ಶರಣರ ಸಿದ್ಧಾಂತಗಳು ಮತ್ತು ಶೂನ್ಯ ಸಂಪಾದನೆಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕನವರು”

ಪುಸ್ತಕ ಪರಿಚಯ

“ಶರಣರ ಸಿದ್ಧಾಂತಗಳು ಮತ್ತು ಶೂನ್ಯ ಸಂಪಾದನೆಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕನವರು”

ಡಾ. ವಿಜಯಕುಮಾರ ಕಮ್ಮಾರ ಅವರ ಕೃತಿಯ ಕುರಿತು “ನಲ್ನುಡಿಗಳು”

ಶರಣ ಸಾಹಿತ್ಯದ ಪ್ರೀತಿ ಅಭಿಮಾನವನ್ನು ತಮ್ಮ ಚಿಂತನೆ, ಬರಹಗಳ ಮೂಲಕ ಅನವರತ ಪ್ರಸಾರ ಮಾಡುತ್ತಿರುವ ಡಾ. ವಿಜಯಕುಮಾರ ಕಮ್ಮಾರ ಅವರು ನಮ್ಮ ನಡುವೆ ಇರುವ ತುಂಬಾ ಸರಳ, ಸಹಜ ವ್ಯಕ್ತಿತ್ವ ಹೊಂದಿದ ಶರಣರು. ಶರಣ ಸಿದ್ಧಾಂತವನ್ನು ತುಂಬಾ ವೈಚಾರಿಕವಾಗಿ ಅಧ್ಯಯನ ಕೈಗೊಂಡು ತುಂಬಾ ಪ್ರಬುದ್ಧವಾಗಿ ಅಷ್ಟೇ ವೈಚಾರಿಕವಾಗಿ ಅಷ್ಟೇ ಅಧಿಕಾರವಾಣಿಯಿಂದ ಹಾಗೂ ಮುತುವರ್ಜಿಯಿಂದ ಮಾತನಾಡುವಲ್ಲಿ, ಬರವಣಿಗೆಗೆ ಅಳವಡಿಸುವಲ್ಲಿ ಇವರು ಸಿದ್ಧಹಸ್ತರು.

ಸಮ ಸಮಾಜದ ರಚನೆಗಾಗಿ ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿ ಬಹುದೊಡ್ಡ ಶರಣ ಚಳುವಳಿ ಜರುಗಿದ್ದು ಆ ಕಾಲದ ಸತ್ಯ. ಅಂದು ಊದಿದ ಶರಣರ ಕ್ರಾಂತಿಯ ಕಹಳೆ ಸುಮಾರು 900 ವರ್ಷಗಳು ಗತಿಸಿದರೂ ನಿರಂತರವಾಗಿ ಮೊಳಗುತ್ತಲೆ ಇದೆ. ಶರಣ ಚಳುವಳಿಯ ಕಾವು ಶರಣರ ವಿಚಾರ ಸಾಹಿತ್ಯದಲ್ಲಿ ಈವತ್ತಿನವರೆಗೂ ಹೊಗೆಯಾಡುತ್ತಲೇ ಇದೆ. ಮುಂದೆಯೂ ಹೀಗೆಯೇ ಇರುತ್ತದೆ. ಬೂದಿ ಗರ್ಭದ ಕೆಂಡದಂತಿರುವ ಶರಣರ ಚಿಂತನೆಗಳು ಸದಾ ನಿಗಿ ನಿಗಿಸುತ್ತಿರಬೇಕು. ಹೊಸ ವಿಚಾರ ಧಾರೆಗಳು ಸದಾ ತಾಜಾತನದಿಂದ ಕಂಗೊಳಿಸುತ್ತಿರಬೇಕು. ವಚನ ಸಾಹಿತ್ಯದ ಚಿಂತನ ಮಂಥನದಿಂದ ನವನೀತ ಹೊರ ಬರುತ್ತಿರಬೇಕು ಎಂಬುದೇ ಡಾ. ವಿಜಯಕುಮಾರ ಕಮ್ಮಾರ ಅವರ ಹೊಂಗನಸು.

 

 

 

 

 

 

 

 

 

 

ಅವರ ಈ ಕನಸಿಗೆ ಸಾಕ್ಷಿಯಾಗಿದ್ದು ಒಂದು ಅವರು ಸಂಸ್ಥಾಪಿಸಿದ “ವಚನ ಮಂದಾರ” ವೇದಿಕೆ ಮತ್ತೊಂದು ಅವರ ಇದೀಗ ಪ್ರಕಟಗೊಂಡಿರುವ ಚೊಚ್ಚಲ ಕೃತಿ “ಶರಣರ ಸಿದ್ಧಾಂತಗಳು ಮತ್ತು ಶೂನ್ಯ ಸಂಪಾದನೆಯಲ್ಲಿ ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕನವರು” ಎಂಬುದು.

