ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ
ಬಡತನಕ್ಕೆ ಉಂಬುವ ಚಿಂತೆ,
ಉಣಲಾದರೆ ಉಡುವ ಚಿಂತೆ,
ಉಡಲಾದರೆ ಇಡುವ ಚಿಂತೆ,
ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ,
ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ,
ಕೇಡಾದರೆ ಮರಣದ ಚಿಂತೆ,
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು.
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜ ಶರಣನು.”
ಶರಣ ಅಂಬಿಗರ ಚೌಡಯ್ಯ
12 ನೇ ಶತಮಾನದ ಅಪ್ಪ ಬಸವಣ್ಣನವರು ಮತ್ತು ಬಸವಾದಿ ಶರಣರು ಸಾಮಾಜಿಕ ಮತ್ತು ವೈಯಕ್ತಿಕ ಜೀವನದ ಸಂಕುಚಿತ ಮನಸ್ಥಿತಿ, ಚಿಂತೆ ಕಂತೆ ದೂರ ಮಾಡುವ ವೈಚಾರಿಕ ಕ್ರಾಂತಿ ಮಾಡಿದ್ದು ಶ್ಲಾಘನೀಯ
ಲೌಕಿಕ ಬದುಕಿನಲ್ಲಿ ಜೀವಿಸುತ್ತಿರುವ ನಾವು ಹಲವು ಬಗೆಯ ಭೌತಿಕ ವಸ್ತು, ಬೌತಿಕ ವಿಷಯ, ಬೌತಿಕ ವ್ಯಕ್ತಿ, ಇತ್ಯಾದಿಗಳ ಪಡೆಯುವಿಕೆಗಾಗಿ ಚಿಂತಿಸುತ್ತೇವೆ.
ಈ ಮನುಷ್ಯ ಜೀವನದ ಚಿಂತೆಗಳ ಸರಪಳಿ ಹೇಗೆ ಜೋಡಣೆಯಾಗಿರುತ್ತದೆ ಎನ್ನುವದನ್ನು ಶರಣ ಅಂಬಿಗರ ಚೌಡಯ್ಯನವರು ವಿಡಂಬಿಸಿದ್ದಾರೆ.
ಬಡತನಕ್ಕೆ ಉಂಬುವ ಚಿಂತೆ
ವ್ಯಕ್ತಿ ಮೊದಲು ಜೀವನದಲ್ಲಿರುವ ಈ ನಮ್ಮ ದೇಹ, ಅಂದರೆ ಉದರ ಪೋಷಣೆಗಾಗಿ ಉಣ್ಣುವ,ಹೊಟ್ಟೆ ತುಂಬಿಕೊಳ್ಳುವ ಚಿಂತೆ ಮಾಡುತ್ತಾನೆ,
ಹೊಟ್ಟೆ ಹಸಿದಾಗ ಮನುಷ್ಯ ಹೊಟ್ಟೆ ತುಂಬಾ ಊಟ ಸಿಕ್ಕರೆ ಸಾಕಪ್ಪ, ಬೇರೇನೂ ಬೇಕಿಲ್ಲ, ಅನ್ನುತ್ತಾನೆ.
ಆದರೆ ಹೊಟ್ಟೆ ತುಂಬಿದ ಮೇಲೆ ಮತ್ತೊಂದು ಚಿಂತೆ ಶುರುವಾಗುತ್ತದೆ.
ಉಣಲಾದರೆ ಉಡುವ ಚಿಂತೆ,
ಊಟ ಆದ ಮೇಲೆ ಉಡಲು ಧರಿಸುವ ಬಟ್ಟೆ – ಬರೆಯ ಚಿಂತೆ , ಹೊಟ್ಟೆ ತುಂಬಾ ಊಟ , ಮೈತುಂಬ ಬಟ್ಟೆ ಸಿಕ್ಕರೆ ಸಾಕಪ್ಪ ಬೇರೇನೂ ಬೇಕಿಲ್ಲ ಅನ್ನುತ್ತಾನೆ, ಉಡುಗೆ ತೊಡುಗೆ ಸಿಕ್ಕ ಮರುಕ್ಷಣವೇ ಮತ್ತೊಂದು ಚಿಂತೆ, ಶುರುವಾಗುತ್ತದೆ .
ಉಡಲಾದರೆ ಇಡುವ ಚಿಂತೆ,
ಹೊಟ್ಟೆ ತುಂಬಾ ಊಟ ಮೈತುಂಬ ಬಟ್ಟೆ ಸಿಕ್ಕರೆ ಸಾಕಪ್ಪ ಎನ್ನುವ ಭಾವ, ಮತ್ತೆ ಒಂದರಘಳಿಗೆಯಲ್ಲಿ
ನಾಳೆಗಳಿಗಾಗಿ ಸಂಗ್ರಹಿಸಿಡುವ ಧನ ,ಧಾನ್ಯ, ಕನಕ, ಸಂಪತ್ತು ಇತ್ಯಾದಿಗಳ ಕುರಿತಾಗಿ ಚಿಂತೆಗಳು ಕಾಡುತ್ತವೆ.
ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ,
ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ,
ಆನಂತರದಲ್ಲಿ ಸತಿ ಸುತರ ಸುಖ ಭೋಗ ಜೀವನಕ್ಕಾಗಿ ಚಿಂತೆ ಮಾಡುವಷ್ಟರಲ್ಲಿ, ನಡುನಡುವೆ ಬರಬಹುದಾದ ಕಷ್ಟ ನಷ್ಟ, ಕೆಡಕುಗಳಿಗಾಗಿ ಮನ ಚಿಂತಿಸುತ್ತದೆ.
