ನವರಾತ್ರೋತ್ಸವ ಅಥವಾ ದಸರೆಯ ಮಹತ್ವ

ನವರಾತ್ರೋತ್ಸವ ಅಥವಾ ದಸರೆಯ ಮಹತ್ವ

ಭರತ ಭೂಮಿಯಲ್ಲಿ ಅನೇಕ ಪುರಾಣ ಕಥೆಗಳು ಪ್ರಚಲಿತದಲ್ಲಿವೆ.. ಆಗಾಗ್ಗೆ ಉತ್ಸವಗಳು ಹಬ್ಬ ಹರಿದಿನಗಳ ಆಚರಣೆ ನಮ್ಮ ದೇಶದಲ್ಲಿ ಹಾಸು ಹೊಕ್ಕಾಗಿವೆ. ಅವುಗಳಲ್ಲಿ ಪ್ರಮುಖ ಎಂದರೆ ದಸರಾ ಅಥವಾ ನವರಾತ್ರೋತ್ಸವ ಹಬ್ಬ ಮತ್ತು ದೀಪಾವಳಿಗಳು.

ಹಿಂದೆ ರಾಮ ಕೃಷ್ಣರ ಕಾಲದಲ್ಲಿ ನಡೆದ ಘಟನೆಗಳೂ ಕೂಡ ಈ ಹಬ್ಬಗಳ ಹಿನ್ನೆಲೆಯಾಗಿವೆ.

ರಾಮಾಯಣ ಕಾಲದಲ್ಲಿ ಸೀತಾಪಹರಣ ನಡೆಯಿತು ಎಂದು ಕೇಳುತ್ತೇವೆ. ಆ ಸಮಯದಲ್ಲಿ ಒಬ್ಬ ಋಷಿ ಕನ್ಯೆಯಾದ ವೇದವತಿ ಶ್ರೀಮನ್ನಾರಾಯಣನನ್ನೇ ವರಿಸಬೇಕು ಎಂದು ತಪವನ್ನು ಮಾಡಿಕೊಂಡಿರುತ್ತಾಳೆ. ತ್ರೆತಾಯುಗದಲ್ಲಿ ರಾಮನಾಗಿ ಜನಸಿದ ಮಹಾನ್ ಪರಕ್ರಾಮಿಯನ್ನು ಮದುವೆಯಾಗುವ ಇಚ್ಛೆ ಹೊಂದಿರುತ್ತಾಳೆ.. ಸೀತೆಯನ್ನು ರಾವಣ ಕದ್ದೋಯ್ಯುವ ಕಾಲದಲ್ಲಿ,, ಅಗ್ನಿದೇವ ವೇದವತಿಗೆ ಬಂದ ಅಪತ್ತನ್ನು ತಿಳಿಸಿ, ವೇದವತಿಯೇ ಸೀತೆಯ ರೂಪ ತಾಳಿ ರಾವಣನೊಂದಿಗೆ ಹೋಗಲು ತಿಳಿಸುತ್ತಾನೆ.. ರಾಮನಿಗೆ ಸಹಾಯ ಮಾಡಲು ಅವಕಾಶ ಸಿಕ್ಕಾಗ ಸಂತೋಷದಿಂದ ವೇದವತಿ ಒಪ್ಪಿ ತಾನೇ ಸೀತೆಯ ರೂಪ ಪಡೆದು ರಾವಣನೊಂದಿಗೆ ಹೋಗಿ ಅಶೋಕವನದಲ್ಲಿ ಶೋಕ ಅನುಭವಿಸುತ್ತಾಳೆ..

ರಾವಣನನ್ನು ಕೊಂದು ಅಗ್ನಿಪರೀಕ್ಷೆಯ ನೆಪ ಮಾಡಿ ಮತ್ತೆ ಅಗ್ನಿದೇವನಲ್ಲಿ ಸುರಕ್ಷಿತವಾಗಿದ್ದ ಸೀತೆಯನ್ನು ಮರಳಿ ಪಡೆಯುತ್ತಾನೆ ರಾಮ.. ಆಗ ವೇದವತಿ ಶ್ರೀ ರಾಮನನ್ನು ವರಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾಳೆ.. ಆಗ ರಾಮನ ಅವತಾರದಲ್ಲಿ ಏಕಪತ್ನಿವ್ರತಸ್ಥನಾಗಿರುವದರಿಂದ ಅವಳನ್ನು ಮದುವೆಯಾಗಲು ಸಾಧ್ಯವಿಲ್ಲವೆಂದು ನಿರಾಕರಿಸಿ, ಮುಂದೆ ಕಲಿಯುಗದಲ್ಲಿ ಶ್ರೀನಿವಾಸನಾಗಿ, ಮುಂದೆ ಅವಳು ಪದ್ಮಾವತಿಯಾಗಿ ಜನಿಸಿದಾಗ ಅವಳನ್ನು ಮದುವೆಯಾಗುವೆನೆಂದು ಹೇಳುತ್ತಾನೆ ಶ್ರೀ ರಾಮ.

