ಅಗಾಥಾ ಕ್ರಿಸ್ಟಿ…. ಜನಪ್ರಿಯ ಲೇಖಕಿ

ಅಗಾಥಾ ಕ್ರಿಸ್ಟಿ…. ಜನಪ್ರಿಯ ಲೇಖಕಿ

35ರ ಹರೆಯದ ಆ ಹೆಣ್ಣು ಮಗಳು ತನ್ನ ತಾಯಿಯ ಸಾವಿನಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ, ಅಷ್ಟರಲ್ಲಿಯೇ ಆಕೆಯೊಂದಿಗೆ ಮದುವೆಯಾಗಿ 12 ವರ್ಷಗಳ ಕಾಲ ಸಂಸಾರ ಮಾಡಿದ್ದ ಆಕೆಯ ಪತಿ ಇದ್ದಕ್ಕಿದ್ದಂತೆಯೇ ತಾನು ಮತ್ತೋರ್ವ ಯುವತಿಯನ್ನು ಪ್ರೀತಿಸುತ್ತಿದ್ದೇನೆ ಆಕೆಯನ್ನು ವಿವಾಹವಾಗಲು ನಿನ್ನೊಂದಿಗೆ ವಿಚ್ಛೇದನ ಅಗತ್ಯ ಎಂದು ಹೇಳಿದಾಗ ಆಕೆಯ ಕಾಲ ಕೆಳಗಿನ ನೆಲವೇ ಕುಸಿದಂತಾಯಿತು. ತೀವ್ರವಾದ ಖಿನ್ನತೆಯಿಂದ ಆಕೆ ಬಳಲಿದಳು. ಈ ಅವಳಿ ಆಘಾತಗಳನ್ನು ಸಹಿಸಿಕೊಳ್ಳಲು ಮತ್ತು ಜೀವನದಲ್ಲಿ ಮುಂದೆ ನಡೆಯಲು ಆಕೆಗೆ ಇದ್ದ ಏಕೈಕ ಆಸರೆ ಎಂದರೆ ಆಕೆಯ ಏಳು ವರ್ಷದ ಮಗಳು ಮಾತ್ರ. ಎಷ್ಟೋ ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಕೆಯ ಅಗಾಧ ಹಂಬಲ ಪುಟ್ಟ ಮಗಳನ್ನು ನೋಡಿದ ಕೂಡಲೇ ಕಾದ ಹೆಂಚಿಗೆ ನೀರೆರೆದಂತೆ ತಣ್ಣಗಾಗುತ್ತಿತ್ತು. ಬದುಕಿನಲ್ಲಿ ಮತ್ತೆ ಭರವಸೆಯನ್ನು ತುಂಬಿ ಚೇತನಾವಸ್ಥೆಗೆ ದೂಡುತ್ತಿತ್ತು.
ತನ್ನ ಅತ್ಯಂತ ನೋವಿನ ದಿನಗಳನ್ನು ಅಜ್ಞಾತವಾದ ಸ್ಥಳದಲ್ಲಿ ಕಳೆದ ಆಕೆ ಮುಂದೆ ಜಗತ್ತಿನ ಅತ್ಯಂತ ಜನಪ್ರಿಯ ಲೇಖಕಿಯಾಗಿ ಹೊರಹೊಮ್ಮುತ್ತಾಳೆ. ಆಕೆಯ ಕಾದಂಬರಿಗಳ 200 ಮಿಲಿಯನ್ಗೂ ಹೆಚ್ಚು ಪ್ರತಿಗಳು ಬಿಕಾರಿಯಾಗುತ್ತವೆ….. ಆಕೆಯೇ ಜಗತ್ತಿನ ಅತ್ಯಂತ ಜನಪ್ರಿಯ ಲೇಖಕಿ ಅಗಾಥಾ ಕ್ರಿಸ್ಟೀ.

