ಮನಗಳ ಕೊಂಕನ್ನು ಸರಿಪಡಿಸುವ ಸೆರಗಿಗಂಟಿದ ಕಂಪು

ನಾ ಓದಿದ ಪುಸ್ತಕ 

     “ಸೆರಗಿಗಂಟಿದ ಕಂಪು” 
                    – ಗಜಲ್ ಸಂಕಲನ

ಕೃತಿಕಾರರು : ಪ್ರಭಾವತಿ ಎಸ್. ದೇಸಾಯಿ

ಪ್ರಕಾಶನ : ದೇವನಾಂಪ್ರಿಯ ಪ್ರಕಾಶನ, ಮಸ್ಕಿ
ಬೆಲೆ : 150/- (e-ಸುದ್ದಿ ಓದುಗರಿಗಾಗಿ 100 ರೂ. ಮಾತ್ರ ಅಂಚೆವೆಚ್ಚ ಸೇರಿ) 

ಆಸಕ್ತರು ಸಂಪರ್ಕಿಸಿರಿ-9448805067

ಮನಗಳ ಕೊಂಕನ್ನು ಸರಿಪಡಿಸುವ ಸೆರಗಿಗಂಟಿದ ಕಂಪು

 

 

 

 

 

 

 

 

 

 

ಪಕ್ವಗೊಂಡ ಸಾಹಿತಿಗಳಿಗೆ ಸಾಹಿತ್ಯ ರಚನೆ ಸುಲಭ, ಆದರೆ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದು ಅನೇಕರಿಗೆ ಕಷ್ಟದಾಯಕ ಮತ್ತು ಭಯ. ಜೊತೆಗೆ ಪ್ರಕಟಿಸಿದರೂ ಅದನ್ನು ಓದುಗರಿಗೆ ತಲುಪಿಸುವುದಂತೂ ತೀರಾ ಪ್ರಯಾಸದಾಯಕ. ಹೆಸರಾಂತ ಲೇಖಕರ ಕೃತಿಗಳು ಖಾಲಿ ಆಗ್ತವೆ, ಮತ್ತೆ ಮತ್ತೆ ಮರುಮುದ್ರಣವೂ ಆಗ್ತವೆ. ಆದರೆ ಯುವ ಲೇಖಕರ ಪುಸ್ತಕಗಳನ್ನು ಓದುವುದಿರಲಿ, ಕೊಳ್ಳುವುದೂ ಇಲ್ಲ.
ಇಂತಹ ವಿಷಮ ಸ್ಥಿತಿಯ ಪ್ರಸ್ತುತ ಸಂದರ್ಭದಲ್ಲಿ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಸಾಹಿತಿಗಳನ್ನು ಸಂಪರ್ಕಿಸಿ ಒಳ್ಳೆಯ ಸಾಹಿತ್ಯವಿದ್ದರೆ ಅದಕ್ಕೆ ಪುಸ್ತಕ ರೂಪ ಕೊಟ್ಟು ಓದುಗರ ಮನೆ, ಮನದ ಬಾಗಿಲಿನವರೆಗೆ ತಲುಪಿಸುವಂತಹ ಕಾರ್ಯದಲ್ಲಿ ತಮ್ಮನ್ನು ಅರ್ಪಿಸಿಕೊಂಡ ದೇವನಾಂಪ್ರಿಯ ಪ್ರಕಾಶನದ ಶ್ರೀಯುತ ವೀರೇಶ ಸೌದ್ರಿ ಅವರು ನಮ್ಮ ಕಲ್ಯಾಣ ಕರ್ನಾಟಕದ ಈ ದಶಕದ ಹೆಮ್ಮೆಯ ಕನ್ನಡಿಗರು. ಇವರ ಈ ಮಹತ್ತರವಾದ ಕಾರ್ಯ ನಮ್ಮ ಭಾಗದ ಸಾಹಿತಿಗಳಿಗೆ ವರದಾನವಾಗಿದೆ ಎನ್ನುವುದು ಸಾಹಿತ್ಯ ಲೋಕದ ಅದೃಷ್ಟ.
ಈ ನಿಟ್ಟಿನಲ್ಲಿ ಇದುವರೆಗೆ 23 ಕೃತಿಗಳನ್ನು ಅದರಲ್ಲಿ 8 ಗಜಲ್ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ತರ ಕೊಡುಗೆ ನೀಡಿದಂತಹ ಮತ್ತು  ಹೆಮ್ಮೆ ಪಡುವಂತಹ ಸಾಹಿತ್ಯ ಸಾಧನಾ ಮಾರ್ಗದಲ್ಲಿ ತೊಡಗಿರುವ ಸಾಧಕ ಮಹಿಳೆ, ಡಾ.ಪ್ರಭಾವತಿ ದೇಸಾಯಿ ಅವರ ಈ “ಸೆರಗಿಗಂಟಿಂದ ಕಂಪು” ಕೃತಿಯೂ ಸಹ ಲೋಕಾರ್ಪಣೆ ಗೊಂಡದ್ದು ಇದೇ ದೇವನಾಂಪ್ರಿಯ ಪ್ರಕಾಶನದಿಂದ.
ಈ “ಸೆರಗಿಗಂಟಿದ ಕಂಪು” ದೇವನಾಂಪ್ರಿಯ ಪ್ರಕಾಶನದಿಂದ ಪ್ರಕಾಶಗೊಂಡ ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ ಅವರ ೪ ನೇ ಕೃತಿಯಾಗಿದೆ.

