ದೇವರ ಅಸ್ತಿತ್ವವು ಶಿಶು ಕಂಡ ಕನಸು

ದೇವರ ಅಸ್ತಿತ್ವವು ಶಿಶು ಕಂಡ ಕನಸು

ಸೃಷ್ಟಿಯ ನಿರ್ಮಾಣವು ಒಂದು ನಿಗೂಢ ರಹಸ್ಯ ಪ್ರಪಂಚದಲ್ಲಿ ನಡೆಯುವ ಅನೇಕ ಅಗೋಚರಗಳು ಹುಟ್ಟು ಸಾವು ಪ್ರಾಕೃತಿಕ ಬದಲಾವಣೆಗಳು ಹೀಗೆ ಅನೇಕ ಕೂತುಹಲಕರ ವಿಷಯಗಳಲ್ಲಿ ಮನುಷ್ಯ ದೇವರ ಸೃಷ್ಟಿಕರ್ತನ ಪರಮಾತ್ಮನ ಇರುವಿನ ಅಸ್ತಿತ್ವದ ಬಗ್ಗೆ ಚರ್ಚಿಸುತ್ತ ಇದ್ದಾನೆ. ಇದು ಒಂದು ಜಾಗತಿಕ ಚಿಂತನೆ. ದೇವರ ಅಸ್ತಿತ್ವದ ರಹಸ್ಯವನ್ನು ಬೇಧಿಸುವುದೇ ಅಧ್ಯಾತ್ಮವು. ಹೇಗೆ ಬದುಕಬೇಕು,  ಬದುಕಿಗೆ ಸೂತ್ರಗಳನ್ನು ನಿಯಮಗಳನ್ನು ರೂಪಿಸಿದವು ಹಲವು ಧರ್ಮಗಳು. ಇಲ್ಲಿ ಕಡ್ಡಾಯ ಹೇರಿಕೆ ಕ್ರಮೇಣ ದಾಸ್ಯತ್ವಗಳು ಕಂಡು ಬಂದವು. ಶರಣರು ತನ್ನೊಳಗೆ ದೇವರು ಧರ್ಮದ ಸರಳ ಸುಂದರ ಪರಿಕಲ್ಪನೆ ಕಂಡರು.
ಇಂತಹ ಅರ್ಥಪೂರ್ಣವಾದ ಬದುಕನ್ನೇ ದರ್ಶನ ಮಾಡಿದ ಹೆಗ್ಗಳಿಕೆ ಬಸವಣ್ಣ ಹಾಗೂ ಅವನ ಶರಣರಿಗೆ ಸಲ್ಲಬೇಕು. ಚೆನ್ನ ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಅತ್ಯಂತ ಸುಂದರವಾಗಿ ವೈಜ್ಞಾನಿಕ ತಳಹದಿಯ ಮೇಲೆ ಅನುಭಾವ ನೀಡಿದ್ದಾರೆ.

ಫಲದೊಳಗಣ ಮಧುರ ಗೋಪ್ಯದಂತಿದ್ದಿತ್ತು
ಚಂದ್ರಕಾಂತದ ಉದಕದ ತೆರನಂತಿದ್ದಿತ್ತು.
ಮಯೂರನ ತತ್ತಿಯ ಚಿತ್ರದಂತಿದ್ದಿತ್ತು.
ಶಿಶು ಕಂಡ ಕನಸಿನ ಪರಿಯಂತಿದ್ದಿತ್ತು.
ಕೂಡಲ ಚೆನ್ನ ಸಂಗಯ್ಯ ಸದ್ಗುರು ಚಿತ್ರದ ಪದದಂತಿದ್ದಿತ್ತು.

-ಚೆನ್ನಬಸವಣ್ಣ.

