ಕಲಬುರ್ಗಿಯ ಶರಣಬಸವೇಶ್ವರರು

ಕಲಬುರ್ಗಿಯ ಶರಣಬಸವೇಶ್ವರರು

 

 

 

 

 

 

 

 

 

 

ರಾಜ್ಯದಲ್ಲಿ ತೊಗರಿಯ ಕಣಜ ಎಂದೇ ಪ್ರಸಿದ್ಧಿ ಪಡೆದಿರುವುದು ಕಲ್ಬುರ್ಗಿ ಜಿಲ್ಲೆ, ಇಲ್ಲಿನ ಆರಾಧ್ಯದೈವ ಶ್ರೀ ಶರಣಬಸವೇಶ್ವರರು. ಶ್ರೀ ಶರಣಬಸವೇಶ್ವರ ದೇವಸ್ಥಾನವು ರಾಜ್ಯಮಟ್ಟವನ್ನು ಮೀರಿ ದಕ್ಷಿಣ ಭಾರತದ ಮಹಾದಾಸೋಹ ಸಂಸ್ಥಾನ ಎಂಬ ಹೆಗ್ಗುರುತನ್ನು ಪಡೆದಿದೆ. ಗುರು ಲಿಂಗ ಜಂಗಮ ನಿಜ ತತ್ವವನ್ನು ಅರಿತು, ದಾನ ಧರ್ಮಗಳನ್ನು ಬಾಯಿಯ ಮೂಲಕ ಬೋಧಿಸದೆ ನಡೆಯ ಮೂಲಕವೇ ಅವುಗಳ ಮಹತ್ವವನ್ನು ಸಾರಿದರು. ಮಾನವರಾಗಿ ಜನಿಸಿದ ಇವರು ದೈವ ಮಾನವರಾಗಿ ಪರಿವರ್ತಿಸಿಕೊಂಡು ಸಾಗಿ ದೈವತ್ವದ ತುತ್ತ ತುದಿಯನ್ನು ತಲುಪಿದ ಇವರ ಕೀರ್ತಿಗೆ ಇವರೇ ಸಾಟಿಯಾಗಿದ್ದಾರೆ.

ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಅರಳಗುಂಡಿಗಿ ಗ್ರಾಮದಲ್ಲಿ 1746ರಲ್ಲಿ ಮಲ್ಕಪ್ಪ ಮತ್ತು ಸಂಗಮ್ಮ ದಂಪತಿಗಳ ಉದರದಲ್ಲಿ ಜನಿಸಿದವರೇ ಶ್ರೀ ಶರಣಬಸವೇಶ್ವರರಾಗಿದ್ದಾರೆ. ಕೃಷಿ ಕುಟುಂಬದ ಸಾಲುಕ್ಯ ಮನೆತನದವರಾದ ಇವರು ಕೇವಲ ಆರನೇ ವಯಸ್ಸಿಗೆ ಗುರುಲಿಂಗ ಜಂಗಮ ಎಂಬ ಬಗೆಗೆ ಸಂಪೂರ್ಣ ಜ್ಞಾನವನ್ನು ಹೊಂದಿದರು. ತಮ್ಮ ಗುರುಗಳಾದ ಕಲಕೇರಿಯ ಮರಳ ಸಿದ್ದರಲ್ಲಿ ಓಂಕಾರದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಜಗಜ್ಯೋತಿ ಬಸವೇಶ್ವರರ ತತ್ವಗಳಿಗೆ ತಮ್ಮನ್ನು ತಾವು ಬದ್ಧರಾಗಿಸಿಕೊಂಡು ಅನುಯಾಯಿಗಳಾದರು. ಚಿಕ್ಕಂದಿನಿಂದಲೇ ಪರೋಪಕಾರ ಸೇವಾ ಮನೋಭಾವನೆಗಳನ್ನು ಹೊಂದಿದ್ದ ಇವರು ಸಾಧ್ಯವಾದಷ್ಟು ದಾನ ಧರ್ಮಗಳನ್ನು ಆಚರಿಸಿಕೊಂಡು ಬಂದರು .ಅವಿಭಕ್ತ ಕುಟುಂಬದಲ್ಲಿದ್ದ ಇವರು ಇವರ ನಡೆ ಕುಟುಂಬದ ಇತರರಿಗೆ ಇಷ್ಟವಾಗದ ಕಾರಣ ತಮ್ಮ ಪಾಲಿನ ಆಸ್ತಿಯನ್ನು ತೆಗೆದುಕೊಂಡು ದಾನ ಧರ್ಮ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದರು.

