ಮೋಳಿಗೆಯ ಮಾರಯ್ಯ

ಮೋಳಿಗೆಯ ಮಾರಯ್ಯ

ದುಡಿತವೇ ದುಡ್ಡಿನ ತಾಯಿ ಎನ್ನುವುದಕ್ಕೆ ಕಾಶ್ಮೀರದ ಅರಸು ಮೋಳಿಗೆಯ ಮಾರಯ್ಯ ಸರಿಯಾದ ಉದಾಹರಣೆಯಾಗಿದ್ದಾರೆ. ಆನೆ, ಕುದುರೆ, ಅರಮನೆ , ಭಂಡಾರಗಳ ಜೊತೆ ಒಂದು ಕಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿದ್ದವರು ದುಡಿಮೆಯಲ್ಲಿ ಅಪಾರ ಸಂಪತ್ತಿದೆಯೆಂಬುದನ್ನು ಕಲ್ಯಾಣದ ಪರಿಸರದಲ್ಲಿ ಕಂಡುಕೊಂಡುದು ಅತ್ಯದ್ಭುತ ಸಂಗತಿಯಾಗಿದೆ.

ದಂಡ ನಾಯಕ ಬಸವಣ್ಣನವರು ಮೋಳಿಗೆಯ ಮಾರಯ್ಯನವರ ಹಗಲಿರುಳಿನ ಪರಿಶ್ರಮಕ್ಕೆ ಅನುತಾಪ ಪಟ್ಟು ಲಿಂಗ ಪೂಜೆಯ ನೆಪದಲ್ಲಿ ಅವರ ಮನೆ ಪ್ರವೇಶಿಸಿ ಹೊನ್ನ ಜಾಳಿಗೆಗಳನ್ನು ಉದ್ದೇಶಪೂರ್ವಕವಾಗಿ ಬಿಟ್ಟು
ಬಂದಾಗ ಅವುಗಳನ್ನುನೋಡಿ ಮೋಳಿಗೆಯಮಾರಯ್ಯ ನವರು ತೆಗೆದ ಉದ್ಗಾರಗಳು ಅವರ ವ್ಯಕ್ತಿತ್ವಕ್ಕೆ ಹಿಡಿದ
ಕನ್ನಡಿಗಳಾಗಿವೆ.

ಓಹೋ ಬಸವಣ್ಣನವರಿಗೆ ಶ್ರೀಮಂತಿಕೆಯ ಮದ ಬಂತೇನು ? ಹೊನ್ನ ಜಾಳಿಗೆಗಳು ತನ್ನಲ್ಲಿ ಮಾತ್ರ ಇವೆಯೆ0ದು ಭಾವಿಸಿರುವಿರೇನು ? ತನಗೆ ಕರುಣಿಸಿದ
ಪರಮಾತ್ಮ ಮತ್ತೊಬ್ಬರಿಗೆ ಕರುಣಿಸುವುದಿಲ್ಲವೆಂದು
ತಿಳಿದಿರುವಿರೇನು? ಭಕ್ತಿಯಾಚರಣೆ ತನಗೊಬ್ಬನಿಗೆ ಮಾತ್ರ ತಿಳಿದಿದೆಯೆ0ಬ ಆಹಮ್ಮಿಕೆಯೇನು? “ಎಂದು
ಹೂ0ಕರಿಸಿ ಬಸವಣ್ಣನವರು ತಂದಿರಿಸಿದ ಹೊನ್ನ ಜಾಳಿಗೆಗಳನ್ನು ಕೈಯಿಂದ ಮುಟ್ಟದೆ ಕಟ್ಟಿಗೆಯಿಂದಲೇ ಬೀದಿಗೆ ಎಸೆದಿದ್ದರಂತೆ. ಅಷ್ಟೇ ಅಲ್ಲ ಶಿವನ ಕರುಣೆ ಎಲ್ಲರ ಮೇಲೂ ಸಮಾನವಾಗಿ ಹರಿಯುತ್ತದೆ ಯೆ0ಬುದನ್ನು ತೋರಿಸಿಕೊಡಲು ಕಲ್ಯಾಣ ಪಟ್ಟಣದ
ಜಂಗಮರನ್ನೆಲ್ಲ ಕರೆಸಿ ಕರೆಸಿ ಕಟ್ಟಿಗೆ ತುಂಡುಗಳನ್ನು ಬಂಗಾರವಾಗಿಸಿ ದಾನ ಮಾಡಿದ್ದರಂತೆ. ಆಗಲೇ ಬಸವಣ್ಣನವರಿ0ದ ಈ ವಚನ ಮೂಡಿರಬೇಕು.

