗಳು ಇಂದಿನ ಸಂದರ್ಭದಲ್ಲಿ ಪ್ರಗತಿಪರ ಹೆಜ್ಜೆಗಳಾಗಿವೆ.
ಕುರುಬರ ಕುಲಗುರು ರೇವಣಸಿದ್ದರಿಗೂ ಮತ್ತು ಕುರುಬರ ಕುಲದೈವ ಬೀರಪ್ಪನಿಗೂ ಧಾರ್ಮಿಕವಾದ ಅವಿನಾಭಾವ ಸಂಬಂಧವಿದೆ. ಎಲ್ಲೆಲ್ಲಿ…. ರೇವಣಸಿದ್ದರೂ ಸಂಚಾರ ಮಾಡಿ ಧರ್ಮ ಪ್ರಚಾರ ಮಾಡಿ ಮಠ ಕಟ್ಟಿಸಿದರೋ… ಅಲ್ಲಲ್ಲಿ ಬೀರಪ್ಪ ಮತ್ತು ಬೀರಪ್ಪನ ಪರಿಸ್ಕ್ರಂತ ರೂಪವಾದ ವೀರಭದ್ರನ ದೇವಾಲಯಗಳನ್ನು ಪ್ರತಿಷ್ಠಾಪಿಸಿದ್ದಾರೆ. ಹಾಗೂ ಹಾಲುಮತ ಕುರುಬ ಮತ್ತು ಲಿಂಗವಂತ ಜನಾಂಗಗಳ ಸಂಕರಶೀಲತೆಗೆ ಬುನಾದಿಯನ್ನು ಹಾಕಿದ್ದಾರೆ. ರೇವಣಸಿದ್ಧರು ನಾಥಪಂಥದ ಅನುಯಾಯಿಯಾಗಿದ್ದಾಗ ಉತ್ತರ ಭಾರತದ 700 ಗ್ರಾಮಗಳನ್ನು ಸುತ್ತಿಬಂದಿದ್ದಾರೆಂದು ಮತ್ತು ದಿಲ್ಲಿಯವರೆಗೂ ಹೋಗಿಬಂದಿದ್ದಾರೆಂದು ಗ್ರಂಥಗಳಲ್ಲಿ ಉಲ್ಲೇಖವಿದೆ. ದಿಲ್ಲಿಯನ್ನು ಸುತ್ತಿ ಬಂದ ಇವರಿಗೆ ದಿಳ್ಳೆಪ್ಪ ಅಥವಾ ಡೀಳೆಪ್ಪ ಎಂದು ಹೆಸರು ಬಂದಿದೆ ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಹಾವೇರಿ ಜಿಲ್ಲೆ, ರಾಣೇಬೆನ್ನೂರು ತಾಲೂಕಿನ ಮಡ್ಲೇರಿ ಎಂಬ ಗ್ರಾಮದಲ್ಲಿ ಡೀಳೆಪ್ಪನ ದೇವಾಲಯ ಒಂದು ಇದ್ದು, ಹಲವರು ಅದು ಮೂಲತಃ ರೇವಣಸಿದ್ದರೂ ಸ್ಥಾಪಿಸಿದ ಬೀರಪ್ಪನ ದೇವಾಲಯವೆಂದು ಅಭಿಪ್ರಾಯ ಪಡುತ್ತಾರೆ.
ಈ ಕುರಿತು ಸಮಗ್ರ ಸಂಶೋಧನೆಯ ಅಗತ್ಯವಿದೆ.
ರೇವಣಸಿದ್ದರನ್ನು ಕುರಿತು ಜನಪದ ಗೀತೆಗಳು, ಪುರಾಣಗಳು ,ಐತಿಹ್ಯಗಳು ಕರ್ನಾಟಕದ ಹಲವು ಪ್ರದೇಶಗಳಲ್ಲಿ ಪ್ರಚಲಿತದಲ್ಲಿವೆ.
ಲಭ್ಯ ಮಾಹಿತಿಗಳ ಪ್ರಕಾರ
ಸಾಮಾಜಿಕ ಸಂಘರ್ಷದ ಕಾಲಘಟ್ಟ ಒಂದರಲ್ಲಿ ಕುರುಬರ ನಾಯಕತ್ವ ವಹಿಸಿ ಅವರಿಗೆ ಸಾಮಾಜಿಕ ಸ್ಥಾನಮಾನ ತಂದುಕೊಡಲು ಹೋರಾಡಿದ ಸಿದ್ಧಪುರುಷರೆಂದರೆ ಕುರುಬರ ಕುಲಗುರು ರೇವಣಸಿದ್ದರಾಗಿದ್ದಾರೆ.