 


(ಕವಯತ್ರಿ ಶ್ರೀಮತಿ ಪ್ರಭಾವತಿ ದೇಸಾಯಿ ವಿಜಯಪುರ)

ಮೂಲತಹ ನಮ್ಮ ರಾಯಚೂರಿನವರೇ ಆಗಿ ಪ್ರಸ್ತುತ ವಿಜಯಪುರದ ನಿವಾಸಿಗಳಾಗಿ ತಮ್ಮ ತುಂಬು ವಯಸ್ಸಿನಲ್ಲಿ ಚಿರಯುವತಿಯಾಗಿ ಯೌವ್ವನದಲ್ಲಿ ಇರುವ ಮನಗಳ ತುಡಿತ, ತಳಮಳ, ಸಂಗಾತಿಯನ್ನರಸಿ ಪಡುವ ಮಧುರ ಯಾತನೆ, ವಿರಹ ವೇದನೆ, ಸಾಂಗತ್ಯ ಸುಖ ಅನುಭವಿಸಿದ ರಸಮಯ ಅನುಭವ, ಹುಸಿ ಮುನಿಸು, ಮುದ್ದಾಟ, ಚೆಲ್ಲಾಟ, ತುಂಟಾಟ, ನಲ್ಲ/ನಲ್ಲೆಗಾಗಿ ಕಾಯುವಿಕೆ, ಕನಸ ಕಟ್ಟುವಿಕೆ ಕುರಿತಾಗಿ ಮತ್ತು ಧರ್ಮಾತೀತ ಚಿಂತನೆ, ದೈವತ್ವದ ಮಹಿಮೆ, ಶರಣರ ನಡೆ-ನುಡಿ ಎಲ್ಲವನ್ನೂ ಗಜಲ್ ರೂಪದಲ್ಲಿ ದಾಖಲಿಸುತ್ತಾ ಸಾಗಿದ ಲೇಖಕಿಯವರ ಸಾಹಿತ್ಯ ಪ್ರಭೆ ಓದುಗನನ್ನು ಆವರಿಸುತ್ತದೆ, ಆಲಿಂಗಿಸುತ್ತದೆ. ಅಲ್ಲದೆ ಜನರಿಗೆ ತಿಳುವಳಿಕೆ ನೀಡಿ ಸರಿದಾರಿಗೆ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
ಯೌವ್ವನದಲ್ಲಿ ಎಲ್ಲರೂ ಕವಿಗಳಾಗುತ್ತಾರೆ, ಪ್ರೇಮದ ಗೀತೆಗಳ ಉದ್ಭವಕ್ಕೆ ಕಾರಣರಾಗುತ್ತಾರೆ ಎಂದು ನಾವು ಅಂದುಕೊಂಡಿದ್ದೇವೆ. ಆದರೆ ದೇಹಕ್ಕೆ ಮುಪ್ಪಿದೆ ಮನಸಿಗೆ ಮುಪ್ಪಿಲ್ಲ ಎಂಬುದಕ್ಕೆ ನಿದರ್ಶನ ನಮ್ಮ ಪ್ರಭಾವತಿ ಎಸ್ ದೇಸಾಯಿಯವರು‌. ಈ ಸೆರಗಿಗಂಟಿದ ಕಂಪು ಗಜಲ್ ಕೃತಿಯಲ್ಲಿ ಇರುವ ಒಟ್ಟು ೧೦೨ ಗಜಲ್ಗಳಲ್ಲಿ ಮುಕ್ಕಾಲು ಗಜಲ್ಗಳು ಗಂಡು ಮತ್ತು ಹೆಣ್ಣಿನ ದೈಹಿಕ ಮತ್ತು ಮಾನಸಿಕ ಪ್ರೇಮ, ತುಮುಲಗಳ, ರಸನಿಮಿಷಗಳ ಕುರಿತಾಗಿದ್ದು ಯುವ ಓದುಗರಿಗೆ ಮುದವೆನಿಸುತ್ತವೆ. ವಿರಹ ವೇದನೆಯನ್ನು ಗದ್ಯದಲ್ಲಿ ಎಷ್ಟು ಯಥಾವತ್ತಾಗಿ ಹೇಳಬಹದೋ, ಅಷ್ಟೇ ಮನದುಂಬುವಂತೆ ಗಜಲ್ ನಲ್ಲಿ ಕಟ್ಟಿಕೊಟ್ಟ ಕೀರ್ತಿ ಶ್ರೀಮತಿ ಪ್ರಭಾವತಿ ಅವರದಾಗಿದೆ.

