ಪ್ರಶಸ್ತಿ ಗಳೆಂಬ ಮಾಯ ಜಾಲ

ಪ್ರಶಸ್ತಿ ಗಳೆಂಬ ಮಾಯ ಜಾಲ

ಇತ್ತೀಚಿಗೆ ಸಾಹಿತ್ಯದ ಪ್ರಶಸ್ತಿಗಳ ಹಾವಳಿ ಹೆಚ್ಚಾಗಿ ನಡೆದಿದೆ. ಎಲ್ಲವೂ ಪೂರ್ವ ನಿಯೋಜಿತ ಅಥವಾ ಅಯೋಗ್ಯ ಎನ್ನಲು ಆಗದು ಆದರೂ ಲಾಬಿ ನಡೆಯುತ್ತಿರುವುದನ್ನು ಗಮನಿಸಬಹುದಾಗಿದೆ.

ಸಾಹಿತ್ಯದ ಪ್ರಶಸ್ತಿಗಳಿಗೆ ಮಾನದಂಡ ಏನು ಎಂಬ ಪ್ರಶ್ನೆ ಬಹು ದಿನಗಳಿಂದ ಕಾಡಿದ್ದೂ ಇದೆ. ಕವಿತೆಗಳು ಕವನ ಸಂಕಲನ ಬಿಡುಗಡೆ ಮಾಡಿದವರೋ, ಬಹಳಷ್ಟು ಕವಿ ಗೋಷ್ಠಿಗಳಲ್ಲಿ ಪಾಲ್ಗೊಂಡವರೋ, ನಾಲ್ಕಾರು ಪತ್ರಿಕೆಗಳಲ್ಲಿ ಲೇಖನ ಅಥವಾ ಕವಿತೆ ಪ್ರಕಟಿಸಿದವರೋ ಎನ್ನುವ ಅನುಮಾನ ಕಾಡಿದ್ದು ಉಂಟು.

ಪ್ರಶಸ್ತಿಗಳು ಮನುಷ್ಯನ ಪ್ರತಿಭೆಗೆ ಸಲ್ಲುವ ಗೌರವ, ಕ್ಷೇತ್ರ ಯಾವುದೇ ಇರಲಿ ಅವರ ಗುಣ ಮತ್ತು ಪ್ರತಿಭೆಯನ್ನು ಗುರುತಿಸಿ ಗೌರವಿಸುವುದು ವಾಡಿಕೆ. ಆದರೆ ಇತ್ತೀಚಿಗೆ ಪರಿಚಯ ಅಥವಾ ಶಿಫಾರಸ್ಸು ಪ್ರಶಸ್ತಿ ಪಡೆಯಲು ಮೂಲ ಯೋಗ್ಯತೆಯಾದಂತೆ ಕಾಣುತ್ತಿದೆ. ಹೋದ ವರ್ಷ ಪರಿಚಯವಾದ ಪತ್ರಕರ್ತರು ಒಬ್ಬರು ಅನೇಕ ಅವಾರ್ಡ್ ಕೊಡಿಸುವುದಾಗಿ ಹೇಳಿದಾಗ ಆಶ್ಚರ್ಯ ಆಗಿತ್ತು. ಇಂತಹ ಜನರೂ ಬೇಕಾದಷ್ಟು ಜನ ಕೆಲವರಿಗೆ ಹಣದ ಹಸಿವಾದರೆ ಇನ್ನೂ ಕೆಲವರಿಗೆ ಮತ್ತೇನೋ. Phd ಪದವಿ ಕೊಡಿಸುವುದಾಗಿ ಕೂಡ ಇನ್ನೊಬ್ಬರು ಹೇಳಿದ್ದರು, 50ಸಾವಿರ ರೂಪಾಯಿಗೇ ಡಾಕ್ಟರೇಟ್ ಪದವಿ ಸಿಗುತ್ತದೆ ಎಂದೂ ತಿಳಿಯಿತು.

