ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿಂದಲ್ಲಿ,

ಶ್ರಾವಣ ಶರಣರು-೫

ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ? ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ? ಕ್ಷುತ್ತು ನಿವೃತ್ತಿಯಾದವಂಗೆ‌ ಕಟ್ಟೋಗರದ ಹೊರೆಯ ಹೊರಲೇತಕ್ಕೆ? ನಿತ್ಯ ಅನಿತ್ಯವ ತಿಳಿದು, ಮರ್ತ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ, ನಿಶ್ಚಯವ ತಾನರಿತು ಅತ್ತಣ ಇತ್ತಣ ಗೊತ್ತು ನಿಶ್ಚಯವಾಗಿ ನಿಂದಲ್ಲಿ, ಆ ಬಚ್ಚ ಬಯಲು ಬಳಗ ನಿನ್ನ ನೀನೆ ನೋಡಿಕೊ, ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ.

                                   -ಮೋಳಿಗೆಯ ಮಹಾದೇವಿ

ಮೋಳಿಗೆಯ ಮಹಾದೇವಿ ಎಂದು ಹೆಸರಾದ ಶರಣೆ ಕಾಶ್ಮೀರದ ಮೋಳಿಗೆ ಮಹಾದೇವಿ .

ಶರಣೆ ಮಹಾದೇವಿ ಕಾಶ್ಮೀರ ದಿಂದ ಜೀವನದಲ್ಲಿ ವಿರಕ್ತಿ ಹೊಂದಿ, ಕಲ್ಯಾಣಕ್ಕೆ ಬಂದು ಕಟ್ಟಿಗೆಯನ್ನು ಹೊತ್ತು ತಂದು ,ಮಾರುವ ಕಾಯಕ ಜೀವಿಗಳಾಗಿ ದುಡಿಯುತ್ತಾರೆ .

ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ ?

ನಾನು ಜೀವಿಸುವ ಈ ಕಾಯದಲ್ಲಿ ಕಾಯಕ ಎಂಬ ಜ್ಞಾನ ಜ್ಯೊತಿರ್ಲಿಂಗ ಬೆಳಗುತ್ತಿರುವಾಗ ,
ನಾನೇಕೆ ? ಕತ್ತಲೆ ಇದೆ ಎಂದು ಅಂಧಕಾರ ದಲ್ಲಿ ಮುಳುಗಲಿ. ಎನ್ನುವ ಪ್ರಶ್ನೆಯನ್ನು ಮಹಾದೇವಿ ಹಾಕಿಕೊಳ್ಳುತ್ತಾಳೆ.
ನಮ್ಮಕೈಯಲ್ಲೇ ಕಾಯಕ ಜೀವನದ ಜ್ಯೋತಿ ಇದೆ .ಆ ಅರುವಿನ ಜ್ಞಾನ ಜ್ಯೋತಿಯನ್ನು ಬೆಳಗಿಸಿಕೊಂಡು ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳಬೇಕು.
ನಮ್ಮ ಕೈಯಲ್ಲಿಯೇ ಕತ್ತಲೆಯನ್ನು ಓಡಿಸುವ ಬೆಳಕು ಇರುವಾಗ ಕತ್ತಲೆ ಇದೆ ಎಂದು ತಿಳಿಯುವುದು ನಮ್ಮ ದಡ್ಡತನ .ಎಂದು ಮೋಳಿಗೆಯ ಮಹಾದೇವಿಯು ಹೇಳುತ್ತಾಳೆ.

ಪರುಷ ರಸ ಕೈಯಲ್ಲಿ ಇರುವಾಗ ಕೂಲಿಯ ಮಾಡಲೇತಕೇ?