ಭಕ್ತಿ ವಿಶೇಷವ ಮಾಡುವರೆ ಹತ್ತು ಬೆರಳುಗಳು0ಟು,
ಹಾಸಿ ದುಡಿವಡೆ ತನಗುಂಟು,
ತನ್ನ ಪ್ರಮಥರಿಗುಂಟು, ಮಾರಿತಂದೆಗಳಂತೆ ಎನಗೇಕ
ಹುದಯ್ಯಾ !
ರತ್ನದ ಸಂಕಲೆಯನಿಕ್ಕಿ ಕಾಡಿಹ ಕೂಡಲಸಂಗಮದೇವ
ಶಿವಧೋ ಶಿವಧೋ “

ಕಲ್ಯಾಣದ ವೈಚಾರಿಕ ಕ್ರಾಂತಿಯ ಕಥೆಯನ್ನು ಕೇಳಿ, ಕಾಶ್ಮೀರ ದೇಶದ ಸವಾಲಕ್ಷ ಪ್ರದೇಶದ, ಮಾಂಡವ್ಯಪುರ ರಾಜಧಾನಿಯ ಮಹಾದೇವ ಭೂಪಾಲ ಕಲ್ಯಾಣಕ್ಕೆ ಆಗಮಿಸಿ ದುಡಿಮೆಯ ಜೀವನವನ್ನು ಆರಿಸಿಕೊಂಡ
ನೆಂಬುದಕ್ಕೆ ಆತನ ಸ್ವಂತ ಬರಹದ ವಚನಗಳು ಮತ್ತು ಪತ್ನಿ ಮಹದೇವಮ್ಮಳ ಹಿತವಚನದ ವಚನಗಳೇ ಸಾಕ್ಷಿ ಯಾಗಿವೆ. ಒಂದು ವಚನದಲ್ಲಿ ” ಬಂದೆ ನಾ ಬಸವಣ್ಣನ
ಕಥನದಿಂದ ” ಎಂದು ಹೇಳಿಕೊಂಡಿದ್ದಾನೆ. ಮತ್ತೊಂದು
ವಚನದಲ್ಲಿ ” ನಾನೇಕೆ ಬಂದೆ ಸುಖವ ಬಿಟ್ಟು ? ಬಂದು
ದಕ್ಕೆ ಒಂದೂ ಆದುದಿಲ್ಲ. ” ಈ ನಿರಾಸೆಗೆ ಪತ್ನಿ ಮಹಾದೇವಮ್ಮಳ ಸಾಂತ್ವನವೆಂದರೆ ” ಸಕಲ ದೇಶ,
ಕೋಶ ,ವಾಸ ,ಭಂಡಾರ, ಸವಾಲಕ್ಷ ಪ್ರದೇಶ ,ಮುಂತಾದ
ಸಂಬಂಧ ಸ್ತ್ರೀಯರ ಬಿಟ್ಟು ಬಂದೆನೆಂಬ ಕೈಕೂಲಿಯೇ
ನಿಮ್ಮ ಭಕ್ತಿ ? “

ಇವೆಲ್ಲವುಗಳ ಆಧಾರದ ಮೋಳಿಗೆಯ ಮಾರಯ್ಯ ಪೂರ್ವಾಶ್ರಮದಲ್ಲಿ ಅರಸನಾಗಿದ್ದದ್ದು ಸುಳ್ಳಲ್ಲ ಎನಿಸುತ್ತದೆ. ಸೊನ್ನಲಿಗೆಯ ಸಿದ್ಧರಾಮೇಶ್ವರರಂತೆ ಲಿಂಗ
ಧಾರಣ ಪ್ರಸಂಗ ಮಹದೇವ ಭೂಪಾಲರಿಗೆ ಕಲ್ಯಾಣ ದಲ್ಲಿ ನಡೆಯುವದಿಲ್ಲವಾದ್ದರಿಂದ ಕಾಶ್ಮೀರದಲ್ಲಿರುವಾಗಲೇನೇ ಜಂಗಮ ದಾಸೋಹ ಅವರ ವ್ರತವಾಗಿತ್ತು. ಅಷ್ಟೂ ಜಂಗಮರೂ ಕಲ್ಯಾಣಕ್ಕೆ ಬಂದಾಗ ಅವರ ಹಿಂದೆ ಮಹಾದೇವ ಭೂಪಾಲನೂ ಬರಬೇಕಾಯಿತು.
ಬಂದದ್ದು ಪಾಡಾಯಿತು, ಕಲ್ಯಾಣದಲ್ಲಿ ಕಾಯಕವೇ
ಕೈಲಾಸ ಎಂಬ ಹಾಡಾಯಿತು. “

