ಗಜಲ್

ಗಜಲ್ (ಮಾತ್ರೆ೧೯)

ಭವದ ಮೋಹ ಕಳಿಚಿದವನ ಕೂಡಬೇಕಿದೆ
ವಿಭೂತಿಯನು ಧರಿಸಿದವನ ಕೂಡಬೇಕಿದೆ

ಸಂಗಾತಿಯ ಅಗಲಿಕೆ ನೋವಲಿ ನರಳಿದನು
ರುದ್ರ ರೂಪ ತಾಳಿದವನ ಕೂಡಬೇಕಿದೆ

ಹೂಡಿದ ಹೂ ಬಾಣಕೆ ತಪ ಭಂಗವಾಯಿತು
ಮನ್ಮಥನನು ದಹಿಸಿದವನ ಕೂಡಬೇಕಿದೆ

ತ್ರಿಲೋಕ ಸಂಚಾರಿ ಜಗ ಸಂರಕ್ಷಕನಿವನು
ಪ್ರಕೃತಿಯನು ಸೃಷ್ಟಿಸಿದವನ ಕೂಡಬೇಕಿದೆ

ಕುಣಿವ ಚೆಲುವ ಮಾಯೆಯ ಗೆಜ್ಜೆ ತುಂಡಾದವು
ಮೃದಂಗವ ಬಾರಿಸಿದವನ ಕೂಡಬೇಕಿದೆ

ಆರ್ಭಟಿಸುವ ಜಲಧಾರೆಯ ಬಂದಿಸಿದವನು
ಶಿರದಿ ಚಂದಿರ ಮುಡಿದವನ ಕೂಡಬೇಕಿದೆ

ನಿರಾಭರಣ ಅಕ್ಕನ ಭಕ್ತಿ ಮೆಚ್ಚಿದವನು
ಶಶಿಯ “ಪ್ರಭೆ” ಹರಡಿದವನ ಕೂಡಬೇಕಿದೆ

 

ಪ್ರಭಾವತಿ ಎಸ್ ದೇಸಾಯಿ
ವಿಜಯಪುರ

Don`t copy text!