ಬಸವಣ್ಣ ಒಬ್ಬ ನಾಸ್ತಿಕ -ಹೇಗೆ ?

ಬಸವಣ್ಣ ಒಬ್ಬ ನಾಸ್ತಿಕ -ಹೇಗೆ ?


ಹನ್ನೆರಡನೆಯ ಶತಮಾನವು ಭಾರತದ ಇತಿಹಾಸ ಪುಟದಲ್ಲಿನ ಒಂದು ಸುವರ್ಣ ಯುಗ . ಮಹಾತ್ಮಾ ಬುದ್ಧನ ನಂತರ 1700 ವರ್ಷಗಳ ಮೇಲೆ ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ವೈಚಾರಿಕ ಆಂದೋಲನವು ಬಸವಣ್ಣನವರ ನೇತೃತ್ವದಲ್ಲಿನಡೆಯಿತು.
ತಳ ಸಮುದಾಯದದವರ ,ಶೋಷಿತರ ದಮನಿತರ ಅಸ್ಪ್ರಶ್ಯರ ಕಾರ್ಮಿಕರ ಮಹಿಳೆಯರ ಬಡವರ ಪರ ಗಟ್ಟಿ ಧ್ವನಿ ಮೊಳಗ ಹತ್ತಿತು ವರ್ಗ ಜೇಷ್ಠತೆ ವರ್ಣ ಶ್ರೇಷ್ಠತೆ ತೊಡೆದು ಹಾಕಿ ಜನ ಸಾಮಾನ್ಯರ ಅಭಿವ್ಯಕ್ತಿಗೆ ಶಕ್ತಿ ಬಂತು .ವಚನಗಳು ಬಂಡಾಯದ ಕ್ರಾಂತಿ ಕಿಡಿಗಳಾದವು . ಪರಿಣಾಮವಾಗಿ ಮಾದಾರ ಚೆನ್ನಯ್ಯ ಡೋಹಾರ ಕಕ್ಕಯ್ಯ ಹರಳಯ್ಯ ದಾಸಯ್ಯ ಹೀಗೆ ಬಹುತೇಕ ಶೋಷಿತ ಸಮಾಜವು ಇಂತಹ ಅಭೂತಪೂರ್ವ ಆಂದೋಲನದಲ್ಲಿ ಪಾಲ್ಗೊಂಡಿತು.
ಶರಣರ ಆಶಯಗಳಿಗೆ ಸಂಪೂರ್ಣ ಭಿನ್ನವಾಗಿ ಅದೇ ಸಿದ್ದಾಂತವನ್ನು ಬೋಧಿಸುವ ಮಠೀಯ ವ್ಯವಸ್ಥೆಗಳು ವಾಣಿಜ್ಯ ಮಳಿಗೆಗಳಾಗಿವೆ. ಶಿಕ್ಷಣ ಆರೋಗ್ಯದ ವ್ಯಾಪಾರ ಕೇಂದ್ರಗಳು. ಬಹುತೇಕ ಮಠಗಳು ವೈದಿಕತೆಯ ನೆರಳಲ್ಲಿ ಬದುಕುತ್ತಿವೆ.

ಶ್ರೇಣೀಕೃತ ಸಮಾಜ ಮತ್ತೆ ತೀವ್ರವಾಗಿ ಬೆಳೆದು ನಿಂತಿದೆ .ಇದು ಕೇವಲ ಆಚಾರಕೆ ಭಾಷಣಕ್ಕೆ ಲೇಖನಕ್ಕೆ ಮೀಸಲಾದ ಸಿದ್ಧಾಂತವೆನಿಸಿದೆ. ಶರಣರ ಆಶಯಗಳು ತುಂಬಾ ಪ್ರಗತಿಪರ ಮಾನವ ಕೇಂದ್ರಿತ ಸಕಲ ಜೀವ ಜಾಲಗಳಿಗೆ ಒಳಿತನ್ನು ಬಯಸುವ ಜಗತ್ತಿನ ಸರ್ವ ಶ್ರೇಷ್ಠ ವೈಚಾರಿಕ ಸಾರ್ವಕಾಲಿಕ ಸಿದ್ಧಾಂತವೆನಿಸಿದೆ. ಗುರು ವ್ಯಕ್ತಿಯಲ್ಲ ಲಿಂಗ ವಸ್ತು ಅಲ್ಲ ಮತ್ತು ಜಂಗಮ ಜಾತಿ ವ್ಯವಸ್ಥೆಯಲ್ಲ . ಇಂತಹ ವೈಚಾರಿಕ ಸತ್ಯದ ನಿಲುವುಗಳನ್ನು ಜಗತ್ತಿಗೆ ಪರಿಚಯಿಸುವ ಇನ್ನೊಂದು ಕ್ರಾಂತಿ ಈಗ ಅಗತ್ಯವೆನಿಸುತ್ತಿದೆ.
ಬಸವಣ್ಣನವರ ಸಂಪೂರ್ಣ ಕ್ರಾಂತಿಯ ಆಶಯಗಳನ್ನು ಶರಣರ ಬದುಕಿನ ಧೋರಣೆಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.