ಕುರುಬರ ಯಾವ ಒಂದು ಸಂಸ್ಕೃತಿಕ ಆಚರಣೆಯನ್ನು ಗಮನಿಸಿದರೂ, ಅದಕ್ಕೆ ಸಂಬಂಧಿಸಿದಂತೆ ಅದರ ಅಭಿವ್ಯಕ್ತಿಯ ರೂಪ ಚಟುವಟಿಕೆಗಳಲ್ಲಿ , ರೇವಣಸಿದ್ದರ ಜಾತ್ರೆಯ ಕಾಲದಲ್ಲಿ ಕಂತೆ ಮಡುಗುವ ಆಚರಣೆಯ ಹಾಡಿನಲ್ಲಿ, ಒಂದು ಪ್ರಾಚೀನ ಪಟ್ಟಣದಲ್ಲಿ ನಡೆದ ಕುರುಬ ಜನಾಂಗದ ಶೋಷಣೆ ಮತ್ತು ಅದನ್ನು ಎದುರಿಸಿದ ರೇವಣಸಿದ್ದರ ಸಹವಾಸವನ್ನು ಈ ಜನಪದ ಹಾಡು ಕಟ್ಟಿಕೊಡುತ್ತದೆ .
12ನೇ ಶತಮಾನದ ಹಾಲುಮತದ ಕುರುಬರನ್ನು ಹೀನ ಕುರುಬ ,ಜಿಡ್ಡು ಕುರುಬ ಎಂದು ಜರಿದು ಕಲ್ಯಾಣ ನಗರದಿಂದ ಏಳು ಬೇಲಿ ಆಚೆ ಅಟ್ಟಿದ ಪ್ರಸಂಗವು ಜನಪದ ಸಾಹಿತ್ಯದಲ್ಲಿ ಬರುತ್ತದೆ.
ಆಗ ಕಲ್ಯಾಣ ನಗರದ ಪ್ರಜೆಗಳಾದ ಜೈನರು, ಲಿಂಗಾಯತರು ಕುರುಬರಿಗೆ ಈ ಪದವನ್ನು ಬಳಸುತ್ತಾರೆ.
” ಅವರಿದ್ದಿದ್ದಿತ್ತಾಕೆ ಇದ್ದಲ ಚೆಲ್ಲೋರೆ
ಅವರಿದ್ದಲ್ಲಿ ಜಿಡ ನಿಲಬಾರ
ಆಲುಮತನೋರ ಆರು
ಕಳ್ಯಾಚೆ ಇಡಿರಲ್ಲ”
ಎಂದು ಕುರುಬರನ್ನು ನಮ್ಮ ಕುಲವಲ್ಲ ,ನಮ್ಮ ಬಾಂಧವರಲ್ಲ ಅಂತ ಊರು ಬಿಟ್ಟು ದೂರ 6 ಕಳ್ಳೇಗಳ ಆಚೆ ಇಡುತ್ತಾರೆ.
ಇದನ್ನು ತಿಳಿದ ರೇವಣಸಿದ್ದರು
ಮೇಲ್ವರ್ಗದವರ ಮೇಲೆ ಮುನಿದು ಸಿಡುಕುತ್ತಾರೆ.
(ಇಲ್ಲೊಂದು ಪೌರಾಣಿಕ ಕಥೆ ಹೇಳಲಾಗುತ್ತದೆ.
ಶಿವನ ಕುರಿತು ಉಗ್ರ ತಪಸ್ಸು ಮಾಡಿ
ರೇವಣಸಿದ್ದರ ತಪಸ್ಸು ಎಷ್ಟೊಂದು ಉಗ್ರವಾಗಿರುತ್ತದೆ, ಅಂದರೆ ಒಂದೊಂದು ಅಂಗದಲ್ಲಿ ಒಂದೊಂದು ಮರ ಗಿಡಗಳು ಬೆಳೆದು ಕಾಡು ನಿರ್ಮಾಣವಾಗಿ ಹಕ್ಕಿ ಪಕ್ಷಿ ಉರುಗ ಚೇಳುಗಳು ವಾಸಿಸುತ್ತವೆ.
ಹೀಗೆ ರೇವಣಸಿದ್ಧರ ತಪಸ್ಸು ತೀವ್ರವಾದಂತೆ ಅವರ ಶರೀರದ ಸುತ್ತಲೂ ಹುತ್ತು ಬೆಳೆಯುತ್ತದೆ.
