ಗೋಣಿಮಾರಯ್ಯ

ಶ್ರಾವಣ ಶರಣರ ಮಾಲಿಕೆ 3

ಕಾಯದ ಕಂಥೆಯ ಹಿಡಿದು ಅಕಾಯ ಚರಿತ್ರ ಪರಮನೆಂದು ಜಂಗಮ ಬಂದು
ಕರ ಖರ್ಪರವನಳವಡಿಸಿಕೊಂಡು
ಭಿಕ್ಷೆಗೆ ನಡೆಯಲು ಕೇಳಿದ ಇಂದ್ರಿಯಂಗಳು ನಿಲಲಮ್ಮದೆ ಕಡೆಯ ಬಾಗಿಲಲ್ಲಿ ನಿಲಕಿ ನೋಡುತಿರ್ದಯ್ಯಾ ದಶೇಂದ್ರಿಯಂಗಳು ಪ್ರದಕ್ಷಿಣ ಬಂದು
ತಮಗೆ ತಾವೇ ಅಂಜಿ ಓಡಿದವು ಕೇಟೇಶ್ವರ ಲಿಂಗನ ಶರಣನಿರವ ಕೇಳಿದಾಕ್ಷಣ

ಗೋಣಿಮಾರಯ್ಯ

ಶರಣ ಗೋಣಿಮಾರಯ್ಯನವರು 12 ನೇ ಶತಮಾನದ ಬಸವೋತ್ತರ ಕಾಲವೆಂದೂ ಕೇಟೇಶ್ವರ ಲಿಂಗದಲ್ಲಿ ಒಂಬತ್ತು ವಚನಗಳನ್ನು ಬರೆದಿರುವುದು ಕಂಡು ಬಂದಿದೆ .
ಇವು ಸಂಕೀರ್ಣ ವಚನಗಳು .
ಶರಣ ಗೋಣಿಮಾರಯ್ಯನವರು ಮನೆ ಮನೆಗೆ ಹೋಗಿ ಭಿಕ್ಷೆ ಬೇಡುವುದಷ್ಟೇ ಅಲ್ಲದೇ ದನಗಳನ್ನು ಕಾಯುವ ಕಾಯಕವನ್ನು ಮಾಡುತ್ತಿದ್ದ ಗೋಣಿಮಾರಯ್ಯನವರು ತಲೆಗೆ ಗೋಣಿಚೀಲವನ್ನು ಹಾಕಿಕೊಂಡು ಅದೇ ಗೋಣಿಚೀಲದ ಮರೆಯಲ್ಲಿ ನನ್ನ ಕೇಟೇಶ್ವರ ಇರುವನೆಂದು ನಂಬಿ, ಸತ್ಯ ಶುದ್ಧ ಕಾಯಕದ ಜೀವಿಯಾಗಿದ್ದ, ಗೋಣಿಮಾರಯ್ಯನವರ ವಯಕ್ತಿಕ ವಿಚಾರದ ಬಗ್ಗೆ ಎಲ್ಲಿಯೂ ಕಾಣದಿರುವುದು ಬೇಸರದ ಸಂಗತಿ .

ಇಲ್ಲಿ ಗೋಣಿ ಮಾರಯ್ಯನವರು ತಮ್ಮ ಈ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ .

ಈ ಶರೀರ ಎನ್ನುವುದು ನಾವು ಹೊತ್ತು ತಿರುಗುವ ಜಂಗಮನು ಧರಿಸಿರುವ ಜೋಳಿಗೆ ಇದ್ದ ಹಾಗೆ .
ಇಲ್ಲಿ ಜಂಗಮ ಜೋಳಿಗೆಯನ್ನು ಹಾಕಿಕೊಂಡು ತಿರುಗುವುದಲ್ಲ.
ಸಮಾಜವನ್ನು ತಿದ್ದುವ ಕೆಲಸವನ್ನು ಮಾಡಬೇಕು .ಜಂಗಮ
ಕೇವಲ ಲಿಂಗಧಾರಿಯಾಗುವುದಲ್ಲ .ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು .ಅಂದರೆ ಗುರು ಲಿಂಗ ಜಂಗಮದ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಳ್ಳಬೇಕು .
ಇಷ್ಟ ಲಿಂಗವೆಂಬ ಸಂಸ್ಕಾರವನ್ನು ಆಯತ ಸ್ವಾಯತ ಮತ್ತು ಸನ್ನಹಿತ ಮಾಡಿಕೊಳ್ಳಬೇಕೆಂದು ಹೇಳಿರುವುದು ಕಂಡು ಬಂದಿದೆ ಎನಿಸುತ್ತಿದೆ .
ಇಲ್ಲಿ ಗೋಣಿ ಮಾರಯ್ಯ ಹೇಳಿದ ಕಾಯ ಅಂದರೆ ಈ ಶರೀರ ಎನ್ನುವುದು ಪಂಚಜ್ಞಾನೇಂದ್ರೀಯ ಮತ್ತು ಪಂಚ ಕರ್ಮೇಂದ್ರೀಯಗಳ ಸಮೂಹ.
ಇಲ್ಲಿ ಪಂಚಜ್ಞಾನೇಂದ್ರೀಯಗಳು ಎಂದರೆ
1ಕಣ್ಣುಗಳು,
2ಕಿವಿಗಳು,
3ನಾಲಿಗೆ
4ಮೂಗು,ಮತ್ತು
5ತ್ವಚೆ
ಪಂಚ ಕರ್ಮೇಂದ್ರಿಯಗಳು ಎಂದರೆ
1ಕೈಗಳು
2ಕಾಲುಗಳು
3ಬಾಯಿ
4ಗುದದ್ವಾರ
5ಜನನೇಂದ್ರೀಯಗಳು
ಈ ಜ್ಞಾನೇಂದ್ರೀಯ ಹಾಗೂ ಕರ್ಮೇಂದ್ರೀಯಗಳಿಂದ ಕೂಡಿದುದೇ ದಶೇಂದ್ರೀಯಗಳು.
ಚರ್ಮ,ಮಾಂಸ ರಕ್ತ, ಸ್ನಾಯು,ಕೊಬ್ಬು ,ಮಜ್ಜೆ ,ಮೂಳೆ
ಮಲಮೂತ್ರಗಳಿಂದ ತುಂಬಿರುವ ಈ ದೇಹವೇ ಸ್ಥೂಲ ಶರೀರ.