ಫಲದೊಳಗಣ ಮಧುರ ಗೋಪ್ಯದಂತಿದ್ದಿತ್ತ
ಪ್ರತಿಯೊಂದು ರಸಭರಿತವಾದ ಹಣ್ಣಿನೊಳಗೆ ಬೇರೆ ಬೇರೆ ರುಚಿಕರ ಮಧುರ ಗುಣವಿರುವುದು ಸಹಜ ಸ್ವಾಭಾವಿಕವಾಗಿದೆ. ಆ ಫಲದೊಳಗಣ ಸವಿಯ ಗುಣವನ್ನು ತಾನು ತಿಂದಾಗಲೇ ರುಚಿಯ ಅನುಭವಕ್ಕೆ ಬರುವುದು. ಆ ಮಧುರ ರುಚಿಯ ಗುಣವು ಹಣ್ಣಿನೊಳಗೆ ಕಾಣುವದಿಲ್ಲ .ಬಾಹ್ಯ ತೋರಿಕೆಯಲ್ಲಿ ಹಣ್ಣು ಕಾಣಬಹುದೇ ಹೊರತು ಅದರೊಳಗೆ ಅಡಕವಾಗಿರುವ ಮಧುರ ರುಚಿಯ ಗುಣವಲ್ಲ. ಅದು ಗೌಪ್ಯ ಹಾಗೂ ರಹಸ್ಯವಾಗಿರುತ್ತದೆ. ಹಾಗೆ ಭಕ್ತನೆಂಬ ಸಾಧಕನ ಕಾಯದಲ್ಲಿ ಅಧ್ಯಾತ್ಮವೆಂಬ ರುಚಿಯು ಕಾಣಲು ಬಾರದು ಅದನ್ನು ವ್ಯಕ್ತಿ ತಾನು ಅನುಭವಿಸಿ ನೋಡಬೇಕು. ಮಧುರ ರುಚಿ ಗುಣವನ್ನು ಬಹಿರಂಗವಾಗಿ ಕಾಣದಿದ್ದರೆ ಅಂತಹ ಗುಣವನ್ನು ಅಲ್ಲಗಳೆಯಲು ಸಾಧ್ಯವೇ ?

ಚಂದ್ರಕಾಂತದ ಉದಕದ ತೆರನಂತಿದ್ದಿತ್ತು.

ಚಂದ್ರಕಾಂತ ಶಿಲೆಯಲ್ಲಿ ಜುಳುಜುಳುವಾಗಿ ಒಸರುವ ನೀರು ಕಾಣಬಾರದು .ಹಾಗೆಂದ ಮಾತ್ರಕ್ಕೆ ಆ ಉದಕವನ್ನು ಅಲ್ಲಗಳೆಯ ಬಹುದೇ ?
ಚಂದ್ರಕಾಂತ ಶಿಲೆಯಲ್ಲಿ ತಂಪು ಆರ್ಧ್ರತೆ ಇರುವ ಕಾರಣ ಅದನ್ನು ಬಸವಣ್ಣನವರು ಇಷ್ಟ ಲಿಂಗ ತಯಾರಿಕೆಯಲ್ಲಿ ಬಳಸಿದರು. ಲಿಂಗಮೂಲಕ ಊರ್ಧ್ವ ಮುಖವಾಗಿ
ಹರಿಯುವ ಈ ಚೈತನ್ಯವೇ ಪಾದೋದಕ . ಚಂದ್ರಕಾಂತ ಶಿಲೆಯಲ್ಲಿ ತಂಪು ಗುಣವಿರುವದನ್ನು ಮನಗಂಡು ಬಸವಣ್ಣ ತನ್ನ ಕರಸ್ಥಲದಲ್ಲಿ ಬಂದು ಇಂಬುಗೊಳ್ಳುವ
ಅರಿವಿನ ಕುರುಹಿಗೆ ಅದನ್ನು ಬಳಸಿದರು.

