ಅಹಿಂಸೆಯನ್ನು ಬೋಧಿಸಿದ ಗಾಂಧಿಯನ್ನು ಹಿಂಸಿಸಿ ಕೊಂದೆವು- ಸಾಹಿತಿ ಸಿ.ದಾನಪ್ಪ

ಅಹಿಂಸೆಯನ್ನು ಬೋಧಿಸಿದ ಗಾಂಧಿಯನ್ನು ಹಿಂಸಿಸಿ ಕೊಂದೆವು- ಸಾಹಿತಿ ಸಿ.ದಾನಪ್ಪ

e- ಸುದ್ದಿ ಮಸ್ಕಿ
ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧಿಯನ್ನು ಹಿಂಸೆಯ ಮೂಲಕ ಕೊಂದು ಆತನ ವಿಚಾರಗಳಿಗೆ ತೀಲಾಂಜಲಿಯನ್ನಿಟ್ಟಿದ್ದೇವೆ. ಜಗತ್ತು ಗಾಂಧಿಯನ್ನು ಕೊಂಡಾಡಿದರೆ, ಗಾಂಧಿಯನ್ನು ಅಪ್ಪಿಕೊಳ್ಳದ ಮನಸ್ಸುಗಳು ಟೀಕಿಸುವದಕ್ಕೆ ವಿಜೃಂಭಿಸುತ್ತಿವೆ ಎಂದು ಸಾಹಿತಿ ಸಿ.ದಾನಪ್ಪ ಹೇಳಿದರು.
ಪಟ್ಟಣದ ಮುಖ್ಯ ಶಿಕ್ಷಕ ಸಿದ್ದಾರಡ್ಡಿ ಗಿಣಿವಾರ ಅವರ ಮನೆಯಲ್ಲಿ ಗುರುವಾರ ಅಕ್ಷರ ಸಾಹಿತ್ಯ ವೇದಿಕೆ, ಬಂಡಾರ ಪ್ರಕಾಶನ ಮತ್ತು ಕಸಾಪ ತಾಲ್ಲೂಕು ಘಟಕಗಳ ಅಡಿಯಲ್ಲಿ ಗಾಂಧೀ-೧೫೫ ಮನೆ ಮನೆಗೆ ಗಾಂಧಿ, ಗಾಂಧಿ ವಿಚಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಾಂಧಿ ಕಂಡ ಭಾರತಕ್ಕೂ ಇಂದಿನ ಭಾರತಕ್ಕೂ ಎಷ್ಟೊಂದು ವ್ಯಾತ್ಯಾಸವಾಗಿದೆ. ಸ್ವಾತಂತ್ರಕ್ಕಾಗಿ ಹೋರಾಡಿದ ಗಾಂಧಿಯನ್ನು ಇಂದು ಟೀಕಿಸುವ ಭರದಲ್ಲಿ ಗಾಂಧಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಸಿ.ದಾನಪ್ಪ ಕಳವಳ ವ್ಯಕ್ತಪಡಿಸಿದರು.
ಅಕ್ಷರ ಸಾಹಿತ್ಯ ವೇದಿಕೆಯ ಸಂಚಾಲಕ ಗುಂಡುರಾವ್ ದೇಸಾಯಿ ಮಾತನಾಡಿ ಕಳೆದ ಎಂಟು ವರ್ಷಗಳಿಂದ ಗಾಂಧಿ ಜಯಂತಿ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಈ ವರ್ಷ ಗಾಂಧಿ ವಿಚಾರ ಧಾರೆಗಳನ್ನು ಮನೆ ಮನೆಗೆ ಮುಟ್ಟಿಸುವ ಯೋಚನೆಯಿಂದ ಒಂದು ವಾರಗಳ ವರೆಗೆ ಗಾಂಧೀ ಕುರಿತು ಚಿಂತನೆ, ಕವನ ವಾಚನ, ಗಾಂಧಿ ಆತ್ಮ ಚರಿತ್ರೆಯ ಆಯ್ದ ಭಾಗಗಳ ವಾಚನ ನಡೆಯಲಿದೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಮಹಾಂತೇಶ ಮಸ್ಕಿ ಮಾತನಾಡಿ ಗಾಂಧಿ ಮತ್ತು ಅಂಬೇಡ್ಕರ್ ನಮ್ಮ ದೇಶದ ಮಹಾನ್ ಚೇತನಗಳು ಗಾಂಧಿ ಸ್ವಾತಂತ್ರಕ್ಕಾಗಿ ದಿಟ್ಟ ಹೆಜ್ಜೆ ಇಟ್ಟರೆ ಅಂಬೇಡ್ಕರ್ ದೇಶದ ಆಂತರಿಕ ಜನಾಂಗಗಳ ಮದ್ಯ ಇರುವ ಮೇಲು ಕೀಳುಗಳ ವಿರುದ್ಧ ಹೋರಾಡಿದವರು. ಇವರಿಬ್ಬರಲ್ಲಿ ಅನೇಕ ವಿಚಾರಗಳಲ್ಲಿ ಭಿನ್ನತೆ ಇದ್ದಾಗ್ಯೂ ಅವರಿಬ್ಬರ ಹೋರಾಟ ದೇಶ ಮತ್ತು ಜನಾಂಗದ ಅಭಿವೃದ್ದಿಗಾಗಿ ಇರುವುದು ನಮಗೆ ಆದರ್ಶವಾಗಿದೆ ಎಂದರು.
ಶಿಕ್ಷಕ ಮಲ್ಲಯ್ಯ ಗಾಂಧಿ ಕುರಿತು ಮಾತನಾಡಿದರು. ಸಿಆರ್‌ಪಿ. ರಾಮಸ್ವಾಮಿ ಶಾಂತಿ ಮಂತ್ರ ಕವಿತೆ ವಾಚಿಸಿದರು. ಕಸಾಪ ಅಧ್ಯಕ್ಷ ಮಹಾಂತೇಶ ಬ್ಯಾಳಿ, ಸಿದ್ದರಡ್ಡಿ ಗಿಣಿವಾರ, ಪಂಪಾಪತಿ ಹೂಗಾರ, ಪ್ರಶಾಂತ, ಮಹಾಂತೇಶ, ಪರಶುರಾಮ ಕೊಡಗುಂಟಿ ಮಾತನಾಡಿದರು.

Don`t copy text!