ಮನೆಯಲ್ಲಿ ಕಾಯುತ್ತಿರುತ್ತಾರೆ….
ನಿಮ್ಮ ಸುರಕ್ಷಿತ ಮರಳುವಿಕೆಗೆ (ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ)
ವಯಸ್ಸಾದ ಅಪ್ಪ ಅಮ್ಮ ಬೀದಿಯ ಕೊನೆಯವರೆಗೂ ತಮ್ಮ ದೃಷ್ಟಿಯನ್ನು ಹಾಯಿಸಿ ಕಾಯುತ್ತಿರುತ್ತಾರೆ ಮಕ್ಕಳಿಗಾಗಿ. ಮನೆಯಲ್ಲಿ ಹೆಂಡತಿ ಮಕ್ಕಳು ಕಾಯುತ್ತಿರುತ್ತಾರೆ ಕೆಲಸಕ್ಕೆ ಹೊರಹೋದ ಅಪ್ಪ ಮನೆಗೆ ಬರಲೆಂದು. ಶಾಲೆಗೆ ಹೋದ ಪುಟ್ಟ ಮಕ್ಕಳು ಸುರಕ್ಷಿತವಾಗಿ ಬರಲೆಂದು ತಾಯಿ ಕಾಯುತ್ತಾಳೆ. ಆಫೀಸಿಗೆ, ಶಾಲೆ ಕಾಲೇಜುಗಳಿಗೆ ಹೋದ ಹೆಣ್ಣು ಮಕ್ಕಳು ಮನೆಗೆ ಸುರಕ್ಷಿತವಾಗಿ ಬರಲಿ ಎಂದು ಕಾಯುತ್ತಿರುತ್ತಾರೆ ಮನೆಯ ಜನ. ಅವರೆಲ್ಲರ ಕಾಳಜಿಯ ವಿಷಯ ಒಂದೇ …..ಅದು ಸುರಕ್ಷತೆ.
ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೇಶ ನಮ್ಮದು. ದೈನಂದಿನ ಬದುಕಿನ ನಿರ್ವಹಣೆಗಾಗಿ ಜನರು ತಮ್ಮ ಮನೆಯನ್ನು ಬಿಟ್ಟು ಕೆಲಸಕ್ಕೆ ಹೋಗಲೇಬೇಕು. ಸಾಕಷ್ಟು ಉತ್ತಮ ರಸ್ತೆಗಳು, ಸುರಕ್ಷತೆಗಾಗಿ ಮಾಡಿರುವ ನಿಯಮಗಳು ವಾಹನಗಳಲ್ಲಿ ಸುರಕ್ಷತೆಗಾಗಿ ಅಳವಡಿಸಿರುವ ಹೊಸ ತಂತ್ರಜ್ಞಾನಗಳು ಹೀಗೆ ಹತ್ತು ಹಲವಾರು ಸುರಕ್ಷತಾ ವ್ಯವಸ್ಥೆಗಳು ಇರುವಾಗ್ಯೂ ಅಪಘಾತಗಳು ಸಂಭವಿಸುತ್ತಿವೆ. ಬಹುತೇಕ ಅಪಘಾತಗಳು ಸಂಭವಿಸುವುದು ಆಕಸ್ಮಿಕವಾಗಿದ್ದರೂ ಹಲವು ಬಾರಿ ರಸ್ತೆಯ ಗುಂಡಿಗಳಿಂದ, ವಾಹನ ಸವಾರರ ನಿರ್ಲಕ್ಷದಿಂದ, ಮಧ್ಯಪಾನ ಮಾಡಿ ಗಾಡಿಗಳನ್ನು ಚಲಾಯಿಸುವುದರಿಂದ, ನಿಯಮಗಳ ಪಾಲನೆ ಮಾಡದಿರುವುದರಿಂದ, ಕಾನೂನುಬಾಹಿರವಾಗಿ ಅಲ್ಲಲ್ಲಿ ಮಾಡಿರುವ ದುರಸ್ತಿ ಕಾರ್ಯಗಳಿಂದ ಹೀಗೆ ಹತ್ತು ಹಲವು ಕಾರಣಗಳನ್ನು ಹುಡುಕಬಹುದು. ಆದರೆ ಇದೆಲ್ಲಕ್ಕಿಂತಲೂ ಮುಖ್ಯವಾಗಿ ಅಪಘಾತಗಳಿಗೆ ಕಾರಣವಾಗಿರುವುದು ನಮ್ಮ ಅವಸರದ, ಆತುರದ ಸ್ವಭಾವ.
