ಅಶೋಕನ ಶಿಲಾಶಾಸನ ಪ್ರದೇಶದ ಅಭಿವೃದ್ಧಿಗಾಗಿ ೧೦ ಕೋಟಿ ಅನುದಾನ
ನೀಲನಕ್ಷೆ ತಯಾರಿಸಲು ಅಧಿಕಾರಿಗಳಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಸೂಚನೆ
e- ಸುದ್ದಿ ಮಸ್ಕಿ
ಅಶೋಕನ ಶಿಲಾಶಾಸನ ಪ್ರದೇಶದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ೧೦ ಕೋಟಿ ರೂ. ಮೀಸಲಿಟ್ಟಿದ್ದಾರೆ. ಪ್ರಾಚ್ಯವಸ್ತು ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಶೀಘ್ರ ನೀಲನಕ್ಷೆ ಸಿದ್ದಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಶಾಸಕ ಆರ್ ಬಸನಗೌಡ ತುರ್ವಿಹಾಳ ಸೂಚಿಸಿದರು.
ಶಾಸಕರು ಮಂಗಳವಾರ ತಮ್ಮ ಕಚೇರಿಯಲ್ಲಿ ಪ್ರಾಚ್ಯವಸ್ತು ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ತಹಸೀಲ್ದಾರ, ಪುರಸಭೆ ಮುಖ್ಯಾಧಿಕಾರಿ, ತಾ.ಪಂ.ಇಒ ಸೇರಿದಂತೆ ವಿವಿಧ ಅಧಿಕಾರಿಗಳ ಸಭೆ ನಡೆಸಿದರು.
ಅಶೋಕ ವೃತ್ತದ ಅಭಿವೃದ್ಧಿ ಜೊತೆ ಶಾಸನ ಸ್ಥಳದವರೆಗೆ ಡಿವೈಡರ್ ಹಾಗೂ ಬೀದಿದೀಪ ಅಳವಡಿಕೆ ಶಿಲಾ ಶಾಸನದ ಮುಂಭಾಗದಲ್ಲಿ ಉದ್ಯಾನವನ, ವಾಕಿಂಗ್ ಪಾತ್, ಮ್ಯೂಸಿಯಂ, ವಿದ್ಯುತ್ ದೀಪಗಳ ಅಳವಡಿಕೆ, ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಇಟ್ಟುಕೊಂಡು ನೀಲನಕ್ಷೆ ತಯಾರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರೆ ಶೀಘ್ರದಲ್ಲಿ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದರು.
ತಹಶೀಲ್ದಾರ್ ಡಾ.ಮಲ್ಲಪ್ಪ ಯರಗೋಳ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಂದ್ರ ಜಲ್ದಾರ್, ಪುರಾತತ್ವ ಇಲಾಖೆ ಎಂಜನಿಯರ್ ಕೀರಣಕುಮಾರ, ಲೋಕೋಪಯೋಗಿ ಇಲಾಖೆ ಸಂದೀಪ, ಲಕ್ಷ್ಮಿಕಾಂತ ಗುಂಟಿ ಕ್ಯಾಷುಟೆಕ್ ಎಂಜನಿಯರ್‌ಗಳಾದ ತಿಮ್ಮಣ್ಣ, ಕೌಸರ್ ಪಾಷಾ ಸರ್ವೇ ಇಲಾಖೆ ಸಹಾಯಕ ನಿರ್ದೇಶಕ ಗೀರೀಶ, ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಶಿಲಾ ಶಾಸನ ಸ್ಥಳ ಪರಿಶೀಲನೆ:
ಶಾಸಕ ಆರ್ ಬಸನಗೌಡ ತುರ್ವಿಹಾಳ ಹಾಗೂ ಅಧಿಕಾರಿಗಳು ಅಶೋಕ ಶಿಲಾಶಾಸನ ಸ್ಥಳಕ್ಕೆ ಭೇಟಿ ನೀಡಿ ೧೦ ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಅಧಿಕಾರಿಗಳಿಗೆ ಸ್ಥಳದಲ್ಲಿ ಶಾಸಕರು ಮಾಹಿತಿ ನೀಡಿದರು. ಮುಖಂಡ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಹನುಮಂತಪ್ಪ ಮುದ್ದಾಪೂರ, ನಾರಾಯಣಪ್ಪ ಕಾಸ್ಲಿ ಇತರರು ಇದ್ದರು.