ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಆಸೆ ಇರಬೇಕು ಆದರೆ ದುರಾಸೆ ಇರಬಾರದು ಈ ಭೂಮಿಯ ಮೇಲಿನ ಎಲ್ಲಾ ವಸ್ತುಗಳನ್ನು ಬಳಸಿಕೊಂಡರೂ ಮನುಷ್ಯನಿಗೆ ಹಪಹಪಿ ನಿಂತಿಲ್ಲ. ಈ ಮನುಷ್ಯ ತಿಂಗಳಿನ ಅಂಗಳದತ್ತ ಸಾಗಿ ಮಂಗಳನ ಅಂಗಳದಲ್ಲಿ ಇಳಿದು ಬಂದರೂ ತನ್ನ ಅಂಗಳದಲ್ಲಿ ಗಿಡಗಳನ್ನು ನೆಟ್ಟರೆ ಮಾತ್ರ ನನ್ನ ಬದುಕು ಸುರಕ್ಷಿತ ಎಂಬುದನ್ನು ಮರೆತಂತಿದೆ.
ಪರಿಸರವಿಲ್ಲದೆ ಮನುಷ್ಯನಿಗೆ ಬಾಳೇ ಇಲ್ಲ. ತನ್ನ ಕಾಲ ಮೇಲೆ ಕಲ್ಲು ಹಾಕಿಕೊಂಡ ಮನುಷ್ಯ ಈಗ ಎಚ್ಚೆತ್ತುಕೊಂಡು ಮರಳಿ ಪರಿಸರ ರಕ್ಷಣೆಗಾಗಿ ವರ್ಷದುದ್ದಕ್ಕೂ ಸಸಿಗಳನ್ನು ನೆಡುತ್ತಲೇ ಬರುತ್ತಿದ್ದಾನೆ.
ಆದರೂ ಪರಿಸರ ಉಳಿವು ಅಷ್ಟು ಸರಳವಲ್ಲ ಹಾಗಾಗಿ ಜಗತ್ತಿನಾದ್ಯಂತ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಪ್ರತೀ ವರ್ಷ ಜೂನ್ 5ರಂದು ಜಗತ್ತಿನಾದ್ಯಂತ ವಿಶ್ವ ಪರಿಸರ ದಿನ (World Environment Day)ವನ್ನು ಆಚರಿಸಲಾಗುತ್ತದೆ. ವೃಕ್ಷೋ ರಕ್ಷತಿ ರಕ್ಷಿತಃ ಎಂಬಂತೆ ಪರಿಸರವಿದ್ದರೆ ಮಾತ್ರ ಮಾನವನಿರುವನು.. ಹಸಿರಿಲ್ಲದೆ ಉಸಿರಿಲ್ಲ..ಪರಿಸರವು ಜೀವರಾಶಿಗೆ ಲಭಿಸಿರುವ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪ್ರಕೃತಿಯಲ್ಲಿನ ಗಾಳಿ, ನೀರು, ಮಣ್ಣು, ಮರಗಳಿಲ್ಲದೆ ಮನುಷ್ಯ ಸಂಕುಲವಿಲ್ಲ. ಮಾನವನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿಸರ ದಿನವನ್ನು ಆಚರಿಸಲು ಆರಂಭಿಸಲಾಯಿತು. ಪರಿಸರ ದಿನಾಚರಣೆಯ ಅಂಗವಾಗಿ ಪ್ರಪಂಚದಾದ್ಯಂತ ಜನರು ಗಿಡಗಳನ್ನು ನೆಡುತ್ತಾರೆ. ಗಿಡಗಳನ್ನು ನೆಡುವುದು, ನೆಟ್ಟ ಗಿಡಗಳಿಗೆ ನೀರು ಹಾಕುವ ಕೆಲಸವನ್ನು ಮಾಡುತ್ತಾರೆ.