ಇನ್ನೇನು ಎಲ್ಲವೂ ಸರಿಯಾಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ,
ಕೇಡಾದರೆ ಮರಣದ ಚಿಂತೆ,
ಕಾಲಯಮ ಬಂದು ನಿಲ್ಲುವಾಗ ಸಾವಿನ ಚಿಂತೆ ಕಾಡುತ್ತದೆ. ಇದೆಂಥ ವಿಚಿತ್ರ ಮಾನವನ ಚಿಂತೆಗಳ ಸರಪಳಿ.
ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು.
ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ
ನಮ್ಮ ಅಂಬಿಗರ ಚೌಡಯ್ಯ ನಿಜ ಶರಣನು
ಈ ರೀತಿ ಅಸ್ತಿರ ಪ್ರಪಂಚದ ಚಿಂತೆಗಳ ಸರಮಾಲೆಯನ್ನೇ ಕಟ್ಟಿಕೊಂಡು ಅವುಗಳಲ್ಲಿಯೇ ಮುಳುಗಿ ನರಳಾಡುತ್ತಾರೆ ,ಈ ಭವಿ ಮಾನವರು. ದೇಹಧಾರಿಗಳೆಲ್ಲರೂ,ದೇಹದ ಮೇಲೆ ಮೊಹ ಹೊಂದಿದ ಎಲ್ಲರಿಗೂ, ಮಾಯೆ ತನ್ನ ಮುಸುಕಿನ ಪರದೆ ಹಾಕದೆ ಬಿಡದು,ಈ ಬಗೆಯಾಗಿ ಮನುಜರೆಲ್ಲರೂ ಚಿಂತೆಗಳಲ್ಲಿಯೇ ಮುಳುಗಿದುದನ್ನು ಕಂಡ ಶರಣ ಅಂಬಿಗರ ಚೌಡಯ್ಯನವರು ಶಿವನ ಚಿಂತೆಯಲ್ಲಿ ಮುಳುಗಿದ ಒಬ್ಬರನ್ನೂ ಕಾಣೆನಲ್ಲ ಎಂದು ಕಳವಳ ಪಡುತ್ತಾರೆ.
ಈ ಅಂಗಕ್ಕೆ ಬಾಹ್ಯ ಸುಖಗಳೆಂದರೆ ತುಂಬಾ ಇಷ್ಟ, ಆದರೆ ಈ ಕ್ಷಣಭಂಗುರ ಸುಖ ಭೋಗ ಮುಂದೆ ಸಾಕಷ್ಟು ಸಂಕಷ್ಟಗಳನ್ನು ತರುತ್ತದೆ, ಎಂಬುದು ಇದಕ್ಕೆ ಗೊತ್ತಿಲ್ಲ. ಆ ಸುಖಗಳು ಕ್ಷಣಿಕವೆಂದು ಕೆಲವೊಮ್ಮೆ ಗೊತ್ತಿದ್ದರೂ ಅವುಗಳನ್ನು ಪಡೆಯಲು ಚಿಂತಿಸುತ್ತದೆ, ಹೋರಾಟಕ್ಕಿಳಿಯುತ್ತದೆ. ಒಂದು ಈಡೇರಿದರೆ ಮತ್ತೊಂದು, ಮುಗದೊಂದು, ಇನ್ನೊಂದು, ಹೀಗೆ ಅಂತ್ಯವೇ ಇಲ್ಲದಂತೆ ಸಾಗತೊಡಗುತ್ತದೆ. ಆದರೆ ಇದೇ ಅಂಗದಲ್ಲಿ , ದೇಹದಲ್ಲಿ
ನೊರೆವಾಲೊಳಗೆ ಕಂಪಿಲ್ಲದಂತಿರುವ ತುಪ್ಪದಂತೆ”, ಮರದೊಳಡಗಿದ ಮಂದಾಗ್ನಿಯಂತಿರುವ
ಪರಮಾತ್ಮನ ಸ್ವರೂಪದ ಬಗ್ಗೆ ಹಾಗೂ ಆತನನ್ನು ಸೇರುವ ಕುರಿತು ಚಿಂತಿಸಿದರೆ ಧ್ಯಾನಿಸಿದರೆ ಸಾಕು,
ಆಗ ಎಲ್ಲೆಲ್ಲೂ ಆನಂದವೇ ಆನಂದ. ಪರಮಾನಂದದ ಶಾಶ್ವತ ಸುಖದಲ್ಲಿ ತನು ಮನಗಳು ಒಂದಾದಾಗ ಈ ಅಂಗವು ಲಿಂಗಾಂಗ ಸಾಮರಸ್ಯವಾಗಿ ಜ್ಯೋತಿ ಮುಟ್ಟಿದ ಜ್ಯೋತಿಯೇ ಆಗಿ ಬಿಡುತ್ತೇವೆ. ಇಂತಹ ಪರಮಾರ್ಥ ಸಾಧನೆಯಲ್ಲಿರುವವನೇ ನಿಜ ಶರಣನೆಂದು, ಶರಣ ಅಂಬಿಗರ ಚೌಡಯ್ಯನವರು ಕರೆಯುತ್ತಾರೆ.
ನಾವೇಲ್ಲರೂ ಇಂತಹ ನಿಜಶರಣರಾಗೋಣ.
ಎಲ್ಲರಿಗೂ ಶರಣು ಶರಣಾರ್ಥಿಗಳು
ಸುಜಾತಾ ಪಾಟೀಲ ಸಂಖ*🙏