ಶಹೀದ ಏ ಆಝಮ್… ಉಧಂ ಸಿಂಗ್

ಶಹೀದ ಏ ಆಝಮ್… ಉಧಂ ಸಿಂಗ್

ಅದು 1919 ಏಪ್ರಿಲ್ 13ರ ದಿನ. ಸಿಖ್ ಜನರ ಪವಿತ್ರ ಬೈಸಾಕಿ ಹಬ್ಬದ ಆಚರಣೆಗಾಗಿ ಮತ್ತು ರೌಲತ್ ಕಾಯ್ದೆಯ ವಿರುದ್ಧ ಶಾಂತಿಯುತ ಪ್ರತಿಭಟನೆಗಾಗಿ ಆ ಪಾರ್ಕಿನಲ್ಲಿ ಸಾವಿರಾರು ಜನರು ಸೇರಿದ್ದರು. ಸಾಕಷ್ಟು ಜನ ಮಹಿಳೆಯರು, ಮಕ್ಕಳು ಕೂಡ ಅಲ್ಲಿದ್ದರು. ರೌಲಟ್ ಕಾಯ್ದೆಯ ವಿರುದ್ಧ ಹೋರಾಡುತ್ತಿದ್ದ ಕೆಲವು ಕ್ರಾಂತಿಕಾರಿ ಹೋರಾಟಗಾರರನ್ನು ಹತ್ತಿಕ್ಕುವ ಉದ್ದೇಶವನ್ನು ಹೊಂದಿದ್ದ ಅಂದಿನ ಬ್ರಿಟಿಷ್ ಆಡಳಿತದ ಪಂಜಾಬ್ ಪ್ರಾಂತದ ಜನರಲ್ ಆಗಿದ್ದ ಡ್ವೆಯರ್ ತನ್ನ ಶಸ್ತ್ರ ಸಜ್ಜಿತ ಸೇನೆಯೊಂದಿಗೆ ಅಲ್ಲಿಗೆ ಆಗಮಿಸಿದನು. ಆ ಮೈದಾನಕ್ಕೆ ಇದ್ದ ಒಂದೇ ಒಂದು ದ್ವಾರವನ್ನು ಮುಚ್ಚಿಸಿದ ಆತ ಸುಮಾರು 10 ನಿಮಿಷಗಳ ಕಾಲ ಗುಂಡಿನ ಸುರಿಮಳೆಗೈಯಲು ತನ್ನ ಸೈನಿಕರಿಗೆ ಆದೇಶ ನೀಡಿದ. ಕೆಲವೇ ಕ್ಷಣಗಳಲ್ಲಿ ಸಂಭ್ರಮದಿಂದ ಓಲಾಡುತ್ತಿದ್ದ ಆ ಭಾರಿ ಜನಸ್ತೋಮ ರಕ್ತದ ಓಕುಳಿಯಲ್ಲಿ ಮಿಂದೇಳಲಾರಂಭಿಸಿತು. ಹಲವಾರು ಸುತ್ತುಗಳ ಗುಂಡಿನ ಸುರಿಮಳೆಯಿಂದ ತಪ್ಪಿಸಿಕೊಳ್ಳಲು ಪ್ರಾಣ ಭಯದಿಂದ ಜನ ಸಿಕ್ಕ ಸಿಕ್ಕಲ್ಲಿ ಓಡಾಡತೊಡಗಿದರು. ಅಲ್ಲಿಯೇ ಇದ್ದ ಬಾವಿಗೆ ಕೂಡ ಕೆಲವು ಜನ ಹಾರಿದರು. ಗೋಡೆಯನ್ನು ಹಾರಲು ಪ್ರಯತ್ನಿಸಿ ಗುಂಡಿನ ದಾಳಿಗೆ ಸಿಲುಕಿ ಅಸು ನೀಗಿದರು. ರಕ್ತದ ಹೊಳೆಯೇ ಅಲ್ಲಿ ಹರಿದು ಎಲ್ಲಿ ನೋಡಿದರಲ್ಲಿ ಬಿದ್ದ ಹೆಣಗಳ ರಾಶಿ ಪರಿಸ್ಥಿತಿಯ ಭೀಕರತೆಯನ್ನು ಹೇಳುತ್ತಿತ್ತು. ಸಾವಿರಾರು ಜನ ಸತ್ತು ಬಿದ್ದಿದ್ದು ಇನ್ನೂ ಸಹಸ್ರಾರು ಜನರು ಗುಂಡಿನ ದಾಳಿಯ ನೋವಿನಿಂದ ಒದ್ದಾಡುತ್ತಿದ್ದರು.

