ಅಗಲಿದ ಅಕ್ಷರದ ಗುರುವಿಗೆ ಅಂತಿಮ ನಮನಗಳು

ಅಗಲಿದ ಅಕ್ಷರದ ಗುರುವಿಗೆ ಅಂತಿಮ ನಮನಗಳು

ಕೇವಲ ಪ್ರಾಥಮಿಕ ಶಿಕ್ಷಣಕ್ಕೆ ಸಿಮಿತವಾಗಿದ್ದ ನಮ್ಮ ಗೌಡೂರು ಗ್ರಾಮಕ್ಕೆ 1998 ರಲ್ಲಿ ಫ್ರೌಢ ಶಾಲೆ ಆಗ ತಾನೇ ಮಂಜೂರು ಆಗಿತ್ತು.
ಹಳ್ಳಿಗಳ ಶಾಲೆಯ ಪರಿಸ್ಥಿತಿ ಪ್ರಾರಂಭಿಕ ಹಂತದಲ್ಲಿ ಅಷ್ಟಾಗಿ ಸುಧಾರಣೆ ಕಂಡಿದಿಲ್ಲ .ಕಾರಣ ಗಣನೀಯವಾಗಿ ಉನ್ನತ ಶಿಕ್ಷಣ ಪಡೆಯಲು ಓದುಗ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಶಿಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ನಮ್ಮೂರ ಫ್ರೌಢ ಶಾಲೆಗೆ 09-04-1999 ರಲ್ಲಿ ವರ್ಗವಾಗಿ ಬಂದ ಮುಖ್ಯೋಪಾಧ್ಯಾಯರಾದ ಮೋಹನ್ ರಾವ್ ಭಾಸುತಕರ್ ಸರ್ ರವರು ಸಹ ಶಿಕ್ಷಕರೊಂದಿಗೆ ಶಾಲೆಯ ಚಿತ್ರಣವನ್ನೇ ಬದಲಿಸಲು ಸಾಕಷ್ಟು ಶ್ರಮಿಸಿದ್ದರು. ಶಿಸ್ತಿನ ಸಿಪಾಯಿ ಎಂದೇ ಕರೆಯಲ್ಪಡುತ್ತಿದ್ದ ಇವರು ಗುಣಮಟ್ಟದ ಶಿಕ್ಷಣ ಮತ್ತು ಸಮಯಕ್ಕೆ ತುಂಬಾ ಮಹತ್ವ ಕೊಡುತ್ತಿದ್ದರು.

ಗ್ರಾಮದಿಂದ ಒಂದು ಕಿ.ಮೀ ಅಂತರದಲ್ಲಿ ಗುರುಗುಂಟಾ ಮುಖ್ಯ ರಸ್ತೆಗೆ ಹೊಂದಿಕೊಂಡ ಫ್ರೌಢಶಾಲೆ ಕೇವಲ ಕಟ್ಟಡಗಳಿಗೆ ಮಾತ್ರ ಸೀಮಿತವಾಗಿತ್ತು. ಬಿಸಿಲಿನಿಂದ ಬಣಗುಡುತಿದ್ದ ಶಾಲಾ ಆವರಣದಲ್ಲಿ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸೇರಿ ಹಲವು ಬಗೆಯ ಸಸಿಗಳನ್ನು ನೆಟ್ಟು ಪೋಷಿಸಿ ಬೆಳೆಸಿದ್ದರ ಪರಿಣಾಮ ಇಂದು ಅವರು ನೆಟ್ಟ ಸಸಿಗಳೇ ಹೆಮ್ಮರಗಳಾಗಿ ಬೆಳೆದು ಗಾಳಿ ಮತ್ತು ನೆರಳನ್ನು ಸುಸುತ್ತಾ ಉತ್ತಮ ಪರಿಸರವನ್ನು ಒದಗಿಸುತ್ತಿವೆ ಎಂದರೆ ತಪ್ಪಾಗಲಾರದು.

ವಿದ್ಯಾರ್ಥಿಗಳೆಲ್ಲರ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಮೋಹನ್ ರಾವ್ ಭಾಸುತ್ಕರ್ ರವರನ್ನು ಪ್ರೀತಿಯಿಂದ ಭಾಸುತ್ಕರ್ ಸರ್ ಎಂದೇ ವಿದ್ಯಾರ್ಥಿಗಳು ಕರೆಯುತ್ತಿದ್ದರು. ಇವರಿಂದ ಕಲಿತ ಅದೆಷ್ಟು ವಿದ್ಯಾರ್ಥಿಗಳು ಇಂದು ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಂಡು ಜೀವನ ಸಾಗಿಸುತ್ತಿದ್ದಾರೆ.

ಭಾಸುತ್ಕರ್ ಸರ್ ರವರು ದಿನಾಂಕ 30-08-2003 ರಂದು ಸೇವೆಯಿಂದ ನಿವೃತ್ತರಾದರು. ನಿವೃತ್ತರಾದ ನಂತರ ಅವರು ಪ್ರತಿ ವರ್ಷ ಕೂಡಾ 10 ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಹಣದಲ್ಲಿ 500 ರೂ . ಗಳನ್ನು ಗುರು ಕಾಣಿಕೆಯಾಗಿ ನೀಡುತ್ತಾ ಬಂದಿದ್ದರು. ಅವರ ಕೊಡುತ್ತಿದ್ದ 500 ಕಾಣಿಕೆಯನ್ನು ನಾನು ಸಹ ಪಡೆದಿದ್ದಕ್ಕೆ ಅವರಿಗೆ ಸದಾ ಕೃತಜ್ಞನಾಗಿದ್ದೇನೆ.

ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ ಭಾಸುತ್ಕರ್ ಸರ್ (ವಯಸ್ಸು78)ಗುರುಗಳು ಇಂದು ನಮ್ಮನ್ನಗಲಿದ್ದಾರೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗೌಡೂರು ಗ್ರಾಮದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರ ವೃಂದ ಹಾಗೂ ಗ್ರಾಮದ ಹಿರಿಯರು, ವಿದ್ಯಾರ್ಥಿಗಳ ಪರವಾಗಿ ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ.

ವೀರೇಶ ಅಂಗಡಿ ಗೌಡುರು

Don`t copy text!