ವಿಶ್ವದಾದ್ಯಂತ ಸುಮಾರು 143 ದೇಶಗಳು ಪರಿಸರ ದಿನವನ್ನು ಆಚರಿಸುತ್ತವೆ. ಪ್ರಕೃತಿಯ ಮೇಲಾಗುತ್ತಿರುವ ಹಾನಿಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಆಚರಿಸಲು ಮುಂದಾಯಿತು. ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ನಿರ್ಧಿಷ್ಟ ಥೀಮ್ ನೊಂದಿಗೆ ಆಚರಿಸುತ್ತಾ ಬರಲಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಎಂಬ ಹಲವು ಕಾರಣಗಳಿಂದ ಪರಿಸರದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ.
ಗಣಿಗಾರಿಕೆ, ಕೈಗಾರಿಕೀಕರಣ, ಅರಣ್ಯನಾಶ ಮೊದಲಾದ ಚಟುವಟಿಕೆಗಳಿಂದ ಪರಿಸರ ನಾಶವಾಗುತ್ತಲೇ ಇದೆ. ಇಂದು ಇಡೀ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಪರಿಸರ ಮಾಲಿನ್ಯ. ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮಣ್ಣಿನ ಮಾಲಿನ್ಯ ಹಾಗೂ ಸಮುದ್ರ ಮಾಲಿನ್ಯ. ಇವುಗಳ ಪ್ರಮಾಣ ಹಿಂದೆಂದಿಗಿಂತಲೂ ವ್ಯಾಪಕವಾಗಿದೆ.ಆದರೆ, ಅದೆಷ್ಟೋ ವರುಷಗಳು ಕಳೆದರೂ ಮನುಷ್ಯ ಪ್ರಕೃತಿಯ ಬೆಲೆಯೇನೆಂದು ತಿಳಿದುಕೊಂಡಿಲ್ಲ.
1972ರ ವಿಶ್ವಸಂಸ್ಥೆ ಮಹಾಸಭೆಯಲ್ಲಿ, ಪರಿಸರ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಲಾಯಿತು. 1974ರಿಂದ ಪ್ರತಿ ವರ್ಷ ಪ್ರಪಂಚದಾದ್ಯಂತ ಜೂನ್ 5ರಂದು, ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. ನಾವು ಪ್ರಕೃತಿಯ ಒಂದು ಭಾಗವಾಗಿದ್ದೇವೆ ಮತ್ತು ಪ್ರಕೃತಿಯನ್ನೇ ಅವಲಂಬಿಸಿದ್ದೇವೆ. ಪ್ರಕೃತಿಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅರಿವು ಮೂಡಿಸುವುದು ಪರಿಸರ ದಿನದ ಉದ್ದೇಶವಾಗಿದೆ.
ಜೂನ್ 5, ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡಲಾಗುತ್ತದೆ. ನೆಲ, ಮಣ್ಣು, ಬೆಳೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದೆ.
ಪರಿಸರದ ಕುರಿತಾಗಿ ಜಾಗೃತಿ ಮೂಡಿಸುವ ಇತರ ಆಚರಣೆಗಳು ವಿಶ್ವ ಬೈಸಿಕಲ್ ದಿನ, ವಿಶ್ವ ಸಾಗರ ದಿನ, ಮರಳುಗಾರಿಕೆ ಮತ್ತು ಬರವನ್ನು ಎದುರಿಸಲು ವಿಶ್ವ ದಿನ ಮೊದಲಾದವು. ಜೂನ್ 3ರಂದು ಪ್ರತೀ ವರ್ಷ ವಿಶ್ವ ಸೈಕಲ್ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಸ್ನೇಹಿಯಾಗಿ, ಕಡಿಮೆ ಖರ್ಚಿನಲ್ಲಿ ಜನರ ಆರೋಗ್ಯವನ್ನು ಸುಧಾರಿಸುವ ಒಂದು ಉಪಯುಕ್ತ ಸಾಧನವಿದು. ಹಾಗೂ ಯಾವುದೇ ರೀತಿಯಲ್ಲಿ ಸೈಕಲ್ ಉಪಯೋಗಿಸುವುದರಿಂದ ಪರಿಸರಕ್ಕೆ ಹಾನಿಯುಂಟಾಗುವುದಿಲ್ಲ.