ಯಶೋದೆಯ ಹತ್ತಿರ 16 ವರ್ಷಗಳ ವರೆಗೂ ಬೆಳೆದ ಕೃಷ್ಣ, ಮದುವೆಯಾಗುವಾಗ ಯಶೋದೆಗೆ ಮದುವೆಯ ಕರೆಯೋಲೆ ಕಳಿಸಲಿಲ್ಲ.. ಎಲ್ಲ ವಿವಾಹಗಳು ಅವಳ ಅನುಪಸ್ಥಿತಿಯಲ್ಲೇ ನಡೆಯುತ್ತವೆ.. ಆಗ ಯಶೋದೆ, ದ್ವಾಪರಯುಗದಲ್ಲಿ ಕೃಷ್ಣನಾಗಿ ತನ್ನ ಹತ್ತಿರ ಬೆಳೆದು ಮದುವೆ ನೋಡುವ ಅವಕಾಶ ಸಿಗಲಿಲ್ಲವೆಂದು ಬೇಸರಪಡುತ್ತಾಳೆ.. ಯಶೋದೆಗೆ ಕೃಷ್ಣ ಕಲಿಯುಗದಲ್ಲಿ ಶ್ರೀನಿವಾಸನಾಗಿ ಬಂದು ಲಕ್ಷ್ಮೀ ಅಂಶವಿರುವ ಪದ್ಮಾವತಿಯನ್ನು ಮದುವೆ ಮಾಡಿಕೊಳ್ಳುತ್ತೇನೆ, ಆಗ ನಿನ್ನ ಸಹಾಯ ಪಡೆದೇ, ನಿನ್ನ ಕಣ್ಣೆದುರಿಗೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ.

ಈ ಎರಡೂ ಕಾರಣಗಳಿಂದಾಗಿ ಕಲಿಯುಗದಲ್ಲಿ ಸಾಕ್ಷಾತ್ ಶ್ರೀಹರಿಯೇ,ಶ್ರೀನಿವಾಸನಾಗಿ ಭೂಮಿಗೆ ಬಂದು ಆಕಾಶರಾಜನ ಮಗಳು ಪದ್ಮಾವತಿಯನ್ನು ಬಕುಲಾವತಿಯಾಗಿ ಬಂದ ಯಶೋದೆಯ ಸಹಾಯದಿಂದ
ಪದ್ಮಾವತಿಯನ್ನು ವಿವಾಹಮಾಡಿಕೊಳ್ಳುತ್ತಾನೆ.

ಶ್ರೀನಿವಾಸ ಪದ್ಮಾವತಿಯರ ಮದುವೆ ನಡೆದದ್ದು ವೈಶಾಖ ಶುದ್ಧ ದಶಮಿಯಂದು..6 ತಿಂಗಳು ಬೆಟ್ಟ ಏರಲಾಗದು ಎಂದು ಅಗಸ್ತ್ಯ ಮಹರ್ಷಿಗಳ ಆಶ್ರಮದಲ್ಲಿದ್ದು ಆಮೇಲೆ ಬೆಟ್ಟ ಏರಿ
ತಿರುಮಲಕ್ಕೆ ಬಂದು ನೆಲೆನಿಲ್ಲುತ್ತಾನೆ. ಶ್ರೀ ಶ್ರೀನಿವಾಸನ ಮದುವೆಯ ವೈಭವವನ್ನು ಎಲ್ಲ ದೇವಾಧೀದೇವತೆಗಳು ನೋಡಿ ಸಂತೋಷಿಸಿರುತ್ತಾರೆ. ಶ್ರೀನಿವಾಸ ಪದ್ಮಾವತಿಯರು ಬೆಟ್ಟ ಏರಿ ಬಂದಾಗ ಬ್ರಹ್ಮದೇವ ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳುತ್ತಾನೆ, ಎಲ್ಲ ದೇವತೆಗಳು ಅನೇಕ ಋಷಿ ಮುನಿಗಳು ಅದ್ದೂರಿಯಾಗಿ ನಡೆವ ಈ ಬ್ರಹ್ಮೋತ್ಸವ ಕಾರ್ಯಕ್ರಮ ನೋಡಿ ಆನಂದಿಸಲು ಬರುತ್ತಾರೆ ಅದನ್ನೇ ಈಗ ಬ್ರಹ್ಮೋತ್ಸವವೆಂದು ಕರೆಯುತ್ತಾರೆ. ಸೂರ್ಯಪ್ರಭವಾಹನ, ಚಂದ್ರಪ್ರಭವಾಹನ, ಹಂಸವಾಹನ, ಹನುಮದ್ವಾಹನ,, ಗರುಡವಾಹನ, ಹೀಗೇ 9 ದಿನವೂ ನವ ವಿಧ ವಾಹನಗಳಲ್ಲಿ ತಿರುಮಲದ ಗುಡಿಯ ಆವರಣದಲ್ಲಿ ಮೆರವಣಿಗೆ ಮಾಡಲಾಗುತ್ತದೆ.. ಕೊನೆಯ ದಿನ ಚಿನ್ನದ ರಥೋತ್ಸವ ಜರುಗುತ್ತದೆ..