ಕೆಲ ಗಂಟೆಗಳ ಹಿಂದೆ ಅಲ್ಲಿಯೇ ಬೈಸಾಕಿ ಹಬ್ಬದ ಆಚರಣೆಗಾಗಿ ಬಂದ ಜನರಿಗೆ ನೀರು ಕೊಡುತ್ತಿದ್ದ ಆ ಯುವಕ ತನ್ನ ಅನಾಥಾಶ್ರಮಕ್ಕೆ ಹೋಗಿ ಮರಳಿ ಬರುವಷ್ಟರಲ್ಲಿ ಈ ಹತ್ಯಾಕಾಂಡ ನಡೆದು ಹೋಗಿತ್ತು. ಗಾಯಗೊಂಡ, ಇನ್ನೂ ಉಸಿರು ನಿಂತು ಹೋಗಿರದ ಹಲವಾರು ಜನರನ್ನು ಒತ್ತುವ ಕೈಗಾಡಿಯಲ್ಲಿ ಹೊತ್ತೊಯ್ದು ಆಸ್ಪತ್ರೆಗೆ ಸೇರಿಸಿದನು ಆ ಯುವಕ. ರಕ್ತದ ಮಡುವಲ್ಲಿ ಬಿದ್ದ ಜನರ ಆಕ್ರ0ದನ, ನೋವು, ಚೀತ್ಕಾರಗಳು ಆತನ ಕಿವಿಯಲ್ಲಿ ಗು0ಯಿಗುಡುತ್ತ ಮುಂದಿನ ಹಲವಾರು ದಿನಗಳ ಕಾಲ ಆತನ ನಿದ್ದೆಯನ್ನು ಕಸಿದವು. ನಿದ್ದೆಯಲ್ಲೂ ಬೆಚ್ಚಿ ಬೀಳುವಂತಹ ಪರಿಸ್ಥಿತಿ ಆತನದಾಯಿತು.

ಜಲಿಯನ್ ವಾಲಾಬಾಗ್ ನ ಈ ಹತ್ಯಾಕಾಂಡ ಇಡೀ ವಿಶ್ವವನ್ನು ಎಚ್ಚರಿಸಿತು. ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುವಂತಹ ಈ ಕೃತ್ಯ ವಿಶ್ವದೆಲ್ಲೆಡೆ ಖಂಡನೆಗೆ ಒಳಗಾಯಿತು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಭಾರತದಲ್ಲಿ ಪ್ರತಿಭಟನೆಗಳು, ಹರತಾಳಗಳು ಆರಂಭವಾದವು. ಪರಿಣಾಮವಾಗಿ ಈ ಹತ್ಯಾಕಾಂಡದ ರೂವಾರಿಯಾದ ಜನರಲ್ ಡ್ವೆಯರ್ ನನ್ನು ಬ್ರಿಟಿಷ್ ಸರ್ಕಾರ ವಾಪಸ್ ಕರೆಸಿಕೊಂಡಿತು. ಬ್ರಿಟನ್ ನಲ್ಲಿ ಈ ಕುರಿತು ವಿಚಾರಣೆ ನಡೆಸಿದ ಸಮಯದಲ್ಲಿ ಜನರಲ್ ಡ್ವೆಯರ್ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಭಾರತೀಯರಿಗೆ ಬುದ್ಧಿ ಕಲಿಸಲು ತಾನು ಈ ಕ್ರಮವನ್ನು ಕೈಗೊಂಡದ್ದಾಗಿಯೂ ಈ ಕುರಿತು ತನಗೆ ಯಾವುದೇ ಪಶ್ಚಾತಾಪವಿಲ್ಲ ಎಂದು ಹೇಳಿಕೆ ನೀಡಿದನು. ಇದನ್ನು ಆತನ ವಿಚಾರಣಾ ಸಮಿತಿಯಲ್ಲಿದ್ದ ಇನ್ನೋರ್ವ ಅಧಿಕಾರಿ ಮೈಕಲ್ ಓ ಡ್ವೆಯರ್ ಎಂಬ ವ್ಯಕ್ತಿ ಸರಿಯಾದ ಕ್ರಮ ಎಂದು ಅನುಮೋದಿಸಿದ…. ಅಲ್ಲದೆ ಮಾರ್ಷಲ್ ಕಾನೂನನ್ನು ಹೇರಿದ್ದು ಕೂಡ ಆತನೇ. ಜನರಲ್ ಡಯರ್ ನ ಮೇಲೆ ಯಾವುದೇ ಶಿಸ್ತು ಕ್ರಮವನ್ನು ತೆಗೆದುಕೊಳ್ಳದೆ ಕೈಬಿಟ್ಟ ಮೈಕಲ್ ಓ ಡ್ವೆಯರ್ ನ ಮಾನವ ವಿರೋಧಿ ನಿಲುವಿಗೆ ಕುದ್ದು ಹೋದ ಆ ಯುವಕ ಮುಂದಿನ ತನ್ನ ಜೀವನದ 21 ವರ್ಷಗಳನ್ನು ಆತನನ್ನು ಆತನ ದೇಶದಲ್ಲಿಯೇ ಕೊಲ್ಲಲು ವಿನಿಯೋಗಿಸಿ ಯಶಸ್ವಿಯಾದನು….. ಆತನೇ ಮುಂದೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಶಹೀದ್ ಏ ಅಜಂ ಎಂದು ಗುರುತಿಸಲ್ಪಟ್ಟ ಸರ್ದಾರ್ ಉಧಮ್ ಸಿಂಗ್.

ಅಂದಿನ ಬ್ರಿಟಿಷ್ ಆಡಳಿತದ ಭಾರತದಲ್ಲಿ ಪಂಜಾಬ್ ನ ಸುನಂನಲ್ಲಿ 1899 ಡಿಸೆಂಬರ್ 26ರಂದು ಜನಿಸಿದ. ಚಿಕ್ಕಂದಿನಲ್ಲೇ ತಾಯಿ, ತಂದೆಯರನ್ನು ಕಳೆದುಕೊಂಡ ಆತ ಮತ್ತು ಆತನ ಸಹೋದರನನ್ನು ಆತನ ಚಿಕ್ಕಪ್ಪ ಸಾಕಲಾಗದೆ ಅನಾಥಾಶ್ರಮವೊಂದರಲ್ಲಿ ಭರ್ತಿ ಮಾಡಿದ. ಅದೇ ಅನಾಥಾಶ್ರಮದಲ್ಲಿ ಬೆಳೆದ ಆತ ಸ್ವತಂತ್ರ ಪೂರ್ವ ಭಾರತ ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನೋಡುತ್ತಲೇ ಬೆಳೆದ. ಸ್ವಾತಂತ್ರ್ಯ ಪಡೆಯಲು ಕ್ರಾಂತಿಯ ಮೂಲಕ ಸಾಧ್ಯವಿದೆ ಎಂಬ ಭಗತ್ ಸಿಂಗ್ ಕರೆಗೆ ಓಗೊಟ್ಟು ಹಿಂದುಸ್ತಾನ್ ಸೋಷಿಯಲಿಸ್ಟಿಕ್ ರಿಪಬ್ಲಿಕ್ ಅಸೋಸಿಯೇಷನ್(hsra) ಗೆ ಸೇರಿದ ಆ ಯುವಕ.