ಜೂನ್ 17ರಂದು ಸಾಗರದ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ವಿಶ್ವ ಸಾಗರ ದಿನವನ್ನು ಆಚರಿಸಲಾಗುತ್ತದೆ. ಸುಸ್ಥಿರ ಭೂ ನಿರ್ವಹಣಾ ಕ್ಷೇತ್ರದಲ್ಲಿ ದೇಶಗಳು ಕೈಗೊಂಡ ಕಾರ್ಯಕ್ರಮ ಮತ್ತು ಅಭಿವೃದ್ಧಿಯ ನೆನಪಿಗಾಗಿ ಜೂನ್ 17ರಂದು ಮರುಭೂಮೀಕರಣ ಮತ್ತು ಬರವನ್ನು ಎದುರಿಸಲು ವಿಶ್ವ ದಿನವೆಂದು ಆಚರಿಸಲಾಗುತ್ತದೆ. ಮಳೆಕಾಡನ್ನು ರಕ್ಷಿಸಲು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮತ್ತು ಕ್ರಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದಾಗಿ ಜೂನ್ 22ರಂದು ಮಳೆಕಾಡು ದಿನವನ್ನು ಆಚರಿಸಲಾಗುತ್ತದೆ.
ಪರಿಸರ ರಕ್ಷಣೆ-ನಮ್ಮೆಲ್ಲರ ಹೊಣೆ, ಗಿಡ ಮರ-ಬೆಳಸಿ-ಪರಿಸರ ಉಳಿಸಿ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಇಂದಿನ ಬದಲಾದ ವಾತವರಣ ಮತ್ತು ದಿನೇ ದಿನೇ ಸಾಕಷ್ಟು ಏರಿಳಿಕೆಯಾಗುತ್ತಿರುವ ಹವಾಮಾನ .
ಪ್ರತಿ ವರ್ಷದ ಜೂನ್ ತಿಂಗಳಿನಲ್ಲಿ ಪರಿಸರ ಎಷ್ಟು ಹಾನಿಯಾಗಿದೆ ಎಂದು ಯೋಚಿಸುವ ಬದಲು ಪರಿಸರವನ್ನು ನಾವು ಎಷ್ಟು ಅಭಿವೃದ್ಧಿ ಪಡಿಸಿದ್ದೇವೆ ಎಂದು ಯೋಚಿಸುವಂತಾದರೆ ಬಹುಶಃ ಪರಿಸರ ದಿನಕ್ಕೆ ಹೊಸ ಅರ್ಥ ಬರಬಹುದು. ನಮ್ಮ ಸುತ್ತಮುತ್ತಲಿನ ಪರಿಸರ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಪರಿಸರಕ್ಕೆ ಹಾನಿಯಾದರೆ ನಮಗೇ ಹಾನಿಯಾದಂತೆ.
