ಡಾ.ಶಿವಾನಂದ ಜಾಮದಾರ ಅಥೆಂಟಿಕ್ ಸ್ಕಾಲರ್

 ಡಾ.ಶಿವಾನಂದ ಜಾಮದಾರ ಅಥೆಂಟಿಕ್ ಸ್ಕಾಲರ್

ನಾಡಿನ ಜನಪ್ರಿಯ ಪತ್ರಕರ್ತರೊಬ್ಬರು ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟದ ಸಂದರ್ಭದಲ್ಲಿ ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ.ಎಸ್.ಎಂ. ಜಾಮದಾರ ಅವರ ಕುರಿತು ಕೆಟ್ಟ ಹೋಲಿಕೆಯಿಂದ ಬರೆದಿದ್ದರು. ಮರುದಿನ ಸದರಿ ಪತ್ರಿಕೆಗೆ ಡಾ.ಜಾಮದಾರ ಅವರ ಪರವಾಗಿ ಪ್ರತಿಕ್ರಿಯೆ ನೀಡಿ ನನ್ನ ಜವಾಬ್ದಾರಿ ಮೆರೆದಿದ್ದೆ, ನಂತರ ನಾನವರನ್ನು ಸಂಪರ್ಕಿಸುವ ಗೋಜಿಗೆ ಹೋಗಲಿಲ್ಲ.
ಜಾಗತಿಕ ಲಿಂಗಾಯತ ಮಹಾಸಭಾ ಅನೇಕ ಕಾರಣದಿಂದ ಈಗ ಮುಂಚೂಣಿಯಲ್ಲಿದೆ. ಮುಖ್ಯವಾಗಿ ‘ಲಿಂಗಾಯತ ಎಂಬುದೊಂದು ಸ್ವತಂತ್ರ ಧರ್ಮ, ಲಿಂಗಾಯತರು ಹಿಂದೂಗಳಲ್ಲ’ ಎಂಬ ಮಾತಿಗೆ ಪೂರಕವಾಗುವ ನೂರಾರು ಅಧಿಕೃತ ಸಾಕ್ಷಾಧಾರಗಳನ್ನು ಒದಗಿಸಿದ ಶ್ರೇಯಸ್ಸು ಡಾ. ಜಾಮದಾರ ಅವರಿಗೆ ಸಲ್ಲುತ್ತದೆ. ಒಬ್ಬ ರೆವಿನ್ಯೂ ಅಧಿಕಾರಿಗೆ ಮತ್ತು ಈ ಧರ್ಮಕ್ಕೆ ಎತ್ತಣ ಸಂಬಂಧ ಎಂಬ ಪ್ರಶ್ನೆ ಹುಟ್ಟುವುದು ಸಹಜ.
ಆದರೆ ಡಾ.ಜಾಮದಾರ ಅವರು ಕೇವಲ ಐ.ಎ.ಎಸ್. ಅಧಿಕಾರಿಯಲ್ಲ, ಅದರಾಚೆಗೆ ಅನೇಕ ವಿಷಯಗಳೂ ಇವೆ.
ಅವರೊಬ್ಬ ಅಥೆಂಟಿಕ್ ಸ್ಕಾಲರ್, ಅವರಿಗೆ ಬಹುದೊಡ್ಡ, ಸುದೀರ್ಘ ಅಕ್ಯಾಡೆಮಿಕ್ ಹಿನ್ನೆಲೆಯಿದೆ.
ಡಾ. ಜಾಮದಾರ ಎಂದ ಕೂಡಲೇ
‘ಅವರೊಬ್ಬ ದಕ್ಷ, ಹಟಮಾರಿ, ಪ್ರಾಮಾಣಿಕ ಅಧಿಕಾರಿ, ಕೂಡಲ ಸಂಗಮ, ಬಸವಕಲ್ಯಾಣ, ಬಾಡ, ಬಸವನಬಾಗೇವಾಡಿ ಹಾಗೂ ಕಾಗಿನೆಲೆಯಂತಹ ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯ ಹರಿಕಾರ’ ಎಂಬ ನೆನಪು ಧಾವಿಸುವುದು ಸಹಜ ಮತ್ತು ಸತ್ಯ. ಆದರೆ ಅವರೊಬ್ಬ ಅಥೆಂಟಿಕ್ ಸ್ಕಾಲರ್ ಎಂಬುದು ಮನವರಿಕೆಯಾಯಿತು.