ಲಿಂಗಾಯತ ಧರ್ಮದಲ್ಲಿ ಅಷ್ಟಾವರಣಗಳು ಅಂದರೆ ಗುರು ,ಲಿಂಗ, ಜಂಗಮ, ಪಾದೋದಕ,ಪ್ರಸಾದ, ವಿಭೂತಿ,ರುದ್ರಾಕ್ಷಿ ಮತ್ತು ಮಂತ್ರಗಳೇ ಅಂಗವಾಗಿವೆ.
ಪಂಚಾಚಾರಗಳು ಅಂದರೆ
ಲಿಂಗಾಚಾರ, ಶಿವಾಚಾರ,ಸದಾಚಾರ ,ಗಣಾಚಾರ,ಮತ್ತು ಭೃತ್ಯಾಚಾರ ಈ ಪಂಚಾಚಾರಗಳೇ ಪ್ರಾಣಗಳಾಗಿವೆ.

ಭಕ್ತ ,ಮಾಹೇಶ, ಪ್ರಸಾದಿ, ಪ್ರಾಣ ಲಿಂಗಿ,ಶರಣ ,ಐಕ್ಯ ಈ ಷಟ್ ಸ್ಥಲಗಳಿಗೆ ಬಸವಾದಿ ಶರಣರು ಹೊಸ ಆಯಾಮ ನೀಡಿದ್ದಾರೆ.ಈ ಷಟಸ್ಥಲಗಳೇ ಆತ್ಮವಾಗಿವೆ. ಈ ಅಷ್ಟಾವರಣಗಳನ್ನು ಶರಣರು ಚಲನಗೊಳಿಸಿದರು.

ಹೇಗೆ ಹೊರಗೆ ಕಾಣುವ ದೇವಾಲಯವನ್ನು ನಿರಾಕರಿಸಿ ತಮ್ಮ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡರು ಅದೇ ರೀತಿ ಅಷ್ಟಾವರಣಗಳನ್ನು ಕೂಡ ಶಿವಶರಣರು ದೇಹವೆಂಬ ದೇವಾಲಯದಲ್ಲಿಯೇ ಕಂಡುಕೊಂಡರು. ತಾನೇ ಗುರು ತಾನೇ ಲಿಂಗ ತಾನೇ ಜಂಗಮವಾಗಬೇಕು ತಾನೇ ವಿಭೂತಿ ರುದ್ರಾಕ್ಷಿ ಧರಿಸಬೇಕು ತಾನೆ ಮಂತ್ರವನ್ನು ಜಪಿಸಬೇಕು ಪ್ರಸಾದವ ಸೇವಿಸಬೇಕೆಂದು ಹೇಳಿದರು.
ಶಿವಶರಣರಲ್ಲಿ
ಗುರು -ಹೊರಗಿರದೇ ಒಳಗಿನ ಅರಿವಾಗಿ ಬೆಳೆಯುತ್ತದೆ.
ಲಿಂಗ – ಹೊರಗಿರದೇ ಒಳಗಿನ ಆಚಾರವಾಗಿ ಬೆಳೆಯುತ್ತದೆ.
ಅದೇ ರೀತಿ
ಜಂಗಮ -ಹೊರಗಿರದೇ ಒಳಗಿನ ಅನುಭಾವವಾಗಿ ಬೆಳೆದು ನಿಲ್ಲುತ್ತದೆ.
ಇಂತಹ ಕಾಯದ ಜೋಳಗಿಯ ಬಗ್ಗೆ ಗೋಣಿಮಾರಯ್ಯನವರ ಈ ವಚನದಲ್ಲಿ ಅರಿತುಕೊಳ್ಳಬಹುದು.

ಒಟ್ಟಿನಲ್ಲಿ ನಶ್ವರವಾದ ಈ ಮಾಂಸ ಮುದ್ದೆಗಳಿಂದ ಕೂಡಿದ ಶರೀರವನ್ನು ಆಂತರಿಕ ಹಾಗೂ ಬಾಹ್ಯವಾಗಿ ಶುದ್ಧವಾಗಿಟ್ಟುಕೊಂಡು .
ಸಮಾಜದ ಪರೋಪಕಾರದಲ್ಲಿ ದೃಢವಾದ ಭಕ್ತಿಯಿಂದ ತೊಡಗಿಸಿಕೊಂಡರೆ ಆ ಕೇಟೇಶ್ವರ ಲಿಂಗವು ವಲಿದು ಬರುವನೆಂಬುವುದನ್ನು ಅರಿತುಕೊಳ್ಳಬಹುದಾಗಿದೆ

-ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ

Don`t copy text!