ಗುಹೇಶ್ವರನೆಂಬುದು ಮೀರಿದ ಘನವು

ಗುಹೇಶ್ವರನೆಂಬುದು ಮೀರಿದ ಘನವು

ವೇದವೆಂಬುದು ಓದಿನ ಮಾತು;
ಶಾಸ್ತ್ರವೆಂಬುದು ಸಂತೆಯ ಸುದ್ದಿ;
ಪುರಾಣವೆಂಬುದು ಪುಂಡರ ಗೋಷ್ಠಿ;
ತರ್ಕವೆಂಬುದು ತಗರ ಹೋರಟೆ;
ಭಕ್ತಿ ಎಂಬುದು ತೋರಿ ಉಂಬ ಲಾಭ;
ಗುಹೇಶ್ವರನೆಂಬುದು ಮೀರಿದ ಘನವು

– ಅಲ್ಲಮಪ್ರಭು

ವೇದವೆಂಬುದು ಓದಿನ ಮಾತು
ಸನಾತನ ಧರ್ಮದ ಮೂಲ ಬುನಾದಿ ವೇದ ಶಾಸ್ತ್ರ ಆಗಮ ಪುರಾಣ ಕಥೆಗಳು.
ಬದುಕಿನ ನಿಜ ಮುಕ್ತಿ ಕಾಯಕ ಮತ್ತು ದಾಸೋಹ ಸಿದ್ಧಾಂತಗಳ ಸಾಧನವಾಗಿ ಬಳಸಿರುವುದು ಹನ್ನೆರಡನೆಯ ಶತಮಾನದಲ್ಲಿ ನಾವು ಕಾಣುತ್ತೇವೆ.
ವೇದಗಳ ಕಾಲದಲ್ಲಿ ರಚಿತವಾದ ಕೃತಿಗಳು ಕೇವಲ ಓದಿನ ಮಾತಿಗೆ ಪಾಂಡಿತ್ಯ ಪ್ರದರ್ಶನ ಮಾಡುವ ಅರ್ಥವಿರದ ಸಾಹಿತ್ಯ ಎಂದು ಅಲ್ಲಮರು ಹೇಳುತ್ತಾರೆ.

ಶಾಸ್ತ್ರವೆಂಬುದು ಸಂತೆಯ ಸುದ್ದಿ;
ವೇದ ಶಾಸ್ತ್ರಆಗಮಗಳನ್ನು ಧಿಕ್ಕರಿಸಿದ ಶರಣರು ನಡೆ ನುಡಿ ಸಿದ್ಧಾಂತ ಮತ್ತು ಬದುಕಿನ ಮಾರ್ಗವಾಗಿ ಬದುಕಿ ಬಯಲಾದವರು.
ಅವರಿಗೆ ಶಾಸ್ತ್ರದ ಇತಿ ಮಿತಿಗಳ
ಅರಿವಿತ್ತು ಹೀಗಾಗಿ ಅಲ್ಲಮ ಶಾಸ್ತ್ರದ ಉಲ್ಲೇಖವನ್ನು ಅತ್ಯಂತ ಕಟುವಾಗಿ ಟೀಕಿಸುತ್ತಾರೆ. ಶಾಸ್ತ್ರ ಎಂಬುದು ಸಂತೆಯ ಸುದ್ಧಿ ಎಂದು ಹೇಳುತ್ತಾ. ಸಂತೆಯಲ್ಲಿ ಊಹಾಪೋಹಗಳು ಕುಶಲೋಪರಿ ಎಲ್ಲಾ ಬಗೆಯ ವ್ಯಾಪಾರ ವಹಿವಾಟು ಒಟ್ಟಾರೆ ಇದು ಶಬ್ದಗಳ ಸಂತೆ. ಇಲ್ಲಿ ಘನವಾದ ಚಿಂತನೆ ಇಲ್ಲ. ಸಂತೆ ಎನ್ನುವುದು ನಿರ್ಧಿಷ್ಟ ಕಾಲದ ಅವಧಿಯ ವ್ಯವಹಾರವೇ ಹೊರತು ಬದುಕಿನ ಸಾರ್ಥಕತೆಯ ಮಾರ್ಗ ಮತ್ತು ಸಾಧನವಲ್ಲ. ಇದು ಅಲ್ಲಮರ ಸ್ಪಷ್ಟ ಅಭಿಪ್ರಾಯ.