ಅತ್ಯಂತ ಶ್ರೀಮಂತ ಕುಟುಂಬದಲ್ಲಿ 1890ರಲ್ಲಿ ಜನಿಸಿದ ಅಗಾಥಾ ಮಿಲ್ಲರ್ ತೀವ್ರ ಚಟುವಟಿಕೆಯ ಮಗುವಾಗಿದ್ದಳು. ಕೇವಲ 4ನೇ ವಯಸ್ಸಿನಲ್ಲಿ ಓದಲು ಕಲಿತ ಆಕೆ ಪುಸ್ತಕಗಳಲ್ಲಿ ಮುಳುಗಿ ಹೋಗುತ್ತಿದ್ದಳು. ಅತ್ಯಂತ ಆಸಕ್ತಿಯಿಂದ ಕಥೆ ಪುಸ್ತಕಗಳನ್ನು ಓದುತ್ತಿದ್ದ ಆಕೆ ಕ್ರಮೇಣ ತನ್ನ ಆಸಕ್ತಿಯ ಹರಹನ್ನು ವಿಸ್ತರಿಸಿಕೊಂಡಳು.

ಮುಂದೆ ತನ್ನ 22ನೇ ವಯಸ್ಸಿನಲ್ಲಿ ಆರ್ಚಿ ಕ್ರಿಸ್ಟಿ ಎಂಬ ಪೈಲೆಟ್ ಓರ್ವನನ್ನು ಭೇಟಿಯಾದ ಅಗಾಥಾ, ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪರಿಣಯವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ. 1914ರ ಕ್ರಿಸ್ಮಸ್ ಸಂದರ್ಭದಲ್ಲಿ ಇವರ ವಿವಾಹ ನೆರವೇರಿತು. ಮುಂದಿನ ನಾಲ್ಕು ವರ್ಷಗಳು ಅವರ ಜೀವನದ ಸಂತಸಮಯ ಕಾಲ.

ಆದರೆ ವಿಶ್ವ ಸಮರ ಕೆಲ ವರ್ಷಗಳ ಕಾಲ ಅವರನ್ನು ಬೇರ್ಪಡಿಸಿತು ಸುಮಾರು ನಾಲ್ಕು ವರ್ಷಗಳ ಕಾಲ ವಿಶ್ವಯುದ್ಧದ ಸಮಯದಲ್ಲಿ ಅವರಿಬ್ಬರು ತಂತಮ್ಮ ಕರ್ತವ್ಯಗಳಲ್ಲಿ ನಿರತರಾಗಿ ದೂರವಾಗಿದ್ದರು. ಆದರೆ ಅವರ ಪ್ರೀತಿ ಇನ್ನೂ ಹೆಚ್ಚುತ್ತ ಹೋಯಿತು. ಪ್ರಥಮ ವಿಶ್ವ ಯುದ್ಧದಲ್ಲಿ ದಾದಿಯಾಗಿ ಕಾರ್ಯನಿರ್ವಹಿಸಿದಳು ಅಗಾಥ. ನಂತರ 1919 ರಲ್ಲಿ ಲಂಡನ್ ನಲ್ಲಿ ನೆಲೆಸಿದ ದಂಪತಿಗಳಿಗೆ ರೋಜಾ ಲಿಂಡ್ ಎಂಬ ಹೆಣ್ಣು ಮಗುವಿನ ಜನನವಾಯಿತು. ಮಗಳನ್ನು ಬೆಳೆಸುತ್ತಲೆ ತನ್ನ ಓದಿನ ಪ್ರೀತಿಯನ್ನು ಬರಹಗಳನ್ನು ಬರೆಯುವ ಮೂಲಕ ತೋರಿದ ಅಗಾಥಾ ಹಲವಾರು ಪತ್ತೆದಾರಿ ಕಾದಂಬರಿಗಳನ್ನು ಬರೆದರು. ಆದರೆ ಆ ಕಾದಂಬರಿಗಳು ಓದುಗರನ್ನು ತಲುಪುವಲ್ಲಿ ಅ… ಅಷ್ಟೇನೂ ಉತ್ತಮ ಮಟ್ಟದ ಪ್ರತಿಕ್ರಿಯೆ ಆಕೆಗೆ ದೊರೆಯಲಿಲ್ಲ.