ಅನುಪಮ ಒಳನೋಟ ಹೊಂದಿದ ಈ ಕೃತಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕರೂ ಮತ್ತು ಮುಖ್ಯಸ್ಥರು ಹಾಗೂ ವಿದ್ವಾಂಸರಾದ ಡಾ. ವೀರೇಶ ಬಡಿಗೇರ ಗುರುಗಳು ತುಂಬಾ ಮೌಲ್ವಿಕವಾದ ಮುನ್ನುಡಿ ಬರೆದು ಕೃತಿಯ ಕುರಿತು ಕೃತಿಯ ಮಹತ್ವ ಪ್ರಸ್ತುತ ಪಡಿಸಿದ್ದಾರೆ. “ಈ ಪುಸ್ತಕಕ್ಕೆ ಮುನ್ನುಡಿ ರೂಪದ ಕೆಲವು ಮಾತುಗಳನ್ನು ಬರೆಯಲು ಹಚ್ಚಿ, ನನ್ನ ಓದಿನ ವ್ಯಾಪ್ತಿಯನ್ನು ಹೆಚ್ಚಿಸಿದ ಶ್ರೀ ವಿಜಯಕುಮಾರ ಅವರ ಜ್ಞಾನದ ಪ್ರೀತಿಗೆ ವಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಕೃತಿಕಾರರನ್ನು ಅಭಿನಂದಿಸಿದ್ದಾರೆ.

ಈ ಕೃತಿ ನಿಜಕ್ಕೂ ಶರಣರ ಸಿದ್ಧಾಂತ ಮತ್ತು ಶರಣರ ವಿಚಾರ ಧಾರೆಗಳನ್ನು ಅಧ್ಯಯನ ಕೈಗೊಳ್ಳುವವರಿಗೆ ಉಪಯುಕ್ತ ಮಾಹಿತಿಯನ್ನು ಒಳಗೊಂಡ ಕೈಪಿಡಿಯಂತಿದೆ.

ಕೆರೆಹಳ್ಳ ಬಾವಿಗಳು ಮೈದೆಗೆದಡೆ
ಗುಳ್ಳೆ ಗೊರಜು ಚಿಪ್ಪು ಕಾಣಬಹುದು
ವಾರಿಧಿ ಮೈದೆಗೆದಡೆ ರತ್ನ ಮುತ್ತುಗಳ ಕಾಣಬಹುದು
ಕೂಡಲಸಂಗನ ಶರಣರು ಮನದೆರೆದು ಮಾತನಾಡಿದಡೆ
ಲಿಂಗವ ಕಾಣಬಹುದು (ಸ.ವ.ಸಂ. 1 / ವಚನ ಸಂ. 862 / ಪುಟ ಸಂ. 7)

ಅಪ್ಪ ಬಸವಣ್ಣನವರ ವಚನದ ಸಾಲಿನಂತೆ ಶರಣ ಡಾ. ವಿಜಯಕುಮಾರ ಕಮ್ಮಾರ ಅವರು ಮನದೆಗೆದು ಮಾತನಾಡಿದ್ದಾರೆ. ಕಾರಣ ಕೃತಿಯುದ್ದಕ್ಕೂ ಜಗದಗಲ ಮುಗಿಲಗಲ ಮಿಗೆಯಗಲ ಅಗಮ್ಯ ಅಗೋಚರ ಅಪ್ರತಿಮ ಅಪ್ರಮಾಣದ ಲಿಂಗವನ್ನು ಕೃತಿಯಲ್ಲಿ ಚುಳುಕಾಗಿಸಿದ್ದಾರೆ. ಲಿಂಗಾಯತ ಧರ್ಮದ ಅಂಗ-ಪ್ರಾಣ-ಆತ್ಮಗಳೆಂಬ ಅಷ್ಟಾವರಣ-ಪಂಚಾಚಾರ-ಷಟಸ್ಥಲಗಳ ವಿವರಗಳನ್ನು ಅಧ್ಯಯನಪೂರ್ಣವಾಗಿ ವಿಶದೀಕರಿಸಿದ್ದಾರೆ.

