ನಚಿಕೇತ

ಉಪನಿಷತ್ತಿನ ಕಥೆಗಳು

 

 

 

 

 

 

 

 

 

 

 

 

ನಚಿಕೇತ

ಪ್ರಾಚೀನಕಾಲದಲ್ಲಿ ವಜಶ್ರಾಸವನೆಂಬ ಮುನಿಯಿದ್ದನು. ಅವನಿಗೆ ನಚಿಕೇತ ಎಂಬ ಮಗನು ಇದ್ದನು ವಜಶ್ರಾವಸನ ಮುನಿಯು ಒಂದು ಬಾರಿ ಯಜ್ಞಮಾಡುತ್ತಿದ್ದನು ಆಗ ತನ್ನ ಬಳಿ ಇರುವ ಸವಕಲು ಮುಪ್ಪಾದ ಆಕಳನ್ನು ದಾನ ಮಾಡುತ್ತಿದ್ದನು. ನಚಿಕೇತನು ಬಹಳ ತಿಳುವಳಿಕೆಯುಳ್ಳವನು ಧರ್ಮದ ಬಗೆಗೆ ಶ್ರದ್ದೇಯಿದ್ದವನಾಗಿದ್ದನು. ಅವನು ತಂದೆಗೆ ಹೇಳಿದನು “ತಾತ ನೀನು ಪುಣ್ಯ ಸಂಪಾದನೆಗಾಗಿ ಇಷ್ಟು ದೊಡ್ಡ ಯಜ್ಞವನ್ನು ಮಾಡುತ್ತಲಿರುವಿ. ಇಂತಹ ಸಮಯದಲ್ಲಿ ಉತ್ತಮವದ ನಿನಗೆ ಪ್ರೀತಿಪಾತ್ರವಾದುದನ್ನು ದಾನ ಮಾಡಿ ಪುಣ್ಯ ಸಂಪಾದನೆ ಮಾಡಬೇಕು ಉಪಯುಕ್ತವಲ್ಲದ ವಸ್ತುಗಳನ್ನು ದಾನದಲ್ಲಿ ನೀಡಬಾರದು” ಏಂದು ಹೇಳಿದನು. ತಂದೆ ಬಾಲಕನ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆಗ ನಚೀಕೇತನು “ಅಪ್ಪ ನಿನಗೆ ಅತ್ಯಂತ ಪ್ರಿಯನಾದ ನನ್ನನ್ನೇ ದಾನ ಕೊಟ್ಟು ಬಿಡು” ಎಂದು ಪುನಃ ಹೇಳಿದನು. ಈ ಬಾರಿ ಸಿಟ್ಟಿಗೆ ಎದ್ದ ಮುನಿಯು “ನಿನ್ನನ್ನು ಯಮನಿಗೆ ದಾನಕೊಟ್ಟಿದ್ದೇನೆ” ಎಂದು ಹೇಳಿದನು. ತಂದೆಯ ಮಾತಿಗೆ ನಚೀಕೇತನು ” ಮನುಷ್ಯರಿಗೆ ದಾನ ಕೊಟ್ಟಿದ್ದರೆ ಅವರ ಸೇವೆಯನ್ನು ಮಾಡುತ್ತ ಇರುತ್ತಿದ್ದೇ ನಾನು ಯಮನ ಬಳಿ ಹೋಗಿ ಏನು ಮಾಡಬೇಕು? ನನ್ನನ್ನು ತೆಗೆದುಕೊಂಡು ಅವನು ಏನು ಮಾಡುವನು” ಎಂದು ಕೇಳಿದನು ಆದರೆ ಸಿಟ್ಟಿನಲ್ಲಿದ್ದ ತಂದೆ ಮಗನಿಗೆ ಯಾವ ಏನು ಉತ್ತರ ನೀಡಲಿಲ್ಲ. ಹೀಗಾಗಿ ನಚಿಕೇತನು ಯಮನ ಬಳಿಗೆ ಹೊರಟನು.