ಬಸವಣ್ಣ ಸಾಂಪ್ರದಾಯಕ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಅಲ್ಲಿನ ಮೌಢ್ಯವನ್ನೇ ತಿರಸ್ಕರಿಸಿ ಮನೆ ಬಿಟ್ಟು ಹೊರಟವನು. ಬಸವಣ್ಣ ಆಸ್ತಿಕನೇ ನಾಸ್ತಿಕನೇ ಎಂಬುದು ಸ್ಪಷ್ಟವಾಗಿಲ್ಲ .
ದೇವರು ದಾವೀಶಕ್ತಿ ಸಂಸ್ಕಾರ ಆಚರಣೆಗಳಲ್ಲಿ ಬಸವಣ್ಣನವರಿಗೆ ಆಸಕ್ತಿ ಇದ್ದಿತ್ತೆಂದರೆ ಬಸವಣ್ಣ ಸನಾತನ ವ್ಯವಸ್ಥೆಯಲ್ಲಿಯೇ ಮುಂದುವರೆಯುತ್ತಿದ್ದನು. ಕಾರಣ ಸನಾತನ ವೈದಿಕ ವ್ಯವಸ್ಥೆಯಲ್ಲಿ ದೇವರ ಪರಿಕಲ್ಪನೆ ನಂಬಲು ಇರುವ ವೈವಿಧ್ಯ ಪುರಾಣ ಕಥೆ ಮುಂತಾದ ಅನೇಕ ಪೌರಾಣಿಕ ಕಾಲ್ಪನಿಕ ಸಾಮಗ್ರಿಗಳು ಮತ್ತೆ ಬೇರೆ ಕಡೆಗೆ ಸಿಗುವದಿಲ್ಲ. ಮಾನಸಿಕ ಬೌದ್ಧಿಕ ಗುಲಾಮಿಗಿರಿಯನ್ನು ಪ್ರೋತ್ಸಾಹಿಸುವ ವ್ಯವಸ್ಥೆಯಾಗಿದೆ . ಸತಿ ಪದ್ಧತಿ ಪ್ರಾಣಿ ಹತ್ಯೆ
ಬಳಿ ಮುಂತಾದ ಇಂತಹ ಅತ್ಯಂತ ಕ್ರೂರ ಆಚರಣೆ ಗಳನ್ನೂ ಧಿಕ್ಕರಿಸಿ ವಿರೋಧಿಸಿ ಬಾಗೇವಾಡಿ ಅಗ್ರಹಾರವನ್ನು ತೊರೆದದ್ದು ಬಸವಣ್ಣನವರ ಮೊದಲ ನಾಸ್ತಿಕ ಗುಣವನ್ನು ಎತ್ತಿ ತೋರುತ್ತದೆ.