ಗುರುಗಳ ಆಜ್ಞೆಯ ಮೇರೆಗೆ ವಿವಾಹವಾದರು. ಒಂದು ಮಗು ಕೂಡ ಜನಿಸಿದ ಆದರೆ ಮುಂದೆ ಕೆಲವೇ ದಿನಗಳಲ್ಲಿ ಮಡದಿ ಮತ್ತು ಮಗು ಅಕಾಲಿಕ ಮರಣ ಹೊಂದಿದರು. ಅಂದಿಗೆ ಅರಳಗುಂಡಿಗೆ ಗ್ರಾಮದ ಋಣ ಮುಗಿಯಿತೆಂದು ಕಲ್ಯಾಣದ ಕಡೆ ನಡೆದರು. ಮಧ್ಯ ಮಾರ್ಗದಲ್ಲಿ ದೀನರ ಬಲಹೀನರ ಸೇವೆಗಳನ್ನು ಮಾಡುತ್ತ ನಡೆದರು. ಬರಪೀಡಿತ ಪರಿಸ್ಥಿತಿಗಳಲ್ಲಿ ಹಸಿವಿನ ಹಾಹಾಕಾರದಿಂದ ಬಳಲುವ ಜನರಿಗೆ ಗಂಜಿಯನ್ನು ಮಾಡಿ ಉಣಬಡಿಸಿದರು. ಹೀಗೆ ಔರಾದ್, ಫಿರೋಜಬಾದ್ ಭೀಮಾ ನದಿಯನ್ನು ಬರಿಗಾಲಿನಲ್ಲಿ ಸಾಗಿ ಕಲ್ಬುರ್ಗಿಯ ಶಿರಸಗಿ ಬಂದು ತಲುಪಿದರು. ಆ ಹೊತ್ತಿಗಾಗಲೇ ಇವರ ದಾಸೋಹ ಸೇವೆ ಬಗೆಗೆ ತಿಳಿದುಕೊಂಡಿದ್ದ ಕಲಬುರ್ಗಿಯ ಆದಿ ದೊಡ್ಡಪ್ಪಗೌಡರು ಶರಣು ಬಸವೇಶ್ವರರನ್ನು ಭೇಟಿಯಾಗಿ ಕಲ್ಯಾಣಕೆ ಹೋಗುವುದನ್ನು ತಡೆದು ಗುಲ್ಬರ್ಗವನ್ನೇ ಕಲ್ಯಾಣವನ್ನಾಗಿ ಬದಲಿಸಿ ಎಂಬ ಮನೋಭಿಲಾಷೆಯನ ವ್ಯಕ್ತಪಡಿಸಿದರು. ತಕ್ಷಣಕ್ಕೆ ಒಪ್ಪದ ಶರಣು ಬಸವೇಶ್ವರ ಅವರು ಆದಿ ದೊಡ್ಡಪ್ಪಗೌಡರಿಗೆ ಕೆಲವು ಪರೀಕ್ಷೆಗಳನ್ನು ಒಡ್ಡಿ ನಂತರ ಅವರ ನಿಜಭಕ್ತಿ ಅರಿತು, ಶಕ್ತಿ ಭಕ್ತಿಗಳೆರಡು ಸಮ್ಮಿಲನಗೊಂಡು ಗುಲ್ಬರ್ಗ ನಾಡಿನಲ್ಲಿ ಮಹಾದಾಸೋಹ ಸಂಸ್ಥಾನವು ನಿರ್ಮಾಣಗೊಂಡಿತು. ಅನ್ನದಾಸೋಹದ ಜೊತೆಗೆ ಶಿವಾನುಭವ ಗೋಷ್ಠಿಗಳ ಮೂಲಕ ಶಿವ ತತ್ವ ಮಾನವ ತತ್ವಗಳನು ಪ್ರಚಾರಪಡಿಸಿದರು.

