ಕಾತ್ಯಾಯನಿ ವ್ರತ

ಕಾತ್ಯಾಯನಿ ವ್ರತ


ನವರಾತ್ರಿಯಲ್ಲಿ ಪೂಜೆಗೊಂಬ ದೇವಿ ಅವತಾರಗಳಲ್ಲಿ ಆರನೇಯ ಅವತಾರ ಕಾತ್ಯಾಯನಿ ದೇವಿಯದ್ದಾಗಿರುತ್ತದೆ. ದೇವಿಯು ಕಾತ್ಯಾಯನೀಯಾದ ಕತೆಯನ್ನು ತಿಳಿಯೋಣ. ಹಿಂದೆ ಒಬ್ಬರು ಋಷಿಗಳಿದ್ದರು ಅವರ ಪುತ್ರ ಕಾತ್ಯನಾದನು. ಅವರ ಗೋತ್ರದಲ್ಲಿ ಹುಟ್ಟಿದವರೇ ಕಾತ್ಯಾಯನ. ಈ ಕಾತ್ಯಾಯನರು ಭಗವತಿಯ ಕುರಿತು ತಪಸ್ಸನ್ನು ಮಾಡಿ ದೇವಿಯು ತಮ್ಮ ಮನೆಯಲ್ಲಿ ಮಗಳಾಗಿ ಜನಿಸಬೇಕೆಂಬ ವರವನ್ನು ಬೇಡಿದರು.ದೇವಿಯು ಅವರ ಬೇಡಿಕೆ ಒಪ್ಪಿದಳು.

ಮುಂದೆ ಮಹಿಷಾಸುರನ ಉಪದ್ರವವು ಭೂಮಂಡಲದಲ್ಲಿ ಹೆಚ್ಚಾಗಲು ಬ್ರಹ್ಮ,ವಿಷ್ಣು, ಮಹೇಶರ ಅಂಶದಿಂದ ಭಾದ್ರಪದ ಕೃಷ್ಣ ಚತುರ್ದಶಿಯಂದು ಆವಿರ್ಭವಿಸಿ, ಆಶ್ವಯುಜ ಶುಕ್ಲ ಸಪ್ತಮಿ ಅಷ್ಟಮಿ ಮತ್ತು ನವಮಿದಿನಗಳಂದು ಕಾತ್ಯಾಯನ ಋಷಿಗಳಿಂದ ಪೂಜೆಗೊಂಡು ದಶಮಿಯ ದಿನ ಮಹಿಷಾಸುರನನ್ನು ಮರ್ದಿಸಿದಳು. ಕಾತ್ಯಾಯನ ಋಷಿಗಳಿಂದ ಪೂಜೆಗೊಂಡ ದೇವಿಯನ್ನು ಕಾತ್ಯಾಯನೀ ಎಂದು ಕರೆಯುತ್ತಾರೆ.