ಸ್ವಯಂ ವ್ಯಕ್ತ ಸುಕ್ಷೇತ್ರವೆಂದು ತಿರುಪತಿಯು ಪ್ರಸಿದ್ಧಿ ಪಡೆದಿದೆ. ಏಳು ಬೆಟ್ಟಗಳ ಮೇಲೇರಿ ಬಂದು ನಿಂತಿದ್ದಾನೆ ಶ್ರೀನಿವಾಸದೇವರು.ಇಲ್ಲಿ ಸಾವಿರಾರು ತೀರ್ಥೋದ್ಭವವಿವೇ. ಇಲ್ಲಿರುವ ಮುಖ್ಯ ತೀರ್ಥವಾದ ಸ್ವಾಮಿ ಪುಷ್ಕರಿಣಿಯಲ್ಲಿ ಮಿಂದು ಬಂದರೆ ಸಕಲ ಪಾಪ ನಿವಾರಣೆಯಾಗುತ್ತವೆಂಬ ನಂಬಿಕೆಯಿದೆ.. ಸಕಲ ಭಕ್ತರ ಸಂಕಟ ನಿವಾರಣೆ ಮಾಡಲು ಕಲಿಯುಗದ ಹೆದ್ದೈವವಾಗಿ ಸ್ವಾಮಿ ವೆಂಕಟೇಶನು ಇಲ್ಲಿ ನೆಲೆಗೊಂಡಿದ್ದಾನೆ.

ಶ್ರೀನಿವಾಸ ದೇವರು ಅನೇಕ ಮನೆಗಳ ಕುಲದೈವವಾಗಿದ್ದಾನೆ..ಎಲ್ಲ ಮನೆ ಮನೆಗಳಲ್ಲಿ ಶ್ರೀನಿವಾಸನ ಭಕ್ತರು ಒಂದು ತುಪ್ಪದ ದೀವಿಗೆ ಮತ್ತು ಒಂದು ತೈಲದ
ನಂದಾದೀವಿಗೆಯನ್ನಿಟ್ಟು ವಿಶೇಷ ಪೂಜೆಗಳನ್ನು ಸಲ್ಲಿಸಿ ಪ್ರಾರ್ಥಿಸುತ್ತಾರೆ

ಮಹಿಷನೆಂಬ ರಕ್ಕಸನನ್ನು ಸಂಹರಿಸಲು ಸಾಕ್ಷಾತ್ ದುರ್ಗಾದೇವಿ, ವ್ಯಾಘ್ರವಾಹನಳಾಗಿ ಬಂದು ಮಹಿಷಪುರದಲ್ಲಿ ಸಂಹರಿಸುತ್ತಾಳೆ.. ಈಗಿನ ಮೈಸೂರನಲ್ಲಿ ತಾಯಿ ಚಾಮುಂಡೇಶ್ವರಿ ಇದ್ದು ನವದಿನಗಳಲ್ಲಿ, ನವರೂಪ ತಾಳಿ ಪೂಜೆಗೊಳ್ಳುತ್ತಾಳೆ . ಕೊನೆಯ ದಿನ ಬನ್ನಿ ವೃಕ್ಷಕ್ಕೆ ಪೂಜೆ ಮಾಡಿ ತಾಯಿ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಮೇಲೆ ಮೆರವಣಿಗೆ ಮಾಡಿ ಹಬ್ಬದ ಸಡಗರದಿಂದ ಕೊನೆಗೊಳ್ಳುತ್ತದೆ. ಅದಕ್ಕೆ ಜಂಬೂ ಸವಾರಿ ಎಂದು ಕರೆಯುತ್ತಾರೆ..

ಮೈಸೂರ್ ನಲ್ಲಿ
ಮನೆಮನೆಗಳಲ್ಲಿ ತಾಯಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ವಿಧ ವಿಧದ ಆಟಿಕೆಗಳಿಂದ ಮತ್ತು ಬೊಂಬೆಗಳಿಂದ ಅಲಂಕಾರ ಮಾಡಿ ಪೂಜಿಸುತ್ತಾರೆ.