ಇದರಿಂದ ಅಷ್ಟೇನೂ ನಿರುತ್ಸಾಹಗೊಳ್ಳದ ಅಗಾಥ ಮಗಳ ಲಾಲನೆ ಪಾಲನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು. ನಂತರ ನಡೆದದ್ದು ಇತಿಹಾಸ. ತಾಯಿಯನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಪತಿ ಕೂಡ ಆಕೆಗೆ ವಿಚ್ಛೇದನ ನೀಡಿ ಆಕೆಯ ಬದುಕಿನಿಂದ ದೂರವಾದಾಗ ಮುಳುಗುತ್ತಿದ್ದ ಆಕೆಯ ಬದುಕಿನ ನಾವೆಗೆ ಚುಕ್ಕಾಣಿಯಂತೆ ಗೋಚರಿಸಿದ್ದು ಆಕೆಯ ಮಗಳು ರೋಸಲಿಂಡಾ ಮಾತ್ರ.

ಬದುಕಿನಲ್ಲಿ ಉಂಟಾದ ಎರಡೆರಡು ಆಘಾತಗಳ ನೋವಿನಿಂದ ಚೇತರಿಸಿಕೊಳ್ಳಲು ಮತ್ತೆ ಬರವಣಿಗೆಯನ್ನು ಪ್ರಾರಂಭಿಸಿದ ಅಗಾಥ ತನ್ನ ಉತ್ಸಾಹವನ್ನು ಹೆಚ್ಚಿಸಿಕೊಳ್ಳಲು ಓರಿಯಂಟ್ ಎಕ್ಸ್ಪ್ರೆಸ್ ನಲ್ಲಿ ಪ್ರವಾಸ ಕೈಗೊಂಡಳು. ಮತ್ತಷ್ಟು ಮಾಗಿದ ಅನುಭವಗಳನ್ನು ಹೊಂದಿದ ಆಕೆ ನವ ಚೇತನದಿಂದ ಮತ್ತೆ ಬರೆಯಲಾರಂಭಿಸಿದಳು.

ಒಂದರ ಹೀಂದರಂತೆ ಆಘಾತಗಳನ್ನು ಕಂಡ ಆಕೆ ಇನ್ನು ಮುಂದೆ ತನ್ನ ಜೀವನ ಸುಖಕರವಾಗಿರುವುದಿಲ್ಲ ಎಂದು ಕೊಂಡಿದ್ದಳು ಆದರೆ ಆಕೆಗೆ ಆಶ್ಚರ್ಯ ಎನಿಸುವಂತೆ ಆಕೆಯ ಬದುಕು ವಿಭಿನ್ನ ತಿರುವುಗಳನ್ನು ಕೊಂಡುಕೊಂಡಿತು. ಜಗತ್ತಿನ ಅತಿ ದೊಡ್ಡ ಬೆಸ್ಟ್ ಸೆಲ್ಲರ್ ಕಾದಂಬರಿಗಳನ್ನು ಬರೆದ ಕೀರ್ತಿ ಇಂದಿಗೂ ಅಗಾಥಾ ಪಾಲಿಗಿದೆ. ಅತ್ಯಂತ ದೀರ್ಘಾವಧಿಯ ನಾಟಕ ರಚನೆ ಆಕೆಯದು. ಆಕೆಯ ಸಮಯದಲ್ಲಿ ಅಘಾತ ಕ್ರಿಸ್ತಿಯ ಮಿಲಿಯಗಟ್ಟಲೆ ಓದುಗ ವರ್ಗ ಆಕೆಯ ಪುಸ್ತಕಗಳನ್ನು ಖರೀದಿಸಿ ಓದುತ್ತಿತ್ತು.

