ವಚನ ದರ್ಶನ ಕರ್ತ ಶ್ರೀ ಸದಾಶಿವಾನಂದ ಸ್ವಾಮಿಗಳಿಗೆ ನೇರ ಪ್ರಶ್ನೆಗಳು
ಶ್ರೀ ಸದಾಶಿವಾನಂದ ಸ್ವಾಮಿಗಳು ನೀವೇ ಬರೆದುಕೊಂಡ ಜಗದ್ಗುರು ಮಹಾಸ್ವಾಮಿಗಳು ಎಂಬ ಅಭಿದಾನಗಳು ,ನೀವೇ ರಚಿಸಿದ ಅತ್ಯಂತ ಅಪ್ರಬುದ್ಧ ನಿಮ್ಮ ವಚನ ದರ್ಶನ ಇದರ ಪೂರ್ವ ಪೀಠಿಕೆ ತಮ್ಮ 44 ನಿಮಿಷಗಳ ಸಂವಾದ ಬಿತ್ತರಿಸಿದ ಮಾತುಗಳಿಂದ ನೀವೆಷ್ಟು ಅಪ್ರಬುದ್ಧರು ಎನ್ನುವುದು ಗೊತ್ತಾಗುತ್ತದೆ.
ವಚನಗಳು ಜಗತ್ತಿನ ಮೊದಲ ವಿದ್ರೋಹಿ ಬಂಡಾಯ ಸಾಹಿತ್ಯವನ್ನು ನೀವು ಸನಾತನ ವ್ಯವಸ್ಥೆಯ ತೆಕ್ಕೆಗೆ ಇಡುವುದು ಹಾಸ್ಯಾಸ್ಪದ ಮತ್ತು ಖಂಡನೀಯ.
ಇದು ನಿಮ್ಮ ಬೌದ್ಧಿಕ ದಿವಾಳಿಯೋ ಅಥವಾ ಅಗ್ರಹಾರದ ಆಮಿಷ ಅಹವಾಲೋ ಕಾಣದ ಕೈಗಳ ಗೊಂಬೆಯಾಗಿ ಅವರು ನಾಟಕದ ಕಲಿತ ಮಾತುಗಳಂತೆ ಮಾತನಾಡಿ ವಚನ ಸಾಹಿತ್ಯದ ಖೋಟಾ ವಚನ, ಪ್ರಕ್ಷಿಪ್ತ ,ಹೆಚ್ಚಿನ ವಚನಗಳನ್ನೇ ಆಯ್ದುಕೊಂಡು ನಿಮ್ಮ ಪ್ರದರ್ಶನ ಮಾಡುತ್ತಿರುವುದು ಮತ್ತು ಇದನ್ನು ಪ್ರಕಟಿಸಿದ ಪ್ರಕಾಶನ ಎಲ್ಲವೂ ಸಂಘ ಪರಿವಾರದ ಕೈವಾಡ ಎನ್ನುವುದು ಈಗ ತಿಳಿದುಬಂದಿದೆ.
ನಿಮ್ಮ ಕುಟಿಲತನ ವ್ಯಂಗ್ಯ ಕುಹುಕುತನದ ಮಾತುಗಳು ಬಸವಾಭಿಮಾನಿಗಳಿಗೆ ಅಚ್ಚರಿ ಮತ್ತು ನೋವು ತಂದಿದೆ. ಮೇಲಿಂದ ಮೇಲೆ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರನ್ನು ಮುಂದೆ ಮಾಡಿ ಅವರು ಐಕ್ಯವಾದ ಮೇಲೆ ನಿಮ್ಮ ಇಂತಹ ಕುಚೋದ್ಯ ವಿಚಾರಗಳನ್ನು ಹೇಳುತ್ತಿರುವುದು ಕನ್ನಡಿಗರ ದೌರ್ಭಾಗ್ಯವೆಂದೇ ನಂಬಿದ್ದೇನೆ.
1 ಶ್ರೀ ಸಿದ್ದೇಶ್ವರ ಶ್ರೀಗಳ ಸಮ್ಮುಖದಲ್ಲಿ ಇಂತಹ ಪ್ರಯತ್ನ ಏಕೆ ಮಾಡಲಿಲ್ಲ ?
