ಆರತಿ ತಟ್ಟೆ-ಹಣದ ಹುಂಡಿ ಇವ್ಯಾವುದು ಇಲ್ಲದ ಹಿಂದೂ ದೇವಾಲಯ ನೋಡಿದ್ದೀರಾ ?

ಆರತಿ-ಮಹಾಆರತಿ, ಅರ್ಚನೆ-ಕುಂಕುಮಾರ್ಚನೆ, ಅಭಿಷೇಕ-ಮಹಾರುದ್ರಾಭಿಷೇಕ, ಆರತಿ ತಟ್ಟೆ-ಹಣದ ಹುಂಡಿ ಇವ್ಯಾವುದು ಇಲ್ಲದ ಬೃಹತ್ ಹಿಂದೂ ದೇವಾಲಯ ನೋಡಿದ್ದೀರಾ ?

ವಿಚಿತ್ರ ಆದರೂ ಸತ್ಯ

ನವರಾತ್ರಿಯ ದಿನಗಳಲ್ಲಿ ಮೈಸೂರಿನಲ್ಲಿದ್ದು ಅಲ್ಲಿನ ಸಂಭ್ರಮ-ಸಡಗರ,ವಿದ್ಯುತ್ ದೀಪಾಲಂಕಾರದ ಬೆಳಕಿನಲ್ಲಿ ಮಿಂದೇಳುವ ಮೈಸೂರು ನಗರಿಯ ಸುಂದರ ದೃಶ್ಯಗಳು ಹಾಗೂ ದಸರಾ ನಿಮಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಕಣ್ತುಂಬಿಕೊಳ್ಳಬೇಕೆಂಬ ಕನಸು ನನಸಾಗದೆ ಹಲವಾರು ದಶಕಗಳಿಂದ ಹಾಗೆ ಉಳಿದಿತ್ತು. ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ವಾಸವಾಗಿರುವ ನನ್ನ ಪತ್ನಿಯ ಸೋದರ ಮಾವ ಶ್ರೀಶೈಲ ಶೀಲವಂತರ ಫೋನ್ ಮಾಡಿ ಮೈಸೂರಿನ ದಸರಾ ನೋಡುವಿರಂತೆ ನಮ್ಮ ಮನೆಗೆ ಬನ್ನಿ ಎಂದು ಆಹ್ವಾನಿಸಿದ್ದರು. ಶಾಲೆಗೆ ರಜೆ ಇದ್ದುದರಿಂದ ಮೈಸೂರಿಗೆ ಹೋಗೋಣ ಎಂದು ನನ್ನ ಪತ್ನಿಯೂ ಒಪ್ಪಿಗೆ ಸೂಚಿಸಿದ್ದರಿಂದ ದಿನಾಂಕ 17-10-2023 ರಂದು ಬೆಂಗಳೂರಿನಿಂದ ಮೈಸೂರಿಗೆ “ವಂದೇ ಭಾರತ” ರೈಲಿನಲ್ಲಿ ಪ್ರಯಾಣ ಪ್ರಾರಂಭಿಸಿದೆವು.ವಂದೇ ಭಾರತ ರೈಲಿನಲ್ಲಿ ಪ್ರಯಾಣಿಸುವುದೊಂದು ಅದ್ಭುತ ಅನುಭವ.ಅದನ್ನು ಆ ರೈಲಿನಲ್ಲಿ ಪ್ರಯಾಣಿಸಿಯೇ ಅನುಭವಿಸಬೇಕು.

