ಎಲ್ಲಿರುವೆ ಬಸವಣ್ಣ ?

ಎಲ್ಲಿರುವೆ ಬಸವಣ್ಣ ?

 

 

 

 

 

 

 

 

 

 

ಎಲ್ಲಿರುವೆ ಬಸವಣ್ಣ ?
ಕಲ್ಯಾಣದ ಮಹಾಪುರುಷ
ಬಸವಳಿದ ಬದುಕಿಗೆ
ನಿನ್ನ ಸ್ಮರಣೆಯೇ ಪರುಷ

ಕಾಯಕವು ನಿಂತಿಹಿದು
ಗುರು ಲಿಂಗವಿಲ್ಲದೆ
ಜಂಗಮವು ಜಡಗೊಂಡಿದೆ
ಸುಜ್ಞಾನವಿಲ್ಲದೆ

ಮನ ತುಂಬಿ ಜಪಿಸುವೆವು
ಅಂಗ ಹರಿದು ಲಿಂಗ ಗುಣಕೆ
ಅರ್ಥವ ಗಳಿಸಿಡುವೆ
ದಾಸೋಹದ ಸೊಮ್ಮಿಂಗೆ.

ಕಟುಕರ ಕೇರಿಯಲಿ ನಿಂತಿಹುದು ಕಲ್ಯಾಣ
ಕೃಷ್ಣ ಮಲಪ್ರಭೆಯಲಿ ಮುಳುಗಿದೆ ಸಂಗಮ
ಉಳಿದಿಲ್ಲ ಷಟಸ್ಥಳ ಉಳವಿಯ ಮೊನೆಯಲ್ಲಿ
ಬಂದೊಮ್ಮೆತೋರುನೀ ಅನುಭವ ಮಂಟಪ

ಮಠಗಳಲ್ಲಿ ಅಭಿಸೇಕ ವೈದಿಕ ಮಂತ್ರ
ಗದ್ದುಗೆ ಪೂಜೆ ಶೊಷಣೆಯ ತಂತ್ರ
ಅಬ್ಬರದ ಪಲ್ಲಕ್ಕಿ ದೊಡ್ಡವರ ಕುತಂತ್ರ
ನಿಟ್ಟಿಸಿರು ಬಿಟ್ಟ ಭಕ್ತರು ಅತಂತ್ರ

ಎಲ್ಲಿರುವೆ ಬಸವಣ್ಣ ?ಭಕ್ತಿಯ ಪರುಷ
ಬಂದೊಮ್ಮೆ ತೋರು ಬಾ
ಕಳೆದಿರುವ ಕಲ್ಯಾಣ ಮರೆತಿರುವ ಸಂಗಮ
ಧರೆಯಲ್ಲಿ ಮೆರೆಯಲಿ ಶರಣ ಧ್ವಜವು

ಅಳುವ ಧ್ವನಿಯು ನಿಂತಿಲ್ಲ
ಕಂದಮ್ಮಗಳ ಕರಗೂಸು
ನಿನ್ನೆಸರಲಿ ದೆಸೆದೆಸೆಯಲಿ ಬಿಕ್ಕುತಿವೆ
ಹುಟ್ಟಿ ಬಾ ಬಸವಣ್ಣ ಸೆರಗೊಡ್ಡಿ ಬೇಡುವೆ

ಚಾಮರವ ಬೀಸಿಹೆವು
ತೋರಣವ ಕಟ್ಟಿಹೆವು
ಊರ ಕೇರಿಯಲಿ ರಂಗವಲ್ಲಿಯ ಹಾಕಿಹೆವು
ಎಲ್ಲಿರುವೆ ಬಸವಣ್ಣ ? ಕಲ್ಯಾಣದ ಮಹಾಪುರುಷ

 

 

 

 

 

 

 

 

 

 

ಡಾ ಶಶಿಕಾಂತ ಪಟ್ಟಣ -ರಾಮದುರ್ಗ

Don`t copy text!