ನವರಾತ್ರಿಯ ಆರನೇ ದಿನ ಷಷ್ಠಿ ತಿಥಿಯಂದು ಪೂಜಿಸುವ ರೂಪ ಕಾತ್ಯಾಯನಿ ದೇವಿಯದು. ಇವಳನ್ನು ಶಕ್ತಿ ಸ್ವರೂಪಿಣಿ ಎನ್ನಲಾಗುತ್ತದೆ. ಭಕ್ತನು ಕಾತ್ಯಾಯನೀ ದೇವಿಯ ಉಪಾಸನೆ ಮಾಡುವ ಸಮಯದಲ್ಲಿ ಆಜ್ಞಾ ಚಕ್ರದಲ್ಲಿರುತ್ತಾನೆ ಈ ಚಕ್ರವು ಸಾಧನೆಯ ಹಾದಿಯಲ್ಲಿ ಬಹಳ ಮಹತ್ವದ್ದು ಈ ಯೋಗ ಸಾಧನೆಯಲ್ಲಿ ಭಕ್ತನು ಭಗವತಿಗೆ ತನ್ನ ಸರ್ವಸ್ವವನ್ನೂ ಅರ್ಪಿಸುತ್ತಾನೆ. ಭಕ್ತಿಯ ಪರಮಾವಧಿ ಎಂದರೇ ಸಂಪೂರ್ಣ ಶರಣಾಗತಿಯಾಗಿರುತ್ತದೆ. ಆದ್ದರಿಂದ ದೇವಿಯಲ್ಲಿ ತಮ್ಮ ಆತ್ಮ ಸಮರ್ಪಣೆ ಮಡಿದ ಭಕ್ತರಿಗೆ ಸಕಲ ಇಷ್ಟಾರ್ಥ ಧರ್ಮ ಅರ್ಥ ಕಾಮ ಮೋಕ್ಷಗಳನ್ನು ನೀಡುತ್ತಾಳೆ. ಇವಳು ಕೂಡ ಚತುರ್ಭುಜೆಯಾಗಿದ್ದು, ಬಲ ಗೈ ಮೇಲಿನ ಕೈ ಅಭಯ ಮುದ್ರೆಯಲ್ಲಿದೆ, ಕೆಳಗಿನ ಕೈ ವರಮುದ್ರೆಯಲ್ಲಿದೆ ಎಡಗೈ ಮೇಲಿನ ಕೈಲಿ ಖಡ್ಗವಿದೆ, ಕೆಳಗಿನ ಕೈಲಿ ಕಮಲ ಹಾಗೂ ತ್ರಿಶೂಲಗಳನ್ನು ಧರಿಸಿರುತ್ತಾಳೆ. ಸಿಂಹ ವಾಹನೆಯಾಗಿರುವ ದೇವಿಗೆ ಜೇನು ತುಪ್ಪವೆಂದರೆ ಬಹು ಪ್ರೀತಿ. ಕೇಸರಿ ಬಣ್ಣದ ವಸ್ತ್ರವನ್ನು ಧರಿಸಿರುತ್ತಾಳೆ. ಆದರೆ ಬೂದು ಬಣ್ಣ ಅವಳ ಪ್ರೀತಿಯ ಬಣ್ಣವಾಗಿದೆ. ದೇವಿಗೆ ಕೆಂಪು ಬಣ್ಣದ ಪುಷ್ಟಪಗಳು ಪ್ರಿಯವಾದವು. ದೇವಿಯನ್ನು ಪೂಜಿಸುವ ಮಂತ್ರ “ಓಂ ಕಾತ್ಯಾಯನಿನೈ ನಮಃ” ಆದರೆ ಪಥಿಸುವ ಸ್ತುತಿ ” ಯಾ ದೇವಿ ಸರ್ವ ಭೂತೇಷು ಕಾತ್ಯಾಯನೀ ರೂಪೇಣ ಸಂಸ್ಥಿತಾ ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ” ಎಂದು ಇದೆ.