ಇದರ ಜೊತೆ ಜೊತೆಗೆ ಗದರ್ ಪಾರ್ಟಿಯನ್ನು ಸೇರಿದ ಉಧಂ ಸಿಂಗ್ ಭಾರತದ ಹೊರಗಿರುವ ಭಾರತೀಯರನ್ನು ಸ್ವಾತಂತ್ರ್ಯದ ಚಳುವಳಿಯಲ್ಲಿ ತಮ್ಮೊಂದಿಗೆ ಕೈಜೋಡಿಸಲು ಸಂಘಟಿಸಲಾರಂಭಿಸಿದರು. ಹೊರದೇಶದಲ್ಲಿ ಈ ಕಾರ್ಯವನ್ನು ತನಗೆ ಬರುತ್ತಿದ್ದ ಅಲ್ಪಸ್ವಲ್ಪ ಇಂಗ್ಲೀಷಿನಲ್ಲಿ ನಿರ್ವಹಿಸುತ್ತಿದ್ದ ಉಧಮ್ ರನ್ನು ಭಗತ್ ಸಿಂಗ್ 1927ರಲ್ಲಿ ಮರಳಿ ಭಾರತಕ್ಕೆ ಕರೆಸಿಕೊಂಡರು. ಸುಮಾರು 25ಕ್ಕೂ ಹೆಚ್ಚು ಜನ ಸಹಚರರು ಸಾಕಷ್ಟು ಮದ್ದು ಗುಂಡುಗಳನ್ನು ದಾಸ್ತಾನುಗಳನ್ನು ತನ್ನೊಂದಿಗೆ ಹೊತ್ತು ತಂದಿದ್ದ ಸರ್ದಾರ್ ಉಧಮ್ ಸಿಂಗರನ್ನು ಪೊಲೀಸರು ಬಂಧಿಸಿದರು. ಇದರ ಜೊತೆಗೆ ಕ್ರಾಂತಿಕಾರಿಗಳ ಮುಖವಾಣಿಯಾದ ಗದರ್-ದಿ ಗೂಂಜ್ ಪತ್ರಿಕೆಯ ಪ್ರತಿಗಳನ್ನು ವಶಪಡಿಸಿಕೊಂಡ ಪೊಲೀಸರು ಆತನನ್ನು ಕೋರ್ಟಿಗೆ ಹಾಜರುಪಡಿಸಿದರು. ಅಲ್ಲಿ ಆತನನ್ನು ವಿಚಾರಣೆಗೊಳಪಡಿಸಿ 5 ವರ್ಷಗಳ ಕಾಲ ಜೈಲು ಶಿಕ್ಷೆ ಗೆ ಗುರಿಪಡಿಸಿದರು. ಜೈಲಿನಲ್ಲಿಯೂ ಕೂಡ ಉಧಮ ಸಿಂಗ್ ಖೈದಿಗಳಿಗೆ ದೊರೆಯಬೇಕಾದ ಮೂಲಭೂತ ಸೌಲಭ್ಯಗಳನ್ನು ನೀಡದ ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿದರು. ಒತ್ತಾಯದಿಂದ ಇವರ ಬಾಯಿಗೆ ಪೈಪನ್ನು ತುರುಕಿ ಆಹಾರವನ್ನು ನೀಡಲು ಪ್ರಯತ್ನಿಸಿದ ಜೈಲು ಅಧಿಕಾರಿಗಳು ವಿಫಲರಾದರು. ಇವರ ಹೋರಾಟಕ್ಕೆ ಫಲ ದೊರೆತು ಕೈದಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಮುಂದೆ 1931 ರಲ್ಲಿ ಜೈಲಿನಿಂದ ಉಧಮ್ ಸಿಂಗ್ ಬಿಡುಗಡೆಗೊಂಡನು . ಈಗಾಗಲೇ ಅಲ್ಲಲ್ಲಿ ಕ್ರಾಂತಿಕಾರಿಗಳು ಹತ್ತಿಕ್ಕಲ್ಪಟ್ಟದ್ದರಿಂದ ತಮ್ಮ ಏಕಾಂಗಿ ಹೋರಾಟವನ್ನು ಅದರಲ್ಲೂ ಮೈಕಲ್ ಓ ಡ್ವೆಯರ್ನನ್ನು ಹತ್ಯೆ ಮಾಡುವ ಉದ್ದೇಶವನ್ನು ಹೊಂದಿದ್ದ ಆತ ತನ್ನ ಮನೆಯಿಂದ ವೇಷ ಮರೆಸಿಕೊಂಡು ಕಾಶ್ಮೀರಕ್ಕೆ ತೆರಳಿದನು. ಅಲ್ಲಿಂದ ಸೈಬೀರಿಯಾದ ಹಿಮಾಚ್ಛಾದಿತ ಪ್ರದೇಶಗಳಲ್ಲಿ ಸಾಗಿ 1934 ರಲ್ಲಿ ಲಂಡನ್ ತಲುಪಿದರು. ನಂತರ ಅಲ್ಲಿ ಭಾರತದ ಪರವಾಗಿದ್ದ ಭಾರತೀಯ ಜನರೊಂದಿಗೆ ಕಲೆತು ಮಾತನಾಡಿದರು. ಲಂಡನ್ ನಲ್ಲಿ ವಾಸವಾಗಿದ್ದ ಅಜ್ಞಾತ ಅನಿವಾಸಿ ಭಾರತೀಯ ಹೋರಾಟಗಾರರಿಂದ ದೊರೆಯುವ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ಇವರು ತಮ್ಮಂತೆಯೇ ಭಾರತದ ಸ್ವಾತಂತ್ರ್ಯಕ್ಕೆ ಪ್ರಯತ್ನಿಸುತ್ತಿದ್ದ ಓರ್ವ ವಿದೇಶಿ ಮಹಿಳೆಯ ಸಹಾಯ ಪಡೆದರು.

ಕೆಲ ದಿನಗಳ ಕಾಲ ಮೈಕೆಲ್ ಒ ಡ್ವಯರ್ ನ ವಿಶ್ವಾಸ ಗಳಿಸಿ ಆತನ ಮನೆಯಲ್ಲಿ ಕೆಲಸ ಮಾಡಿದ ಉಧಮ ಸಿಂಗ್ ತಾನು ಮಾಡಿದ ಕೃತ್ಯದ ಬಗ್ಗೆ ಸ್ವಲ್ಪವೂ ಪಶ್ಚಾತಾಪವಿಲ್ಲದ ಡ್ವೆಯರ ನನ್ನು ಹತ್ತಿರದಿಂದ ಗಮನಿಸಿದರು. ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ತನ್ನ ಸಹೋದ್ಯೋಗಿ ಜನರಲ್ ಓ ಹ್ಹೇಚ್ ಡ್ವೆಯರ್ ಮಾಡಿದ ಕೃತ್ಯವನ್ನು ತಾವು ಸಂಪೂರ್ಣವಾಗಿ ಸಹಮತ ವ್ಯಕ್ತಪಡಿಸಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡರು. ಆಗೆಲ್ಲ ತೀವ್ರವಾದ ರೊಚ್ಚಿನಿಂದ ಒಳಗೊಳಗೆ ಕುದಿಯುತ್ತಿದ್ದ ಉಧಮ್ ಸಿಂಗ್ ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದರು.