ಬಸವಣ್ಣ ತನಗೆ ಉಪನಯನ ಮಾಡಲು ಬಂದ ಪುರೋಹಿತರಿಗೆ ತನಗಿಂತ ಹಿರಿಯ ಅಕ್ಕ ನಾಗಮ್ಮನಿಗೆ ಏಕೆ ಉಪನಯನ ಮಾಡುವದಿಲ್ಲ ಎಂದು ಕೇಳಿ ಇಡೀ ವೈದಿಕ ವ್ಯವಸ್ಥೆಗೆ ಸವಾಲು ಹಾಕಿದನು ಬಸವಣ್ಣ . ಇದು ಆತನಲ್ಲಿರುವ ಅತ್ಯಂತ ಪ್ರಖರವಾದ ಪ್ರಗತಿಪರ ಕಾಳಜಿಯನ್ನು ಎತ್ತಿ ತೋರುವದರ ಜೊತೆಗೆ ಬಸವಣ್ಣನವರ ನಾಸ್ತಿಕ ಗುಣಧರ್ಮವನ್ನು ಅಭಿವ್ಯಕ್ತಗೊಳಿಸುತ್ತದೆ. ವೈದಿಕ ಬ್ರಾಹ್ಮಣ್ಯ ಸನಾತನ ವ್ಯವಸ್ಥೆಯ ಗಟ್ಟಿ ಮುಟ್ಟಾದ ಸಂಕೇತವಾದ ಜನಿವಾರವನ್ನು ಕಿತ್ತೆಸೆದ ಬಸವಣ್ಣ ನೈಜ ಅರ್ಥದಲ್ಲಿ ಒಬ್ಬ ನಾಸ್ತಿಕನೆಂದರೆ ತಪ್ಪಿಲ್ಲ.
ಅಂದಿನ ವೈದಿಕ ವ್ಯವಸ್ಥೆಯ ಅರ್ಚನೆ ಪೂಜೆ ಬಹುದೇವೋಪಾಸನೆ ಯಜ್ಞ ಯಾಗಾದಿ ಹವನ ಹೋಮ ಮುಂತಾದ ಕರ್ಮಠ ಆಚರಣೆಗಳನ್ನು ವಿರೋಧಿಸುವುದಲ್ಲದೆ. ಅವುಗಳನ್ನು ಕಠಿಣವಾಗಿ ಟೀಕಿಸಿ ವಚನಗಳಲ್ಲಿ ಅಭಿವ್ಯಕ್ತಿಗೊಳಿಸಿರುವ ಬಸವಣ್ಣಅದು ಹೇಗೆ ಆಸ್ತಿಕನಾಗುತ್ತಾನೆ ?
ಶಿವ ವಿಷ್ಣು ಬ್ರಹ್ಮ ಕಾಳಿ ದುರ್ಗೆ ಮುಂತಾದ ತೆತ್ತೀಸ ಕೋಟಿ ದೇವರ ಅಸ್ತಿತ್ವವನ್ನು ಬಸವಣ್ಣ ಸಾರಾಸಗಟಾಗಿ ತಳ್ಳಿ ಹಾಕಿರುವಾಗ ಬಸವಣ್ಣ ಅದು ಹೇಗೆ ಆಸ್ತಿಕನಾಗುತ್ತಾನೆ ?

ವೇದಕ್ಕೆ ಒರೆ ಕಟ್ಟುವೆ ಶಾಸ್ತ್ರಕ್ಕೆ ನಿಗಳನಿಕ್ಕುವೆ ಎಂದು ಹೇಳುತ್ತಾ ತಾನು ಮಾದಾರ ಚೆನ್ನಯ್ಯನ ಮನೆಯಲಿ ಉಂಡ ಕಾರಣ ವೇದ ನಡುನಡುಗಿತ್ತು ಎಂದು ಹೇಳಿರುವ ಬಸವಣ್ಣ ವೇದ ಆಗಮ ಶಾಸ್ತ್ರ ಪುರಾಣ ಮುಂತಾದ ಶಬ್ದಕ್ಕೆ ನಿಲ್ಲುವ ಸಂಕರವನ್ನು ವಿರೋಧಿಸಿದ ಬಸವಣ್ಣ ಆಸ್ತಿಕನಾಗಬಲ್ಲನೆ ?

ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸಿ ದೇಹಾಲಯ ಸಂಸ್ಕೃತಿಗೆ ಆದ್ಯತೆ ನೀಡಿ ಶ್ರಮ ಸಂಸ್ಕಾರದ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ ಬಸವಣ್ಣ ಅದು ಹೇಗೆ ಆಸ್ತಿಕನಾಗಬಲ್ಲನು.

ವೈದಿಕ ವ್ಯವಸ್ಥೆಯ ಪಾಣಿನಿಯ ಪ್ರಕಾರ ವೇದ ಆಗಮ ಶಾಸ್ತ್ರ ಪುರಾಣವನ್ನು ಒಪ್ಪದವನು ಉಪನಯನ ಬಹುದೇವೋಪಾಸನೆ ತಿರಸ್ಕರಿಸುವವನು ಯಜ್ಞ ಯಾಗಾದಿಯಲ್ಲಿ ಶೃದ್ಧೆ ಇರದವನು ನಾಸ್ತಿಕ ಎಂದು ಉಲ್ಲೇಖಿಸುತ್ತಾರೆ. ಇವೆಲ್ಲವನ್ನೂ ಬಸವಣ್ಣ ಮಾಡಿದಾಗ ಬಸವಣ್ಣ ಹೇಗೆ ಆಸ್ತಿಕನಾಗಬಲ್ಲನು ಅವನು ನಾಸ್ತಿಕನೇ. ಬಸವಣ್ಣ ಮಾಡಿದ್ದು ಧಾರ್ಮಿಕ ಹಕ್ಕಿನ ಕ್ರಾಂತಿ ಎನ್ನುವದಕ್ಕಿಂತಲೂ ಅದು ಶ್ರಮ ಸಂಸ್ಕೃತಿಯ ಕಾರ್ಮಿಕ ಕ್ರಾಂತಿ ಎಂದರೆ ಹೆಚ್ಚು ಸೂಕ್ತ. ಅದನ್ನು ಬಸವಣ್ಣ ಜಂಗಮ ಎಂದು ಕರೆದಿರುವನು.ಸೃಷ್ಟಿ ಸಮಷ್ಟಿ ಪ್ರಕೃತಿ ಪರಿಸರದ ಸಕಲ ಜೀವಿಗಳನ್ನು ಪ್ರೀತಿಸುವ ಪ್ರೀತಿ ಮಮತೆಗೆ ಬಸವಣ್ಣ ಭಕ್ತಿ ಎಂದು ಕರೆದನು .