ಬಸವಣ್ಣನವರು ಲಿಂಗಾರ್ಚನೆಗೆಂದು ಬಂದು ಹೊನ್ನ
ಜಾಳಿಗೆ ಇರಿಸಿ ಹೋದ ಘಟನೆಯೂ ಕಟ್ಟು ಕಥೆಯಲ್ಲವೆನ್ನುವುದಕ್ಕೆ ಮೋಳಿಗೆ ದಂಪತಿಗಳ ವಚನಗಳೇ ಅಂತಸ್ಥ ಆಧಾರಗಳಾಗಿವೆ.ಮೋಳಿಗೆ ಮಾರಯ್ಯನವರು ತಮ್ಮ ಆರಾಧ್ಯ ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದು ಏನೆಂದರೆ ” ಬಡವನೆಂದು ನಿಮ್ಮವರು ನಿಧಾನವನೀ
ವರಯ್ಯಾ ! ನಾ ಬಡವನಾದರೆ ನೀ ಬಡವನೇ ಎನ್ನ
ನಿ:ಕಳಂಕ ಮಲ್ಲಿಕಾರ್ಜುನಾ ? “

ಕಾಷ್ಠವ ಸುವರ್ಣವ ಮಾಡಿದೆನೆಂಬ ಘಾತುಕತನವೇ
ನಿಮ್ಮ ಭಕ್ತಿ ? “ಎಂದು ಅವರ ಪತ್ನಿ ಎಚ್ಚರಿಸುವಲ್ಲಿಯೂ
ಇದು ನಡೆದ ಘಟನೆಯೆ0ಬ ಸುಳುಹು ಕಾಣುತ್ತೇವೆ.

ಮೋಳಿಗೆಯ ಮಾರಯ್ಯನವರನ್ನು ಬಸವ
ಅಲ್ಲಮಾದಿ ಪ್ರಮಥರೆಲ್ಲರೂಬಹಳ ಗೌರವದಿಂದ ಕಾಣುವುದರಿ0ದ
ಅವರು ಹಿರಿಯ ಸಮಕಾಲೀನರೆನಿಸುತ್ತದೆ. ಅವರ ಕಾಲವನ್ನು ಕ್ರಿ. ಶ. 1110 ರಿಂದ 1160 ಎಂದು ಗುರುತಿಸ ಬಹುದು. ಅವರು ಅಳಿಯ ಬಿಜ್ಜಳನ ಸೇನೆಯೊಡನೆ ಕಾದಾಡಿದುದಕ್ಕೆ ಆಧಾರಗಳು ದೊರೆಯುವುದಿಲ್ಲ
ವಾದ್ದರಿಂದ ಅವರು ಕಲ್ಯಾಣ ಕ್ರಾಂತಿಯ ಪೂರ್ವ
ದಲ್ಲಿಯೇ ತಮ್ಮ ಪತ್ನಿ ಒಡಗೂಡಿ ಲಿಂಗದೊಳಗಾದರು ಎಂದೆನಿಸುತ್ತದೆ.