 

ಪವಾಡಗಳು

ಹೈದರಾಬಾದ್ ನಿಜಾಮನ ಕರವನ್ನು ಕೇಳಲು ಬಂದಾಗ ಅನ್ನದಾಸೋಹವನ್ನು ಕಂಡು ಬೆರಗಾಗಿ ಶ್ರೀ ಶರಣಬಸವೇಶ್ವರರ ಪದತಲಗಳಿಗೆ ನಮಿಸಿ ಹಿಂತಿರುಗಿದರು. ಅಲ್ಲಿಯ ನಿವಾಸಿ ದೇಸಾಯಿ ಯವರು ಸಂತಾನವಿಲ್ಲದೆ ಅನೇಕ ರೋಗಗಳಿಂದ ಬಳಲುತ್ತಿದ್ದರು .ಬಸವೇಶ್ವರರು ಅವರ ದಿವ್ಯಶಕ್ತಿಯಿಂದ ಅವರ ದೇಸಾಯಿ ಅವರನ್ನು ರೋಗ ಮುಕ್ತ ಮಾಡಿ ಸಂತಾನ ಪಡೆಯುವಂತೆ ಆಶೀರ್ವದಿಸಿದರು ನಂತರ ರೋಗಗಳೆಲ್ಲ ಮಾಯವಾಗಿ ಸಂತಾನವನ್ನು ಸಹ ಪಡೆದರು. ಆಗ ದೇಸಾಯಿಯವರ ತಾಯಿಯವರು ಶ್ರೀ ಶರಣಬಸವೇಶ್ವರರಿಗೆ ಸೇವಾ ಮನೋಭಾವದಿಂದ ಒಂದು ಜಾಗವನ್ನು ನೀಡಿದರು.
ಗುರುಲಿಂಗ ಜಂಗಮ ತತ್ವಗಳ ಮೇಲೆ ಅಪಾರ ನಂಬಿಕೆ ಇಟ್ಟಂತಹ ಶ್ರೀ ಬಸವೇಶ್ವರರು ಒಂದು ದಿನ ತಮ್ಮ ಮಡದಿ ಲಿಂಗ ಪೂಜೆಗೆ ಕೊಂಚ ಸಮಯ ತಡ ಮಾಡಿದರು ಎಂಬ ಕಾರಣಕ್ಕೆ ಮಡದಿಯನ್ನು ಶಪಿಸಿದರು .ಇದರ ಪರಿಣಾಮ ಗರ್ಭಿಣಿಯಾಗಿ ಇದ್ದ ಇವರು ಒಂಬತ್ತನೇ ತಿಂಗಳಿಗೆ ಹೆರಿಗೆಯಾಗದೆ 13 ತಿಂಗಳಿಗೆ ಹೆರಿಗೆಯಾಯಿತು. ಒಂದೊಮ್ಮೆ ಕಡಕೋಳ ಮಡಿವಾಳಪ್ಪ ಅವರಿಗೆ ಸಹಾಯ ಮಾಡಲು ಮುಂದಾದ ಶ್ರೀ ಶರಣಬಸವೇಶ್ವರರಿಗೆ ದಂಗೆ ಕೋರರ ಗುಂಪೊಂದು ಪ್ರಾಣ ಭೀತಿಯನ್ನು ಸೃಷ್ಟಿಸಲು ಅದಕ್ಕೆ ಹೆದರದೆ ಹಸನ್ಮುಖಿಯಾದ ಅವರ ಮಂದಹಾಸದ ಮುಖವನ್ನು ಕಂಡು ಸ್ವತಃ ದಂಗೆ ಕೋರರೆ ಮನ ಪರಿವರ್ತಿಸಿಕೊಂಡು ಶರಣಾದ ಘಟನೆಯು ನಡೆಯಿತು. ನಂತರ ಕಡಕೊಳ್ಳ ಮಡಿವಾಳಪ್ಪರಿಗೆ ಲಿಂಗ ದೀಕ್ಷೆಯನ್ನು ನೀಡಿದರು. ಅಂದಿನ ಕಾಲದ ಅನೇಕ ಸಂತಾನ ಹೀನ ದಂಪತಿಗಳಿಗೆ ಸಂತಾನ ಪಡೆಯುವಂತೆ ಆಶೀರ್ವದಿಸಿದರು.