ಕಾತ್ಯಾಯನೀ ವ್ರತ 

ನವರಾತ್ರಿಯ ಷಷ್ಠಿ ದಿನ ಮಾಡುವ ವಿಶೇಷವಾಗಿ ಮಾಡುವ ವ್ರತವೇ ಕಾತ್ಯಾಯನೀ ವ್ರತವಾಗಿದೆ. ಈ ಕಾತ್ಯಾಯನೀ ವ್ರತವನ್ನು ಮಾಡಿ ಎಲ್ಲ ಗೋಪಿಕಾ ಸ್ತ್ರೀಯರು ಶ್ರೀಕೃಷ್ಣ ಪರಮಾತ್ಮನ ಪತ್ನಿಯರಾದರು. ಕಾತ್ಯಾಯನೀ ವ್ರತವನ್ನು ಆಶ್ವಯುಜ ಶುಕ್ಲ ಷಷ್ಠಿಯಂದು ನದೀ ತೀರದಲ್ಲಿ ಮಾಡಬೇಕು. ಗೋಪಿಕಾ ಸ್ತ್ರೀಯರು ಯಮುನಾ ನದಿಯ ತಟದಲ್ಲಿ ಮಾಡಿದ್ದರು. ಅಂದು ನದಿಯಲ್ಲಿ ಮಿಂದು ಮಡಿಯುಟ್ಟು ಕಾತ್ಯಾಯನೀ ದೇವಿಯ ಮಣ್ಣಿನ ಪ್ರತಿಮೆಯೊಂದಿಗೆ ಕಲಶ ಸ್ಥಾಪನೆ ಮಾಡಿ ಷೋಡಶೋಪಚಾರಗಳಿಂದ ಪೂಜಿಸಿ, ನೈವೇದ್ಯಕ್ಕೆ ಪಾನಕ ಕೊಸಂಬರಿ ಉಂಡೆಗಳನ್ನು ಮಾಡಿ ಅರ್ಪಿಸಿ 6 ಪ್ರದಕ್ಷಿಣೆ ಅಥವಾ ಆರಕ್ಕಿಂತ ಹೆಚ್ಚು ಪ್ರದಕ್ಷಿಣೆಯನ್ನು ಹಾಕಬೇಕು. ಹೀಗೆ ಭಕ್ತಿಯಿಂಧ ಪೂಜಿಸಿದ ಕನ್ಯೆಯರಿಗೆ ಮನೋವಾಂಛಿತ ಪತಿ ದೊರೆತರೆ, ವಿವಾಹಿತ ಸ್ತ್ರೀಯರಿಗೆ ಪುತ್ತಪೌತ್ರಾದಿ ಸಂಪತ್ತು ದೊರೆಯುವುದು. ಇದು ನವರಾತ್ರಿಯಲ್ಲಿ ಕಾತ್ಯಾಯನಿ ದೇವಿಯ ಪೂಜೆಯಾದರೆ ಇದಕ್ಕೂ ಹೆಚ್ಚಿನ ಮಹತ್ವ ಹಾಗೂ ಪ್ರಸಿದ್ಧಿ ಮಾರ್ಗಶಿರ ಮಾಸದ ಪೂಜೆಯದ್ದಾಗಿದೆ.

ಮಾರ್ಗಶಿರ ಮಾಸದ ಕಾತ್ಯಾಯನಿ ವ್ರತ 

ಭಾಗವತ ದಶಮ ಸ್ಕಂದದಲ್ಲಿ ವೃಂದಾವನದ ಗೋಪಿಕೆಯರು ಶ್ರೀಕೃಷ್ಣನನ್ನು ಪತಿಯಾಗಿ ಪಡೆಯುವ ಉದ್ದೇಶದಿಂದ ಹೇಮಂತ ಋತುವಿನ ಆರಂಭದ ಮಾರ್ಗಶಿರ ಮಾಸದಲ್ಲಿ ಕಾತ್ಯಾಯಿನೀ ದೇವಿಯನ್ನು ಪೂಜಿಸಿದ ಬಗ್ಗೆ ವಿವರಣೆ ಇದೆ. ತ್ರಿಪುರಾರಹಸ್ಯ ಗ್ರಂಥದಲ್ಲಿ ಮನೋನುಕೂಲವಾದ ಪತಿಯನ್ನು ಹೊಂದಲು ಹಾಗೂ ವೈವಾಹಿಕ ಜೀವನ ಸುಖಮಯವಾಗಿರಲು ಕಾತ್ಯಾಯನೀ ದೇವಿಯನ್ನು ಪೂಜಿಸಲು ಮಾರ್ಗಶಿರ ಮಾಸ ಪ್ರಶಸ್ತವಾದ ಕಾಲವೆಂದು ವರ್ಣಿಸಲಾಗಿದೆ.