ಮನುಷ್ಯ ಸಂಕುಲ ಬದುಕಲು ಇರುವುದೊಂದೇ ಭೂಮಿ. ಎಲ್ಲವೂ ಸೊಂಪಾಗಿ ಇದ್ದ ಭೂಮಿ ಇದೀಗ ಅಕಾಲಿಕ ಮಳೆಯಿಂದ ಬೆಳೆಗಳು ನಾಶವಾಗುತ್ತಿವೆ. ಉರಿ ಬಿಸಿಲು ಮನುಷ್ಯನ ನೆತ್ತಿ ಸುಡುತ್ತಿದೆ. ಕಾಡುಪ್ರಾಣಿಗಳು ಹೊಲ ಗದ್ದೆಗಳಿಗೆ ನುಗ್ಗುತ್ತಿವೆ, ನಗರ ಪ್ರವೇಶಿಸುತ್ತಿದೆ, ಹಳ್ಳಿಗಳ ಮೇಲೆ ದಾಳಿ ಮಾಡುತ್ತಿವೆ. ಹೊಸ ಹೊಸ ರೋಗರುಜಿನಗಳು ಜೀವ ಹಿಂಡುತ್ತಿವೆ. ಋತುಗಳು ಕಾಲತಪ್ಪುತ್ತಿವೆ. ಭೂಗೋಳ ಬಿಸಿಯೇರುತ್ತಿದೆ. ಇದೇಕೆ ಹೀಗೇ? ಇದಕ್ಕೆಲ್ಲಾ ಕಾರಣ ಯಾರು? ಪ್ರಶ್ನೆಗಳೆಷ್ಟಿದ್ದರೂ ಉತ್ತರ ಒಂದೇ….ನಾವೇ, ನಮ್ಮ ದುರಾಸೆಯ ಜೀವನ!
ನಮ್ಮ ಮನುಷ್ಯ ಸಂಕುಲಕ್ಕೆ ಪರಿಸರದ ಪ್ರಾಮುಖ್ಯತೆ ಅರ್ಥ ಮಾಡಿಸುವ ಉದ್ದೇಶದಿಂದ ಪ್ರತಿ ವರ್ಷದ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.: ವಿಶ್ವ ಪರಿಸರ ದಿನವನ್ನು ಪ್ರತಿವರ್ಷ ಒಂದು ಸದುದ್ದೇಶದಿಂದ, ಉತ್ತಮ ಥೀಮ್‌ನೊಂದಿಗೆ ಆಚರಿಸಲಾಗುತ್ತದೆ. 2022ರಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಚಾರದ ಸ್ಲೋಗನ್ “ಕೇವಲ ಒಂದೇ ಭೂಮಿ” ಮತ್ತು ಈ ವರ್ಷ “ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸುಸ್ಥಿರವಾಗಿ ಬದುಕುವುದು” ಎಂಬ ಥೀಮ್‌ನಡಿ ಆಚರಿಸಲಾಗುತ್ತಿದೆ. ಈ ವರ್ಷ ಜಾಗತಿಕ ಮಟ್ಟದಲ್ಲಿ ಪರಿಸರ ದಿನವನ್ನು ಸ್ವೀಡನ್ ಆತಿಥೆಯ ರಾಷ್ಟ್ರವಾಗಿ ಆಚರಿಸುತ್ತಿದೆ.
ಯಾವ ವಸ್ತುವನ್ನು ಪುನರ್ಬಳಕೆ ಮಾಡಲು ಸಾಧ್ಯವಿಲ್ಲವೋ ಆ ವಸ್ತುವನ್ನು ಬಳಸಲೇಬೇಡಿ
ಹಸಿರನ್ನೇ ಉಸಿರಾಡಿ, ಹಸಿರಿನ ಜತೆಗೆ ಜೀವಿಸಿ, ಹಸಿರಿನ ಜತೆಗೆ ಮುಂದಿನ ಜೀವನ ಪಯಣ ಸಾಗಿಸೋಣ
ಪ್ರಕೃತಿಯನ್ನು ನಮ್ಮ ಹಿರಿಯರು ನಮಗಾಗಿ ಬಿಟ್ಟುಕೊಟ್ಟಿದ್ದಾರೆ, ನಾವೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಳಿಸೋಣ
ಇಷ್ಟು ದಿನ ಮಾನವ ಪರಿಸರದ ವಿರುದ್ಧವೇ ವರ್ತಿಸಿದ್ದಾನೆ, ಆದರೆ ಇನ್ನು ಮುಂದೆ ಪರಿಸರಕ್ಕಾಗಿ ತನ್ನ ವರ್ತನೆಯ ವಿರುದ್ಧವೇ ವರ್ತಿಸಬೇಕಿದೆ.