ಅನೇಕ ರೋಗ ರಜನಿಗಳಿಂದ ಬಳಲುತ್ತಿದ್ದ ಜನಗಳಿಗೆ ರೋಗ ಮುಕ್ತರನ್ನಾಗಿ ಮಾಡಿದರು. ಕಾಲು ಕಣ್ಣುಗಳಿಲ್ಲದ ಅನೇಕರ ಜೀವನದಲ್ಲಿ ಪವಾಡವೇ ನಡೆದು ಹೋಯಿತು. ಆದಿ ದೊಡ್ಡಪ್ಪ ಗೌಡರ ಮಡದಿ ನೀಲಮ್ಮ ಗೌಡತಿ ತಮ್ಮ ತವರಿನಿಂದ ಹಿಂತಿರುಗುವ ಮಧ್ಯ ಮಾರ್ಗದಲ್ಲಿ ದರೋಡೆಕೋರರು ಆಭರಣಗಳನ್ನು ದೋಚಿ ಪರಾರಿಯಾದರು.ನಂತರ ಇದನ್ನು ಗೌಡತಿ ನೀಲಮ್ಮ ಅವರು ಶರಣಬಸವೇಶ್ವರರಿಗೆ ವಿವರಿಸಲು ಅವರು ತಮ್ಮ ಅಭೂತಪೂರ್ವ ಶಕ್ತಿಯಿಂದ ಕಳ್ಳರ ಮನಸ್ಸನ್ನು ಬದಲಿಸಿ ಸ್ವತಹ ಕಳ್ಳರೇ ಆಭರಣಗಳನ್ನು ಹಿಂತಿರುಗಿಸಿದ ಪವಾಡವು ಜರಗಿತು.

ಇಂತಹ ದೈವಿಕ ಶಕ್ತಿಯನ್ನು ಪಡೆದಿದ್ದರು ಸಹ ಶ್ರೀ ಶರಣಬಸವೇಶ್ವರ ರನ್ನು ಅಂದಿನ ಕೆಲವು ಕಿಡಿಗೇಡಿ ಜನಗಳು ಅವರನ್ನು ಪರೀಕ್ಷಿಸುವ ಉದ್ಧಟತನಕ್ಕೆ ಮುಂದಾದರು ಒಂದೊಮ್ಮೆ ಒಬ್ಬ ಹೆಣ್ಣುಮಗಳು ತಾನು ಆರು ತಿಂಗಳ ಗರ್ಭಿಣಿ ಎಂದು ಹೇಳಿಕೊಂಡು ಬಂದು ತನಗೆ ಸಹಾಯ ಮಾಡಲು ಕೇಳಿದಾಗ ಅವಳ ಈ ನಡೆಯನ್ನು ಅರಿತಂತಹ ಮಹಾ ತತ್ವಜ್ಞಾನಿ ಕಾಲಜ್ಞನಿಯೂ ಆದ ಶ್ರೀ ಶರಣಬಸವೇಶ್ವರರು ತಕ್ಷಣವೇ ಅವಳ ಉದರದಲ್ಲಿ ಆರು ತಿಂಗಳ ಮಗುವನ್ನು ಸೃಷ್ಟಿಸಿದರು. ಆಗ ಆ ಮಹಿಳೆ ತನ್ನ ತಪ್ಪನ್ನು ಅರಿತು ಕ್ಷಮೆ ಯಾಚಿಸಿ ಮುನ್ನಡೆದಳು. ಮತ್ತೊಮ್ಮೆ ಒಬ್ಬ ದಂಪತಿಗಳು ತಮಗೆ ತಕ್ಷಣವೇ ಒಂದು ಮಗುವನ್ನು ಕರುಣಿಸಲು ಬೇಡಿಕೊಂಡರು ಆಗ ಶ್ರೀ ಶರಣಬಸವೇಶ್ವರರು ತೊಟ್ಟಿಲಲ್ಲಿ ಆಡುತ್ತಿದ್ದ ಆದಿಗೌಡಪ್ಪ ಗೌಡರ ಮಗುವನ್ನು ತಂದು ಆ ದಂಪತಿಗಳಿಗೆ ದಾನವಾಗಿ ಕೊಟ್ಟುಬಿಟ್ಟರು ಆದರೂ ಸಹ ಆದಿ ದೊಡ್ಡಪ್ಪಗೌಡರು ಮೌನವಾಗಿಯೇ ಇದ್ದರು ಆದರೆ ಇವರ ಪತ್ನಿ ಗೌಡತಿ ನೀಲಮ್ಮ ಅವರು ನೊಂದುಕೊಂಡು ಕಣ್ಣೀರಿಡುತ್ತಿರಲು ಶ್ರೀ ಶರಣಬಸವೇಶ್ವರ ಒಂದು ವಾಗ್ದಾನವನ್ನು ಕೊಟ್ಟು. ಆ ಚಂದ್ರ ಸೂರ್ಯ ಇರುವವರೆಗೂ ನಿಮ್ಮ ವಂಶ ದೀಪವು ಬೆಳಗುತಿರಲಿ. ನಿಮ್ಮ ವಂಶದ ಕುಡಿಯೇ ನನ್ನ ಪೀಠಾಧಿಪತಿಯಾಗಿ ಸಕಲ ಪೂಜಾ ಕೈಂಕಾಲಗಳನ್ನು ನೆರವೇರಿಸಲಿ ಎಂದು ಳಿದರು. ಅದರಂತೆಯೇ ಅವರು ಲಿಂಗೈಕ್ಯರಾಗಿ ಸತತ ಎರಡು ನೂರು ವರ್ಷಗಳ ಕಾಲದಿಂದಲೂ ಆದಿದೊಡ್ಡಪ್ಪ ಗೌಡರ ವಂಶಸ್ಥರೇ ಶ್ರೀ ಶರಣಬಸವೇಶ್ವರ ಮಹಾದಾಸೋಹ ಸಂಸ್ತಾನದ ಪೀಠಾಧಿಪತಿಗಳಾಗಿದ್ದಾರೆ.