ಕಾತ್ಯಾಯನಿ ವ್ರತವು ಭಾಗವತದಲ್ಲಿ ಬರುತ್ತದೆ. ಕಾತ್ಯಾಯನಿ ದೇವಿಯ ಪೂಜೆ ಶ್ರೀ ಕೃಷ್ಣನನ್ನೇ ತಮ್ಮ ಪತಿಯನ್ನಾಗಿ ಪಡೆಯಲು ನದೀ ತೀರದಲ್ಲಿ ಮಾಡಿದ ಕತೆಯನ್ನು ಹೇಳುತ್ತದೆ. ಈ ವ್ರತವನ್ನು ಮಾರ್ಗಶೀರ ಮಾಸದಲ್ಲಿ ಮಾಡಲಾಗುತ್ತದೆ. ಗೋಪಿಕಾ ಸ್ತ್ರೀಯರು ಮಾರ್ಗಶಿರ ಮಾಸದಲ್ಲಿ ಯಮುನಾ ನದೀಗೆ ಹೋಗಿ ಅಲ್ಲಿ ಸ್ನಾನ ಮಾಡಿ ಕಾತ್ಯಾಯನಿ ದೇವಿಯನ್ನು ಪೂಜೆ ಮಾಡಲು ಹೋಗಿದ್ದರು. ತಾವು ಧರಿಸಿದ ಬಟ್ಟೆಗಳನ್ನು ನದೀ ತೀರದಲ್ಲಿ ಬಿಟ್ಟಿದ್ದರು. ಆದರೆ ನದೀ ಅಥವಾ ಯಾವುದೇ ಸ್ಥಳದಲ್ಲಿ ಸ್ನಾನ ಮಾಡುವಾಗ ವಿವಸ್ತ್ರರಾಗಿ ಸ್ನಾನವನ್ನು ಮಾಡಬಾರದು ನದೀ ಅಭಿಮಾನಿದೇವತೆಗಳು ನೀರಿನ ಅಭಿಮಾನಿ ದೇವತೆಗಳಿಗೆ ಅವಮಾನ ಮಾಡಿದಂತೆ, ಹೀಗೆ ವಿವಸ್ತ್ರರಾಗಿ ಸ್ನಾನ ಮಾಡಬಾರದೆಂಬ ಪಾಠವನ್ನು ಕಲಿಸಲು ಶ್ರೀಕೃಷ್ಣನು ಗೋಪಿಕೆಯರ ಬಟ್ಟೆಗಳನ್ನು ಕದ್ದಿರುತ್ತಾನೆ. ಶ್ರೀ ಕೃಷ್ಣನ ಬಾಲಲೀಲೆಗಳಲ್ಲಿ ಇದೂ ಒಂದು ಪ್ರಮುಖ ಘಟನೆವಾಗಿದೆ.

ವಿವಸ್ತ್ರರಾಗಿರುವ ಗೋಪಿಯರು ಕೃಷ್ಣನೇ ತಮ್ಮ ಪತಿಯಾಗಬೇಕೆಂದು ಕಾತ್ಯಾಯನಿ ದೇವಿಯ ಪೂಜೆಯನ್ನು ಮಾಡುತ್ತಿದ್ದರೂ ಹಾಗೆ ನಗ್ನರಾಗಿ ಬಂದು ಬಟ್ಟೆ ತಗೆದುಕೊಳ್ಳುವುದಿಲ್ಲ. ಲೋಕ ಮರ್ಯಾದೆಗೆ ಸಮಾಜಕ್ಕೆ ಅಂಜುವದು ಒಂದಾದರೆ ಆಧ್ಯಾತ್ಮವಾಗಿ ಅವರಲ್ಲಿ ಸಂಪೂರ್ಣ ಶರಣಾಗತಿಯ ಭಾವನೆ ಇರುವುದಿಲ್ಲ ಎಂದು ತಿಳಿಯುತ್ತದೆ. ಭಗವಂತನಲ್ಲಿ ಸಂಪೂರ್ಣ ಶರಣಾಗತಿಯನ್ನು ಹೊಂದಿದಾಗ ಮಾತ್ರ ಭಗವಂತ ಭಕ್ತನ ಉದ್ಧಾರ ಮಾಡುತ್ತಾನೆ ಎಂಬ ನೀತಿಯನ್ನು ಕೂಡ ಕೃಷ್ಣನು ಗೋಪಿಕೆಯರಿಗೆ ವಸ್ತ್ರಾಪಹರಣದ ಪ್ರಸಂಗದಿಂದ ತಿಳಿಸಿದನು.