ಭೂಮಿಯ ಮೂಲ ನಿವಾಸಿ ಮನುಷ್ಯ ಅಲ್ಲ; ಮೃಗಪಕ್ಷಿ, ಕ್ರಿಮಿ–ಕೀಟಗಳು ಸಹ ಅಲ್ಲ; ಭೂಮಿಯ ಮೂಲನಿವಾಸಿಗಳು ಮರಗಿಡ, ಬಳ್ಳಿ, ಬಿಳಲುಗಳು. ಮರಗಿಡ, ಬಳ್ಳಿಗಳು ಬಂದ ನಂತರವೇ ಆಮ್ಲಜನಕ ಎಂಬ ಗಾಳಿಯನ್ನು ಉಸಿರಾಗಿಸಿಕೊಂಡು ಬದುಕುವ ಜೀವಿಗಳ ಸೃಷ್ಟಿಯಾದದ್ದು. ಈ ಅರಿವು ಇಲ್ಲದ ಮನುಷ್ಯ ಕಾಡು ನಾಶ ಮಾಡಿ ನಗರ ನಿರ್ಮಾಣ ಮಾಡಿ, ರಸ್ತೆ, ವಿದ್ಯುತ್, ಪೆಟ್ರೋಲು ಮತ್ತು ನೂರಾರು ಬಗೆ ವಾಹನಗಳನ್ನು ನಿರ್ಮಿಸಿಕೊಂಡು ತಾನು ಭೂಮಿಯ ಚಕ್ರವರ್ತಿ ಎಂದು ಭಾವಿಸಿದ ಮತ್ತು ಭೂಮಿ ಶಾಶ್ವತವಾಗಿ ಹೀಗೆಯೇ ಇರುತ್ತದೆ ಎಂದು ನಂಬಿ ಆ ನಂಬಿಕೆಗಳಿಗೆ ಇಂಬಾಗಿ ನೂರಾರು ದೇವರು ದೇವತೆಗಳನ್ನು ಸೃಷ್ಟಿಸಿಕೊಂಡ.
ಅರಣ್ಯವನ್ನು ನಗರವಾಗಿ ಪರಿವರ್ತಿಸಿದ ಮನುಷ್ಯ ‘ಕುಡಿಯಲು ನೀರು ಇಲ್ಲ, ಬದುಕುವುದು ಹೇಗೆ’ ಎಂಬ ಹಾಹಾಕಾರ ಎಬ್ಬಿಸಿದ್ದಾನೆ. ಹಾಹಾಕಾರದಿಂದ ಏನೂ ಪ್ರಯೋಜನವಿಲ್ಲ. ನೀರು ಇಲ್ಲವೇ ಇಲ್ಲ ಎಂದಾದರೆ ಜೀವ ಉಳಿಸಿಕೊಳ್ಳಲು ಇರುವುದು ಒಂದೇ ದಾರಿ: ಮನುಷ್ಯ ಮರಗಿಡಗಳ ಹಸಿರೆಲೆಗಳನ್ನು ಜಗಿದು ಅದರ ರಸವನ್ನು ನುಂಗಬೇಕು.