ಹೀಗೆ ಪ್ರವಾಸ ಬರಹ, ಓದು, ಮಗಳನ್ನು ಬೆಳೆಸುವುದರ ಮಧ್ಯೆ ಆಕೆ ಮಗ್ನಳಾಗಿದ್ದಾಗ 1930ರಲ್ಲಿಆಕೆಯ ಸ್ನೇಹಿತರೊಬ್ಬರು ಇರಾಕ್ ನಲ್ಲಿನ ಪುರಾತತ್ವ ಶಾಸ್ತ್ರದ ಅಗೆಯುವಿಕೆಯ ಕುರಿತು ಬರೆಯಲು ಸ್ಥಳಕ್ಕೆ ಆಹ್ವಾನಿಸಿದರು. ಅಲ್ಲಿ ಆಕೆ ತನಗಿಂತ 13 ವರ್ಷ ಕಿರಿಯರಾದ ಪುರಾತತ್ವಶಾಸ್ತ್ರಜ್ಞ ಮ್ಯಾಕ್ಸ ಮಲ್ಲೋವನ್ ಅವರನ್ನು ಭೇಟಿಯಾದಳು. ಅವರಿಬ್ಬರೂ ಪರಸ್ಪರ ಪ್ರೀತಿಯಲ್ಲಿ ಸಿಲುಕಿ ಮುಂದಿನ ಕೆಲವೇ ತಿಂಗಳುಗಳಲ್ಲಿ ವಿವಾಹವಾದರು. ಹೀಗೆ ಆರಂಭವಾದ ಅವರ ವೈವಾಹಿಕ ಬದುಕು ಅಗಾಥಾ ಅವರ ಮರಣದವರೆಗೆ…. ಸುಮಾರು 46 ವರ್ಷಗಳವರೆಗೆ ಅವರು ದಾಂಪತ್ಯ ಜೀವನ ನಡೆಸಿದರು.

ಅತ್ಯಂತ ಸುಖಕರ ದಾಂಪತ್ಯ ಜೀವನವನ್ನು ಮ್ಯಾಕ್ಸ್ ಕ್ರಿಸ್ಪಿಯೊಂದಿಗೆ ಹೊಂದಿದ್ದ ಆಕೆ ಪತಿಯ ಪ್ರೋತ್ಸಾಹದಿಂದ ಮತ್ತಷ್ಟು ಉತ್ತಮ ಕಾದಂಬರಿಗಳನ್ನು ರಚಿಸಿದಳು. ಆಕೆಯ ಕಾದಂಬರಿಗಳು ಧಾರವಾಹಿಗಳ ರೂಪದಲ್ಲಿ ಇಂಗ್ಲೆಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ನ ನಿಯತಕಾಲಿಕಗಳಲ್ಲಿ ಪ್ರಕಟಗೊಳ್ಳುತ್ತಿದ್ದವು.
ಆಕೆಯ ಅತ್ಯಂತ ಪ್ರಮುಖ ಕೃತಿಗಳು.. ದ ಮಿಸ್ಟರಿಯಸ್ ಅಫೇರ್ ಅಟ್ ಸ್ಟೈಲ್ಸ್, ಹರ್ಕ್ಯೂಲ್ ಪೈ ರೋಟ್, ದ ಮರ್ಡರ್ ಆಫ್ ರೋಜರ್ ಅಕ್ರೊಯ್ಡ್, ದ ಮೌಸ್ ಟ್ರಾಪ್ ಎಂಬ ನಾಟಕ ಮುಂತಾದವು.

ಅದರಲ್ಲೂ ಆಕೆಯ ನಾಟಕಗಳು ಸುದೀರ್ಘಕಾಲ ಪ್ರದರ್ಶನಗೊಂಡ ದಾಖಲೆಗಳನ್ನು ಹೊಂದಿವೆ. ಲಂಡನ್ ನ ಅಂಬಾಸಿಡರ್ ಥಿಯೇಟರ್ ನಲ್ಲಿ ಆಕೆಯ ದ ಮೌಸ್ ಟ್ರಾ ಪ್ ಎಂಬ ನಾಟಕ 8862ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತು. ಇತ್ತೀಚೆಗೆ 2019ರಲ್ಲಿ ಕರೋನ ದಾಳಿ ಇಡುವ ಮುನ್ನ 28200 ಪ್ರದರ್ಶನಗಳನ್ನು ಈ ನಾಟಕ ಹೊಂದಿದೆ.