ಕಾತ್ಯಾಯನಿ ವ್ರತದ ವಿಧಾನ ಈ ರೀತಿಯಾಗಿದೆ 

ಹಿಂದೆ ಯಾವುದೇ ಪೂಜೆಯಿರಲಿ ವ್ರತವಿರಲಿ ಮೌನವಾಗಿ ಏಕಾಗ್ರತೆಯಿಂದ ಮಾಡಿದರೆ ಮಾತ್ರ ಪೂಜೆ ಎನಿಸಿಕೊಳ್ಳುತ್ತಿತ್ತು. ಈಗ ಜನರು ನಡುವೆ ಮಾತನಾಡುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ ಎಂದು ಮೌನವಾಗಿಯೇ ಪೂಜೆಯನ್ನು ಮಾಡಬೇಕೆಂದು ಹೇಳುತ್ತಾರೆ. ಮೌನವಾಗಿರುವುದು ನಮ್ಮ ಆತ್ಮ ಶಕ್ತಿಯನ್ನು ವೃದ್ಧಿಸುತ್ತದೆ, ಅದರಲ್ಲಿ ಮಾರ್ಗಶಿರ ಮಾಸದ ಈ ಗೌರಿ ಪೂಜೆಯ ಹೆಸರೇ “ಮೌನಗೌರಿ” ಪೂಜೆ ಎಂದಾಗಿದೆ. ಮದುವೆಯಾಗಿರದ ಸಣ್ಣ ಹೆಣ್ಣುಮಕ್ಕಳು ವಿಶೇಷವಾಗಿ 4-5 ವರ್ಷದ ಸಣ್ಣ ಮಕ್ಕಳಿಂದಲೇ ಈ ಪೂಜೆಯನ್ನು ಮಾಡಿಸುತ್ತಾರೆ , ಮುಂಜಾನೆ 4 ಗಂಟೆಗೆ ಎದ್ದು ಸ್ನಾನವನ್ನು ಮಾಡಿ ಶುಭ್ರವಾದ ಮಡಿಯನ್ನಿಟ್ಟು ಗೌರಿಯ ಮೂರ್ತಿ/ಕಲಶವನ್ನು ಸ್ಥಾಪಿಸಿ ವಿಶೇಷವಾಗಿ ಕೆಂಪು ಹೂವುಗಳಿಂದ ಪೂಜಿಸಿ ಧೂಪ, ದೀಪ ಗಂಧಗಳನ್ನು ಅರ್ಪಿಸಿ ಯಾವುದಾದರೂ ಹಣ್ಣು ಅಥವಾ ಸಿಹಿ ಪದಾರ್ಥವನ್ನು ನಿವೇದಿಸಿ ಅದನ್ನು ಸೇವಿಸ ಬೇಕು . ಈ ಕೆಳಗೆ ಹೇಳಿರುವ ಮಂತ್ರಗಳನ್ನು ಪಠಿಸಿ “ಕಾತ್ಯಾಯನಿ ಮಹಾಮಾಯಾ….” ಶ್ಲೋಕವನ್ನು 108 ಬಾರಿ ಪಠಿಸಬೇಕು. ಪೂಜೆ ಮುಗಿಯುವವರಿಗೆ ದೇವರ ನಾಮಸ್ಮರಣೆ ಅಥವಾ ಹಾಡು , ಶ್ಲೋಕಗಳಲ್ಲದೇ ಬೇರಾವ ಮಾತನ್ನು ಆಡಬಾರದು.

ಧ್ಯಾನ
ಚಂದ್ರಹಾಸೋಜ್ವಲಕರಾ ಶಾರ್ದೂಲವರವಾಹನ
ಕಾತ್ಯಾಯಿನೀಂ ಶುಭಂ ದದ್ಯಾತ್ ದೇವೀ ದಾನವಘಾತಿನೀ

ಮಾರ್ಗಶಿರ ಮಾಸದಲ್ಲಿ ಸೂರ್ಯೋದಯಕ್ಕೆ ಮುನ್ನ ಮಾಡಿ ಸುವಾಸಿತವಾದ ಬಿಳಿ-ಹಳದಿ-ಕೆಂಪು ಹೂವುಗಳಿಂದಲೂ ಗಂಧ-ದೀಪ-ಧೂಪಾದಿಗಳಿಂದ ಪೂಜಿಸುವುದರಿಂದ ಸ್ತ್ರೀಯರಿಗೆ ಅನೇಕ ಶುಭಫಲಗಳನ್ನು ಹೇಳಲಾಗಿದೆ.