ತಂದೆಯ ಮಾತಿನಂತೆ ನಚಿಕೇತನು ಯಮನ ಪುರಿಗೆ ಪಯಣ ನಡೆಸಿದನು. ನಚೀಕೇತನು ಯಮಪುರಿಗೆ ಹೋದಾಗ ಯಮಧರ್ಮನು ಅಲ್ಲಿ ಇರಲಿಲ್ಲ. ತಂದೆಯ ಆದೇಶದಂತೆ ಬಾಲಕನು ಯಮನನ್ನು ಕಾಯುತ್ತ ಮೂರು ದಿನಗಳ ಕಾಲ ಹಸಿವು ನೀರಡಿಕೆಯಿಂದಲೇ ಕುಳಿತನು. ಯಾರು ಕರೆದರೂ ಒಳಗೆ ಹೋಗಲಿಲ್ಲ. ತಿನ್ನಲು ಕುಡಿಯಲು ಏನನ್ನೂ ನೀಡಲು ಬಂದರೂ ಯಮನ ಅಪ್ಪಣೆ ಇಲ್ಲದೇ ಏನನ್ನೂ ಸ್ವೀಕರಿಸುವುದಿಲ್ಲ ಎಂಬ ನಿರ್ಧಾರವನ್ನು ಮಾಡಿದ್ದನು.

ಮೂರು ದಿನಗಳ ನಂತರ ಯಮಧರ್ಮನು ತನ್ನ ಪುರಿಗೆ ಬಂದಾಗ ಬಾಗಿಲಲ್ಲಿ ನಿಂತಿದ್ದ ಬಾಲಕನ ಬಗೆಗೆ ಕೇಳಿ ತಿಳಿದನು. ಬಾಲಕನ ಮುಖವು ಬಾಡಿತ್ತು. ಬಾಲಕನ ತೇಜಸ್ಸನ್ನು ಕಂಡು ಆನಂದಿತನಾದ ಯಮಧರ್ಮನು ಅವನಿಗೆ ಆದರ ಸತ್ಕಾರಗಳನ್ನು ಮಾಡಿ ಪ್ರಸನ್ನನಾಗಿ 3 ವರಗಳನ್ನು ಕೇಳೆಂದು ಹೇಳಿದನು ಆಗ ನಚೀಕೇತನು “ಯಮರಾಜನೇ ನಾನು ಮರಳಿ ಹೋದಾಗ ನನ್ನ ತಂದೆಯು ಕ್ರೋಧರಹಿತನು ಮತ್ತು ಪ್ರಸನ್ನಚಿತ್ತನೂ ಆಗಿ ತನ್ನನ್ನು ಸ್ವೀಕರಿಸಬೇಕು ಎಂದು ಮೊದಲವರವನ್ನು ಕೆಳಿದನು. ಆಗ ಯಮನು ಆ ವರವನ್ನು ನೀಡಿದನು. ಎರಡನೆಯ ವರದಲ್ಲಿ ಸ್ವರ್ಗಲೋಕಕ್ಕೆ ಹೋಗಲು ಏನು ಮಾಡಬೇಕೆಂದು ಉಪದೇಶ ಮಾಡೆಂದು ಕೇಳಿದನು ಆಗ ಯಮರಾಜನು ” ಬಾಲಕನೇ ಸ್ವರ್ಗ ಪ್ರಾಪ್ತಿಗಾಗಿ ಯಜ್ಞಯಾಗಾದಿಗಳನ್ನು