ಕೊರಳ ಕೊಟ್ಟರು ಕುಣಿಕೆಗೆ
ತಾಯ ಕೊರಳ ಮುರಿಯ
ಬಂದ ಅರಿಯ ಕಂಡು
ರುಧಿರ ಕುದಿದು
ಕರುಳ ತರಿದು
ಸಿಡಿಲ ಮರಿಗಳು
ಕೊಟ್ಟರವರು ಕೊರಳ ಕುಣಿಕೆಗೆ…
ದಾಸ್ಯ ಶೃಂಖಲೆ ಬಿಡಿಸಿ
ಭಾರತಿಯ ಮಡಿಲ
ಪುತ್ರರು ವೀರ ಶೂರರು
ಎದೆಯ ಗುಂಡಿಗೆ
ಗುಂಡಿಗೊಡ್ಡಿ ಅಮರರಾಗಿ
ಕೊಟ್ಟರವರು ಕೊರಳ ಕುಣಿಕೆಗೆ…
ನೆಲದ ಮಣ್ಣ ಕಣ್ಣ ತೆರೆದು
ಕೈ ಬೀಸಿ ಕರೆಯಲು
ಗಡಿಯ ಮೆಟ್ಟಿ ಒಡಲ
ಬಗೆಯ ಬಂದವರ
ಎದೆಯ ಸೀಳುತ
ಕೊಟ್ಟರವರು ಕೊರಳ ಕುಣಿಕೆಗೆ…
ಅವ್ವನ ಕಾಲಿಗೆ ಬೇಡಿ ತೊಡಿಸಿ
ಆಳ ಬಂದವರ ತಡೆದು
ಒಡೆದು ಆಳುವ ನೀತಿ ಮುರಿದು
ತಮ್ಮ ಬಾಳ ಮುಡಿಪ ಮಾಡಿ
ವೀರಪುತ್ರರು ದೇಶಭಕ್ತರು
ಕೊಟ್ಟರವರು ಕೊರಳ ಕುಣಿಕೆಗೆ…
ತ್ಯಾಗ ಬಲಿದಾನ ಸತ್ಯ
ಅಹಿಂಸೆ ಸತ್ಯಾಗ್ರಹ
ಮಾರ್ಗದಲಿ ನಡೆದು
ಸ್ವಾತಂತ್ರ್ಯ ಜ್ಯೋತಿ
ಬೆಳಗಲೆಂದು ನಾಡಿಗಾಗಿ
ಕೊಟ್ಟರವರು ಕೊರಳ ಕುಣಿಕೆಗೆ…
ಇರುಳ ಕಳೆದು ಬೆಳಕು
ಹರಿದು ನಗಲು ಮೊಗವು
ತಾಯಿ ಭಾರತಿಯ ಮನವು
ಸ್ವಾತಂತ್ರ್ಯ ಮುತ್ತಿ ಮುಗಿಲು
ಹರಿಯೆ ಹರುಷ ಹೊನಲು
ಕೊಟ್ಟರವರು ಕೊರಳ ಕುಣಿಕೆಗೆ..
–ಇಂದಿರಾ ಮೋಟೆಬೆನ್ನೂರ. ಬೆಳಗಾವಿ