ತರ್ಕವೆಂಬುದು ತಗರ ಹೋರಟೆ

ತರ್ಕ ಆದಿ ಕಾಲದಿಂದಲೂ ಬಳಕೆಯಲ್ಲಿದ್ದ ಒಂದು ವೈದಿಕ ಸಂಸ್ಕೃತಿಯ ಶಾಸ್ತ್ರ. ಧರ್ಮ ಆಧ್ಯಾತ್ಮ ಮುಕ್ತಿ ಹೀಗೆ ಹಲವು ವಿಷಯಗಳ ಕುರಿತಾಗಿ ನಡೆಯುವ ಒಂದು ಚರ್ಚೆ ಸಂವಾದ. ಇದು ಎರಡು ಪಂಡಿತರ ಮಧ್ಯೆ ನಡೆಯುವ ಒಂದು ವಾದ . ಇಂತಹ ಸಂವಾದ ಚರ್ಚೆಯನ್ನು

ಅಲ್ಲಮರು ಎರಡು ಟಗರಿನ ಮಧ್ಯೆ ನಡೆಯುವ ಕಾಳಗ ಸ್ಪರ್ಧೆ ಎಂದು ವ್ಯಂಗ್ಯವಾಡಿದ್ದಾರೆ.

ಭಕ್ತಿ ಎಂಬುದು ತೋರಿ ಉಂಬ ಲಾಭ;
ದೇವರು ಧರ್ಮ ಮತ್ತು ಆಧ್ಯಾತ್ಮಿಕ ಸಾಧನೆ ಮಾಡಲು ಹೊರಟ ಭಕ್ತಿಯ ಹುಸಿತನವನ್ನು ಅಲ್ಲಮರು ಕಟುವಾಗಿ ಟೀಕಿಸುತ್ತಾರೆ.
ಭಕ್ತಿ ಎಂಬ ಬಾಹ್ಯ ಪ್ರದರ್ಶನ ಮಾಡುವದು ಅಲ್ಲ. ಭಕ್ತಿ ಅಂತರಂಗದ ಅನುಸಂಧಾನ.
ತೋರಿಕೆಯ ಆಡಂಬರದ ಪೂಜೆ ಭಕ್ತಿಯಿಂದ ಮುಂದೆ ಪ್ರಸಾದ ಉಣ್ಣುವ ಲಾಭಕ್ಕೆ ಮೀಸಲು.

ಗುಹೇಶ್ವರನೆಂಬುದು ಮೀರಿದ ಘನವು
ಮನುಷ್ಯನು ತಾನು ತನ್ನ ಮುಕ್ತಿಯ ಮಾರ್ಗ ಅರಿಯಲು ಭಕ್ತಿ ಪಥವನ್ನು ಅಳವಡಿಸಿಕೊಳ್ಳುತ್ತಾನೆ.
ವೇದ ಶಾಸ್ತ್ರ ತರ್ಕ ಮತ್ತು ಬಾಹ್ಯ ತೋರಿಸುವ ಭಕ್ತಿಯೂ ಕೂಡಾ ಅರ್ಥ ರಹಿತ ಹೊಟ್ಟೆ ಹೊಲಬಿಗೆ
ಮೀಸಲಾದ ಕ್ರಿಯೆಗಳು.
ಆದರೆ ಗುಹೇಶ್ವರ ಲಿಂಗದಲ್ಲಿ ಅರಿವ ಕಾಣುವ ಸಮಷ್ಟಿಯ ಜ್ಞಾನವು ನಿಜಕ್ಕೂ ಇವೆಲ್ಲವನ್ನೂ
ಮೀರಿದ ಘನವು. ತೀರಾ ಬಾರದ ಕಾಣಬಾರದ ಲಿಂಗವು ಅಸ್ಮಿತೆ ಘನ ಎಂಬರ್ಥದಲ್ಲಿ ಅಲ್ಲಮರು ಹೇಳುತ್ತಾರೆ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!