ಇಂತಹ ಪ್ರಪಂಚದ ಅರಿವು ಒಂದು ವರ್ಷದ ಕೆಳಗೆ ಇರಲಿಲ್ಲ. ನಾನು ತಿಳಿದ ಮಟ್ಟಿಗೆ ಬರವಣಿಗೆ ಗುಣಮಟ್ಟ ಉತ್ತಮವಾಗಿದ್ದು ಸಾಕಷ್ಟು ಸಾಧನೆ ಮಾಡಿದವರಿಗೆ ಮಾತ್ರ ಪ್ರಶಸ್ತಿ ಎಂಬ ಅಭಿಪ್ರಾಯ ನನ್ನದಾಗಿತ್ತು. ಕೆಲವು ಕಡೆ ಶಿಫಾರಸ್ಸು ನಡೆಯುತ್ತದೆ ಎಂದೂ ತಿಳಿದಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣದ್ದು ಎಂದು ಈಗೀಗ ಅರಿವಾಗುತ್ತಿದೆ.

ಪ್ರಶಸ್ತಿಗಳಿಗೆ ಆಹ್ವಾನಿಸಿದಾಗ ಅದರಲ್ಲಿ ಯಾವ ಅರ್ಹತೆಗಳಿದ್ದವರು ಅರ್ಜಿ ಸಲ್ಲಿಸಲು ಅರ್ಹರು ಎಂದು ನಮೂದಿಸಿರುವುದಿಲ್ಲ. ಅರ್ಹತೆ ಇರುವವರು ಪುರಸ್ಕೃತರೋ , ಪ್ರಶಸ್ತಿಯ ಖರೀದಿ ಅಥವಾ ಶಿಫಾರಸ್ಸು ನಡೆದಿದೆಯೇ ಗೊತ್ತೇ ಆಗುವುದಿಲ್ಲ. ಏನೇ ಇರಲಿ ನಮ್ಮ ಆತ್ಮ ಸಾಕ್ಷಿ ಒಪ್ಪಿ ನಾವು ಅರ್ಹರು ಎನಿಸಿದಾಗ ಬರುವ ಪ್ರಶಸ್ತಿ ಆತ್ಮ ತೃಪ್ತಿಯನ್ನು ಆನಂದವನ್ನೂ ಕೊಡುತ್ತದೆ.

ನನ್ನ ಸ್ವಂತ ಅಭಿಪ್ರಾಯದಲ್ಲಿ ಅರ್ಹತೆ ಇರುವಾಗ ಪ್ರಶಸ್ತಿಗೆ ಹುಡುಕಕೊಂಡು ಬರಬೇಕೆ ಹೊರತು ನಾವು ಕೇಳಿದಾಗ ಬಯಸಿದಾಗ ಬರುವುದಲ್ಲ. ನನ್ನ ದೃಷ್ಟಿಯಲ್ಲಿ ಪ್ರಶಸ್ತಿ ಎಂದರೆ ನಾವು ಯಾರನ್ನು ಆದರ್ಶ ಎಂದು ಭಾವಿಸಿ ಅವರ ಮಾರ್ಗದರ್ಶನಕ್ಕೆ ಹಾತೋರೆಯುತ್ತಿರುತ್ತೆವೋ ಅವರು ಅಡ್ಡಿ ಇಲ್ಲ ಚಂದ ಬರೆದಿರುವಿ ಎಂದರೆ ದೊಡ್ಡ ಪ್ರಶಸ್ತಿ. ನಮಗೆ ಪ್ರೋತ್ಸಾಹಿಸಿ ಕಲಿಸಿದ ಗುರುಗಳು ನಿನ್ನ ಬರವಣಿಗೆ ಒಂದು ಮಟ್ಟಕ್ಕೆ ಉತ್ತಮವಾಗಿದೆ ಎಂದರೆ ಪ್ರಶಸ್ತಿ. ನಮ್ಮನ್ನು ಅಭಿಮಾನದಿಂದ ಮಾತನಾಡಿಸಿ ನಿಮ್ಮ ಬರವಣಿಗೆ ನನಗೆ ಸದಾ ಪ್ರೇರಣೆ ನೀಡುತ್ತದೆ ಎಂದರೆ ಪ್ರಶಸ್ತಿ.