ಇತ್ತೀಚೆಗೆ ನಾನು ಮ್ಯಾಕಬೆತ್ ನಾಟಕದ ಕುರಿತು ವಿಡಿಯೋ ಮಾಡಿದ್ದೆ. ಅನೇಕರು ಅದಕ್ಕೆ ಪ್ರತಿಕ್ರಿಯೆ ನೀಡಿದ್ದರಾದರೂ ಡಾ. ಜಾಮದಾರ ಅವರ ಪ್ರತಿಕ್ರಿಯೆ ತುಂಬ ಸಂಶೋಧನಾತ್ಮಕವಾಗಿತ್ತು. ಅದಕ್ಕೂ ಮೊದಲು
ಕೆಲವು ತಿಂಗಗಳ ಹಿಂದೆ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಬಸವ ಉತ್ಸವದಲ್ಲಿ ಇವರನ್ನು ಭೇಟಿಯಾಗಿದ್ದೆ. ಆಗ ಸದರಿ ಪತ್ರಿಕೆಯ ಪ್ರತಿಕ್ರಿಯೆಯ ಕುರಿತು ಅವರೇ ಪ್ರಸ್ತಾಪಿಸಿದಾಗ ಆಶ್ಚರ್ಯವಾಯಿತು. ಅಂದು ರಾತ್ರಿ ಊಟದ ಬೈಟಕ್ ಸಂದರ್ಭದಲ್ಲಿ ತಮ್ಮ ಬದುಕಿನ ಅನೇಕ ವಿವರಗಳನ್ನು ಹಂಚಿಕೊಂಡರು. ಆಗ ನನಗೆ ಅವರ ಬಗ್ಗೆ ಇದ್ದ ವಿಚಿತ್ರ ಬಗೆಯ ಕಲ್ಪನೆಗಳು ಮಾಯವಾಗಿ ಒಬ್ಬ ಸರಳ, ಪ್ರಾಮಾಣಿಕ, ಸಜ್ಜನ ಸಂಶೋಧಕರ ಪರಿಚಯವಾಯಿತು. ಈಗಲೂ ಅಷ್ಟೇ ಅವರ ಜೊತೆಗೆ ಗಂಟೆಗಟ್ಟಲೆ ಫೋನಿನಲ್ಲಿ ಮಾಹಿತಿ ಪಡೆಯುವಾಗ ಒಬ್ಬ ಸತ್ಯ ಸಂಶೋಧಕನ ವ್ಯಕ್ತಿತ್ವ ಅನಾವರಣವಾಗುತ್ತದೆ.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕ್ರಿಮಿನಾಲಜಿ ವಿಷಯದಲ್ಲಿ ಪದವಿ ಪಡೆದ ಡಾ. ಜಾಮದಾರ ವಿದ್ಯಾರ್ಥಿ ದೆಸೆಯಿಂದಲೂ ಹೊಸದನ್ನು ಹುಡುಕುವ ಅನ್ವೇಷಕ. ಆಗ ಅಪರಾಧಶಾಸ್ತ್ರ ವಿಷಯ ಅಷ್ಟೊಂದು ಮಹತ್ವ ಪಡೆದಿರಲಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳು ಇತರ ಸಮಾಜವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು ಆದರೆ ಡಾ. ಶಿವಾನಂದರು ವಿಷಯ ಆಯ್ಕೆಯಲ್ಲಿ ತಮ್ಮತನ ಮೆರೆದರು.