ಮಾಡಬೇಕು, ಪುಣ್ಯಕಾರ್ಯಗಳು ಮತ್ತು ಲೋಕಹಿತ ಕಾರ್ಯಗಳಿಂದ ಸ್ವರ್ಗ ಲೋಕವು ಪ್ರಾಪ್ತವಾಗುವುದು. ಯಜ್ಞ ವಿಧಿಗಳಿಗೆ ಅಗ್ನಿಯೇ ಮುಖ್ಯ ಇಂತಹ ಉತ್ತಮವಾದ ಪ್ರಶ್ನೆಯನ್ನು ಕೇಳಿರುವ ನೀನು ಲೋಕೋಪಕಾರದ ಕೆಲಸವನ್ನು ಮಾಡಿರುವಿ ಇನ್ನು ಮುಂದೆ ಯಜ್ಞದ ಮುಖವಾದ ಅಗ್ನಿಗೆ “ನಚಿಕೇತ ಅಗ್ನಿ” ಎಂದು ಕರೆಯಲ್ಪಡಲಿ” ಎಂದು ಎರಡನೆಯ ವರವನ್ನು ನೀಡಿದನು. ನಚೀಕೇತನು ಮೂರನೇ ವರದಲ್ಲಿ (ಬ್ರಹ್ಮ )ಆತ್ಮವಿದ್ಯೆಯನ್ನು ಕೇಳಿದನು “ಯಮರಾಜನೇ ಕೆಲವರು ಸತ್ತ ನಂತರ ಜೀವಾತ್ಮನು ಇರುವನು ಎನ್ನುವರು ಇನ್ನು ಕೆಲಸವರು ಇಲ್ಲವೆನ್ನುವರು ನನಗೆ ಈ ವಿಚಾರಗಳನ್ನು ತಿಳಿಸು” ಎಂದು ಬೇಡಿದನು. ಯಮರಾಜನು ಸಣ್ಣ ಬಾಲಕನಿಂದ ಇಂತಹ ಮಹತ್ತವರಾದ ಪ್ರಶ್ನೆಯನ್ನು ನಿರೀಕ್ಷಿಸಿರಲಿಲ್ಲ. ಅದಕ್ಕೆ ಯಮಧರ್ಮನು “ನಿನಗೆ ಧೀರ್ಘಾಯಸ್ಸು, ಪುತ್ರಪೌತ್ರರು, ಸಿರಿಸಂಪತ್ತು, ಧನಕನಕಗಳು ದನಕರುಗಳನ್ನು ಸಮೃದ್ಧಿಯನ್ನು ಬೇಡಿದರೆ ನೀಡುವೆನು ಈಡೀ ಭೂಮಂಡಲವನ್ನು ಬೇಕಾದರೂ ಸಕರ ಐಶ್ವರ್ಯ ಭೋಗಗಳನ್ನು ನೀಡುವೆನು ಇಂತಹ ಘನವಾದ ವಿದ್ಯೆಯನ್ನು ನಿನಗೆ ಹೇಗೆ ನೀಡಲಿ ನೀನು ಬಾಲಕ” ಎಂದನು ಆಗ ಸಂಪತ್ತು ಭೋಗ ಸುಖವನ್ನು ತಿರಸ್ಕರಿಸಿ(ಬ್ರಹ್ಮ ) ಆತ್ಮವಿದ್ಯೆಯನ್ನೇ ನೀಡಬೇಕೆಂದು ಕೇಳಿದನು