2 ಬಸವಣ್ಣ ಯಜನೋಪವೀತ ಜನಿವಾರ ಹರಿದು ಮನೆ ಬಿಟ್ಟು ಹೋದ ಎಂದು ಹೇಳಿದ ಹರಿಹರನೆಂಬ ಶೈವ ಬ್ರಾಹ್ಮಣ ಬರೆದ ಸಾಲುಗಳು ಸುಳ್ಳೇ ?
3 ಬಸವಣ್ಣ ಮತ್ತು ಶರಣರು ವೇದ ಆಗಮ ಶಾಸ್ತ್ರ ಪುರಾಣಗಳನ್ನು ಧಿಕ್ಕರಿಸಿ ವಿರೋಧಿಸಿದ್ದು ಸುಳ್ಳೇ ?
4 275 ಕೊ ಅಧಿಕ ವಚನಗಳಲ್ಲಿ ವೇದಗಳನ್ನು ಧಿಕ್ಕರಿಸಿದ ವಚನಗಳು ತಮ್ಮ ಗಮನಕ್ಕೆ ಬಂದಿಲ್ಲವೇ ?
5 ಆದಯ್ಯನವರ ಉಲ್ಲೇಖ ಮಾಡಿದ ನೀವು ಅವರ ಇನ್ನೊಂದು ವಚನದಲ್ಲಿ ವೇದಗಳ ಹಿಂದೆ ಹೋಗದಿರು ಶಾಸ್ತ್ರಗಳ ಹಿಂದೆ ಸುಳಿಯದಿರು ಎನ್ನುವುದನ್ನು ನೀವು ನೋಡಿಲ್ಲವೇ ?
6 ಕಾವಿ ಲಾಂಛನಗಳ ಜಡತ್ವವನ್ನು ಖಂಡಿಸಿ ಬರೆದ ನೂರಾರು ವಚನಗಳನ್ನು ನೀವು ಇನ್ನೊಮ್ಮೆ ಓದಿ ಇದು ದಾಂಪತ್ಯ ಧರ್ಮ ನಿಮ್ಮ ಹಾಗೆ ಸನ್ಯಾಸ ಧರ್ಮವಲ್ಲ
7 ಅಂಕಿತಗಳಲ್ಲಿ ಬರುವ ಅವರ ಮೂಲ ದೇವರ ನಾಮಗಳನ್ನು ನೀವು ದೇವರೆಂದು ಬಿಂಬಿಸಿರುವುದು ಯಾವ ಸಾಧನೆಗೆ ?
8 ಅರಿವೇ ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಎನ್ನುವ ತತ್ವ ನಿಮಗೆ ತಿಳಿಯದೆ ಹೋಯಿತೇ
9 ಅಷ್ಟಾವರಣ ಪಂಚಾಚಾರಗಳು ಶಿವದಾರವನ್ನು ಗಟ್ಟಿಗೊಳಿಸುವ ವ್ಯವಧಾನವಲ್ಲ. ಅವು ಕಾಯದ ಗುಣಗಳು ಎನ್ನುವ ಚಾಮರಸನ ಸಾಲುಗಳು ನೀವು ಓದಿಲ್ಲವೇ ?
10 ಶೂನ್ಯ ಸಂಪಾದನೆಯ ಕಾಲ ಘಟ್ಟದಲ್ಲಿ ವಚನಗಳು ವಿರೂಪಗೊಂಡವು ಪ್ರಕ್ಷಿಪ್ತವಾದವು ಎನ್ನುವ ಡಾ ಎಂ ಎಂ ಕಲಬುರ್ಗಿ ಗುರುಗಳು ಆದಿಯಾಗಿ ಅನೇಕ ಸಂಶೋಧಕರ ಅಭಿಮತವು ಸುಳ್ಳೇ ?
11 ಅರುಹಿನ ಕುರುಹು ಲಿಂಗ ಉಪಾಧಿಕವಸ್ತು ಅಲ್ಲ ಎನ್ನುವುದು ನಿಮಗೆ ಅರಿಯದೆ ಹೋಯಿತೇ ?