ಪ್ರಶಸ್ತಿಯ ಮೋಹ ಬಿಟ್ಟು ಮನದ ಆನಂದಕ್ಕೆ ಬರೆಯುವುದು ಮತ್ತು ಬರೆದ ಲೇಖನ /ಕಥೆ/ ಕಾದಂಬರಿ / ಕವನ ನಮಗೆ ಆತ್ಮ ತೃಪ್ತಿ ನೀಡಿದಾಗ ಇನ್ನೂ ಹೆಚ್ಚಿನ ಪ್ರಶಸ್ತಿ ದೊರೆತ ಹಾಗೆ

ಮಾಧುರಿ

ಇದು ಕಳೆದ ವರ್ಷದ ಲೇಖನ ಇದರ ಜೊತೆಗೆ ಇನ್ನೊಂದು ನಾಲ್ಕು ಮಾತು ಮತ್ತು ಹೊಸ ಅನುಭವಗಳನ್ನು ಸೇರಿಸಲು ಇಷ್ಟ ಪಡುತ್ತೇನೆ.

ಪ್ರಶಸ್ತಿ, ಸನ್ಮಾನಗಳನ್ನು ಪಡೆಯಲು ಬಿಟ್ಟು ಆನಂದಕ್ಕೆ ಬರೆದರೂ, ಅಥವಾ ಪ್ರಶಸ್ತಿ ಸನ್ಮಾನ ದೊರೆತಾಗ ಇವರೇನು ಮಹಾ ಪ್ರಶಸ್ತಿ ಕೊಂಡು ಕೊಂಡಿದ್ದಾರೆ ಎಂದೂ ಅಪಪ್ರಚಾರ ಮಾಡಲು ಕಾಯ್ದು ಕುಳಿತಿರುತ್ತಾರೆ. ಅಂತಹ ಜನರಿಗೆ ತಾವು ಮಾತ್ರ ಬರಹಗಾರರು ಎಂಬ ಮದ ನೆತ್ತಿಗೆ ಏರಿರುತ್ತದೆ. ಇಂತಹ ಹಾನಿಕಾರಕ ಜನರಿಂದ ದೂರ ಇರುವುದು ಉತ್ತಮ. ನಿಮ್ಮ ಜೊತೆಗೆ ಇದ್ದು ನಿಮ್ಮಿಂದ ಉಪಯೋಗ ಪಡೆದು ನಿಮ್ಮ ಹಿಂದೆ ಬೇರೆಯವರ ಮುಂದೆ ನಿಮ್ಮನ್ನೇ ಅಸಹ್ಯಕರ ಹೋಲಿಕೆ ಕೊಡುತ್ತ ಕೆಟ್ಟ ಮಾತು ಆಡುವ ಜನರಿಂದ ಅಂತರ ಕಾಯ್ದು ಕೊಳ್ಳುವುದು ಉತ್ತಮ.

ಬುದ್ದಿವಂತಿಕೆ ಯಾರೊಬ್ಬರ ಸ್ವತ್ತಲ್ಲ, ಪ್ರಕೃತಿಯಲ್ಲಿ ವಿವಿಧ ಬಗೆಯ ಹೂವುಗಳು ಇರುತ್ತವೆ. ಒಂದೊಂದಕ್ಕೆ ಒಂದೊಂದು ಸುಗಂಧ ಒಂದೊಂದು ಹೂವಿಗೂ ಒಂದೊಂದು ವಿಶೇಷತೆ ಹಾಗೆ ಸಾಹಿತ್ಯ ಪ್ರಪಂಚದಲ್ಲಿ ಒಬ್ಬೊಬ್ಬರೂ ಒಂದೊಂದು ಹೂವು ಇದ್ದಂತೆ, ಇಲ್ಲಿ ಸ್ಪರ್ಧೆ ಮತ್ತು ಹೊಟ್ಟೆ ಉರಿ ಪಡುವವರಿಗೆ ಅವಕಾಶ ಇಲ್ಲ, ಯಾರಲ್ಲಿ ಸತ್ವ ಇದೆ ಯಾರಲ್ಲಿ ಯೋಗ್ಯತೆ ಇದೆ ಅವಕಾಶಗಳು, ಬಹುಮಾನಗಳು ಹುಡುಕಿ ಕೊಂಡೆ ಬರುತ್ತವೆ

ನಮ್ಮ ವೃತ್ತಿ ಪ್ರತಿಭೆ ಏನೇ ಇರಲಿ ನಮ್ಮಲ್ಲಿ ಸಹೃದಯತೆ ಹಾಗೂ ಮಾನವೀಯತೆ ಜೀವಂತವಾಗಿರಬೇಕು

ಮಾಧುರಿ ಬೆಂಗಳೂರು

Don`t copy text!