ಕಲ್ಯಾಣದಿಂದ 12 ಮೈಲಿ ದೂರದಲ್ಲಿರುವ ಮೋಳ್ಕೇರಿಯಲ್ಲಿ ಇಂದಿಗೂ ಮೋಳಿಗೆ ಮಾರಯ್ಯ ಮತ್ತು ಅವರ
ಪತ್ನಿ ಮಹದೇವಮ್ಮ ಐಕ್ಯರಾದ ಗವಿಯನ್ನು ಕಾಣಬಹುದಾಗಿದೆ. ಅದು ಅವರ ಅನುಷ್ಠಾನದ ಸ್ಥಳವೂ ಹೌದು :
ಅವರು ಐಕ್ಯರಾದ ಸ್ಥಳವೂ ಹೌದು. ಮೇಲಿನಿಂದ ನೋಡಿದರೆ ಕಟ್ಟಡವೇ ಕಾಣದ ಮೋಳಿಗೆ ಮಾರಯ್ಯನ ಗವಿ ಮೂರು ನಾಲ್ಕು ಅಂಕಣ ವಿಶಾಲವಾದುದಾಗಿದೆ.
ಒಳಗೆ ಇಳಿದು ನೋಡಿದರೆ ಗರ್ಭ ಗುಡಿಯೂ ರಂಗ ಮಂಟಪವೂ ಕಾಣಬರುತ್ತದೆ. ಆ ಗವಿಯಲ್ಲಿಯೇ ಮಾರಯ್ಯನವರು ಲಿಂಗಾರ್ಚನೆಗೆ ಉಪಯೋಗಿಸುತ್ತಿದ್ದ
ಸೇದು ಬಾವಿಯಿದೆ. ”

ಒಂದು ದಿನ ಲಿಂಗ ಪೂಜೆ ಮಾಡುವಲ್ಲಿ ಮೋಳಿಗೆ ಮಾರಯ್ಯನವರಿಗೆ ಕಲ್ಯಾಣದ ಭವಿಷ್ಯ ಗೋಚರವಾಗುತ್ತದೆ. ” ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ. ಬಸವಣ್ಣ ಸಂಗಮಕ್ಕೆ, ಚೆನ್ನಬಸವಣ್ಣ. ಉಳುವಿಗೆ, ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ತಮ್ಮ ಲಕ್ಷ ಭಾಗಕ್ಕೆ ಮುಕ್ತಿಯ ನೆಯ್ದಿಹರು, ನನಗೊಂದು ಗೊತ್ತು ಹೇಳಾ ನಿ:ಕಳಂಕ ಮಲ್ಲಿಕಾರ್ಜುನಾ ”

ಅಂದಿನಿಂದ ಅವರಿಗೆ ಮರ್ತ್ಯದ ಜೀವನ ಬೇಸರ ತರಿಸುತ್ತದೆ. ಕಾಯಕ -ದಾಸೋಹಗಳ ಬಗ್ಗೆಯೂ ನಿರ್ವೇದತಲೆದೋರುತ್ತದೆ. ” ನಮಗೆ ಮರ್ತ್ಯದ ಮಣಿಹ ಕೃತ್ಯ ಇನ್ನೆಷ್ಟು ಪರ್ಯ0ತರ ? ಎನ್ನ ಕಟ್ಟುಗುತ್ತಿಗೆಯೇ ಕಾಯಕದ ಕೃತ್ಯ ?”ಮರ್ತ್ಯವೆಂಬುದು ನಾ ಬಲ್ಲನ್ನಕ್ಕರ
ಕರ್ಕಶದ ಜಗ ಇದು ಕಾರಣ ಕೈಲಾಸದ ಬಟ್ಟೆಯನರಸಬೇಕು. ” ಎಂದು ಜೀವನ ಸಮಾಪ್ತಿ ಮಾಡಲು ತಯಾರಾಗುತ್ತಾರೆ. ಅವರ ವಚನಾ0ಕಿತ ” ನಿ:ಕಳಂಕ
ಮಲ್ಲಿಕಾರ್ಜುನ “

ವಚನ ವಿಶ್ಲೇಷಣೆ

ಆನೆ, ಕುದುರೆ, ಬಂಡಿ, ಭಂಡಾರವಿರ್ದಡೇನೋ
ತಾನು0ಬುದು ಪಡಿಯಕ್ಕಿ , ಒಂದಾವಿನ ಹಾಲು
ಕುಡಿಯುವುದೊರತೆ ನೀರು ,ಮಲಗುವದರ್ಧ ಮಂಚ
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ !
ಒಡಲು ಭೂಮಿಯ ಸಂಗ, ಪ್ರಾಣ ವಾಯುವಿನ ಸಂಗ
ಕೈವಿಡಿದ ಮಡದಿ ಪರರ ಸಂಗ ,ಒಡವೆ ತಾನೇನಪ್ಪುದೋ
ಸಾವಿ0ಗೆ ಸಂಗಡವಾರೂ ಇಲ್ಲ ಕಾಣಾ, ನಿ:ಕಳ0ಕ
ಮಲ್ಲಿಕಾರ್ಜುನಾ !