13 ಮಾರ್ಚ್ 1940ರ ಆ ದಿನ ಲಂಡನ್ ನ ಕ್ಯಾಕ್ಸಟನ ಹಾಲ್ನಲ್ಲಿ ಈಸ್ಟ್ ಇಂಡಿಯಾ ಅಸೋಸಿಯೇಷನ್ ಮತ್ತು ಸೆಂಟ್ರಲ್ ಏಷಿಯನ್ ಸೊಸೈಟಿ ಇವುಗಳ ಜಂಟಿ ಸಭೆಯಲ್ಲಿ ಮೈಕಲ್ ಮಾತನಾಡುವುದು ಖಚಿತವಾಗಿತ್ತು. ಈಗಾಗಲೇ ಡ್ವೆಯರ್ ನನ್ನು ಕೊಲ್ಲಲು ಪಬ್ ಒಂದರಲ್ಲಿ ಪಿಸ್ತೂಲನ್ನು ಖರೀದಿಸಿದ ಉಧಮ ಸಿಂಗ್ ಅದನ್ನು ಪುಸ್ತಕವೊಂದರಲ್ಲಿ ಅಡಕವಾಗುವಂತೆ ಪುಸ್ತಕದ ಪುಟಗಳನ್ನು ಸರಿಯಾಗಿ ಕೊರೆದು ಅಡಗಿಸಿ ತಮ್ಮ ಕೈಯಲ್ಲಿ ಹಿಡಿದು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾಯ ಮಾಡುತ್ತಿದ್ದ ಬೇರೊಬ್ಬ ಮಹಿಳೆಯ ಪಾಸ್ ಅನ್ನು ತೋರಿಸಿ ಹಾಲನ ಒಳಗೆ ಪ್ರವೇಶಿಸಿದರು. ಅಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದ ಮೈಕಲ್ ಓ ಡ್ವೆಯರ್ ಭಾಷಣ ಮುಗಿದು ಇನ್ನೇನು ವೇದಿಕೆಯಿಂದ ನಿರ್ಗಮಿಸುತ್ತಿರುವ ಹೊತ್ತಿನಲ್ಲಿ ತಮ್ಮ ಪುಸ್ತಕದಿಂದ ಹೊರತೆಗೆದ ಪಿಸ್ತೂಲಿನ ನಳಿಕೆಯನ್ನು ಡ್ವೆಯರ ನೆಡೆ ತಿರುಗಿಸಿದ ಉಧಮ ಆತನ ಮೇಲೆ ಗುಂಡು ಹಾರಿಸಿದನು. ಡ್ವೆಯರ್ ಅಲ್ಲಿಯೇ ಕೊನೆ ಉಸಿರೆಳೆದನು. ಕೂಡಲೇ ಪೊಲೀಸರು ಉಧಮ ಸಿಂಗನನ್ನು ಬಂಧಿಸಿದರು ಮುಂದೆ ಹಲವಾರು ತಿಂಗಳುಗಳ ವಿಚಾರಣೆಯ ಬಳಿಕ ಉಧಮ ಸಿಂಗನನ್ನು ಕೊಲೆ ಆರೋಪದ ಮೇಲೆ 1940ರ ಜುಲೈ ತಿಂಗಳಲ್ಲಿ ಲಂಡನ್ನಿನ ಪೆಂಟೋನ್ವಿಲ್ಲೆ ಜೈಲಿನಲ್ಲಿ ಗಲ್ಲಿಗೇರಿಸಿದರು.