ಕೃತಿಯ ಮೊದಲ ಲೇಖನ “ಷಟಸ್ಥಲಗಳು” ಎಂಬುದಾಗಿದೆ. ನಂತರ ಭಕ್ತ ಸ್ಥಲ, ಮಾಹೇಶ್ವರ ಸ್ಥಲ, ಪ್ರಸಾದಿ ಸ್ಥಲ, ಪ್ರಾಣಲಿಂಗಿ ಸ್ಥಲ, ಶರಣ ಸ್ಥಲ, ಐಕ್ಯ ಸ್ಥಲ ಎಂದು ಈ ಆರೂ ಸ್ಥಲಗಳ ಪ್ರತ್ಯೇಕ ಲೇಖನಗಳಿವೆ. “ಬಸವಾದಿ ಶರಣರು ಕಂಡ ಅಷಾವರಣಗಳು” ಎಂಬ ಲೇಖನಕ್ಕೆ ಅಲ್ಲಮ ಪ್ರಭುಗಳ ವಚನಗಳಲ್ಲಿ ಗುರು, ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಜಂಗಮ ತತ್ವ, ಮಡಿವಾಳ ಮಾಚಿದೇವರ ವಚನಗಳಲ್ಲಿ ವಿಭೂತಿ ತತ್ವ, ಹಡಪದ ಅಪ್ಪಣ್ಣನವರ ವಚನಗಳಲ್ಲಿ ಪಾದೋದಕ ತತ್ವ, ಬಸವಣ್ಣನವರ ವಚನಗಳಲ್ಲಿ ಪ್ರಸಾದ ತತ್ವ ಎಂಬ ಅಧೀನ ಪ್ರತ್ಯೇಕ ಲೇಖನಗಳಿವೆ. “ಪಂಚಾಚಾರಗಳೆಂದರೇನು?” ಎನ್ನುವ ಮೂರನೇಯ ಪ್ರಮುಖ ಲೇಖನಕ್ಕೆ ಬಸವೇಶ್ವರರ ವಚನಗಳಲ್ಲಿ ಲಿಂಗಾಚಾರ ತತ್ವ, ಮಡಿವಾಳ ಮಾಚಿದೇವರ ವಚನಗಳಲ್ಲಿ ಗಣಾಚಾರ ತತ್ವ, ಬಸವೇಶ್ವರರ ವಚನಗಳಲ್ಲಿ ಭೃತ್ಯಾಚಾರ ತತ್ವ, ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಲಿಂಗಾಚಾರ ತತ್ವ, ನೀಲಮ್ಮನವರ ವಚನಗಳಲ್ಲಿ ಸದಾಚಾರ ತತ್ವ ಎಂಬ ವಿಶಿಷ್ಠ ಅಧೀನ ಪ್ರತ್ಯೇಕ ಲೇಖನಗಳಿವೆ. ಇವೆಲ್ಲವೂ ಕೃತಿಯ ಒಂದು ಹಂತದಲ್ಲಿ ಸುಂದರವಾಗಿ ನಿರೂಪಿಸಲ್ಪಟ್ಟಿವೆ.

ಎರಡನೇಯ ಹಂತದಲ್ಲಿ ಸುದೀರ್ಘ ಎರಡು ಲೇಖನಗಳಿವೆ. ಒಂದು “ಶೂನ್ಯ ಸಂಪಾದನೆಯಲ್ಲಿ ಮುಕ್ತಾಯಕ್ಕನ ಸಂಪಾದನೆಗಳು” ಎರಡನೇಯದು “ಸಾಹಿತ್ಯ ಲೋಕದ ಅನುಪಮ ಸಂವಾದ ಶೂನ್ಯ ಸಂಪಾದನೆಯಲ್ಲಿ ಮಹಾದೇವಿಯಕ್ಕನ ಸಾಂಗತ್ಯ” ಎಂಬುದು. ಈ ಎರಡೂ ಲೇಖನಗಳು ಚಿಕ್ಕ ಚಿಕ್ಕ ಎರಡು ಕೃತಿಗಳ ರೂಪ ತಾಳುತ್ತವೆ. ಸರಿ ಸುಮಾರು 251 ಪುಟಗಳ ವ್ಯಾಪ್ತಿಯನ್ನು ಈ ಕೃತಿ ಪಡೆದುಕೊಂಡಿದೆ.