ಮಯೂರನ ತತ್ತಿಯ ಚಿತ್ರದಂತಿದ್ದಿತ್ತು.
ನವಿಲಿನ ಮೊಟ್ಟೆ ತತ್ತಿಯಲ್ಲಿ ಅಡಕವಾಗಿರುವ ಬಣ್ಣ ಬಣ್ಣದ ಚಿತ್ತಾರ ಸುಂದರ ಚಿತ್ರಗಳು ಕಾಣಬಹುದೇ. ಆದರೆ ಅದು ವಿಕಾಸನವಾಗಿ ಮರಿ ನವಿಲಾದಾಗ
ಅದರ ರೆಕ್ಕೆ ಪುಕ್ಕ ಶರೀರ ಮೇಲೆ ಅಂದ ಚೆಂದ ಚಿತ್ರಗಳು ಕಾಣಾಬಹುದು. ಯಾವುದು ಬಾಹ್ಯವಾಗಿ ಗೋಚರಿಸುವದಿಲ್ಲವೋ ಅವುಗಳನ್ನು ಅಲ್ಲಗಳೆಯುವಂತಿಲ್ಲ .
ದೈವತ್ವವೂ ಕೂಡ ಹಾಗೇನೇ ಸೃಷ್ಟಿಯೊಳಗೆ ಅಡಕವಾಗಿರುವ ಪಂಚ ಮಹಾಭೂತಗಳಲ್ಲಿದ್ದರೂ ತನ್ನ ಪರಿಯನ್ನು ಬಿಟ್ಟು ಕೊಡದ ನವಿರತೇ ಸಾಧಕನ ನಿರಂತರ
ಯೋಗದ ಮೂಲಕ ಗೋಚರಿಸುತ್ತ ಮತ್ತೆ ಇಲ್ಲಿಯೇ ಲೀಯವಾಗುತ್ತದೆ.

ಶಿಶು ಕಂಡ ಕನಸಿನ ಪರಿಯಂತಿದ್ದಿತ್ತು.
ಮಗುವು ತೊಟ್ಟಿಲೊಳಗೆ ಮಲಗಿ ಯಾವುದೊ ಒಂದು ಕನಸಿಗೆ ಸ್ಪಂದಿಸಿ ಕಿಲಕಿಲ ನಗುವ ಹಾಗೆ ದೇವರ ಅಸ್ತಿತ್ವವು .. ಮಗುವಿಗೆ ಕನಸು ಕಂಡಿದ್ದು ಸತ್ಯ ಆದರೆ ಆ ಕನಸು ಮಗುವಿನಿಂದ ಕೇಳಿ ತಿಳಿಯಲು ಸಾಧ್ಯವೇ. ಹಾಗೆಯೇ ದೈವತ್ವದ ಅನುಭವವು ಅವ್ಯಕ್ತವಾಗಿದ್ದು ಅನುಭವದ ಪರಿಮಿತಿಗೆ ಬಂದಾಗ ಅದರ ಅರಿವಿನ ವಿಸ್ತಾರದ ಕಾಣುತ್ತೇವೆ. ದೈವೀಕರಣವು ಕೂಡ ಶಿಶು ಕಂಡ ಕನಸಿನ ಪರಿಯಂತಿದ್ದಿತ್ತು ಎಂದು ಚೆನ್ನಬಸವಣ್ಣನವರು ಸುಂದರವಾಗಿ ಹೆಣೆದಿದ್ದಾರೆ.

ಕೂಡಲ ಚೆನ್ನ ಸಂಗಯ್ಯ ಸದ್ಗುರು ಚಿತ್ರದ ಪದದಂತಿದ್ದಿತ್ತು
ನಮ್ಮ ಕೂಡಲ ಚೆನ್ನ ಸಂಗಯ್ಯನ ಇರುವಿಕೆ ಅಸ್ತಿತ್ವವು ಅರಿವೆಂಬ ಸದ್ಗುರುವಿನ ಅನುಭದ ನುಡಿಗಳಲ್ಲಿ ವಚನಗಳಲ್ಲಿ ಪದಗದಲ್ಲಿ ಕಾಣಬಹುದು ಎಂದಿದ್ದಾನೆ ಚೆನ್ನ ಬಸವಣ್ಣ ಇಂತಹ ಅಧ್ಭುತವಾದ ಪರಿಕಲ್ಪನೆ. ಗುರುವಿನ ಹಿತೋಪದೇಶ ಕಾಳಜಿಪರ ನುಡಿಗಳೇ ದೇವರ ಅಸ್ತಿತ್ವವಾಗಿದೆ. ದೇವರನ್ನು ಕಲ್ಲು ಮಣ್ಣು ಮೂರ್ತಿಗಳಲ್ಲಿ ಕಾಣದೆ ಸಮಾಜದಲ್ಲಿನ ಅರಿವಿನ ತವರಿನಲ್ಲಿ ಅನುಭವದ ಸಿರಿಯ ನುಡಿಗಳಲ್ಲಿ ಕಾಣಬಹುದು . ಅಂತಹ ಅರಿವಿನ ಅನುಭವಕ್ಕೆ ಇಳಿಯುವುದೇ ಸತ್ಸಂಗವು.ಇನ್ತಹ ಸರಳ ಪ್ರಯತ್ನವನ್ನು ಶರಣರು ಮಾಡಿದರು.