ಎಂಟನೇ ಪೀಠಾಧಿಪತಿ ಡಾಕ್ಟರ್ ಶರಣಬಸಪ್ಪ ಅಪ್ಪ ಅವರು ತಮ್ಮ 82ನೇ ವಯಸ್ಸಿನಲ್ಲಿ ಒಂದು ಗಂಡು ಮಗುವನ್ನು ಪಡೆಯುವ ಮೂಲಕ ಶ್ರೀ ಶರಣಬಸವೇಶ್ವರರು 9ನೇ ಪೀಠಾಧಿ ಪತಿಯನ್ನು ಕರುಣಿಸಿದ್ದಾರೆ.

ಶ್ರೀ ಶರಣುಬಸವೇಶ್ವರ ಮಹಾಸಂಸ್ಥಾನದ ವಿಶೇಷತೆ:

ಇಲ್ಲಿ ಆಗಮಿಸುವ ಭಕ್ತರಿಗೆ ದಿನದ ಮೂರು ಹೊತ್ತು ಅನ್ನದಾಸೋಹವು ವಿಶೇಷವಾಗಿ ಗೋಧಿ ಹುಗ್ಗಿ, ಜೋಳದ ಅನ್ನ, ಅಜ್ಜಿಗೆ ಮತ್ತು ಅನ್ನ ಸಾರು ಪ್ರಸಾದದ ರೂಪದಲ್ಲಿ ಭಕ್ತರಿಗೆ ನಿರಂತರವಾಗಿ ನಡೆದು ಬಂದಿದೆ. ಬಂದಿರುವುದು ಆದಿ ದೊಡ್ಡಪ್ಪ ಗೌಡರ ವಂಶಸ್ಥರ ಒಂದು ಅಪೂರ್ವ ಸಾಧನೆಯಾಗಿದೆ .