12 ಲಿಂಗಾಯತ ಇದು ಸಮಷ್ಟಿ ಪ್ರಜ್ಞೆ ಹೊಂದಿದ್ದು ಅದನ್ನು ಜಾತಿಗೆ ಸೀಮಿತಗೊಳಿಸುವ ನಿಮ್ಮ ಹೊಲಸು ಬುದ್ಧಿಗೆ ದಿಕ್ಕಾರ
13 ನೀವು ಹೇಳುವ ಗೀತೆ ಅದು ಭಗವದ್ ಗೀತೆ ಅಲ್ಲ ಅದು ಶಿವ ಗೀತೆ ಎಂದು ಬಸವಣ್ಣ ಆದಿಯಾಗಿ ಅನೇಕ ಶರಣರು ಹೇಳಿದ್ದಾರೆ ಎನ್ನುವುದು ನಿಮ್ಮ ಗಮನಕ್ಕೆ ಬರಲಿಲ್ಲವೇ
14 ಆದಿ ಪುರಾಣವ ಅಸುರರಿಗೆ ಮಾರಿ ಗೀತ ಪುರಾಣವ ಹೋತಿಂಗೆ ಮಾರಿದೆ ಎನ್ನುವಲ್ಲಿ ನಿಮ್ಮ ಭಗವದ್ ಗೀತೆಯ ಉಲ್ಲೇಖ ಇರುವುದು ಮರೆ ಮಾಚಿದರೆ
15 ಮೇಲೊಂದು ಕೈಲಾಸ ಅದು ಹಾಳು ಮೊರಡಿ ಅಲ್ಲಿ ಇರುವ ಶಿವ ಒಬ್ಬ ಹೆಡ್ಡ ಎನ್ನುವ ವಚನ ಓದಿಲ್ಲವೇ ?
16 ಸ್ವರ್ಗ ನರಕ ಪಾಪ ಪುಣ್ಯ ಎನ್ನುವ ಅಸಹ್ಯ ಪದಗಳನ್ನು ತಿರಸ್ಕರಿಸದ ಶರಣರನ್ನು ಇಂದು ವೈದಿಕ ಪರಂಪರೆಗೆ ಸೇರಿಸುವುದು ಯಾವ ನ್ಯಾಯ ?
17 ಶರಣರು ಶಿವ ಪದವನ್ನು ಬಳಸಿದ್ದಾರೆ -ಆದರೆ ಅದು ನಿಮ್ಮ ಪೌರಾಣಿಕ ಶಿವನಲ್ಲ
ಅದು ಚೈತನ್ಯ ಮಂಗಳ ಎನ್ನುವ ಅರ್ಥದಲ್ಲಿ ಎನ್ನುವುದು ನಿಮಗೆ ತಿಳಿಯದೆ ಹೋಯಿತೇ ?
18 ಅಕ್ಕನಾಗಮ್ಮನ ಪ್ರಾಣಲಿಂಗಿ ಪ್ರಸಾದದ ಪ್ರಜ್ಞೆಯನ್ನು ಅತ್ಯಂತ ಕೆಟ್ಟದಾಗಿ ವಿವರಿಸಿದ್ದು ಸರಿಯೇ ?
19 ಕೊನೆಗೆ ಬಸವಣ್ಣನಿಗೆ ಪೆಟ್ಟು ಬಿಟ್ಟು ಅದಕ್ಕೆ ಅವನು ಕೂಡಲ ಸಂಗಮಕ್ಕೆ ಬಂದನು ಎನ್ನುವ ನಿಮ್ಮ ಉದ್ದಟತನದ ಮಾತುಗಳಿಗೆ ಕಡಿವಾಣ ಹಾಕಿ
20 ಕಾಮಾಲೆಯಾದವನ ಕಣ್ಣಿಗೆ ಜಗತ್ತು ಹಳದಿ ಕಾಣುವ ಹಾಗೆ ವೈದಿಕ ಕನ್ನಡಕ ಧರಿಸಿದ
ನಿಮಗೆ ವಚನ ದರ್ಶನವಾಗುವುದು ಖಂಡಿತ ಸಾಧ್ಯವಿಲ್ಲ
21 ವಿಭೂತಿ ಎಳೆಗಳು ಗಟ್ಟಿಯಾಗಬೇಕು ಎನ್ನುತ್ತಾ ಮಧ್ಯ ಹಣೆಗೆ ಕುಂಕುಮ ಇಡುವ ನೀವು ಬೇಲಿ ಮೇಲಿರುವ ಚಿಟ್ಟೆಗಳು
22 ಪಂಚಾಕ್ಷರ ಮಂತ್ರವ ಪಾವನ ಎನ್ನುವ ಮಹಾಪಾತಕನ ಮುಖವ ನೋಡಲಾಗದು ಎಂದು ಬಸವಣ್ಣನವರ ವಚನವನ್ನು ನೀವು ಓದಿಲ್ಲವೇ ?