ಆಗ ದನದ ಹಿಂಡಿನಲ್ಲಿದ್ದ ಸತ್ಯವಂತರ ಮನೆಯ ಸತ್ಯುಳ್ಳ ಹಸು ತಾನೇ ಹೋಗಿ ನಿತ್ಯ ಹುತ್ತಕ್ಕೆ ನೆರೆ ಹಾಲು ಕರೆಯ ತೊಡಗುತ್ತದೆ. ಇದನ್ನು ಕಂಡು ಹಸುವಿನ ಒಡೆಯ
“ಏನೆಂದು ನಾ ಕಾಣೆ ಎಂದೆಂದು ನಾ ಕಾಣೆ ಏನು ಮಾಯಗಳ ತಿಳಿಯಾವೆ
ನಿಮ್ಮಸಮ್ದ ರೇವಣುರಲ್ಲದೆ ಬದುಲಲ್ಲಿ.”
ಎಂದು ರೇವಣ್ಣನ ತಪಸ್ಸಿನ ಪ್ರಭೆಗೆ ಬೆರಗಾಗಿ ಗುದ್ದಲಿಯನ್ನು ತರಿಸಿ ಹುತ್ತವನ್ನು ಬೆಗೆಸಿ
ಹಚ್ಚಿದ ಜಡೆಯನ್ನು ಬಿಡಿಸಿ ನೋಡುತ್ತಾರೆ ಆಗ ರೇವಣಸಿದ್ಧರೂ ತಪಸ್ಸು ಮತ್ತು ತಪಸ್ಸಿನ ಫಲ ತಿಳಿಯುತ್ತದೆ.
ರೇವಣಸಿದ್ದರ ತಪಸ್ಸನ್ನು ಮೆಚ್ಚಿ ಶಿವನೂ ಮತ್ತು ನಾರಾಯಣನೂ ಬಂದು ಕೇಳುತ್ತಾರೆ
“ಅತ್ತೂರ ಕೊಡುವೆ ಅತ್ತೋ ತೇಜಿ ಕೊಡುವೆ ಮತ್ತೆ
ನಮಸಮ್ದ ದೊರೆತನ
ನಾ ಕೊಡುವೆ ನೀವತ್ತೀದ ತ್ರಬಸಯಿಳಿಗುರುವೆ.
ಎಂದು ಕೇಳುತ್ತಾರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಹಾಲುಮತದ ಜನಪದರು
ಶಿವ ಮತ್ತು ನಾರಾಯಣ ನಾರಾಯಣರಿಂದಲೂ ತಮ್ಮ ಗುರುವಿಗೆ ಗುರು ಎಂದೇ ಸಂಭೋಧಿಸಿದರು.
ಯಾಕೆಂದರೆ ರೇವಣಸಿದ್ದರು ಹಿಡಿದ ಪಟ್ಟು ಬಿಡುವುದಿಲ್ಲ ತಾನು ಯಾವುದಕ್ಕಾಗಿ ತಪಸ್ಸು ಮಾಡಿದ್ದನ್ನು ಆ ಉದ್ದೇಶವನ್ನು ಅವರು ಮುಂದಿಟ್ಟು ಹಠ ಹಿಡಿಯುತ್ತಾರೆ. ಮತ್ತು ಹೇಳುತ್ತಾರೆ,
“ಸೀಮೆಯ ನಾನೊಲ್ಲೇ ಭೂಮಿಯು ನಾನೊಲ್ಲೇ
ಜಿಡ್ಡುಗುರುಬರನ್ನು ನಾನು
ಪಡೆದಿದ್ದೆ ಆದರೆ ಅವರು ಕಟ್ಟು ಮರಿ
ಚಂಡನ್ನು ನಡೆಸ್ಯಾರು
ಎಂದು ಉತ್ತರಿಸುತ್ತಾರೆ. ಹೀಗೆ ತಪಸ್ಸನ್ನು ಮಾಡಿ ಶಿವನಾರಾಯಣರನ್ನು ಗೆದ್ದ ರೇವಣಸಿದ್ದರು ಅವರು ನೀಡಿದ ವರದಿಂದ
ಕಲ್ಯಾಣನಗರ ಗೆದ್ದುಕೊಳ್ಳುತ್ತಾರೆ.
ಗೆದ್ದ ರೇವಣ್ಣರು ಪಲ್ಲಕ್ಕಿ ಏರಿ ಬಂದು ಕಲ್ಯಾಣ ಪಟ್ಟಣದೊಳಗೆ ಕುರುಬರ ಗುರುತನವನ್ನು ಪಡೆಯುತ್ತಾರೆ ಅವರ “ಗುರು“ತನ ಆದ ಸಂಗತಿಯನ್ನು ಕಲ್ಯಾಣದೊಳಗೆ ಶಾಸನವಾಗಿ ಕೆತ್ತಿಸಿದರಂತೆ ಅದನ್ನು ಕುರಿತು ಜನಪದ ಅಭಿವ್ಯಕ್ತಿ ಹೀಗಿದೆ.