ಹೀಗೆ ತನ್ನ ಜೀವನದ ತಾರುಣ್ಯದ ಅಖಂಡ 21 ವರ್ಷಗಳನ್ನು ಭಾರತ ಸ್ವಾತಂತ್ರ್ಯ ಹೋರಾಟದ ಗುರಿಗಾಗಿ ಮುಡುಪಿಟ್ಟ ಉಧಮ್ ಸಿಂಗ್ ದೇಶದ ಅಪ್ರತಿಮ ಹುತಾತ್ಮರಲ್ಲಿ ಒಬ್ಬರು. ಅವರ ಕೊನೆಯ ಹೇಳಿಕೆಯನ್ನು ಬ್ರಿಟನ್ ನ್ಯಾಯಾಲಯ 1995 ರಲ್ಲಿ ಅವರ ಶತಮಾನೋತ್ಸವದ ಸಮಯದಲ್ಲಿ ಭಾರತಕ್ಕೆ ನೀಡಿತು. ಮಾಯಾವತಿ ಸರ್ಕಾರವು ಅವರಿಗೆ ಶಹೀದ್ ಎ ಅಝಮ್ ಎಂಬ ಬಿರುದನ್ನು ನೀಡಿ ಗೌರವಿಸಿತು. ಉತ್ತರಾಖಂಡದ ಒಂದು ಜಿಲ್ಲೆಗೆ ಉಧಂ ಸಿಂಗ್ ನಗರ ಎಂದು ಹೆಸರಿಡುವ ಮೂಲಕ ಈ ಮಹಾನ್ ಹುತಾತ್ಮನಿಗೆ ಗೌರವ ಸಲ್ಲಿಸಲಾಯಿತು. 1974ರಲ್ಲಿ ಶಾಸಕರಾದ ಸಾಧು ಸಿಂಗ್ ಅವರ ಕೋರಿಕೆಯ ಮೇರೆಗೆ ಉಧಮ ಸಿಂಗ್ ಚಿತಾಭಸ್ಮವನ್ನು ಬ್ರಿಟನ್ ಸರ್ಕಾರ ಭಾರತ ಸರ್ಕಾರಕ್ಕೆ ಹಸ್ತಾಂತರಿಸಿದ್ದು ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ, ಜೈಲ್ ಸಿಂಗ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ಅವರು ಸ್ವೀಕರಿಸಿದರು. ಉಧಮ ಸಿಂಘ್ ರ ಚಿತಾಬಸ್ಮವನ್ನು ಏಳು ಭಾಗಗಳನ್ನಾಗಿ ಮಾಡಿ ಒಂದು ಭಾಗವನ್ನು ಅವರ ಹುಟ್ಟೂರಾದ ಸುನಮನಲ್ಲಿ ಅಂತ್ಯಕ್ರಿಯೆ ಮಾಡಲಾಗಿದ್ದು, ಒಂದು ಭಾಗವನ್ನು ಅದೇ ಊರಿನ ಆರ್ಟ್ಸ್ ಕಾಲೇಜಿನಲ್ಲಿ ಇರಿಸಲಾಗಿದೆ. ಮತ್ತೊಂದು ಭಾಗವನ್ನು ಜಲಿಯನ್ ವಾಲಾಬಾಗ್ನಲ್ಲಿ ಕಾಯ್ದಿರಿಸಲಾಗಿದ್ದು ಹರಿದ್ವಾರ, ಕಿರಾತ್ಪುರ್ ಸಾಹೇಬ್ ಮತ್ತು ರೌಜಾ ಶರೀಫ್ ಗಳಲ್ಲಿ ಇರಿಸಲಾಗಿದೆ. ಇಂದಿಗೂ ಕೂಡ ಉಧಮ ಸಿಂಗರ ಮೂರ್ತಿಯನ್ನು ಜಲಿಯನ್ ವಾಲಾ ಭಾಗ್ ನ ಮುಂಭಾಗದಲ್ಲಿ ಸ್ಥಾಪಿಸಲಾಗಿದೆ.

ಉಧಮ್ ಸಿಂಗ್ ಹೆಸರಿನಲ್ಲಿ ಹಿಂದಿಯಲ್ಲಿ ಎರಡು ಚಲನಚಿತ್ರಗಳು ತೆರೆಕಂಡಿವೆ. ತಾರುಣ್ಯದ ಹೊಸ್ತಿಲಿನಲ್ಲಿಯೇ ಸ್ವಾತಂತ್ರ ಹೋರಾಟದ ಕಿಡಿಯನ್ನು ಮೈಮನಗಳಲ್ಲಿ ತುಂಬಿಕೊಂಡು ಅದಕ್ಕಾಗಿ ತಮ್ಮ ತನು ಮನವನ್ನು ಧಾರೆ ಎರೆದ ಇಂತಹ ಸ್ವತಂತ್ರ ವೀರರ ಸಂತತಿ ಸಾವಿರವಾಗಲಿ ಎಂದು ಹಾರೈಸುವೆ

ವೀಣಾ ಹೇಮಂತಗೌಡ ಪಾಟೀಲ , ಮುಂಡರಗಿ

Don`t copy text!