ಅಪರೂಪಕ್ಕೆ ಬಗೆ ಬಗೆಯ ಹಣ್ಣುಗಳು ಕೂಡ ಸಿಗಬಹುದು. ಹಣ್ಣನ್ನು ತಿನ್ನಬೇಕಾದರೆ, ಎಲೆಯ ರಸವನ್ನು ನುಂಗಬೇಕಾದರೆ ಎಲ್ಲಾ ಮರಗಿಡಗಳ ಹಣ್ಣುಗಳ ಮತ್ತು ಹಸಿರೆಲೆಗಳ ಗುಣಧರ್ಮಗಳನ್ನು ತಿಳಿದಿರಬೇಕಾದ್ದು ಅಗತ್ಯ. ಹಣ್ಣು, ಹಸುರೆಲೆಗಳಲ್ಲಿ ವಿಷಸದೃಶವಾದವು ಕೂಡ ಇವೆ ಎಂದು ಅರಿತಿರಬೇಕು. ತಿನ್ನಬಹುದಾದ ಹಣ್ಣುಗಳು ಮತ್ತು ಹಸಿರೆಲೆಗಳು ಕೆಲವೇ ದಿನಗಳಲ್ಲಿ ಖಾಲಿಯಾಗಬಹುದು. ಇದಿಷ್ಟೇ ಸಾಲದು. ಅರಣ್ಯದಲ್ಲಿರುವ ಮೃಗ ಪಕ್ಷಿ ಸರೀಸೃಪಗಳನ್ನು ಪ್ರೀತಿಸಲು ಮತ್ತು ಅವುಗಳ ಜೊತೆ ಸಂವಹನ ನಡೆಸಲು ಮತ್ತು ಅನ್ಯೋನ್ಯವಾಗಿರಲು ಕಲಿಯಬೇಕು. ಅರಣ್ಯದಲ್ಲಿ ಬದುಕುವುದು ನಗರದ ಫ್ಲಾಟಿನಲ್ಲಿ ಬದುಕುವಷ್ಟು ಸುಲಭವಲ್ಲ.
ಆದ್ದರಿಂದ ಇರುವುದೊಂದೇ ದಾರಿ: ಸಾಲು ಮರದ ತಿಮ್ಮಕ್ಕನಂತೆ ಮರಗಿಡಗಳನ್ನು ನೆಡಲು ಆರಂಭಿಸಬೇಕು. ಭೂಮಿಯಲ್ಲಿ ಎಲ್ಲೆಲ್ಲಿಯೂ ಮರಗಿಡಗಳು ಮೇಲೆದ್ದರೆ ಭೂಮಿಗೆ ಬೀಳುವ ಮಳೆಯ ನೀರು ಮಣ್ಣಿನಲ್ಲಿ ಉಳಿಯುತ್ತದೆ. ಕೆರೆ, ಬಾವಿ, ನದಿಗಳಲ್ಲಿ ನೀರು ಇದ್ದರೆ ಅಲ್ಲಿಂದ ಎತ್ತಿ ತಂದು ಗಿಡಮರಗಳಿಗೆ ಉಣಿಸಬೇಕು. ಭೂಮಿಯನ್ನು ನೀರಿಗಾಗಿ ಕೊರೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ತೀರಾ ಅಗತ್ಯವಾದ ಲೋಹ ಖನಿಜಗಳಿಗೆ ಮಾತ್ರ ಭೂಮಿ ಕೊರೆಯಬೇಕು; ಕೊರೆದು ಉಂಟಾದ ರಂಧ್ರಗಳನ್ನು ಮಣ್ಣು ತುಂಬಿ ಮುಚ್ಚಬೇಕು; ಅಲ್ಲೆಲ್ಲಾ ಗಿಡ ಮರಗಳನ್ನು ನೆಟ್ಟು ಬೆಳೆಸಬೇಕು
ಇಂದು ಇಡೀ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಗಳು ಎಂದರೆ ಪರಿಸರ ಮಾಲಿನ್ಯ. ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯ ಮಣ್ಣಿನ ಮಾಲಿನ್ಯ ಹಾಗೂ ಸಮುದ್ರ ಮಾಲಿನ್ಯ ಹಿಂದೆಂದಿಗಿಂತಲೂ ಇಂದು ವ್ಯಾಪಕವಾಗಿದೆ.”ಒಕ್ಕಲಿಗ ಒಕ್ಕಲು ಮಣ್ಣೆ ಆಧಾರ” ಭೂಮಿ ಹಾಳಾದರೆ ಬೆಳೆ ಬೆಳೆಯಲು ಸಾಧ್ಯವಿಲ್ಲ.: ನೆಲ, ಜಲ, ವಾಯು.. ಈ ಮೂರೂ ಮುನಿದರೆ ಇಡೀ ಜೀವಸಂಕುಲಕ್ಕೆ ಕುತ್ತು ಖಚಿತ. ಪರಿಸರದ ಮೇಲಣ ನಮ್ಮ ಪ್ರತಿ ಕ್ರೌರ್ಯವೂ ಜೀವ ಜಗತ್ತಿನ ಅವನತಿಗೆ ನಾಂದಿ ಎಂಬುದನ್ನು ನಾವು ಮರೆಯದಿರೋಣ.