23 ಜಗತ್ತಿನ ಎಲ್ಲ ಸಮಾಜವಾದಿ ಚಿಂತಕರು ಅಷ್ಟೇ ಏಕೆ ಇಂಗ್ಲೆಂಡ್ ಪಾರ್ಲಿಮೆಂಟ್ ಕೂಡ ಬಸವಣ್ಣನವರ ಪ್ರಗತಿಪರ ಪುರೋಗಾಮಿ ಚಿಂತನೆಯನ್ನು ಕೊಂಡಾಡುವಾಗ ನಿಮ್ಮಂತಹ ಅರ್ಧ ಮರ್ಧ ಜ್ಞಾನ ಪಂಡಿತರು ಇಂತಹ ಅಂಕಲಿಪಿಗೆ ಕೈ ಹಾಕುತ್ತಾರೆ
ವಚನ ಸಾಹಿತ್ಯದಲ್ಲಿ ಸಂಕಲನದ ಕಾಲಘಟ್ಟದಲ್ಲಿ ಪ್ರಕ್ಷಿಪ್ತ ಗೊಂಡಿದ್ದು ಕಲಬೆರಕೆಯಾಗಿದ್ದು ಸತ್ಯ ಅದರ ಪರಿಷ್ಕರಣೆಯ ಅಗತ್ಯವನ್ನು ಡಾ ಮಲ್ಲಾಪುರ ಸರ್
ಡಾ ಎಂ ಎಂ ಕಲಬುರ್ಗಿ ಆದಿ ಆಗಿ ಅನೇಕ ಸಂಶೋಧಕರು ತಮ್ಮ ಅಭಿಮತವನ್ನು ವ್ಯಕ್ತ ಪಡಿಸಿದ್ದಾರೆ. ವಸ್ತು ಸ್ಥಿತಿ ಹೀಗಿರುವಾಗ ನಿಮ್ಮ ಅರೆಬೆಂದ ಜ್ಞಾನದಿಂದ ಏನೇನೋ ಬರೆದು ಪ್ರಸಿದ್ಧಿ ಪಡೆಯುವ ನಿಮ್ಮ ಅಹಂಕಾರಕ್ಕೆ ಕೊನೆ ಹೇಳಿ .
ಕಾವಿ ಹೊದ್ದು ತಿರುಗಿ ಇನ್ನೊಬ್ಬರ ಶ್ರಮದ ಮೇಲೆ ಬದುಕುವ ನಿಮ್ಮ ಕಾಯಕವಾದರೂ ಏನು ? ನಿಮಗೆ ನಿಮ್ಮ ಅಧ್ಯಯನದ ಮೇಲೆ ವಿಶ್ವಾಸವಿದ್ದರೆ . ನಮ್ಮ ಜೊತೆಗೆ ಮೊದಲು ಸಂವಾದಕ್ಕೆ ಬನ್ನಿ.
ನಿಮ್ಮ ಉದ್ದಟತನದ ಮಾತುಗಳಿಗೆ ಕಡಿವಾಣ ಹಾಕಿ ನಿಮ್ಮ ದೋಷಪೂರಿತ ಕೃತಿಯನ್ನು ಹಿಂದೆ ಪಡೆಯಲು ಉಗ್ರವಾಗಿ ಆಗ್ರಹಿಸುತ್ತೇವೆ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