ಮಂತ್ರ

ಕಾತ್ಯಾಯಿನೀ ಮಹಾಮಾಯೇ ಮಹಾಯೋಗಿನ್ಯಧೀಶ್ವರೀ
ನಂದಗೋಪಸುತಂ ದೇವೀ ಪತಿಂ ಮೇ ಕುರುತೇ ನಮಃ
(ಈ ಮಂತ್ರವನ್ನು 108 ಬಾರಿ ಅಥವಾ ಯಥಾಶಕ್ತಿ ಜಪಿಸಬೇಕು)

ಗೋಪಿ ಸ್ಮರಣಂ:
ಮಾಲವೀ ಸಹದೇವಾ ಚ ನಂದಾ ಭದ್ರಾ ಸುನಂದಿನೀ ಪದ್ಮಾ ವಿಶಾಲಾ ಗೋದಾಮ್ನೀ ಚ ಶ್ರೀದೇವೀ ದೇವಮಾಲವೀ ಶ್ಯಾಮಾ ಸುಪೇಶಾ ಶಾಲಂಗೀ ಮಾನವೀ ಮಾನದಾಮೃತಾ ಇತಿ ಗೋಪಿಕುಮಾರೀಣಾಂ ಪ್ರಧಾನ ಶೋಡಷೀರಿತಃ ಪೂಜಾಂತ್ಯೇ ಸಂಸ್ಮರೇದೇತ್ಯ ಪೂಜಾ ಸಂಪೂರ್ತಿ ಹೇತುವೇ
(ದೇವಿಯನ್ನು ಪೂಜಿಸಿದ ಗೋಪಿಕೆಯರಲ್ಲಿ ಹದಿನಾರು ಜನ ಪ್ರಧಾನ ಗೋಪಿಕೆಯರನ್ನು ಪೂಜೆ ಸಂಪನ್ನವಾಗಲೆಂದು ಸ್ಮರಿಸಬೇಕು)

ಶ್ರೀಕೃಷ್ಣ ಪ್ರಾರ್ಥನಾ
ಗೋಪಿಪ್ರಿಯ ನಮಸ್ತುಭ್ಯಂ ಗೋಪಾಲ ಗೋವ್ರಜೇಶ್ವರ
ಗೋಪೀವಸ್ತ್ರಾಪಹರಣ ಗೋ-ಗೋಪಾಲ ನಿಷೇವಿತ

ಕಾತ್ಯಾಯಿನೀ ಪ್ರಾರ್ಥನಾ

ಮಾತಾ ಕಾತ್ಯಾಯಿನೀ ನಮೋ ನಂದಗೋಪಕುಮಾರಿಕೇ ಕಂಸವೀರ್ಯಹರೇ ದೇವೀ ಕೃಷ್ಣವೀರ್ಯೇ ವಿಂಧ್ಯಾದ್ರಿವಾಸಿನೀ

ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಂ
ಪಾತು ನಃ ಸರ್ವಭೂತೇಭ್ಯಃ ಕಾತ್ಯಾಯಿನೀ ನಮೋಸ್ತುತೇ

ಶ್ರೀಮದ್ಭಾಗವತದಲ್ಲೀ ಶ್ರೀ ಕೃಷ್ಣನೇ ಈ ವ್ರತವನ್ನು ಹೇಳಿದ್ದಾನೆ. ದುರ್ಗೆಯ ಅನುಗ್ರಹ ಪಡೆಯಲು ಸುಲಭ ಮಾರ್ಗ ಇದಾಗಿದೆ.

ಇಂದಿಗೂ ಕೂಡ ಸಣ್ಣ ಹೆಣ್ಣುಮಕ್ಕಳಿಂದ ಈ ಪೂಜೆಯನ್ನು ಪರಂಪರಾಗತವಾಗಿ ಮಾಡಿಸುತ್ತಲೇ ಬಂದಿದ್ದಾರೆ. ಹೆಣ್ಣು ಮಕ್ಕಳ ಮನೋರಥವನ್ನು ಈಡೇರಿಸುವ ಮತ್ತು ಉತ್ತಮ ಗತಿಯನ್ನು ಸೌಭಾಗ್ಯ ಸಂಪತ್ತನ್ನು ನೀಡುವ ವ್ರತವು ಶ್ರೇಷ್ಠವ್ರತವಾಗಿದೆ.

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!