ಮೊದಲ ದಿನ ಸಾಯಂಕಾಲ ಚಾಮುಂಡಿ ಬೆಟ್ಟ,ವಿದ್ಯುತ್ ದೀಪಾಲಂಕಾರಗಳಿಂದ ಜಗಮಗಿಸುತ್ತಿದ್ದ ಮೈಸೂರು ನಗರ, ದಸರಾ ವಸ್ತುಪ್ರದರ್ಶನ ಹಾಗೂ ಅರಮನೆಯ ಮುಂಭಾಗದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡೆವು.ಮರುದಿವಸ 900 ವರ್ಷಗಳಿಂದ ಹೊಯ್ಸಳರ ಶ್ರೇಷ್ಠ ಶಿಲ್ಪಕಲೆಗೆ ಸಾಕ್ಷಿಯಾಗಿ ನಿಂತಿರುವ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ,ಅಕ್ಕ ತಂಗಿಯರ ಹೆಸರಿನಲ್ಲಿ ಗುರುತಿಸುವ ಅವಳಿ-ಜವಳಿ (twins) ಪುಷ್ಕರಣಿಗಳು,ಅಪೂರ್ಣವಾದ ರಾಯಗೋಪರ,ಎತ್ತರದ ಬೆಟ್ಟದ ಮೇಲಿರುವ ಯೋಗಾನರಸಿಂಹ ಸ್ವಾಮಿ ದೇವಸ್ಥಾನ, ಹಾಗೆಯೇ ಈ ಬೆಟ್ಟದ ಮೇಲೆ ನಿಂತು ಸುತ್ತಲೂ ಕಾಣುವ ನಿಸರ್ಗ ರಮಣಿಯ ದೃಶ್ಯಗಳು,ಬೆಟ್ಟದ ಕೆಳಗೆ ಸುಮಾರು ಒಂದು ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಸುಂದರ ಪುಷ್ಕರಣಿಗಳನ್ನು ನೋಡುತ್ತಾ, ಜೆಸಿಬಿ,ಕ್ರೇನ್ ಮತ್ತು ಹಿಟಾಚಿಯಂತಹ ದೈತ್ಯ ಯಂತ್ರಗಳು ಇಲ್ಲದ ಆ ಕಾಲದಲ್ಲಿ ಇವುಗಳನ್ನು ಹೇಗೆ ನಿರ್ಮಾಣ ಮಾಡಿರಬಹುದು ? ಎಂದು ನನ್ನಷ್ಟಕ್ಕೆ ನಾನೇ ಪ್ರಶ್ನೆ ಹಾಕಿಕೊಳ್ಳುತ್ತಾ ಐದುನೂರು ಕಲ್ಲಿನ ಮೆಟ್ಟಲುಗಳನ್ನು ಇಳಿದು ಬರುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿತ್ತು. ಮೇಲುಕೋಟೆಗೆ ಹೋದರೆ ಅಲ್ಲಿ ಪುಳಿಯೋಗರೆಯನ್ನು ಸವಿಯದೆ ಹಾಗೆ ಬರಬೇಡಿ ಎಂದು ಯಾರೋ ಹೇಳಿದ್ದು ನೆನಪಿಗೆ ಬಂದು ಸ್ಥಳೀಯರನ್ನು ಇಲ್ಲಿ ಪುಳಿಯೋಗರೆ ಎಲ್ಲಿ ಸಿಗುತ್ತದೆ ಎಂದು ವಿಚಾರಿಸಿದಾಗ ಸುಬ್ಬಯ್ಯ ಮೆಸ್ ನ ಕಡೆಗೆ ಕೈ ತೋರಿಸಿದರು. ಸುಬ್ಬಯ್ಯ ಮೆಸ್ ನಲ್ಲಿ ದೊರಕುವ ಪುಳಿಯೋಗರೆಯ ರುಚಿಯನ್ನು ಇದುವರೆಗೂ ಕರ್ನಾಟಕದ ಯಾವ ಭಾಗದಲ್ಲೂ ನಾನು ಸವಿದಿಲ್ಲ ಅದಕ್ಕೊಂದು ವಿಶಿಷ್ಟ ರುಚಿ ಇದೆ. ಅಲ್ಲಿಯೇ ಪುಳಿಯೋಗರೆಯ ಮಿಕ್ಸ್ಚರ್ ಇರುವ ಡಬ್ಬಿಯನ್ನು ಕೊಂಡುಕೊಂಡು ಶ್ರೀರಂಗಪಟ್ಟಣದ ಕಡೆಗೆ ಹೊರಟೆವು.

