ನಾಡು, ನುಡಿ, ನೆಲ, ಜಲ, ಸಂರಕ್ಷಣೆ, ನಮ್ಮೆಲ್ಲರ ಹೊಣೆ: ತಹಸೀಲ್ದಾರ ಅರುಣ್ ಕುಮಾರ್ ದೇಸಾಯಿ
e-ಸುದ್ದಿ ಸಿಂಧನೂರು
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 8:30 ಕ್ಕೆ ಸಿಂಧನೂರು ನಗರಕ್ಕೆ ತಾಯಿ ಭುವನೇಶ್ವರಿಯನ್ನು ಹೊತ್ತ ಕನ್ನಡ ಜ್ಯೋತಿ ರಥಯಾತ್ರೆ ಆಗಮಿಸಿತು. ತಾಲೂಕಾಡಳಿತ, ತಾಲೂಕು ಕನ್ನಡ ಸಾಹಿತ್ಯ ಪರಿಷತ್, ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖ ಮುಖಂಡರು ಒಟ್ಟುಗೂಡಿ ಕನ್ನಡ ಜ್ಯೋತಿ ರಥಯಾತ್ರೆಯನ್ನ ಅದ್ದೂರಿಯಾಗಿ, ಮತ್ತು ಅರ್ಥಪೂರ್ಣವಾಗಿ, ಬರಮಾಡಿಕೊಂಡು ಕನ್ನಡ ತಾಯಿ ಭುವನೇಶ್ವರಿ ಹೊತ್ತ ರಥಯಾತ್ರೆಗೆ ಪೂಜೆ ಸಲ್ಲಿಸುವ ಮೂಲಕ ಸ್ವಾಗತ ಕೋರಿದರು.
ನಗರದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಬರಮಾಡಿಕೊಂಡು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ, ತಾಲೂಕು ದಂಡಾಧಿಕಾರಿ ಅರುಣ್ ಕುಮಾರ್ ದೇಸಾಯಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ಅಸ್ಮಿತೆ ಹಾಗೂ ನಮ್ಮ ಹೆಮ್ಮೆ ಇಂದಿನ ತಂತ್ರಜ್ಞಾನದ ಯುಗದಲ್ಲಿ ನಾಡು, ನುಡಿ, ನೆಲ, ಜಲ, ಸಂಸ್ಕೃತಿಯ ಕುರಿತು ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯ ಈ ನಿಟ್ಟಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20, 21, 22, ರಂದು ನಡೆಯಲಿದ್ದು, ಅದರ ಅಂಗವಾಗಿ ಕನ್ನಡದ ಜ್ಯೋತಿ ಭುವನೇಶ್ವರಿ ರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತಿದ್ದು, ಶುಕ್ರವಾರ ನಾವು ಸ್ವಾಗತಿಸಿದ್ದೇವೆ.
ಕನ್ನಡ ಮನಸುಳ್ಳ ಪ್ರತಿಯೊಬ್ಬರು ನಾಡು, ನುಡಿ, ನೆಲ, ಜಲ, ಸಂರಕ್ಷಣೆಗೆ ಮುಂದಾಗಬೇಕೆಂದರು.
ನಂತರ ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ನಿಕಟಪೂರ್ವ ಅಧ್ಯಕ್ಷಣಿ ರಮಾದೇವಿ ಶಂಭೋಜಿ, ಮುಖಂಡರಾದ ಎಂ.ದೊಡ್ಡಬಸವರಾಜ, ರಾಜಶೇಖರ ಹಿರೇಮಠ, ವಕೀಲರಾದ ನಿರುಪಾದೆಪ್ಪ ಗುಡಿಹಾಳ, ಒಳಗೊಂಡಂತೆ ಉಪನ್ಯಾಸಕರಾದ ಹುಸೇನಪ್ಪ ಅಮರಾಪುರ, ಪೌರಾಯುಕ್ತ ಮಂಜುನಾಥ ಗುಂಡೂರು, ಮಾತನಾಡಿದರು.
ಈ ಸಂದರ್ಭದಲ್ಲಿ: ಶಂಕರದೇವರ ಹಿರೇಮಠ, ವೀರೇಶ ಗೋನವಾರ್, ಗಂಗಣ್ಣ ಡಿಶ್, ದವಲಸಾಬ್ ದೊಡ್ಮನಿ, ಮೌನೇಶ ದೊರೆ, ಲಕ್ಷ್ಮಣ ಭೋವಿ, ಸುರೇಶ ಗೊಬ್ಬರಕಲ್, ಸೈಯಾದ್ ರಬ್ಬಾನಿ, ಸುರೇಶ ಕಟ್ಟಿಮನಿ, ಲಕ್ಷ್ಮಿ ಪತ್ತಾರ್, ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳ ಪ್ರಮುಖ ಮುಖಂಡರು ಈ ಕನ್ನಡದ ಜ್ಯೋತಿ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು.