ಕೆಂಚ ಕರಿಕನ ನೆನೆದರೆ ಕರಿಕನಾಗಬಲ್ಲನೆ ?

ಅಂಕಣ:೨೨- ಅಂತರಂಗದ ಅರಿವು

ಕೆಂಚ ಕರಿಕನ ನೆನೆದರೆ ಕರಿಕನಾಗಬಲ್ಲನೆ ?

ಕರಿಕ ಕೆಂಚನ ನೆನೆದರೆ ಕೆಂಚನಾಗಬಲ್ಲನೇ ?
ದರಿದ್ರನು ಸಿರಿವಂತನ ನೆನೆದರೆ ಸಿರಿವಂತ ನಾಗಬಲ್ಲನೆ ?
ಸಿರಿವಂತ ದರಿದ್ರನ ನೆನೆದರೆ ದರಿದ್ರ ನಾಗಬಲ್ಲನೇ ?
ಮುನ್ನಿನ ಪುರಾತನರ ನೆನೆದು ಧನ್ಯನಾದೇನೆಂಬ ಮಾತಿನ ರಂಜಕವನೇನೆಂಬೆ ಕೂಡಲಸಂಗಮದೇವಾ
                               -ಬಸವಣ್ಣನವರು

 

ಕೆಂಚ ಕರಿಕನ ನೆನೆದರೆ ಕರಿಕನಾಗಬಲ್ಲನೆ ?
ಕೆಂಪು ಮೈಬಣ್ಣ ಹೊಂದಿದ ವ್ಯಕ್ತಿ ಕಪ್ಪಗಿನ ಮೈಬಣ್ಣ ಹೊಂದಿದವನನ್ನು ನೆನೆಸಿದರೆ, ಅಂದರೆ ಮನಸ್ಸಿನಲ್ಲಿ ಜ್ಞಾಪಿಸಿಕೊಂಡರೆ, ಅವನ ಹೆಸರನ್ನು ಕರೆದರೆ, ಅವನನ್ನ ಮುಟ್ಟಿದರೆ, ತಾನು ಪಡೆದಂತಹ ಕೆಂಪಗಿನ ಮೈ ಬಣ್ಣ ಹೋಗಿ, ಕಪ್ಪು ಬಣ್ಣದವನಾಗಬಲ್ಲನೆ?. ಆಗಲು ಸಾಧ್ಯವಿಲ್ಲ.

ಕರಿಕ ಕೆಂಚನ ನೆನೆದರೆ ಕೆಂಚನಾಗಬಲ್ಲನೇ ?
ಅದೇ ರೀತಿ ಕರಿ ಮೈಬಣ್ಣ ಹೊಂದಿದ ವ್ಯಕ್ತಿ ತನ್ನ ಮನದಲ್ಲಿ ಕೆಂಪು ಮೈಬಣ್ಣ ಹೊಂದಿದವನನ್ನ ನೆನಪಿಸಿಕೊಂಡ ಮಾತ್ರಕ್ಕೆ ಅವನ ಮೈಬಣ್ಣ ಕೆಂಪಾಗಿ ಬದಲಾಗುವುದಿಲ್ಲ. ಏಕೆಂದರೆ ಚರ್ಮದ ಬಣ್ಣ ವಂಶವಾಹಿನಿಯಿಂದ ಜನ್ಮ ಜಾತವಾಗಿ ಬರುವಂಥದ್ದು. ವಿನಹ ಇನ್ನೊಬ್ಬರನ್ನ ಮನಸ್ಸಿನಲ್ಲಿ ನೆನೆಸಿಕೊಂಡರೆ ಮುಟ್ಟಿದರೆ ಅವರ ಜೊತೆಗಿದ್ದರೆ ಬರುವುದಿಲ್ಲ.
ಈ ಮೈಬಣ್ಣವನ್ನ ಆಧರಿಸಿ ನಾವು ತಾರತಮ್ಯ ಮಾಡಬಾರದು . ಕೆಂಪನೆಯ ಬಣ್ಣ ಶ್ರೇಷ್ಠ, ಕಪ್ಪನೆಯ ಬಣ್ಣ ಕನಿಷ್ಠ ಎನ್ನುವ ಭಾವನೆಯನ್ನು ನಾವು ತೊಡೆದು ಹಾಕಬೇಕು.

ದರಿದ್ರನು ಸಿರಿವಂತನ ನೆನೆದರೆ ಸಿರಿವಂತ ನಾಗಬಲ್ಲನೆ ?
ಬಡವನೋರ್ವ ಸಿರಿವಂತನನ್ನ ನೆನಪಿಸಿಕೊಂಡರೆ ಅವನು ಸಿರಿವಂತನಾಗಲು ಸಾಧ್ಯವಿಲ್ಲ. ಸಿರಿವಂತನಾಗಬೇಕಾದರೆ ಕಠಿಣ ಪರಿಶ್ರಮವನ್ನು ಪಡಬೇಕು ಅಂದಾಗ ಮಾತ್ರ ಸಿರಿವಂತನಾಗಲು ಸಾಧ್ಯ. ಇನ್ನೊಬ್ಬರ ಸಿರಿವಂತಿಕೆಯನ್ನ ಮನಸ್ಸಿನಲ್ಲಿ ನೆನೆಸಿಕೊಂಡ ಮಾತ್ರಕ್ಕೆ ನೆನೆಸಿಕೊಂಡ ವ್ಯಕ್ತಿ ಸಿರಿವಂತನಾಗಲು ಸಾಧ್ಯವಿಲ್ಲ.