ಮೋಳಿಗೆ ಮಾರಯ್ಯನವರು ಕಾಶ್ಮೀರದ ಅರಸು ಮಹಾದೇವ ಭೂಪಾಲ. ನಿಜವಾದ ಜ್ಞಾನೋದಯವಾದಾಗ ವೈಭವಪೂರ್ಣವಾದ ಅರಸೊತ್ತಿಗೆಯನ್ನು ಕಾಶ್ಮೀರದಲ್ಲಿಯೇ ಬಿಡುವುದಲ್ಲದೆ ತನ್ನ ಹೆಸರು ಚರಿತ್ರೆ
ಯನ್ನೆಲ್ಲ ಅಲ್ಲಿಯೇ ಬಿಟ್ಟು ಮಹಾನುಭಾವ ಬಸವಣ್ಣ ನವರ ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕ ವನ್ನಲ್ಲದೆ ಹೆಸರನ್ನೂ ಸಹ ತನ್ನ ಸತ್ಯ ಶುದ್ಧ ಕಾಯಕ
ಕ್ಕೊಪ್ಪುವಂತೆ ಮಾರಯ್ಯನೆಂಬುದಾಗಿ ಬದಲಾಯಿಸಿ ಕೊಳ್ಳುತ್ತಾರೆ. ಮೋಳಿಗೆಯೆಂದರೆ ಉರುವಲು ಕಟ್ಟಿಗೆ. ಅವುಗಳನ್ನು ಮಾರುವವ ಮೋಳಿಗೆಯ ಮಾರಯ್ಯ.
ಸಮಬಾಳು -ಸಮಪಾಲಿನ ಕಲ್ಯಾಣದ ಗಾಳಿಯಫಲ
ಸ್ವರೂಪವಾಗಿ ಇದೆಂಥ ಪರಿವರ್ತನೆ ! ಬಹಳ ಆಶ್ಚರ್ಯ
ವಾಗುತ್ತದೆ.

ಪ್ರಸ್ತುತ ವಚನದಲ್ಲಿ ಮೋಳಿಗೆ ಮಾರಯ್ಯನವರು ತಮ್ಮ
ಹಿಂದಿನ ವೈಭವವನ್ನೆಲ್ಲ ನೆನೆಸಿಕೊಂಡು ಅರಸೊತ್ತಿಗೆಯನ್ನು ತೊರೆಯಬೇಕೆನಿಸಿದಾಗ ಎಲ್ಲವೂ ಹಿಂದೆಯೇಉಳಿದು, ಜೀವಂತವಿದ್ದಾಗಲೂ ತಾನಾಗಿ ಜೊತೆಯಲ್ಲಿ
ಬರಲಾರದುದು ಸಾವಿನ ಬಳಿಕ ಯಾವುದು ಬಂದೀತು ಎಂದು ಆಲೋಚನೆ ಮಾಡುತ್ತಿದ್ದಾರೆ. ಹಿಂದೆ ಮಾಂಡವ್ಯ ಪುರದಲ್ಲಿ ಕೋಟ್ಯಾನುಗಟ್ಟಲೆ ರೂಪಾಯಿ ಸಂಪತ್ತು ಎಲ್ಲವೂ ಇದ್ದಿತು. ಆದರೆ ಎಲ್ಲವೂ ಇದೆಯೆಂದು ಎಲ್ಲವನ್ನೂ ಭೋಗಿಸಲಿಕ್ಕೆ ಆಗುತ್ತಿತ್ತೇನು ? ವೈಭವಯುಕ್ತ
ವಾಗಿ ಹೋಗುವುದಕ್ಕೆ ಒಂದಾನೆ ಸಾಕು, ವೇಗಯುಕ್ತ ವಾಗಿ ಪ್ರಯಾಣಿಸುವುದಕ್ಕೆ ಒಂದೇ ಕುದುರೆ ಸಾಕು. ಮಿಕ್ಕಿನವೆಲ್ಲವೂ ಕೇವಲ ಬಯಲಾಡಂಬರಕ್ಕಲ್ಲವೆ ?
ಭ್ರಮಾತ್ಮಕ ಬದುಕಿಗೋಸುಗವಲ್ಲವೆ ?