ಮುಟ್ಟಿದೆಲ್ಲವ ಚಿನ್ನವಾಗಿಸುವ ಮಣಿ ರಸವು ನಮ್ಮ ಬಳಿಯೇ ಇರುವಾಗ ನಾನೇಕೆ ? ಕೂಲಿ ಮಾಡಲಿ, ಕೂಲಿಗಾಗಿ ಹಂಬಲಿಸಲಿ ಎನ್ನುವ ದಿಟ್ಟ ನಿರ್ಧಾರಕ್ಕೆ ಮಹಾದೇವಿ ಬರುತ್ತಾಳೆ.
ಚಿನ್ನವನ್ನು ಕರಗಿಸಿ ರಸಮಾಡುವ ಮಾತು ,ಧೃಢ ಭಕ್ತಿ ನಮ್ಮ ಬಳಿಯೇ ಇರುವಾಗ ಅದರ ಉಪಯೋಗವನ್ನು ಅರಿತು ಕೊಂಡು ಕಾಯಕದಲ್ಲಿ ತೊಡಗುವ ಗಟ್ಟಿ ನಿರ್ಧಾರವನ್ನು ತಾಳುತ್ತಾಳೆ

ಕ್ಷುತ್ತು ನಿವೃತ್ತಿಯಾದವಂಗೆ ಕಟ್ಟೋಗರದ ಹೊರೆಯ ಹೊರಲೇತಕ್ಕೆ ?

ಹಸಿಯಲಾರದ ಹೊಟ್ಟೆಯ ಮೇಲೆ ತನ್ನೀರಿನ ಗಂಟನ್ನು ನಾನೇಕೆ ಕಟ್ಟಲಿ
ಅಳಿದು ಹೋಗುವ ಕಾಯ ವಿರಮಿಸಿ ಕುಳಿತಿದೆ
ಕಾಮ ,ಕ್ರೋಧ ,ಮೋಹ ,ಲೋಭ, ಮದ ,ಮತ್ಸರಾದಿ ಕಳೆದು ಸೋತು ನಿಂತಿದೆ ತನು.
ಹೊರಲಾರೆ ಮತ್ತೆ ಹೊರೆ ಎನ್ನುವ ಅರ್ಥವನ್ನು ಕಾಣಬಹುದು .

ನಿತ್ಯ ಅನಿತ್ಯವ ತಿಳಿದು ಮರ್ತ್ಯ ಕೈಲಾಸ ವೆಂಬುದು ಭಕ್ತರಿಗೆ ಯುಕ್ತಿಯಲ್ಲ.

12 ನೇ ಶತಮಾನದ ಶಿವಶರಣರು ಕಾಯಕಕ್ಕೆ ಮಹತ್ವದ ಸ್ಥಾನ ನೀಡಿದರು .
ಸತ್ಯ ಶುದ್ಧ ವಾದ ಕಾಯಕ .ಒಂದು ಹಣದಷ್ಟು ದುಡಿದು ಒಂದು ಗುಂಜಿ ತೂಕ ಹೆಚ್ಚು ಪಡಿಗೆ ಆಸೆ ಪಡದ ಕಾಯಕ .
ಇಸಕ್ಕಿಯಾಸೆ ನಮಗೇಕೆ ಮಾರಯ್ಯ ಪ್ರೀಯ ಒಪ್ಪಲಾರ. ಎನ್ನುವ ಮಾತನ್ನು ನೆನಪಿಸಿಕೊಂಡಾಗ, ಅವಾಗಿನ ಶಿವಶರಣರ ಮನಸ್ಸು ಇವತ್ತಿನ ಜನಕ್ಕೆ ಪೂರಕವಾಗಿ ನಿಲ್ಲಬೇಕಾಗಿದೆ.

ಎಷ್ಟು ಇದ್ದರೂ ಸಾಕಾಗದ ಮನದ ಆಸೆಗೆ, ನಾವೇ ಬೇಲಿ ಹಾಕಿಕೊಂಡು ಸಾಗಬೇಕು .

ಕಾಯದಿಂದ ಬಂದ ಪದಾರ್ಥ ಗುರು ,ಲಿಂಗ ,ಜಂಗಮಕ್ಕೆ ಅರ್ಪಿತ. ಅದು ಸತ್ಯ ಶುದ್ಧವಾದ ನಿತ್ಯ ದಾಸೋಹ.