ಶ್ರೀರಂಗಪಟ್ಟಣದಲ್ಲಿ ತಳಕು ಬಳುಕಿನಿಂದ ಹರಿಯುತ್ತಿರುವ ಕಾವೇರಿ ನದಿಯ ಜುಳು ಜುಳು ನಿನಾದವನ್ನು ಅನುಭವಿಸುತ್ತಾ. ದಂಡೆಯ ಮೇಲಿರುವ ನಿಮಿಷಾಂಬ ದೇವಾಲಯವನ್ನು ನೋಡಿಕೊಂಡು ಹಂಪಿಯ ವಿರೂಪಾಕ್ಷ ದೇವಾಲಯದಷ್ಟೇ ವಿಶಾಲವಾಗಿರುವ ಶ್ರೀರಂಗನಾಥ ದೇವಾಲಯದ ಒಳಗಡೆ ಬರುವಷ್ಟರಲ್ಲಿ ಸೂರ್ಯ ಪಶ್ಚಿಮದ ಕಡೆಗೆ ಧಾವಿಸುತ್ತಿದ್ದ.ಶ್ರೀರಂಗನಾಥ ದೇವಾಲಯದ ಅಗಾಧತೆ ಹಾಗೂ ಭವ್ಯತೆಯನ್ನು ಅಸ್ವಾದಿಸುತ್ತಾ ಹೊರಬರುವಷ್ಟರಲ್ಲಿ ದೇವಾಲಯದ ಮುಂಭಾಗದ ವಿಶಾಲ ಬಯಲಿನಲ್ಲಿ ದಸರಾ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗಿದ್ದುವು. ಕೆಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ, ಮೈಸೂರಿನ ಕಡೆಗೆ ಹೊರಟೆವು.

ಶ್ರೀರಂಗಪಟ್ಟಣದಿಂದ ಮೈಸೂರಿಗೆ ಹೋಗುವ ಬಸ್ಸಿನಲ್ಲಿ ಪರಿಚಯವಾದ ಸಹ ಪ್ರಯಾಣಿಕ ಉಪನ್ಯಾಸಕರೊಬ್ಬರು ನೀವು ಬಸವ ಪರಂಪರೆಯವರು ಎನ್ನುತ್ತೀರಿ.ಹಾಗಿದ್ದರೆ ಒಂದು ಸಲ ಕೆ.ಆರ್.ಎಸ್ ಡ್ಯಾಮಿನ ಹಿಂಭಾಗದಲ್ಲಿರುವ ಹೊಸ ಕನ್ನಂಬಾಡಿ ಗ್ರಾಮದ ಬಳಿ ನಿರ್ಮಿಸಿರುವ ವೇಣುಗೋಪಾಲಸ್ವಾಮಿ ದೇವಸ್ಥಾನವನ್ನೊಮ್ಮೆ ನೋಡಿ ಫೋನ್ ಮಾಡಿ ಎಂದು ನಂಬರ್ ಕೊಟ್ಟರು.”ಬಸವ ಪರಂಪರೆ-ವೇಣುಗೋಪಾಲಸ್ವಾಮಿ ಪರಂಪರೆ”ಗೂ ಉತ್ತರ-ದಕ್ಷಿಣದಷ್ಟು ಅಂತರ. ಹೀಗಿದ್ದು ಅವರೇಕೆ ಹಾಗೆ ಹೇಳಿದರು ?ಎನ್ನುವ ಕುತೂಹಲದಿಂದ ಮರುದಿವಸ ಮೈಸೂರಿನಿಂದ 30 ಕಿಲೋಮೀಟರ್, ಬೃಂದಾವನ ಗಾರ್ಡನ್ ನಿಂದ ಒಂಬತ್ತು ಕಿಲೋ ಮೀಟರ್ ದೂರ ಕೆ.ಆರ್.ಎಸ್ ಡ್ಯಾಮ್ ಹಿನ್ನೀರಿನ ದಂಡೆಯ ಮೇಲಿರುವ ಹೊಸ ಕನ್ನಂಬಾಡಿ ಗ್ರಾಮದ ಬಳಿ ಇರುವ ವೇಣುಗೋಪಾಲಸ್ವಾಮಿ ದೇವಸ್ಥಾನ ನೋಡಲು ಉಬರ್ ಮಾಡಿಕೊಂಡು ಹೊರಟೆವು. ಭಕ್ತರನ್ನು ಶೋಷಿಸಿದೆ ಇರುವ ದೇವಾಲಯಕ್ಕೆ ಹೊರಟಿದ್ದೇವೆ ಎನ್ನುವುದು ಅಲ್ಲಿಗೆ ಹೋಗುವರೆಗೂ ಗೊತ್ತೇ ಇರಲಿಲ್ಲ.