ಒಂದು ವೇಳೆ ಅವರು ಕ್ರಿಮಿನಾಲಜಿ ವಿಷಯ ತೆಗೆದುಕೊಳ್ಳದಿದ್ದರೆ ವಿದೇಶದಲ್ಲಿ ಓದುವ ಸೌಭಾಗ್ಯ ಲಭಿಸುತ್ತಿರಲಿಲ್ಲ. ಅಂತಾರಾಷ್ಟ್ರೀಯ ಅಧ್ಯಯನದ ಒಂದು ಕೋಟಿ ಮೊತ್ತದ ವಿಶೇಷ ಸ್ಕಾಲರ್ಶಿಪ್ ಪಡೆದ ಅವರು ಅಮೇರಿಕಾದಲ್ಲಿ ಅಧ್ಯಯನ ಪೂರೈಸಿದ ಹೆಮ್ಮೆ. ಅಲ್ಲಿಯೇ ಸಂಶೋಧನೆಯನ್ನು ಮುಗಿಸಿ, ಅಮೇರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಮತ್ತು ಸಂಶೋಧಕರಾಗಿ ಸೇವೆ ಆರಂಭಿಸುತ್ತಾರೆ. ಆಗ ಅವರಲ್ಲಿ ಉಂಟಾದ ಅಕ್ಯಾಡೆಮಿಕ್ ಸಂಶೋಧನಾತ್ಮಕ ಮೌಲ್ಯಗಳು ಈ ಇಳಿ ಪ್ರಾಯದಲ್ಲಿ ಕೂಡ ಜತನವಾಗಿ ಆವರಿಸಿಕೊಂಡಿವೆ. ಸಾಹಿತ್ಯ, ಇತಿಹಾಸ ಮತ್ತು ಅಪರಾಧಶಾಸ್ತ್ರ ಪರಸ್ಪರ ಪೂರಕವಲ್ಲ ಎಂದು ಮೇಲ್ನೋಟಕ್ಕೆ ಗೋಚರವಾದರೂ ಪ್ರತಿಭಾವಂತರಿಗೆ ಎಲ್ಲವೂ ಒಂದೇ. ಇಂಗ್ಲಿಷ್ ಸಾಹಿತ್ಯ, ಕನ್ನಡದ ವಚನಗಳನ್ನು ಜೊತೆ ಜೊತೆಯಾಗಿ ಅಧ್ಯಯನ ಮಾಡಲು ಇವರ ತಂದೆ ಮೂಲ ಪ್ರೇರಣೆ. ಏರು ಯೌವ್ವನದಲ್ಲಿ ವಿಧುರರಾದ ಇವರ ತಂದೆ ಮಲ್ಲೇಶಪ್ಪ ಜಾಮದಾರ, ಮಕ್ಕಳ ಭವಿಷ್ಯದ ಕಾರಣದಿಂದ ಮರು ಮದುವೆಯಾಗದೇ ಇವರ ಅಧ್ಯಯನ ಏಳ್ಗೆಗಾಗಿ ಮತ್ತು ಪ್ರಗತಿಪರ ವಿಚಾರದಲ್ಲಿ ತಮ್ಮ ಬದುಕನ್ನು ಮೀಸಲಿಟ್ಟರು.
ಅಮೇರಿಕಾ ಮತ್ತು ಇಂಗ್ಲೆಂಡ್ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಓದಿದ ಇವರಿಗೆ ಅಲ್ಲಿಯೇ ತಮ್ಮ ವೃತ್ತಿ ಬದುಕನ್ನು ಮುಂದುವರೆಸುವ ಇಚ್ಛೆಯಿತ್ತು ಆದರೆ ಕುಟುಂಬದ ಸದಸ್ಯರ ಹಕ್ಕೊತ್ತಾಯದಿಂದಾಗಿ ಐ.ಎ.ಎಸ್. ಪಾಸಾದ ಕೂಡಲೇ ಭಾರತಕ್ಕೆ ಮರಳುತ್ತಾರೆ. ಒಬ್ಬ ಅಕ್ಯಾಡೆಮಿಕ್ ವ್ಯಕ್ತಿ ಯಾವುದೇ ಜವಾಬ್ದಾರಿ ಕೊಟ್ಟರೂ ಅಷ್ಟೇ ಸಮರ್ಪಕವಾಗಿ ಕಾರ್ಯ ನಿರ್ವಹಿಸಬಹುದು ಎಂಬುದನ್ನು ಸಾಬೀತುಪಡಿಸಿದರು. ದಕ್ಷತೆಯ ಜೊತೆಗೆ ಪ್ರಾಮಾಣಿಕತೆ ಇವರ ಅಧಿಕಾರಾವಧಿಯ ಶ್ರೇಯಸ್ಸು.