ನಮ್ಮ ಸಮಾಜ ಅಭಿವೃದ್ಧಿಯಾಗಬೇಕಾದರೆ, ಪ್ರತಿಯೊಬ್ಬರೂ ಕಾಯಕವನ್ನು ಮಾಡಲೇಬೇಕು .
ಶರಣರು ಹೇಳಿದ ಹಾಗೆ, ಕಾಯಕವೇ ಕೈಲಾಸ ಎಂಬ ದಿವ್ಯ ವಾಣಿಯನ್ನು ಇಡೀ ಜಗತ್ತಿಗೆ ಸಾರಿ ಹೇಳಿದ್ದಾರೆ ನಮ್ಮ ಶರಣರು.

ಕೈಲಾಸ ಎಂಬುವುದು ಬರೀ ಕಲ್ಪನೆ . ಶ್ರಮಜೀವಿಯ ಕಾಯಕದಲ್ಲಿಯೇ ಕೈಲಾಸ ವಿದೆ ಎಂದು ಅರುಹಿದ್ದಾರೆ .
ಯಾವ ವೃತ್ತಿಯೂ ಮೇಲಲ್ಲ, ಯಾವ ವೃತ್ತಿಯೂ ಕೀಳಲ್ಲ, ಎನ್ನುವ ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿದ ಶರಣರು ಇಂದು ನಮಗೆ ಆದರ್ಶ ಪ್ರಾಯರಾಗಿ ನಿಲ್ಲುತ್ತಾರೆ .
ಭಕ್ತನಾದವನ ಯುಕ್ತಿಯಲಿ ನಾನೇ ದೇವರು ! ನಾನೇ ಪರಮಾತ್ಮ! ಎನ್ನುವ ದಿವ್ಯವಾದ ಚೈತನ್ನವನ್ನು ಲಿಂಗದ ಮುಖಾಂತರ ತುಂಬಿಕೊಂಡು, ತಾನೇ ಲಿಂಗಮಯವಾಗುವ ಅರುವಿನ ಕುರುವು ,ನಮ್ಮ ಕೈಯಲ್ಲಿಯೇ ಇರುವಾಗ, ಅನ್ಯ ದೇವರಿಗೆ ನಾವೇಕೆ? ಕೈ ಮುಗಿಯಬೇಕು?
ನಾನೇ ದೇವರಾಗಿ, ಬಳಲಿದ ,ನೊಂದ, ದುರ್ಬಲ ಮನಗಳಿಗೆ ನೆರಳಾಗಿ ಆಶ್ರಯದಾತರಾಗಿ ನಿಲ್ಲುವ ಪರಿಕಲ್ಪನೆಯನ್ನು ಅಂದಿನ ಕಾಲದ ನಮ್ಮ ಶರಣರು ಹಾಕಿಕೊಟ್ಟ ಮಾರ್ಗವನ್ನು ನಾವು ಇಂದಿನ ಕಾಲದಲ್ಲಿ ತುಳಿದು ನಡೆಯಬೇಕಾಗಿದೆ .
ಕಾಣದ ದೇವರಿಗೆ ಕೈ ಮುಗಿಯದೇ ನಿಜವಾದ, ವಾಸ್ತವದ ಜೀವನದಲ್ಲಿ
ಬದುಕುವ ಪಾಠವನ್ನು ನಮಗೆ ಕಲಿಸಿ ನುಡಿದಂತೆ ನಡೆದು, ತೋರಿದರು ನಮ್ಮ ಶರಣರು .
ಅದಕ್ಕಂತೆ ಶರಣರು ನಡೆದರೆ, ಧರೆಯೆಲ್ಲ ಪಾವಣ ಎನ್ನುವ ಮಾತು ಹುಸಿಯಲ್ಲ.

ಡಾ ಸಾವಿತ್ರಿ ಕಮಲಾಪೂರ

Don`t copy text!