ಕೋಟ್ಯಾನುಗಟ್ಟಲೆ ಹಣ ಭಂಡಾರದಲ್ಲಿದೆಯೆಂದು ಒಂದು ಚೀಲದಕ್ಕಿಯಅನ್ನವನ್ನು ಉಣ್ಣಲಿಕ್ಕಾಗುತ್ತದೇನು
ಬಡವನಿಗೆ ಹೊಟ್ಟೆ ತುಂಬಲು ಬೇಕಾದುದು ಬೊಗಸೆಯಕ್ಕಿಅನ್ನವೇ,ರಾಜನಿಗೆ ಬೇಕಾದುದುಬೊಗಸೆ
ಯಕ್ಕಿ ಅನ್ನವೇ, ಅಂದ ಮೇಲೆ ಈ ದುರಾಸೆ ಯಾತಕ್ಕೋಸುಗ ? ಅದರಂತೆ ಅರಮನೆಯಲ್ಲಿ ಸಹಸ್ರಾರು ಆಕಳುಗಳಿವೆಯೆ0ದು ಎಲ್ಲ ಗೋವುಗಳ
ಹಾಲನ್ನು ತಾನೇ ಸೇವಿಸಲಿಕ್ಕಾಗುತ್ತದೇನು ? ಒಬ್ಬ ಮನುಷ್ಯನಿಗೆ ಒಂದು ಹೊತ್ತಿಗೆ ಒಂದಾಕಳ ಹಾಲು ಸಾಕಾಗುತ್ತದೆ. ಆದರೂ ಸಹಸ್ರಾರು ಆಕಳುಗಳನ್ನು ಸಾಕುವ ಚಪಲವೇಕೆ ? ಪುಕ್ಕಟೆ ನೀರನ್ನೂ ಇಂದು ಮಾರಿಕೊಳ್ಳುವ ಎತ್ತುಗಡೆ ನಡೆದಿದೆ. ತನಗೆ ಮಲಗಲು ಅರ್ಧ ಮಂಚ ಸಾಕಾದರೂ ಮನೆಯಲ್ಲಿ ಮೂರು ಮಲಗುವ ಕೋಣೆಗಳಿದ್ದರೇನೇ ಶೋಭೆಯೆಂದು
ಮನುಷ್ಯಆಲೋಚಿಸುತ್ತಿರುತ್ತಾನೆ. ಬರಿಯಆಲೋಚಿಸುವುದಷ್ಟೇ ಅಲ್ಲ.ಅದನ್ನು ಕಾರ್ಯಗತಗೊಳಿಸಲುಹಲವು
ಕಪ್ಪು ದಂಧೆಗಳನ್ನು ನಡೆಸುತ್ತಿರುತ್ತಾನೆ. ಮನುಷ್ಯನ ದುರಾಸೆ ಅದೆಷ್ಟು ?

ದೀರ್ಘ ಚಿಂತನ ಮಾಡಿದರೆ ಐಹಿಕವಾದ ಯಾವ ವಸ್ತುಗಳೂ ನಮ್ಮ ಜೊತೆಯಲ್ಲಿ ಬರುವುದಿಲ್ಲ. ಜೊತೆಯಲ್ಲಿ
ಬರುವುದು ಒಳ್ಳೆಯವನು ಅಥವಾ ಕೆಟ್ಟವನು ಎಂಬಕೀರ್ತಿ ಅಥವಾ ಅಪಕೀರ್ತಿ ಮಾತ್ರ. ಅದಕ್ಕಾಗಿ ಲೌಕಿಕವಾದ ಸಿರಿಸಂಪತ್ತುಗಳನ್ನು ಅತಿಯಾಗಿ ನೆಚ್ಚದೆಮನುಷ್ಯ
ಜನೋಪಯೋಗಿಕಾರ್ಯಗಳಲ್ಲಿಯೇನಿರತನಾಗಬೇಕು. ಜನ ಸೇವೆಯ ಕಾರ್ಯದಲ್ಲಿ ತೊಡಗಿದರೂ ಚಿಕ್ಕ ಸಂಸಾರವನ್ನು ತ್ಯಜಿಸಿ ಹಿರಿಯ ಸಂಸಾರವನ್ನು ಹೊಕ್ಕಂತೆ ಸದಾ ಕೀರ್ತಿ ಕಾಮನೆ ಆಮಿಷಕ್ಕೊಳಗಾಗದೆ ಪರಮಾತ್ಮನ ಧ್ಯಾನ ಆತ್ಮೋದ್ಧಾರದ ಕಡೆಗೂ ಗಮನ ಕೇಂದ್ರೀಕರಿಸಬೇಕು.