*ಅವಸರವೇ ಅಪಘಾತಕ್ಕೆ ಕಾರಣ* ಎಂಬ ಘೋಷವಾಕ್ಯವನ್ನು ನಾವೆಲ್ಲ ನೋಡಿರುತ್ತೇವೆ. ರಸ್ತೆಗೆ ಇಳಿಯುವ ಮುನ್ನವೇ ಅವಸರವನ್ನು ಕಟ್ಟಿಕೊಂಡು ವಾಹನಗಳ ಸಂದಿಗೊಂದಿಗಳಲ್ಲಿ ತೂರಿಕೊಂಡು ಗಮ್ಯವನ್ನು ತಲುಪುವ ಅವಸರದಲ್ಲಿರುವ ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ಅಪಘಾತಗಳಿಗೆ ಕಾರಣರಾಗುವುದರ ಜೊತೆಜೊತೆಗೆ ಈ ಅಪಘಾತಗಳ ಬಲಿಪಶುಗಳು ಕೂಡ ಅವರೇ ಆಗಿರುತ್ತಾರೆ. ಇಂತಹ ದ್ವಿಚಕ್ರ ವಾಹನ ಸವಾರಿ ಮಾಡುವ ಜನರಲ್ಲಿ… ಹೆಲ್ಮೆಟ್ ಧರಿಸಿದರೆ ಹೇರ್ ಸ್ಟೈಲ್ ಕೆಡುತ್ತದೆ ಎಂಬುದು ಮೊದಲ ಕಾರಣವಾದರೆ ಕೂದಲು ಉದುರುತ್ತದೆ, ಬೆವರು ಸುರಿಯುವುದು ಎಂಬುದು ಇನ್ನಿತರ ಕಾರಣಗಳಾಗಿರುತ್ತವೆ. ಬಹುತೇಕ ದ್ವಿಚಕ್ರ ವಾಹನಗಳ ಅಪಘಾತಗಳಲ್ಲಿ ವಾಹನ ಸವಾರರು ತಲೆಗೆ ಪೆಟ್ಟಾಗಿ ಸಾವು ಸಂಭವಿಸುತ್ತದೆ. ತಲೆಗೆ ಹಾಕುವ ಒಂದು ಶಿರಸ್ತ್ರಾಣ (ಹೆಲ್ಮೆಟ್)….. ನಮ್ಮ ಜೀವವನ್ನು ಉಳಿಸುತ್ತದೆ ಎಂಬುದನ್ನು ಮರೆಯುವ ಬೈಕ್ ಸವಾರರು ತಮ್ಮ ಪ್ರಾಣದ ಜೊತೆ ಜೊತೆಗೆ ತಮ್ಮ ಕುಟುಂಬದೆಡೆಗಿನ ತಮ್ಮ ಜವಾಬ್ದಾರಿಯನ್ನು ಕೂಡ ಮರೆತುಬಿಡುತ್ತಾರೆ.