ಸಿರಿವಂತ ದರಿದ್ರನ ನೆನೆದರೆ ದರಿದ್ರ ನಾಗಬಲ್ಲನೇ ?
ಸಿರಿವಂತನೋರ್ವ ದರಿದ್ರನನ್ನು ಅಂದರೆ ಬಡವನನ್ನ ನೆನಪಿಸಿಕೊಂಡ ಮಾತ್ರಕ್ಕೆ, ಅವನ ಬಡತನ ಇವನನ್ನು ಭಾವಿಸಲಾರದು ಅಥವಾ ಇವನಿಗೆ ಸಿರಿವಂತಿಕೆ ಹೋಗಿ ಬಡತನ ಬಂದು ಅಂಟಿಕೊಳ್ಳಲಾರದು. ಅಂತಹ ಯಾವುದೇ ಚಮತ್ಕಾರ ನಡೆಯಲು ಸಾಧ್ಯವಿಲ್ಲ. ಇದನ್ನು ತಿಳಿಯದ ಎಷ್ಟೋ ಜನ ಶ್ರೀಮಂತರು, ಬಡವರನ್ನು ಕಂಡರೆ ನಿಕೃಷ್ಟವಾಗಿ ಕಾಣುತ್ತಾರೆ. ಶ್ರೀಮಂತರ ಈ ಮನೋಧೋರಣೆ ಬದಲಾಗಬೇಕು ಬಡವರನ್ನು ಕಂಡರೆ ಅವರ ಬಡತನ ನಮಗಿಲ್ಲಿ ಅಂಟಿಕೊಳ್ಳುವುದು ಎಂದು ವರ್ತಿಸುವತ್ತಾರೆ. ಇಂತಹ ವರ್ಣ ಮತ್ತು ವರ್ಗ ವ್ಯವಸ್ಥೆಯನ್ನು ಬಸವಣ್ಣನವರು ವಿಡಂಬನೆ ಮಾಡುತ್ತಾರೆ.

ಮುನ್ನಿನ ಪುರಾತನರ ನೆನೆದು ಧನ್ಯನಾದೇನೆಂಬ ಮಾತಿನ ರಂಜಕವನೇನೆಂಬೆ ಕೂಡಲಸಂಗಮದೇವಾ
ಇನ್ನು ಕೆಲವು ಪಂಡಿತರು ತಾವು ಯಾವ ತತ್ವ ಸಿದ್ಧಾಂತವನ್ನು ಪಾಲಿಸದೆ, ಪುರಾತನರ ನೆನಪಿಸಿಕೊಂಡ ಮಾತ್ರಕ್ಕೆ ನಾವು ಧನ್ಯವಾದೆವೆಂದು ಎಂದು ಹೇಳುವ ಬಣ್ಣದ ಮಾತನ್ನ ಹೇಗೆ ನಂಬುವುದು ಎನ್ನುವುದು ಬಸವಣ್ಣನವರ ಪ್ರಶ್ನೆ. ಕೇವಲ ತತ್ವ ಸಿದ್ಧಾಂತಗಳನ್ನು, ಶಾಸ್ತ್ರ ಪುರಾಣಗನ್ನು ಓದಿದರೆ ಸಾಲದು. ಅವುಗಳನ್ನ ಜೀವನದಲ್ಲಿ ಆಚರಣೆಗೆ ತರಬೇಕು ಅದರಿಂದ ಸಮಾಜದಲ್ಲಿಯ ವರ್ಗ ಮತ್ತು ವರ್ಣ ವ್ಯವಸ್ಥೆ ಬದಲಾಗಬೇಕು. ಮನುಷ್ಯ ಮನುಷ್ಯರ ನಡುವಿನ ಭೇದಭಾವ ಹೋಗಬೇಕು. ಹಾಗೆ ಬದಲಾಗದಾಗ ಮಾತ್ರ ನಾವು ಪುರಾತನರ ನೆನೆದರೂ ಸಾರ್ಥಕವಾಗುವುದು ಅವರ ಸಿದ್ಧಾಂತಗಳನ್ನ ಅಳವಡಿಸಿಕೊಂಡಾಗ ನಿಜವಾಗು ಜೀವನದಲ್ಲಿ ಧನ್ಯತೆ ಉಂಟಾಗುವುದು ಎಂದು ಮಾರ್ಮಿಕವಾಗಿ ವಚನದಲ್ಲಿ ಬಸವಣ್ಣನವರು ತಿಳಿಸಿದ್ದಾರೆ.

ಡಾ. ನಿರ್ಮಲಾ ಬಟ್ಟಲ

Don`t copy text!