ವಚನ ಬೆಳಗು
ಅಕ್ಕನ ಎರಡು ವಚನಗಳು
(೧). ಪರಿಪೂರ್ಣ ಶರಣಾಗತಿ ಭಾವ ತುಂಬಿದ ಅಕ್ಕನ ವಚನವಿದು…
ಕಾಯ ಮೀಸಲಾಗಿ ನಿನಗರ್ಪಿತವಾಗಿತ್ತು
ಕರಣ ಮೀಸಲಾಗಿf ನಿನಗರ್ಪಿತವಾಗಿತ್ತು
ಹೇ ದೇವ ಚೆನ್ನಮಲ್ಲಿಕರ್ಜುನನೇ.. ಇಂದಿದ್ದು ನಾಳೆ ಅಳಿದು ಹೋಗುವ ಈ ಕಾಯವನ್ನು, ಇಂದ್ರಿಯಗಳನ್ನು, ಮನಸನ್ನು ನಿನಗೇ ಅರ್ಪಣೆ ಮಾಡಿದ್ದೇನೆ ಎಂದು ಅಕ್ಕನವರು ಹೇಳುತ್ತಾರೆ. ಭಕ್ತಿ ಭಾವದ ಅರ್ಪಣೆಯ, ಪ್ರೀತಿ ವಿರಹದ ಪರಾಕಾಷ್ಠೆಯನ್ನು ಕಾಣುತ್ತೇವೆ.
ಅಕ್ಕನ ಮೊರೆಗೆ ಕಲ್ಲೂ ಕರಗಬೇಕು.. ಪರಿ ಪರಿಯಾಗಿ ಬೇಡುವ ಪರಿ ಹೃದಯ ಹಿಂಡುತ್ತದೆ..
ದೇವ – ಭಕ್ತರ ಭಕ್ತಿಯನ್ನು ಮೆಚ್ಚಿ , ಒರೆಗೆ ಹಚ್ಚಿ ಇಂದಲ್ಲ ನಾಳೆ ಪವಿತ್ರ ಸ್ನೇಹ ಭಕ್ತಿಗೆ ಒಲಿದು ತನ್ನ ಆರಾಧ್ಯ ದೈವ ಮಲ್ಲಯ್ಯ ಅನುಗ್ರಹಿಸುತ್ತಾನೆ ಎಂಬ ನಂಬಿಕೆಯ ಗಟ್ಟಿ ಎಳೆಯನ್ನು ಅಕ್ಕನಲ್ಲಿ ಕಾಣುತ್ತೇವೆ.
ಆನೊಂದರಿಯನಯ್ಯ. ಎನ್ನ ಗತಿ ನೀನಾಗಿ
ಎನ್ನ ಮತಿ ನೀನಾಗಿ ಪ್ರಾಣ ನಿನಗರ್ಪಿತವಾಯಿತ್ತು
ನಿನ್ನ ಹೊರತು ನನಗೆ ಬೇರೆ ಇನ್ನಾರಿಲ್ಲ ದೇವ. ಇನ್ನೊಂದು ಮತ್ತೇನನ್ನೂ ಅರಿಯೆ ನಾನು. ನನಗಿರುವ ಆಸರೆಯೂ ನೀನೇ..ಎನ್ನ ಬುದ್ಧಿಯೂ ನೀನೇ..ಎನ್ನ ವಿವೇಕವೂ ನೀನೇ.. ನನಗೆ ನೀನೇ ದಿಕ್ಕು…ನನ್ನ ಪ್ರಾಣವನ್ನೇ ನಿನಗೆ ಅರ್ಪಿಸಿರುವೆ… ಸಕಲವೂ ನೀನೇ..ಎಂದಿದ್ದಾರೆ…
ನೀನಲ್ಲದೆ ಪೆರತೊಂದ ನೆನೆದಡೆ ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನಾ
ಆಳವಾದ ಭಕ್ತಿ.. ಅರ್ಪಣೆ ಸಮರ್ಪಣೆ..ಸಂಪೂರ್ಣ ಶರಣಾಗತಿ..ಪರಮಾತ್ಮನನ್ನು ಆರಾಧಿಸುವ ಅಕ್ಕ ಹೇಳುತ್ತಾರೆ ನಿನ್ನ ಮೇಲೆ ಆಣೆ ಮಾಡಿ ಹೇಳುತ್ತೇನೆ. ನೀನೇ ನನ್ನ ಸರ್ವಸ್ವ..ಎನ್ನುವ ಮೊರೆ ಆ ಚೆನ್ನಮಲ್ಲಿಕಾರ್ಜುನ ದೇವನಿಗೆ ಕೇಳಿಸದೇ….ಒಮ್ಮೆ ಆ ದೇವನನ್ನು ಕಂಡು, ಮಾತನಾಡುವ ಹಂಬಲದ ಹೊನಲಾಗಿ ಹರಿದಿವೆ ಅಕ್ಕನ ವಚನಗಳು…. ತನ್ನ ನಿರ್ಮಲ ಅಂತರಂಗದ ಮನ ಕಲಕುವ ಆತ್ಮ ನಿವೇದನೆ ಅಕ್ಕನದು..