‘ಹಟಮಾರಿ, ಅಹಂಕಾರಿ, ಲೋಕವಿರೋಧಿ, ಸದಾಕಾಲ ಸರ್ಕಾರ ಮತ್ತು ಕಾನೂನು ಪರ, ಜನ ವಿರೋಧಿ’ ಎಂಬ ಟೀಕೆ ನಿಮ್ಮ ಮೇಲೆ ಇತ್ತಲ್ಲ ಎಂದಾಗ ‘ ಹೌದು ಅದು ಅರ್ಧ ಸತ್ಯ ಆದರೆ ಪೂರ್ಣ ಸತ್ಯವಲ್ಲ, ಕಾನೂನಾತ್ಮಕವಾಗಿ, ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಕೆಲಸ ಮಾಡುತ್ತಿದ್ದ ಕಾರಣದಿಂದ ನಾನು ಈ ಟೀಕೆಗಳನ್ನು ಸಂತೋಷದಿಂದ ಸ್ವೀಕರಿಸುವೆ’ ಎನ್ನುತ್ತಾರೆ. ಒಂದೇ ಹುದ್ದೆಯಲ್ಲಿ ಹನ್ನೊಂದು ವರ್ಷಗಳ ಕಾಲ ಸೇವೆ ಸಲ್ಲಿಸಲು ಎಲ್ಲಾ ಸರಕಾರಗಳು ಅವಕಾಶ ಕಲ್ಪಿಸಲು ಇವರ ಬದ್ಧತೆ ಮತ್ತು ಪ್ರಾಮಾಣಿಕ ನಿಲುವೇ ಕಾರಣ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಹಣ ಪಾವತಿಸಿ ಜನಪರ ಧೋರಣೆಗೆ ಸಾಕ್ಷಿಯಾಗಿ ಟೀಕಿಸಿದವರ ಬಾಯಿ ಮುಚ್ಚಿಸಿದರು. ಕೂಡಲ ಸಂಗಮ ಮತ್ತು ಬಸವಕಲ್ಯಾಣ ಅಭಿವೃದ್ಧಿ ಸಂದರ್ಭದಲ್ಲಿ ಲಿಂಗಾಯತ ಧರ್ಮಕ್ಕೆ ಪೂರಕವಾಗಿರುವ ಎಲ್ಲಾ ಸಾಕ್ಷಾಧಾರಗಳನ್ನು ಆಸ್ಥೆಯಿಂದ ಸಂಗ್ರಹಿಸಿದರು. ನಂತರ ತಮ್ಮ ಸರಕಾರಿ ಸೇವಾ ಅಧಿಕಾರ ಮುಗಿದ ಮೇಲೆ, ನಾಡಿನ ಪತ್ರಿಕೆಗಳಲ್ಲಿ ಲಿಂಗಾಯತ ಧರ್ಮದ ಕುರಿತು ಲೇಖನಗಳನ್ನು ಬರೆದು ಇವರಲ್ಲಿ ಹುದುಗಿದ್ದ ಸಂಶೋಧಕನನ್ನು ಲೋಕಕ್ಕೆ ಪರಿಚಯಿಸಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರಲ್ಲಿ ಸಂಚಲನ ಉಂಟು ಮಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಮೂಲಕ ಹೋರಾಟದ ಆಯಾಮ ಬದಲಿಸಿದ ಇವರು, ಈಗಲೂ ನಿತ್ಯ ಅಂತಹ ಸಾವಿರಾರು ಗೆಜ಼ಿಟಿಯರ್ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಬಸವಾದಿ ಶರಣರ ಆರ್ಥಿಕ, ಸಾಮಾಜಿಕ, ಮಾನವೀಯ ಮತ್ತು ಧಾರ್ಮಿಕ ನೆಲೆಯ ವೈಶಾಲ್ಯತೆ ಮತ್ತು ಉದ್ದೇಶಗಳನ್ನು ಸವಿಸ್ತಾರವಾಗಿ ಕಟ್ಟಿ ಕೊಡುತ್ತಾರೆ.