ಇದಲ್ಲದೆ ಆಕೆಯ ಹಲವಾರು ಕೃತಿಗಳು ಚಲನಚಿತ್ರಗಳಾಗಿ ರೂಪುಗೊಂಡಿವೆ. ಅಂಡ್ ಡರ್ ವರ್ ನನ್ , ಮರ್ಡರ್ ಆನ್ ದಿ ಓರಿಯಂಟ್ ಎಕ್ಸ್ ಪ್ರೆಸ್, ಮಿರರ್ ಕ್ರಾಕ್ಡ್ ಮುಂತಾದ ಚಲನಚಿತ್ರಗಳು ಆಕೆಯ ಕಾದಂಬರಿಗಳನ್ನು ಆಧರಿಸಿ ತಯಾರಿಸಿದ ಕಥೆಗಳು. ಜನಪ್ರಿಯತೆಯ ತುತ್ತ ತುದಿಯಲ್ಲಿದ್ದಾಗಲೂ ಕೂಡ ಆಕೆ ಅತ್ಯಂತ ಸಂಕೋಚ ಸ್ವಭಾವದ ವ್ಯಕ್ತಿಯಾಗಿದ್ದಳು.

1968ರಲ್ಲಿ ಆಕೆಯ ಪತಿ ಮ್ಯಾಕ್ಸ್ ಅವರಿಗೆ ಬ್ರಿಟನ್ನ ನ ಪ್ರತಿಷ್ಠಿತ ನೈಟ್ ಪದವಿ ದೊರೆಯಿತು. ಇದಾಗಿ ಮೂರು ವರ್ಷಗಳ ನಂತರ 1971ರಲ್ಲಿ ಅಘಾತ ಅವರನ್ನು ಬ್ರಿಟಿಷ್ ಸಾಮ್ರಾಜ್ಯದ ಡೇಂ ಕಮಾಂಡರ್ ಆಫ್ ದಿ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ ಎಂದು ಗೌರವ ಪ್ರಧಾನ ಮಾಡಲಾಯಿತು.

ಅಗಾಥ ಮೇರಿ ಕ್ಲಾರಿಸ್ಸಾ ಮಿಲ್ಲರ್ ಕ್ರಿಸ್ಟಿ ಮಲ್ಲೋವನ್ ಎಂಬ ಅತ್ಯಂತ ಉದ್ದದ ಹೆಸರಿನ ಆಗಾಥಾ ಕ್ರಿಸ್ಟಿ 1976ರ ಜನವರಿ 12ರಂದು ತಮ್ಮ 85ನೇ ವಯಸ್ಸಿನಲ್ಲಿ ನಿಧನರಾದರು. ಆಕೆಯ ಪುಸ್ತಕಗಳ ಎರಡು ಬಿಲಿಯನ್ ಗಿಂತ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇತಿಹಾಸ ದಾಖಲಿಸಿದ ಅತ್ಯುತ್ತಮ ಪುಸ್ತಕಗಳ ಪಟ್ಟಿಯಲ್ಲಿ ಮೊದಲ ಹೆಸರು ಆಕೆಯ ಪುಸ್ತಕಗಳದ್ದೇ.

ಬದುಕು ತಂದೊಡ್ಡುವ ಸವಾಲುಗಳನ್ನು ಎದುರಿಸಿ ಸಾಗಿದರೆ ಸಾಧನೆಯ ಬದುಕು ನಮ್ಮದಾಗಬಹುದು ಎಂಬುದಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಅಗಾಥ ಕ್ರಿಸ್ಟಿ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!