ಕೃತಿಕಾರರ ವಿಶೇಷತೆ ಏನೆಂದರೆ ಪ್ರತೀ ವಚನದ ಕೆಳಗೆ ಆಯ್ಕೆ ಮಾಡಿಕೊಂಡ ವಚನ ಸಂಪುಟ, ಪುಟ ಸಂಖ್ಯೆ, ವಚನ ಸಂಖ್ಯೆಯನ್ನು ನೀಡಿರುವುದು, ವಚನಗಳಲ್ಲಿ ಬರುವ ಪಾರಿಭಾಷಿಕ ಶಬ್ದಗಳಿಗೆ ಅರ್ಥವನ್ನು ನೀಡಿರುವುದು ಹಾಗೂ ಕೃತಿಯ ಅಂತಿಮ ಪುಟದಲ್ಲಿ ಸಹಾಯಕ ಗ್ರಂಥಗಳನ್ನು ಪಟ್ಟಿ ಮಾಡಿ ನೀಡಿರುವುದು ಇವೆಲ್ಲವೂ ಕೃತಿಕಾರರಾದ ಡಾ. ವಿಜಯಕುಮಾರ ಕಮ್ಮಾರ ಅವರ ಅಚ್ಚುಕಟ್ಟಾದ ಶಿಸ್ತಿನ ಬರವಣಿಗೆಗೆ ಕನ್ನಡಿ ಹಿಡಿದಂತಿದೆ. ಇದು ನಿಜಕ್ಕೂ ಬರಹಗಾರರು ಅನುಸರಿಸಬೇಕಾದ ನಿಯಮಗಳು. ಒಬ್ಬ ಅಭಿಯಂತರರಾಗಿ ಪ್ರಬುದ್ಧ ಸಾಹಿತ್ಯಕಾರರಂತೆ ರೂಢಿಸಿಕೊಂಡ ಬರವಣಿಗೆ ಮತ್ತು ನಿರೂಪಣಾ ಕೌಶಲ್ಯವನ್ನು ಇವರು ರೂಢಿಸಿಕೊಂಡದ್ದು ಅಚ್ಚರಿ ಹುಟ್ಟಿಸುತ್ತದೆ. ಪ್ರತೀ ಲೇಖನವೂ ಸಾಕಷ್ಟು ಅಧ್ಯಯನಶೀಲತೆಯಿಂದ ಕೂಡಿದೆ.

ನಿಜಕ್ಕೂ ಈ ಕೃತಿ ಓದಿ ನನಗೆ ಹೆಮ್ಮೆ ಮತ್ತು ಸಂತೋಷವೆನಿಸಿತು. ಡಾ. ವಿಜಯಕುಮಾರ ಕಮ್ಮಾರ ಅವರ ಈ ಕೃತಿ ನನ್ನ ಕೈಸೇರಿ ಎರಡು ದಿನವಾಯಿತು. ಈ ಕೃತಿಯನ್ನು ಓದಿ ಮುಗಿಸಿದ ನಂತರ ತಡೆಯಲಾರದ ನನ್ನ ಮನದ ಭಾವನೆಗಳು ನಲ್ನುಡಿಗಳಾಗಿ ಹೀಗೆ ಹೊರ ಹೊಮ್ಮಿದವು. ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ ಇದು. ಶರಣ ಧರ್ಮ ಜಗತ್ತಿಗೆ ಪರಿಚಯವಾಗಬೇಕಿದೆ. ನಿಜವಾದ ನೆಲೆಯಲ್ಲಿ ಶರಣ ಧರ್ಮ ಮತ್ತು ಸಿದ್ಧಾಂತವನ್ನು ಜನಮನಕ್ಕೆ ತಲುಪಿಸುವಲ್ಲಿ ಚೊಚ್ಚಲ ಕೃತಿಯಲ್ಲೇ ಡಾ. ವಿಜಯಕುಮಾರ ಕಮ್ಮಾರ ಅವರು ಯಶಸ್ವಿಯಾಗಿದ್ದಾರೆ. ಬಸವಾದಿ ಶರಣರ ಆಶೀರ್ವಾದ ಸದಾ ಅವರ ಮೇಲಿರಲಿ. ಉತ್ತರೋತ್ತರವಾಗಿ ಅವರ ವಿಚಾರ ಧಾರೆಗಳು ಕೃತಿಯ ರೂಪದಲ್ಲಿ ಬಂದು ಅವರ ಭವಿಷ್ಯ ಉಜ್ವಲವಾಗಲಿ. ಸದಾ ಧೃವತಾರೆಯಂತೆ ಸಾರಸ್ವ ಲೋಕದಲ್ಲಿ ಮಿನುಗುತ್ತಿರಲಿ ಎಂದು ಹಾರೈಸುತ್ತೇನೆ.

 

 

 

 

 

 

 

 

 

 

ಡಾ. ಪುಷ್ಪಾ ಶಲವಡಿಮಠ,
ಕನ್ನಡ ಉಪನ್ಯಾಸಕರು,
ಸರ್ಕಾರಿ ಪ್ರಥಮ ದರ್ಜೆ ಕಾಲೇಜು,
ಚಿಕ್ಕ ಬಾಸೂರು,
ಬ್ಯಾಡಗಿ ತಾಲೂಕ, ಹಾವೇರಿ ಜಿಲ್ಲೆ.
ಮೋಬೈಲ್‌. ಸಂ. 97407 38330

Don`t copy text!