ರಣಛೋಡಜಿ (ಕೃಷ್ಣ)
ಓಡಿದನು ರಂಗ
ಓಡಿದನು ಕೃಷ್ಣ
ಕಾಲಯವನನ ಪ್ರಾಣ
ಹರಣ ಮಾಡಿಸಲು
ಉಪಾಯವ ಮಾಡುತ
ಓಡಿದನು ರಂಗ
ಓಡಿದನು ಕೃಷ್ಣ | 1 |
ಅಂಜಿದವನಂತೆ
ಸಂಚು ಮಾಡುತಲಿ
ಬೆನ್ನಟ್ಟಿ ಬರುತಿರುವ
ರಕ್ಕಸನನು ಗಮನಿಸುತ
ಮುಗುಳು ನಗುನಗುತ
ಓಡಿದನು ರಂಗ
ಓಡಿದನು ಕೃಷ್ಣ | 2 |
ಓಡುತಿಹ ಕೃಷ್ಣನ
ಮರ್ಮವನರಿಯದೇ
ಅಂಜಿದವನಿವನೆಂದು
ಹೀಯಾಳಿಸುತ ನಿಲ್ಲು
ನಿಲ್ಲೆನುತ ಕೂಗುತ
ಖಡ್ಗವನು ಝಳಪಿಸುತ
ಯಮನಸದನಕೆ
ಅಟ್ಟುವೆನು ಎನುತ
ಅಟ್ಟಹಾಸದಿ ಬರುತಿರುವ
ದುಷ್ಟ ರಕ್ಕಸನ ನೋಡುತಲಿ
ಓಡಿದನು ರಂಗ
ಓಡಿದನು ಕೃಷ್ಣ | 3 |
ರಕ್ಕಸ ಕಾಲಯವನನ
ಅವಸಾನ ಸಮಯವಿದೆಯೆಂದು
ಓಡುತಲಿ ಕೃಷ್ಣ
ಗುಹೆಯ ಒಳಹೋಗುತ
ಕಂಡನು ಮಲಗಿದ್ದ
ಮುಚಕುಂದನನು ಗಮನಿಸುತ
ತನ್ನ ಮೇಲ್ ಹೊದಿಕೆಯನು
ಹೊದಿಸುತಲಿ ಅವನಿಗೆ
ಮರೆಯಾಗಿ ನಗುತನಿಂತ
ನಮ್ಮ ರಂಗ ನಮ್ಮ ಕೃಷ್ಣ | 4 |
ಎಲ್ಲಿರುವೆ ರಣಹೇಡಿಯೇ
ಎಲ್ಲಿ ಅಡಗಿದೆ ಗೊಲ್ಲನೇ ಎಂದೆನುತ
ಮಲಗಿರುವವನೆ ಶ್ರೀಕೃಷ್ಣನೆಂದು
ತಿಳಿದು ಎಳೆದ ಮೇಲ್ ಹೊದಿಕೆಯ
ತಕ್ಷಣವೇ ಮಲಗಿದ ಮುಚಕುಂದ
ಎಚ್ಚರದಿ ಕಣ್ ಬಿಟ್ಟು ನೋಡಲು
ಕಾಲಯವನನ ಶರೀರ ಸುಡುತ
ಬೂದಿಯಾಯ್ತು ಅರೆಕ್ಷಣದಲಿ
ನಗುತ ನಿಂತ ನಮ್ಮ ರಂಗ
ನಗುತ ನಿಂತ ನಮ್ಮ ಕೃಷ್ಣ | 5 |
ಮುಚಕುಂದನಿಗೆ ಕೊಟ್ಟ
“ವರವ “ ನಿಜ ಮಾಡುತ
ರಕ್ಕಸ ಕಾಲಯವನನ
ಯಮಪುರಿಗೆ ಅಟ್ಟಿದನು
ನಮ್ಮ ರಂಗ ನಮ್ಮ ಕೃಷ್ಣ
ತಂದೆ ಶ್ರೀಕೃಷ್ಣನ ಒಲುಮೆಯಲಿ
ಲೋಕಕೆ ಕಲ್ಯಾಣ ಮಾಡುತ | 6 |
-ಕೃಷ್ಣ ಬೀಡಕರ.
ವಿಜಯಪುರ