ಇನ್ನು ಕಾರುಗಳು ಬಸ್ಸುಗಳು ಸುರಕ್ಷತಾ ನಿಯಮಗಳನ್ನು ಪಾಲಿಸದೆ ಹೋದಾಗ ದುರ್ಘಟನೆಗಳು ಸಂಭವಿಸುತ್ತವೆ. ಸಮಯಕ್ಕೆ ಸರಿಯಾಗಿ ವಾಹನಗಳನ್ನು ಸರ್ವಿಸ್ ಮಾಡಿಸುವುದು ಕೂಡ ಅಷ್ಟೇ ಅವಶ್ಯಕ. ವಾಹನಗಳ ಬ್ರೇಕ್, ಕ್ಲಚ್, ಇಂಜಿನ್ ಗಳ ಸಕ್ಷಮ ಕಾರ್ಯ ನಿರ್ವಹಣೆಗೆ ಅಗತ್ಯವಾಗಿ ಸರ್ವಿಸ್ ಮಾಡಿಸಲೇಬೇಕು.ದುಬಾರಿ ಎಂಬ ಭಾವದಿಂದ ಸರ್ವಿಸ್ ಮಾಡಿಸುವುದನ್ನು ಮುಂದೂಡುವುದರಿಂದ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ವಾಹನಗಳನ್ನು ಹೊಂದಿರುವವರು ‘ಇನ್ನೂ ಕೆಲ ದಿನಗಳು ನಡೆಯುತ್ತದೆ ಬಿಡು’ ಎಂಬ ಭಾವವನ್ನು ತೊಡೆದು ಹಾಕಬೇಕು. ಇದು ಕೇವಲ ಅವರೊಬ್ಬರ ಜೀವನ್ಮರಣದ ಪ್ರಶ್ನೆಯಲ್ಲ… ಆ ಗಾಡಿಯಲ್ಲಿ ಕುಳಿತವರೆಲ್ಲರ ಪ್ರಾಣಗಳು, ಅಗಾಡಿಗೆ ಎದುರಾಗಿ ಬರುವವರ ಪ್ರಾಣಗಳು ಕೂಡ ಸುರಕ್ಷಿತವಾಗಿ ಇರಬೇಕಲ್ಲವೇ??
ಇನ್ನು ದೊಡ್ಡ ದೊಡ್ಡ ಲಾರಿಗಳು, ಕ್ಯಾಂಟರ್ಗಳು ಯಮಸ್ವರೂಪಿ ವೇಗದಿಂದ ಚಲಿಸುತ್ತಿರುತ್ತವೆ. ರಸ್ತೆಯೇ ತಮ್ಮದು ಎಂಬ ಭಾವದಿಂದ ಅವುಗಳನ್ನು ಚಲಾಯಿಸುವವರು ಮುಂದುವರೆಯುತ್ತಾರೆ ಎಂಬುದು ನಿಜವಾಗಿಯೂ ಆತಂಕಕ್ಕೆ ಈಡು ಮಾಡುವ ವಿಷಯ.
ಇನ್ನು ಕೆಲ ಭಾರಿ ವಾಹನಗಳಲ್ಲಿ ಸರಕಾರದ ನಿಯಮಾವಳಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಅಗತ್ಯಕ್ಕಿಂತಲೂ ಹೆಚ್ಚಿನ ತೂಕದ ವಸ್ತುಗಳನ್ನು
ಹೇರಿಕೊಂಡು ಹೋಗುವಾಗ ಅವುಗಳ ಭಾರ ತಡೆಯದೆ ವಾಹನಗಳ ಟೈರು ಟ್ಯೂಬ್ಗಳು ಜೋರಾದ ಸ್ಫೋಟದೊಂದಿಗೆ ಸಿಡಿದು ಅಪಘಾತಗಳಿಗೆ ಕಾರಣವಾಗುತ್ತದೆ. ಇದರಿಂದ ಭಾರಿ ಪ್ರಮಾಣದ ಜೀವಹಾನಿ, ವಾಹನಕ್ಕೂ ಹಾನಿಯಾಗುತ್ತದೆ. ಅಪಘಾತದ ಪ್ರಯುಕ್ತ ಪೊಲೀಸು ಇಲಾಖೆ,ಸಾರಿಗೆ ಕಚೇರಿಗಳಿಗೆ ಎಡತಾಕುವ ಪ್ರಸಂಗಗಳು ಬರುತ್ತವೆ.
ಇನ್ನೂ ಹಲವು ವಾಹನಗಳಲ್ಲಿ, ಕೆಲವೊಮ್ಮೆ ದ್ವಿಚಕ್ರ ವಾಹನಗಳಲ್ಲಿ ಕೂಡ ವಾಹನದ ಗಾತ್ರ ಮೀರಿದ ಕಬ್ಬಿಣದ ಸಾಮಗ್ರಿಗಳನ್ನು, ಸಿಮೆಂಟ್ ಕಂಬಗಳನ್ನು ಹೇರಿಕೊಂಡು ಹೋಗುತ್ತಿರುತ್ತಾರೆ… ಅಂತಹ ಸಂದರ್ಭಗಳಲ್ಲಿ ಆಕಸ್ಮಿಕವಾಗಿ ಬ್ರೇಕ್ ಹಾಕಿದಾಗ ಹಿಂದಿನ ವಾಹನಗಳಿಗೆ ಅರಿವಾಗುವ ಮುನ್ನವೇ ಅವರು ಈ ವಾಹನಗಳಿಗೆ ಡಿಕ್ಕಿ ಹೊಡೆದು ಅನಾಹುತಗಳಿಗೆಡೆಯಾಗುತ್ತದೆ. ಕೊಂಚ ಮಾತ್ರದ ಅಜಾಗರೂಕತೆ ಸಾಕಷ್ಟು ಸಾವು ನೋವುಗಳಿಗೆ ಕಾರಣವಾಗುತ್ತದೆ.
ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು, ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವುದು, ಮೆಸೇಜ್ ಮಾಡಲು ಪ್ರಯತ್ನಿಸುವುದು, ಅಸುರಕ್ಷಿತ ಮಾದರಿಯಲ್ಲಿ ಓವರ್ ಟೇಕ್ ಮಾಡಲು ಪ್ರಯತ್ನಿಸುವುದು ಅಪಘಾತ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಇನ್ನೂ ಹಲವಾರು ಬಾರಿ ಪಾದಚಾರಿ ರಸ್ತೆಯನ್ನು ಬಳಸದೆ, ಟ್ರಾಫಿಕ್ ನಿಯಮಾವಳಿಗಳನ್ನು ಉಲ್ಲಂಘಿಸಿ ರಸ್ತೆ ದಾಟುವ ಸಮಯದಲ್ಲಿ ಅಪಘಾತಗಳು ಸಂಭವಿಸುತ್ತವೆ. ಫೋನ್ನಲ್ಲಿ ಮಾತನಾಡುತ್ತಲೋ ಮೆಸೇಜ್ ಮಾಡುತ್ತಲೋ ರಸ್ತೆಗಳನ್ನು ದಾಟುವ ಜನ ತಮ್ಮ ಪ್ರಾಣದ ಜೊತೆ ಜೊತೆಗೆ ಉಳಿದವರ ಪ್ರಾಣಗಳನ್ನು ಕೂಡ ಪಣಕ್ಕ ಇಡುತ್ತಾರೆ.
ಮೇಲ್ಕಂಡ ಎಲ್ಲ ವಿಷಯಗಳನ್ನು ಮನಗಂಡು ನಮ್ಮ ಸರ್ಕಾರವು ರಸ್ತೆ ಸುರಕ್ಷತಾ ಅಧಿಸೂಚನೆ 1988ರ ಅಡಿಯಲ್ಲಿ ಕೆಲ ನಿಯಮಗಳನ್ನು ಘೋಷಿಸಿದೆ. 1989 ರಲ್ಲಿ ಸಾರಿಗೆ ಇಲಾಖೆಗೆ ಹಲವಾರು ನಿಯಮಗಳನ್ನು ಒಳಗೊಂಡ ಸಾರಿಗೆ ಮೋಟಾರ್ ವಾಹನ ಕಾಯ್ದೆಯನ್ನು ಜಾರಿಗೆ ತಂದಿದೆ. ತನ್ಮೂಲಕ ರಸ್ತೆ ಸುರಕ್ಷಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲು ಆದೇಶ ನೀಡಿದೆ.
ಈ ಆದೇಶಗಳ ಪ್ರಕಾರ
* ರಸ್ತೆಯ ಎಡ ಭಾಗದಲ್ಲಿ ಮಾತ್ರ ಸಂಚರಿಸಬೇಕು. ಎದುರಿಗೆ ಬರುತ್ತಿರುವವರ ಕೂಡ ರಸ್ತೆಯ ಎಡ ಭಾಗದಲ್ಲಿ ಸಂಚರಿಸಬೇಕು.
* ಪಾದಚಾರಿ ಮಾರ್ಗದಲ್ಲಿ ಪಾದಚಾರಿಗಳಿಗೆ ಮಾತ್ರ ಅವಕಾಶ.
* ಸಿಗ್ನಲ್ಗಳಲ್ಲಿ ಬರುವ ಕೆಂಪು ಹಳದಿ ಮತ್ತು ಹಸಿರು ಬಣ್ಣಗಳ ಲೈಟ್ಗಳ ತೋರುವ ಸಂಜ್ನೆ ವಿವರಗಳನ್ನು ಅರಿತು ಅದರಂತೆ ನಡೆದುಕೊಳ್ಳಬೇಕು.