ಲಿಂಗಾಯತ ಧರ್ಮದ ಪರಿಪೂರ್ಣತೆಯನ್ನು ಜಗತ್ತಿಗೆ ಪರಿಚಯಿಸಲು ಯುವಕರು, ಪ್ರಗತಿಪರ ಬರಹಗಾರರು, ಸಾಹಿತಿಗಳು, ಸಂಶೋಧಕರು ಹಾಗೂ ವಿರಕ್ತ ಮಠಾಧೀಶರು ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮುಂದೊಂದು ದಿನ ಖಂಡಿತವಾಗಿ ಜಾಗತಿಕ ಮಾನ್ಯತೆ ಲಭಿಸುತ್ತದೆ ಎಂಬ ಭರವಸೆ ಇವರದು.

‘ಜಾಗತಿಕ ಲಿಂಗಾಯತ ಮಹಾಸಭಾ ರಾಜಕೀಯ ಮುಕ್ತವಾಗಬೇಕು, ಯಾಕೆಂದರೆ ಓಟ್ ಬ್ಯಾಂಕ್ ಕಾರಣದಿಂದಾಗಿ ರಾಜಕೀಯ ನಾಯಕರು ಸತ್ಯ ಪ್ರತಿಪಾದನೆ ಮಾಡಲಾಗುವುದಿಲ್ಲ. ಇಲ್ಲಿ ಸತ್ಯ ಪ್ರತಿಪಾದನೆ ಮುಖ್ಯ. ಮಠಾಧೀಶರು, ಚಿಂತಕರು ಮತ್ತು ಸಂಶೋಧಕರು ಈ ಹೋರಾಟದಲ್ಲಿ ಸಕ್ರಿಯರಾಗಿ, ನಿರ್ಭಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು’ ಅವರ ಮಾತುಗಳಲ್ಲಿ ಕಳಕಳಿ ಇದೆ.
ಜನಪರ ಹೋರಾಟಗಳ ಜೊತೆಗೆ ಸಂಶೋಧನಾತ್ಮಕ ದಾಖಲೆಗಳ ಪ್ರತಿಪಾದನೆ ಗೆಲುವು ತರಬಲ್ಲದು.
ಜಾತಿ, ವರ್ಗ,ವರ್ಣಗಳ ಮೀರಿ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮದ ಮೌಲ್ಯಗಳು ಆಚರಣೆಗೆ ಬಂದರೆ ನಮ್ಮ ದೇಶ ಮತ್ತು ಜಗತ್ತು ಕಲ್ಯಾಣವಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ. ಅವರ ಮಾರ್ಗದರ್ಶನ ನಮ್ಮಂತಹ ಓದು-ಬರಹ ಆಸಕ್ತರಿಗೆ ನಿರಂತರ ಲಭಿಸಲಿ ಎಂದು ಆಶಿಸಿ,ಪ್ರಸಕ್ತ ಸಾಲಿನ ಜಗದ್ಗುರು ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪುರಸ್ಕಾರ ಪಡೆದ ಅವರನ್ನು ಸಮಸ್ತ ನಾಡಿನ ಬಸವ ಭಕ್ತರ ಪರವಾಗಿ ಅಭಿನಂದಿಸುತ್ತೇನೆ.

ಪ್ರೊ.ಸಿದ್ದು ಯಾಪಲಪರವಿ

Don`t copy text!