” ಕಲ್ಯಾಣ ಪಟ್ಟಣದೊಳಗೆ ಅಲ್ಲೇನ ಚೋಜಿಗ
ಅಲ್ಲಿ ನಮ್ಮ ಗುರುವೀಗೆ ಗುರುತಾನ
ಆದವೆಂದು
ಕಲ್ಲೀಗಿ ಸಾಸಾನ ವೊಡುದಾವು.”
“ಗುರು”ತನ ಪಡೆದ ರೇವಣ್ಣನು ಮತ್ತೆ ಬಿಜ್ಜಳರಾಯನ ಪಟ್ಟ ಶಾಲೆಯೊಳಗೆ ಒಪ್ಪಗೆ ಹಾಕಿದ ಮಣೆ ಮೇಲೆ ಪಟ್ಟದ ವೀಳ್ಯದೆಲೆ ಪಡೆಯುತ್ತಾರೆ.
ಹೀಗೆ ಕುರುಬರ “ಗುರು”ತನದ ಪಟ್ಟ ಪಡೆದ ರೇವಣ್ಣನಿಗೆ ಗುರು ಕನ್ಯದ ಸತ್ತಿಗೆ ಹಿಡಿದವು. ಮರುಗ ಮಲ್ಲಿಗೆ ಸಿರಿಗಂಧ ರುದ್ರಾಕ್ಷಿ ಸರಾ ಧರಿಸಿದ ರೇವಣ್ಣನಿಗೆ ಉತ್ತರ ದೇಶದ ಶಿಷ್ಯರು ಸಹ ಸತ್ತಿಗೆ ಪಾಲಿಕೆಗಳನ್ನು ಕೊಂಡು ಕಾಣಿಕೆಯಾಗಿ ಅರ್ಪಿಸುತ್ತಾರೆ. ಈ ಐತಿಹಾಸಿಕ ಜನಪದ ಕಾವ್ಯವು ಪ್ರಮುಖವಾಗಿ ಸಾಮಾಜಿಕ ಸಂಘರ್ಷವೊಂದನ್ನು ವಸ್ತುವಾಗಿಸಿಕೊಂಡಿರುವ ಅನುಭವಾತ್ಮಕ ಚಿತ್ರವನ್ನು ತೆರೆದಿಡುತ್ತದೆ .
ಈ ಅನುಭವವನ್ನು ಹಾಡುತ್ತಿರುವ ಮನಸ್ಸು ಸಂಘರ್ಷದಲ್ಲಿ ನೋವುಂಡ ಜನಾಂಗ ಅನುಭವಿಸಿದ ಸಾಮಾಜಿಕ ಅವಮಾನವೇ ಈ ನೆಲೆಗೆ ಸೇರಿದ್ದಾಗಿದೆ.
ಸಾಮಾನ್ಯ ವಾಗಿ ನೋವಿನ ನೆಲೆಯಿಂದ ಬಂದ ಮಾತುಗಳು ನೇರ ಹೇಳಿಕೆಗಳಾಗಿರುವುದಿಲ್ಲ.ಪಟ್ಟ ಪಾಡು ಹುಟ್ಟು ಹಾಡಾಗುತ್ತವೆ.
ಈ ಹಾಡುಗಳು ನಿರ್ದಿಷ್ಟ ಆಚರಣೆಯ ಸಂದರ್ಭದಲ್ಲಿ ಬಳಸುವ ಇತರ ಪರಿಕರಗಳಂತೆ ಒಂದು ಪರಿಕರವಾದರೂ ಇದು ಬಹಳ ಮುಖ್ಯ ಪರಿಕರ ಎಂಬುದು ಗಮನಾರ್ಹ.
ಆದ್ದರಿಂದ ಆಚರಣೆಯ ಸ್ವರೂಪವನ್ನು ವಿವರಗಳಾದ್ಯಂತವಾಗಿ ಕಾಲಗತಿಯಲ್ಲಿ ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿಕೊಂಡು ಹೋಗುವ ಪ್ರಧಾನ ವಾಹಕ ಇದು. ಹೀಗಾಗಿ ಆಚರಣೆಗೂ ಜನಪದ ಹಾಡಿಗೂ ಜೀವರಕ್ತ ಸಂಬಂಧವಿದೆ.
–ಸುಜಾತಾ ಪಾಟೀಲ ಸಂಖ ತಾ-ಜತ್ತ ,ಜಿಲ್ಲಾ ಸಾಂಗಲಿ ಮಹಾರಾಷ್ಟ್ರ