1908 ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಬಳಿ ಕೃಷ್ಣರಾಜಸಾಗರ ಆಣೆಕಟ್ಟನ್ನು ಕಟ್ಟಲು ಪ್ರಾರಂಭಿಸಿದರು. ಕೆ.ಆರ್.ಎಸ್ ಡ್ಯಾಮನ ಹಿನ್ನೀರಿನಲ್ಲಿ ಅಂದು ಮುಳುಗಿದ ಗ್ರಾಮಗಳ ಸಂಖ್ಯೆ 82 ಎಂದು ಹೇಳುತ್ತಾರೆ. ಅವುಗಳಲ್ಲೊಂದಾದ ಕನ್ನಂಬಾಡಿ ಗ್ರಾಮಸ್ಥರನ್ನು ನೂತನವಾಗಿ ನಿರ್ಮಿಸಿದ ಪುನರ್ವಸತಿ ಕೇಂದ್ರವಾದ ಹೊಸ ಕನ್ನಂಬಾಡಿ ಪ್ರದೇಶಕ್ಕೆ ಸ್ಥಳಾಂತರಿಸುತ್ತಾರೆ.ಆದರೆ ಯಾವ್ಯಾವುದೋ ಕಾರಣದಿಂದ 12ನೇ ಶತಮಾನದಲ್ಲಿ 50 ಎಕರೆ ಪ್ರದೇಶದಲ್ಲಿ ಹೊಯ್ಸಳ ದೊರೆಗಳು ನಿರ್ಮಿಸಿದ ವೇಣುಗೋಪಾಲಸ್ವಾಮಿ ಬೃಹತ್ ದೇವಾಲಯ ಸಂಕೀರ್ಣವನ್ನು ಸ್ಥಳಾಂತರಿಸಲಾಗಲಿಲ್ಲ.ಈ ದೇವಾಲಯ ಮೈಸೂರಿನ ಬಳಿ ಇರುವ ಸೋಮನಾಥಪುರದ ಬೃಹತ್ ದೇವಾಲಯವನ್ನೇ ಹೋಲುತ್ತಿತ್ತಂತೆ.1930ರಲ್ಲಿ ಕೆ.ಆರ್‌.ಎಸ್‌ ಆಣೆಕಟ್ಟು ಪೂರ್ಣಗೊಂಡಾಗ ವೇಣುಗೋಪಾಲಸ್ವಾಮಿ,ಕೆನ್ನೆಶ್ವರ ಹಾಗೂ ಕಾಳಮ್ಮ ದೇವಸ್ಥಾನಗಳನ್ನು ಹೊಂದಿದ್ದ ಬೃಹತ್ ದೇವಾಲಯಗಳ ಸಂಕೀರ್ಣ ಶಾಶ್ವತವಾಗಿ ಹಿನ್ನಿರಿನಲ್ಲಿ ಮುಳುಗಿ ಕಣ್ಮರೆಯಾಯಿತು.ಜೊತೆಗೆ ಶತ ಶತಮಾನಗಳಿಂದ ಸಾಗಿ ಬಂದಿದ್ದ ಕನ್ನಂಬಾಡಿ ಸುತ್ತಮುತ್ತಲಿನ ಶ್ರೇಷ್ಠ ಜನಪದ ನಾಗರಿಕತೆಯು ಶಾಶ್ವತವಾಗಿ ಕಣ್ಮರೆಯಾಯಿತು…

ನಾಳೆ ಮುಂದುವರಿಯುತ್ತದೆ…

 

-ಗವಿಸಿದ್ದಪ್ಪ ಕೊಪ್ಪಳ

Don`t copy text!