(೨)
ಆಧ್ಯಾತ್ಮದಾಗಸದ ಧೃವ ತಾರೆ ವೈರಾಗ್ಯ ನಿಧಿ ಅಕ್ಕಮಹಾದೇವಿಯವರ ವಚನಗಳು ಭಾವವೇ ಜೀವ ತಳೆದ ಭಾವ ಗೀತೆಗಳು…
ಹೊಳೆವ ಕೆಂಜೆಡೆಗಳ ಮಣಿ ಮಕುಟದ ಒಪ್ಪುವ ಸುಲಿಪಲ್ಗಳ
ನಗೆಮೊಗದ ಕಂಗಳ ಕಾಂತಿಯ
ಈರೇಳು ಭುವನವ ಬೆಳಗುವ ನಿನ್ನ ದಿವ್ಯ ಸ್ವರೂಪವ ಕಂಡೆ ನಾನು
ಕಂಡೆನ್ನ ಕಂಗಳ ಬರ ಹಿಂಗಿತ್ತೆನಗೆ
ಅಕ್ಕ ತನ್ನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನ ದಿವ್ಯ ಸ್ವರೂಪವನ್ನು ಇಲ್ಲಿ ವರ್ಣಿಸಿದ್ದಾರೆ. ಅಂತರಂಗದಲ್ಲಿ ಅರಳಿದ ಅಂತರಾತ್ಮನ ಚಿದ್ರೂಪವೇ ಬಹಿರಂಗದಲ್ಲಿಯೂ ಕಾಣುತ್ತಿರುವುದು ನಿನ್ನಯ ಸುಂದರ ರೂಪ ಎಂದು ನುಡಿದಿದ್ದಾರೆ. ಮನದಲ್ಲಿ ನೆನೆದವರು ಎದುರಲ್ಲಿ ನಿಂದಾಗ ತಮಗಾದ ದಿವ್ಯ ಆನಂದದ ಅನುಭೂತಿಯನ್ನು ಈ ವಚನದಲ್ಲಿ ಕಟ್ಟಿ ಕೊಟ್ಟಿದ್ದಾರೆ ಅಕ್ಕ. ಹಗಲಿರುಳೂ ಹೃತ್ಕಮಲದಲ್ಲಿ ಪೂಜಿಸಿ ಅವನ ದರುಷನಕ್ಕಾಗಿ ಪರಿತಪಿಸಿ ತಪಗೈದು ತನುಮನವೆಲ್ಲ ಕಣ್ಣಾಗಿ ಕಾಯ್ದಿದ್ದರೋ ಆ ದೈವ ಪ್ರತ್ಯಕ್ಷವಾದಾಗ ಆ ದಿವ್ಯಾನುಭೂತಿ ಆನಂದ ಪದಗಳಿಗೆ ನಿಲುಕಲಾರದ್ದು…
ನಗು ಮೊಗದ ಬೆಳದಿಂಗಳ ನಗೆ ಕಂಗಳ ಹೊಳೆವ ಕೆಂಜೆಡೆಗಳ ರುದ್ರಾಕ್ಷಿಯ ಕಿರೀಟ ಧರಿಸಿದ , ಆ ಮುಖಕೊಪ್ಪುವ ಎಳೆಯ ಹೊಳೆವ ದಂತ ಪಂಕ್ತಿಯ ಚೆಲುವ ಚೆನ್ನನ ಕಂಡು ಧನ್ಯಳಾದೆ ಎನ್ನುತ್ತಾರೆ.
ಗಂಡ ಗಂಡರೆಲ್ಲರ ಹೆಂಡಿರಾಗಿ ಆಳುವ ಗುರುವನ ಕಂಡೆ
ನಾನು
ಜಗದಾದಿ ಶಕ್ತಿಯೊಳು ಬೆರೆಸಿ ಮಾತನಾಡುವ
ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲವು ಕಂಡು ಬದುಕಿದೆನು
ನಿನ್ನ ದಿವ್ಯ ರೂಪದ ದರುಶನ , ಎಲ್ಲೆಡೆಯೂ ಪ್ರಕಾಶಿಸುವ ಪರಮಾತ್ಮನ ಭವ್ಯ ಸುಂದರ ರೂಪವು ನನ್ನ ಕಂಗಳ ಹಲವು ಕಾಲದ ಹಸಿವನ್ನು.. ಬರವನ್ನು ಸ್ವಲ್ಪ ಮಟ್ಟಿಗಾದರೂ ಹಿಂಗಿಸಿತು ಎನ್ನುತ್ತಾರೆ ಅಕ್ಕ.
ಸಕಲ ಜೀವ ಕೋಟಿಯೊಳು ಹಾಸು ಹೊಕ್ಕಾಗಿರುವ , ಆದಿ ಶಕ್ತಿಯಲ್ಲಿ ನಲಿದಾಡುವ ಪರಮ ಗುರು ಶ್ರೇಷ್ಠನಾದ ನಿನ್ನ ದರುಷನಡಿಂದ ಅಮೃತದ ಸೆಲೆ ಒಡೆಯಿತು, ಪ್ರೀತಿಯ ಆನಂದ ಭಾಷ್ಪ ಉಕ್ಕಿ ಹರಿಯುತ್ತಿದೆ, ನನ್ನ ಜನ್ಮ ಸಾರ್ಥಕವಾಯಿತು ಎಂದು ಅಕ್ಕನವರು ನುಡಿದಿದ್ದಾರೆ. ಎಷ್ಟು ನೋಡಿದರೂ ಎಷ್ಟು ಮಾತಾಡಿದರೂ ಭಕ್ತಿ, ಆರಾಧನೆಯ ಹಸಿವು ಹಿಂಗದು…ಹೃನ್ಮನ ತಣಿಯದು ..ಅಕ್ಕನದು…ಶರಣು.
–ಇಂದಿರಾ ಮೋಟೆಬೆನ್ನೂರ. ಬೆಳಗಾವಿ