* ತಿರುವುಗಳಲ್ಲಿ ಹೊರಳುವಾಗ ವಾಹನದಲ್ಲಿ ಇಂಡಿಕೇಟರ್ಗಳನ್ನು ಬಳಸಬೇಕು. ಇಲ್ಲದೆ ಹೋದರೆ ಕೈಗಳ ಮೂಲಕ ಸಂಜ್ನೆ ಮಾಡಬೇಕು.
* ಮಧ್ಯಪಾನ ಮಾಡಿ ವಾಹನ ಚಲಾಯಿಸಬಾರದು.
* ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಶಿರಸ್ತ್ರಾಣವನ್ನು ಬಳಸಬೇಕು. ಎರಡಕ್ಕಿಂತ ಹೆಚ್ಚು ಜನರು ದ್ವಿಚಕ್ರ ವಾಹನದಲ್ಲಿ ಸಂಚರಿಸಲೇಬಾರದು. ಅಂತರಾಷ್ಟ್ರೀಯ ಗುಣಮಟ್ಟವಿರುವ ಹೆಲ್ಮೆಟ್ ಗಳನ್ನು ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು.
* ಪಾರ್ಕಿಂಗ್ ಮಾಡಲು ಅವಕಾಶ ಇಲ್ಲದೆಡೆ ವಾಹನಗಳನ್ನು ನಿಲ್ಲಿಸಬಾರದು.
* ಅನವಶ್ಯಕವಾಗಿ ಹಳದಿ ಬಣ್ಣದ ಗೆರೆಗಳನ್ನು ಮತ್ತು ಸ್ಟಾಪ್ ಲೈನ್ ಗಳನ್ನು ದಾಟಲು ಪ್ರಯತ್ನಿಸಬಾರದು.
*ಅನವಶ್ಯಕವಾಗಿ ಹಾರ್ನ್ ಬಳಸಬಾರದು. ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಬಾರದು. ಎರಡು ವಾಹನಗಳ ನಡುವೆ ಕನಿಷ್ಠ ಅಂತರವನ್ನು ಕಾಯ್ದುಕೊಳ್ಳಬೇಕು.
* ಪಾದಚಾರಿಗಳಿಗೆ, ವೃದ್ಧರಿಗೆ ಮಕ್ಕಳಿಗೆ ಮತ್ತು ಅಂಗವಿಕಲರಿಗೆ ನಿಗದಿಪಡಿಸಿರುವ ಪಾದಚಾರಿ ರಸ್ತೆ ದಾಟುವ ದಾರಿಗಳಲ್ಲಿ ಅವರಿಗೆ ಮೊದಲು ಅವಕಾಶ ಮಾಡಿಕೊಡಬೇಕು.
ನಾವು ನೀವೆಲ್ಲರೂ ಸುರಕ್ಷತೆಯ ನಿಯಮಾವಳಿಗಳನ್ನು ಪಾಲಿಸೋಣ. ಎಂತಹದೇ ಸಂದರ್ಭದಲ್ಲಿ ತಾಳ್ಮೆಯಿಂದ ವರ್ತಿಸೋಣ. ಅಪಘಾತದ ಸನ್ನಿವೇಶದಲ್ಲಿ ಸರ್ಕಾರಕ್ಕೆ ಮತ್ತು ವ್ಯವಸ್ಥೆಗೆ ನೀವೊಂದು ಸಂಖ್ಯೆ ಅಷ್ಟೇ ಆದರೆ ನಿಮ್ಮ ಮನೆಗೆ ನೀವೇ ಸರ್ವಸ್ವ…
ಆದ್ದರಿಂದ ಅನವಶ್ಯಕ ಅವಸರ ಅಪಘಾತಕ್ಕೆ ಕಾರಣ ಎಂಬ ಸತ್ಯವನ್ನು ಅರಿತು ಜಾಗರೂಕರಾಗಿ ವರ್ತಿಸಿ…. ನಿಮ್ಮ ಬರವಿಗಾಗಿ ಮನೆಯಲ್ಲಿ ಕಾಯುತ್ತಿರುತ್ತಾರೆ ಎಂಬುದನ್ನು ಮರೆಯದಿರಿ.
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
———————————————————