ಹಾಗಿದ್ದರೆ ಇಷ್ಟಲಿಂಗದ ಪೂಜೆ ಯೋಗ್ಯವೇ

ಎರೆದರೆ ನೆನೆಯದು ಮರೆದರೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು ಕೂಡಲ ಸಂಗಮದೇವಾ .

ಇಷ್ಟಲಿಂಗವು ಬಸವಣ್ಣನವರ ಆವಿಷ್ಕಾರದ ಪ್ರತಿಫಲವಾಗಿದೆ . ಲಿಂಗವು ನಿರುಪಾದಿಕ ಲಿಂಗ , ಯೋಗದ ಪರಿಕ್ರಮಕ್ಕೆ ಲಿಂಗ ಒಂದು ಸಾಧನ ಅರಿವಿನ ಕುರುಹು ಅಷ್ಟೇ ಅದರ ಮೇಲೆ ನೀರು ಹಾಕಿದರೆ ಅದು ನೆನೆಯುವದಿಲ್ಲ ಮರೆತರೆ ಬಾಡುವದಿಲ್ಲ ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ ಎಂದು ಹೇಳುವ ಜೊತೆಗೆ ಜಂಗಮ ಪ್ರೇಮಿ ತಾನು ಎಂದಿದ್ದಾನೆ .

ಲಿಂಗವ ಪೂಜಿಸಿ ಫಲವೇನು
ಸಮರತಿ ಸಮಕಳೆ ಸಮ ಸುಖವನ್ನರಿಯದನ್ನಕ್ಕ
ಕೂಡಲ ಸಂಗಮ
ಲಿಂಗವ ಪೂಜಿಸಿ ನದಿಯೊಳಗೆ ನದಿ ಬೆರೆಸಿದಂತೆ

ಇಲ್ಲಿಯೂ ಕೂಡ ಬಸವಣ್ಣ ತನ್ನ ಶ್ರಮದ ಮಾನವ ವಿಕಾಸದ ಬಗ್ಗೆ ಅತೀವ ಕಾಳಜಿಯನ್ನು ತೋರುತ್ತಾನೆ ಹೊರತು ಭಜನೆ ಕೀರ್ತನೆ ಪೂಜೆ ಪ್ರಾರ್ಥನೆ ಮುಂತಾದ ಶಬ್ದದ ಸೂತಕಕ್ಕೆ ವಿದಾಯ ಹೇಳಿರುವಾಗ ಬಸವಣ್ಣ ಹೇಗೆ ಆಸ್ತಿಕನಾಗಬಲ್ಲನು . ಬಸವಣ್ಣ ತನ್ನೊಳಗೆ ದೈವೀ ಶಕ್ತಿಯನ್ನು ಕಂಡುಕೊಳ್ಳುವ ಸುಲಭ ವಿಧಾನವನ್ನು ಹೇಳಿದ್ದಾನೆ .ಆದರೆ ಅದು ಆರಾಧನಾ ಸಂಸ್ಕೃತಿಯಲ್ಲ ಯೋಗ ಜ್ಞಾನ ಕ್ರಿಯೆಗಳನ್ನು ಜಾಗೃತಗೊಳಿಸುವ ಸಾರ್ಥಕತೆ.
ಪೂಜೆ ಅರ್ಚನೆ ನೇಮವಲ್ಲದ ನಿಸರ್ಗದತ್ತವಾದ ಸರಳ ಸಹಜ ಬದುಕಿನ ಮಾರ್ಗವೆ ಶರಣ ಸಂಸ್ಕೃತಿ.


-ಡಾ ಶಶಿಕಾಂತ ಪಟ್ಟಣ ರಾಮದುರ್ಗ

One thought on “ಬಸವಣ್ಣ ಒಬ್ಬ ನಾಸ್ತಿಕ -ಹೇಗೆ ?

  1. ಅತ್ಯಂತ ಹರಿತವಾದ ವಿಮರ್ಶಾತ್ಮಕವಾದ ಲೇಖನ ಸರ್ ಧನ್ಯವಾದಗಳು

Comments are closed.

Don`t copy text!