ಉತ್ತರ ಭಾರತದ ಹಲವೆಡೆ, ದಶಶಿರನನ್ನು ಶ್ರೀ ರಾಮ ಸಂಹಾರ ಮಾಡಿದ ದಿನವೆಂದು ಆಚರಿಸುತ್ತಾರೆ.

ಪಾಂಡವರು ಅಜ್ಞಾತವಾಸದಲ್ಲಿದ್ದಾಗ ದುರ್ಯೋಧನ ಅವರನ್ನು ಪತ್ತೆ ಹಚ್ಚಲು ವಿರಾಟ್ ರಾಜನ ರಾಜ್ಯಕ್ಕೆ ಬಂದು ಆಕ್ರಮಣ ಮಾಡುತ್ತಾನೆ,, ಆಗ ವಿರಾಟ್ ರಾಜ ಬೇರೇ ಯುದ್ಧದಲ್ಲಿ ಇದ್ದುದರಿಂದ ಅವನ ಮಗ ಉತ್ತರಕುಮಾರನು ಯುದ್ಧಕ್ಕೆ ಬರುತ್ತಾನೆ. ಉತ್ತರಕುಮಾರ ಯುದ್ಧವೆಂದರೆ ಹೆದರಿ ನಡುಗುತ್ತಿದ್ದ. ಇದನ್ನರಿತ ಅವರ ಅರಮನೆಯಲ್ಲಿ ನೃತ್ಯ ಶಿಕ್ಷಕಿಯಂತೆ ವೇಷ ಧರಿಸಿದ್ದ ಅರ್ಜುನ ಅವನೊಡನೆ ಸಾರಥಿಯಾಗಿ ಯುದ್ಧಕ್ಕೆ ಬರುತ್ತಾನೆ.ಪಾಂಡವರು ಅಜ್ಞಾತವಾಸಕ್ಕೆ ಬರುವುದಕ್ಕೂ ಮೊದಲು ಶಸ್ಸ್ಥಾಸ್ತ್ರ ಗಳನ್ನು ಬನ್ನಿ ಅಡಗಿಸಿಟ್ಟಿರುತ್ತಾರೆ. ಬನ್ನಿ ವೃಕ್ಷದಲ್ಲಿ ಭದ್ರವಾಗಿಟ್ಟಿದ್ದ ಎಲ್ಲ ಅಸ್ತ್ರಗಳನ್ನು ತೆಗೆದುಕೊಂಡು ಹೋಗಿ ಯುದ್ಧ ಮಾಡಿ ಗೆಲ್ಲುತ್ತಾನೆ.. ದುರ್ಯೋಧನ ಅವನನ್ನು ಗುರುತಿಸಿ ಅರ್ಜುನನೆಂದು ಹೇಳುತ್ತಾನೆ, ಆದರೆ ಅಂದೇ ಅಜ್ಞಾತವಾಸದ ಕೊನೆಯ ದಿನವಾಗಿ ಪಾಂಡವರು ವನವಾಸದಿಂದ ಮುಕ್ತಿ ಪಡೆಯುತ್ತಾರೆ.

ಹೀಗಾಗಿ ಆಯುಧ ಪೂಜೆಯನ್ನು ಮನೆ ಮನೆಗಳಲ್ಲೂ ನೆರವೇರಿಸುತ್ತಾರೆ. ಮತ್ತು ಶಮಿ ವೃಕ್ಷವನ್ನು ಲಕ್ಷ್ಮೀದೇವಿಯೆಂದು ಪೂಜಿಸುವ ಕ್ರಮವಿದೆ.

ಕರ್ನಾಟಕದ ಎಲ್ಲ ಕಡೆಗಳಲಲ್ಲಿ ಬನ್ನಿ ವೃಕ್ಷವನ್ನು ಪೂಜಿಸಿ, ಅದನ್ನೇ ಬಂಗಾರವೆಂದು ಕರೆದು ಎಲ್ಲರಿಗೂ ಬನ್ನಿಯನ್ನು ವಿನಿಮಯ ಮಾಡಿ, ಬದುಕು ಬಂಗಾರವಾಗಲೆಂದು ಹಾರೈಸುತ್ತಾರೆ.

ಹೀಗೇ ವಿಧ ವಿಧವಾಗಿ ಭಾರತದ ಎಲ್ಲ ಕಡೆಗಳಲ್ಲೂ ದಸರಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ.

✍️ರೇಖಾ. ಮುತಾಲಿಕ್.
ಬಾಗಲಕೋಟ

Don`t copy text!