ಯಾವುದೇ ಆಮಿಷಕ್ಕೆ ಬಲಿಯಾಗದೇ ಇಂತಹ ಮಹತ್ತರ ವಿದ್ಯೆಯನ್ನು ಬೇಡಿದ ಬಾಲಕನ ಶ್ರದ್ಧೆಯನ್ನು ಮೆಚ್ಚಿದ ಯಮಧರ್ಮನು ನಚಿಕೇತನಿಗೆ ಮಹತ್ತರವಾದ(ಬ್ರಹ್ಮ) ಆತ್ಮವಿದ್ಯೆಯನ್ನು ಭೋದಿಸಿ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದನು. ಸಂಪೂರ್ಣವಾದ ಆತ್ಮ ಜೀವಾತ್ಮ ಪರಮಾತ್ಮನ ಕುರಿತಾದ (ಬ್ರಹ್ಮ ) ಆತ್ಮವಿದ್ಯೆಯನ್ನು ಉಪದೇಶಿಸಿ ಬಾಲಕನಿಗೆ ಆಶೀರ್ವದಿಸಿ ಯಮಧರ್ಮನು ಕಳುಹಿಸಿದನು

ಹಿಂತಿರುಗಿ ಬಂದ ಮಗನನ್ನು ಕಂಡು ಮುನಿಗೆ ಪಶ್ಚಾತ್ತಾಪವೂ ಜೊತೆಗೆ ಆನಂದವೂ ಆಯಿತು. ಮಗನ್ನು ಅಪ್ಪಿ ಮುದ್ದಾಡಿ ಆನಂದಾಶ್ರುಗಳನ್ನು ಸುರಿಸಿದನು. ಮಗನ ಬಾಯಿಯಿಂದ ಯಮಪುರಿಯ ಘಟನೆಯನ್ನು ಕೇಳಿ ಅವನಿಂದ ತಾನು ಕೂಡ (ಬ್ರಹ್ಮ ) ಆತ್ಮವಿದ್ಯೆಯನ್ನು ಕಲಿತು. ಲೋಕೋದ್ಧಾರದ ಕೆಲಸಗಳನ್ನು ಮಾಡುತ್ತಾ ಜನರಿಗೆ ಉತ್ತಮ ಸಂಗತಿಗಳನ್ನು ಬೋಧಿಸಿ ಉತ್ತಮ ಸಂದೇಶಗಳನ್ನು ನೀಡಿದರು.

ಈ ಕಥೆಯಿಂದ ಕಲಿಯಬೇಕಾದ ಪಾಠ :
ಈ ಕಥೆಯಲ್ಲಿ ನಾವು ಹಲವು ವಿಚಾರಗಳನ್ನು ಕಲಿಯಬಹುದಾಗಿದೆ. ಮೊಟ್ಟಮೊದಲಿಗೆ ನಾವು ಕ್ರೋಧಕ್ಕೆ ಗುರಿಯಾಗಿ ಯಾವುದೇ ಮಾತನ್ನು ಆಡಬಾರದು ಯೋಚಿಸಿ ವಿವೇಚಿಸಿ ಮಾತನಾಡಬೇಕು. ಏಕೆಂದರೆ ಬಾಯಿಯಿಂದ ಬಂದ ಮಾತಿನ ಪರಿಣಾಮ ಏನಾಗುತ್ತದೆ ಎಂಬ ಅರಿವು ಇರಬೇಕು. ಎರಡನೇಯದು ಎಂತಹದೇ ಸಂದರ್ಭ ಇರಲಿ ಸಿಟ್ಟಿನ ಕೈಲಿ ಬುದ್ದಿಯನ್ನು ಕೊಡಬಾರದು. ಮೂರನೆಯದಾಗಿ ಶ್ರದ್ಧೆ ಮತ್ತು ನಿಷ್ಠ ಇದ್ದಾಗ ಎಂತದ್ದೇ ದೊಡ್ಡ ವಿದ್ಯೆಯಿದ್ದರೂ ಅದು ನಮಗೆ ಒಲಿಯುತ್ತದೆ ಎಂಬುದನ್ನು ತಿಳಿಯಬಹುದು.

ವಿದ್ಯೆ ಕಲಿಯಲು ವಯಸ್ಸು ಮತ್ತು ಅರ್ಹತೆಯ ಜೊತೆಗೆ ಆಸಕ್ತಿ ದೃಢ ಸಂಕಲ್ಪವಿರಬೇಕು.

ಇಂತಹ ಉಪನಿಷತ್ತಿನ ಮತ್ತು ಪುರಾಣದ ಕಥೆಗಳು ನಮ್ಮ ಜೀವನಕ್ಕೇ ಪ್ರೇರಕ ನಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಇಂತಹ ಮಹಾಪುರುಷರ ಸಾಧಕರ ಕತೆಗಳನ್ನು ಹೇಳಿ ಅವರಲ್ಲಿ ಉತ್ತಮ ಗುಣ ನಡೆನುಡಿಗಳನ್ನು ಕಲಿಸಲು ಪ್ರಯತ್ನಿಸಬೇಕು. ಏಕೆಂದರೆ ಎಳೆಯ ಮನದ ಮೇಲೆ ಕಥೆಗಳು ಯಾವ ಪರಿಣಾಮ ಬೀರಿರುತ್ತವೆಯೋ ಅದು ಅವನು ಸಾಯುವವರೆಗೂ ಅದರ್ಶವಾಗಿಯೇ ಉಳಿದಿರುತತದೆ.

 

 

 

 

 

 

 

 

 

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!