ಪ್ರಕೃತಿ ರಕ್ಷತಿ ರಕ್ಷಿತೊಹ ಎಂಬುದು ನಿರಂತರ ನೆನಪಿಡಬೇಕಿದೆ..
ಮಾನವ ಪೃಕೃತಿಯ ಕೂಸು. ಪೃಕೃತಿ ಇರದೆ ಇದ್ದರೆ ಅವನಿಗೆ ಉಳಿಗಾಲವಿಲ್ಲ. ತನ್ನ ಅತಿಯಾದ ಆಸೆಗಳಿಂದ ಪೃಕೃತಿ ಮೇಲೆ ಸವಾರಿ ಮಾಡಿ ಇಂದು ಕಾಡನ್ನು ನಾಶ ಮಾಡಿದ್ದಾನೆ. ಒಂದು ಗಿಡ ಇಪ್ಪತ್ತು ತಾಯಂದಿರಿಗೆ ಸಮವಂತೆ. ಅಂಥಹ ಎಷ್ಟು ಗಿಡಗಳನ್ನು ದಿನನಿತ್ಯ ಕಡಿದು ಕಾಡಿನ ವಿನಾಶಕ್ಕೆ ಕಾರಣನಾಗಿದ್ದಾನೆ. ಕಾಡಿದ್ದರೆ ನಾಡು ಎಂಬುದು ಮರೆತು ಕೇವಲ ಸುಖದ ಹಂಬಲಕ್ಕೆ ಹಪಹಪಿಸಿ ಜೀವನವನ್ನು ನರಕ ಮಾಡಿಕೊಂಡಿದ್ದಾನೆ. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೊ ಹಾಗೆ ಈಗ ವರ್ಷವೂ ಗಿಡ ನೆಡುವ ಕಾರ್ಯದಲ್ಲಿ ನಿರತನಾಗಿದ್ದಾನೆ. ಒಂದು ಗಿಡ ಬೆಳೆದು ದೊಡ್ಡದಾಗಲು 20-30 ವರ್ಷಗಳೇ ಬೇಕು. ಪರಿಸರದ ಕಾರ್ಯ ಯಜ್ಞವಿದ್ದಂತೆ. ಸಾಕಷ್ಟು ಸಮಯ ಬೇಕು. ಗಿಡ ನೆಟ್ಟು ಬರ ಅಟ್ಟು. ಮನೆಗೊಂದು ಮರ ಊರಿಗೊಂದು ವನ, ಹಸಿರೇ ಉಸಿರು ಈ ಎಲ್ಲಾ ಘೋಷಣೆಗಳು ಕೇವಲ ಘೋಷಣೆಗಳಾಗಿ ಉಳಿಯದೇ ಸದಾ ಪರಿಸರದ ಕೈಂಕರ್ಯದಲ್ಲಿ ತೊಡಗುವಂತಾಗಲಿ ಎಂಬುದು ಇಂದಿನ ಕಳಕಳಿ.
ವಿಶ್ವ ಪರಿಸರ ದಿನಾಚರಣೆ ಶುಭಾಶಯಗಳು.
–ಜಯಶ್ರೀ.ಭ.ಭಂಡಾರಿ.
ಬಾದಾಮಿ.