ಯಾವ ವಿದ್ಯೆ ಕಲಿತರೂ ಸಾವ ವಿದ್ಯೆ ಬೆನ್ನ ಬಿಡದು “
ಮನುಷ್ಯ ಶಾಶ್ವತವಲ್ಲ, ಮಾತ್ರವಲ್ಲ ಬದುಕು ದೀರ್ಘ
ಕಾಲದ್ದೂ ಅಲ್ಲ. ಸಾವು ಯಾವ ಕ್ಷಣದಲ್ಲಾದರೂ ಬರ
ಬಹುದು. ಸಾವು ಬಂದಾಗ ಏನಾಗುತ್ತದೆ ? ಒಡಲು ಭೂಮಿಯ ಪಾಲಾಗುತ್ತದೆ , ಪ್ರಾಣ ವಾಯುವಿನ ಪಾಲಾಗುತ್ತದೆ. ಕೈ ಹಿಡಿದ ಮಡದಿ ಮತ್ತೊಬ್ಬನ ಪಾಲಾಗುತ್ತಾಳೆ. ಗಳಿಸಿದ ಹಣ ದಾರಿ ದಿಕ್ಕಾಗುತ್ತದೆ. ವರ್ಷಾರು
ತಿಂಗಳ ಅವಧಿಯಲ್ಲಿ ಮನುಷ್ಯ ಇದ್ದನೋ ಇಲ್ಲವೋ
ಎಂಬುದನ್ನು ಜನ ಮರೆತು ಬಿಡುತ್ತಾರೆ. ಪುಕ್ಕಟೆ ಬಂದ
ಮನುಷ್ಯ ಒಂದು ದಿನ ಪುಕ್ಕಟೆ ಹೋಗಿ ಬಿಡುತ್ತಾನೆ ಅಷ್ಟೆ

ಲೌಕಿಕ ಮಾಯಾ ಮೋಹದಸೆಳೆತ ಅದೆಷ್ಟು ಬಲವತ್ತರ
ವಾಗಿರುತ್ತದೆಯೋ ಬಸವಾದಿ ಶಿವಶರಣರು,ಪುರಂದರ
ದಾಸಾದಿ ಹರಿ ಭಕ್ತರು, ಕಬೀರ -ಸರ್ವಜ್ಞಾದಿ ಸಂತರು ಮಡಿವಾಳಪ್ಪ -ಶರೀಫಾದಿ ತತ್ವ ಪದಕಾರರು ಎಷ್ಟು ಪರಿಯಿಂದ ಈ ಸಂಸಾರದ ಅನಿತ್ಯತೆಯನ್ನು ತಿಳಿಸಿ ಹೇಳಿದರೂ ಮಾನವ ಜೀವಿಗಳು ದುರಾಸೆಗೇನೇ ಬಲಿ
ಯಾಗುತ್ತಾರೆ. ತಿಳಿದೂ ತಿಳಿದೂ ಇರುಳು ಕಂಡ ಬಾವಿಯಲ್ಲಿ ಹಗಲಿನಲ್ಲಿಯೇ ಬೀಳುತ್ತಾರೆ. ಬರುವಾಗ ಬತ್ತಲೆ ಹೋಗುವಾಗ ಬತ್ತಲೆ ಮಧ್ಯದಲ್ಲಿ ಮಾತ್ರ ಕತ್ತಲೆ ಎಂಬ ಜಾಗರಣದ ಮಾತು ಕೇಳಿಸುವುದೇ ಇಲ್ಲ.
ಇದೊಂದು ಬಹಳ ಆಶ್ಚರ್ಯಕರ !

ಸುಧಾ ಪಾಟೀಲ್
ಬೆಳಗಾವಿ

Don`t copy text!