ಗಜಲ್ ೬೧ (ಮಾತ್ರೆ ೨೩)
ನಿನ್ನ ಸಾಂಗತ್ಯದಲಿ ಮನ ಅರಳಿ ಹೂವಾಗಿದೆ ದೊರೆ
ನಿನ್ನ ಕರುಣೆಯಲಿ ಮಿಂದ ಪ್ರಕೃತಿ ಚೆಲುವಾಗಿದೆ ದೊರೆ
ನಸುಕಿನ ಹೊಂಬೆಳಕಲಿ ಹಕ್ಕಿಗಳ ಗಾನ ಕೇಳುತಿದೆ
ನಿನ್ನಂಗ ಸೌರಭದಿ ಸೃಷ್ಟಿ ವಿಕಸಿತವಾಗಿದೆ ದೊರೆ
ಒಲವ ಮಳೆಗೆ ಧಾರಿಣಿ ಹಸಿರುಟ್ಟು ಸಂಭ್ರಮಿಸುತಿಹಳು
ನಿನ್ನ ದಿವ್ಯ ದೃಷ್ಟಿಯಲಿ ಜಗವು ಅಂದವಾಗಿದೆ ದೊರೆ
ಹೃದಯದಿ ಹುಟ್ಟಿದ ಭಾವ ಹುಚ್ಚು ಹಿಡಿಸಿದೆ ನಿತ್ಯವೂ
ನಿನ್ನಲ್ಲಿ ನೆಟ್ಟ ನೋಟ ಮುಂದೆ ಚಲಿಸದಾಗಿದೆ ದೊರೆ
ಅಷ್ಟಯೋಗವ ತಿಳಿಸಿ ಎನ್ನ ಕಣ್ಣು ತೆರೆಸಿದೆ ಇಂದು
ನಿನ್ನ ಭಜಿಸುತಾ ಪ್ರಭೆಯ ಹೊಳಪು ಬಯಲಾಗಿದೆ ದೊರೆ
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