ಓಮ್ಮೆ ಮಳೆಗಾಲದ ಸಮಯದಲ್ಲಿ ದಾಸೋಹದ ಅನ್ನಪ್ರಸಾದ ಸಿದ್ಧತೆಗೆ ಒಣಕಟ್ಟಿಗೆ ಸಿಗದೆ ಇರುವ ಕಾರಣ ಆದಿ ದೊಡ್ಡಪ್ಪಗೌಡರು ಅವರ ಮನೆಯ ಛಾವಣಿಯ ಕಟ್ಟಿಗೆಯನ್ನು ತೆಗೆದು ಅನ್ನ ಪ್ರಸಾದವನ್ನು ಸಿದ್ಧಪಡಿಸಿ ಗುರುಭಕ್ತಿ ಮೆರೆದರು. ಇಲ್ಲಿ ವಿಭೂತಿಯನ್ನು ಸ್ವತಃ ಸಂಸ್ಥಾನದಲ್ಲಿಯೇ ಸಿದ್ಧಪಡಿಸಲಾಗುತ್ತದೆ ಹಾಗೆ ಸಿದ್ಧಪಡಿಸಿದ ವಿಭೂತಿಯನ್ನು ಬರುವ ಭಕ್ತರಿಗೆಲ್ಲ ಉಚಿತವಾಗಿ ವಿತರಿಸಲ್ಪಡುತ್ತದೆ.

ಈ ಆಚರಣೆಯು ಶಿವನ ಭಸ್ಮ ಧಾರಣೆ ತತ್ವದಲ್ಲಿ ಮುನ್ನಡೆದುಕೊಂಡು ಬಂದಿದೆ. ಈ ಸಂಸ್ಥಾನದದಲ್ಲಿ ಒಂದು ಜ್ಯೋತಿಯನ್ನು ನೋಡಬಹುದು ಅದು ಶ್ರೀ ಶರಣಬಸವೇಶ್ವರರು ತಮ್ಮ ತ್ರಿಕಾಲ ಪೂಜೆಯಲ್ಲಿ ಬಳಸುತ್ತಿದ್ದ ದೀಪವನ್ನು ಅವರ ಮರಣ ದಿನದಿಂದ ಹಿಡಿದು ಇಲ್ಲಿಯವರೆಗೆ ಆ ದೀಪವನ್ನು ಬೆಳಗಿಸಿಕೊಂಡು ಬರಲಾಗಿದೆ. ಆ ದೀಪದಲ್ಲಿ ಅವರನ್ನು ಸಾಕ್ಷಾತ್ಕರಿಸಿಕೊಳ್ಳಬಹುದು ಎಂಬುವುದು ಅವರ ಭಕ್ತರ ನಂಬಿಕೆಯಾಗಿದೆ. ಮತ್ತು ಅವರ ಲಿಂಗೈಕ್ಯರಾದ ಸ್ಥಳದಲ್ಲಿ ಗರ್ಭಗುಡಿಯನ್ನು ನಿರ್ಮಿಸಲಾಗಿದ್ದು ಅಲ್ಲಿನ ಮೂರ್ತಿ ಶ್ರೀ ಶರಣಬಸವೇಶ್ವರರ ಆಶಯದಂತೆಯೇ ಅವರ ಮತ್ತು ಅವರ ಗುರುಗಳಾದ ಮರುಳಸಿದ್ದರ ಎರಡು ಮುಖಗಳು ಒಂದೇ ದೇಹದಲ್ಲಿ ಕಂಡು ಬರುವುದು.

ಗುರು ಲಿಂಗ ಜಂಗಮ ತತ್ವದಲ್ಲಿನ ಗುರುವಿನ ಮಹತ್ವ ವರನ್ನು ಸಾರುತ್ತದೆ. ಅಲ್ಲದೆ ಭಾರತೀಯ ಸಂಸ್ಕೃತಿಯಲ್ಲಿ ಗುರುಶಿಷ್ಯ ಪರಂಪರೆಯನ್ನು ನೆನಪಿಸುತ್ತದೆ. ಶ್ರೀ ಶರಣಬಸವೇಶ್ವರ ದೇವಸ್ಥಾನವನ್ನು ಸಂಪೂರ್ಣ ಚಿನ್ನದ ಲೇಖನ ಕಾರ್ಯ ಆರಂಭವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಇಡೀ ಕರ್ನಾಟಕದಲ್ಲಿಯೂ ಹಾಗೂ ದಕ್ಷಿಣ ಭಾರತದ ಚಿನ್ನದ ದೇವಾಲಯ ಎಂಬ ಖ್ಯಾತಿಗೂ ಪಾತ್ರವಾಗಲಿದೆ.

 

 

 

 

 

 

 

 

 

 

ಲೇಖಕರು : ಶ್ರೀಮಮತಾ ಹಿರೇಮಠ ಹೊಕ್ರಾಣಿ.

Don`t copy text!