ಸರ್ವಶಕ್ತನಾದ ದೇವರು (Omnipotent ) ಸರ್ವವ್ಯಾಪಿ (Omnipresent ) ಹಾಗೂ ಸಕಲ ಚರಾಚರ ಜೀವಿಗಳ ವಸ್ತುಗಳ ಜ್ಞಾನವನ್ನು ಹೊಂದಿರುವ
ಸರ್ವಜ್ಞನಾಗಿರುತ್ತಾನೆ(Oniscient ). ಪರಿಮಳದ ಗುಣ ಸವಿಯ ರುಚಿ ಮಧುರ ಸಂಗೀತಗಳು ನಮ್ಮ ಪಂಚೇಂದ್ರಿಗಳ ಮೂಲಕ ಹೇಗೆ ಜ್ಞಾನಕ್ಕೆ ತಲುಪಿ ಸಂತಸ ಉಂಟು ಮಾಡುತ್ತವೋ ಹಾಗೆ ಸೃಷ್ಟಿಯೊಳಗೆ ಸೃಷ್ಟಿಕರ್ತನು ಪರಮಾತ್ಮನು ಇರುತ್ತಾನೆ ತನ್ನೊಳಗೆ ದೇವನಿರಲು ಗುಡಿ ಗುಂಡಾರವ ಸುತ್ತುವ ಅಗತ್ಯವಿದೆಯೇ ಎಂದು ಪ್ರಶ್ನಿಸುತ್ತಾರೆ ಶರಣರು. ಇದನ್ನು ಅಕ್ಕ ಮಹಾದೇವಿಯಿಯು ಉಸಿರಿನ ಪರಿಮಳವಿರಲು ಕುಸುಮದ ಹಂಗೇತಕಯ್ಯಾ ಎಂದು ಹೇಳೇ ಕುಸುಮದಲ್ಲಿನ ಪರಿಮಳವು ತನ್ನ ಉಸಿರಿನಲ್ಲಿದ್ದಾಗ ಕುಸುಮದ ಹಂಗಿನಲ್ಲಿ ಏಕೆ ಇರಬೇಕು ಎಂದಿದ್ದಾಳೆ. ಬದುಕಿನ ಸಾರ್ಥಕತೆ ಆಶಯ ಗುರಿ ಗುರುತರ ಜವಾಬ್ದಾರಿ ತಿಳಿದುಕೊಂಡು ತಾನು ಬದುಕಿ ಇನ್ನಿತರಿಗೂ ಬದುಕಲು ಯೋಚಿಸುವವನು ಭಕ್ತನೆನಿಸಿಕೊಳ್ಳುತ್ತಾನೆ ಅವನೇ ದೇವರಾಗುತ್ತಾನೆ. ಪ್ರಾಪಂಚಿಕ ಬದುಕಿನಲ್ಲಿ ವಿಷಯಾದಿಗಳ ಬಾಳೆಗಿ ಸಿಲುಕಿ ಬದುಕಿ ಅನುಭೋಗಿಸುವವನು ಭಾವಿ ಎನಿಸಿಕೊಳ್ಳುತ್ತಾನೆ. ಶರಣು ಭಕ್ತನಿಗೆ ಪ್ರಾಧಾನ್ಯತೆ ಕೊಡುತ್ತಾರೆ. ಅನುಭದ ಕುಲುಮೆಯಲ್ಲಿ ಅರಳುವ ಬದುಕೇ ನಿಷ್ಪತ್ತಿಯಾಗುತ್ತದೆ.

-ಡಾ.ಶಶಿಕಾಂತ.ರುದ್ರಪ್ಪ ಪಟ್ಟಣ- ಪುಣೆ

Don`t copy text!