 

ಸಂಸಾರದಲ್ಲಿ ದಂಪತಿಗಳ ಮಧ್ಯೆ ಅಹಂ ಎಂಬ ಶತ್ರು ಅವತರಿಸಿದರೆ ಅವರ ಮಧ್ಯದ ಸಾಮರಸ್ಯ, ಪ್ರೀತಿ, ಬೆಸುಗೆಗೆ ಪೆಟ್ಟು ಬಿದ್ದಂತೆ. ಅವರು ಹೆಣೆದ ಕನಸುಗಳ ಗೋಪುರ ಛಿದ್ರವಾಗಿಬಿಡುತ್ತದೆ ಎನ್ನುತ್ತಾ..‌
ಸಪ್ತಪದಿ ತುಳಿಯುತಾ ಹೆಣೆದಿದ್ದೆ ಸುಂದರವಾದ ಕನಸುಗಳ
ಬಾಳ ನೌಕೆಯಲಿ ಹೊರಟಿದ್ದೆವು ಅಹಂನಲಿ ಅಪರಿಚಿತರಾದೆವು (೬)
ಎಂದು ಈ ಅಹಂ ಭಾವದ ಕುರಿತಾಗಿ ಉತ್ತಮ ಸಾಲುಗಳನ್ನು ಹೇಳುತ್ತಾರೆ. ಅಹಂ ಇದ್ದರೆ ದಂಪತಿಗಳು ಅಪರಿಚಿತರಾಗುವ ಹಂತಕ್ಕೆ ತಲುಪುತ್ತಾರೆ ಎಂದು ಎಚ್ಚರಿಸುತ್ತಾರೆ.
ಮುಂದೆ,
ಅಹಂದ ಮೇಲಾಟದಿ ಹಾರಿದವು ಮಾತಿನ ತುಪಾಕಿ
ಅಂತರಂಗದ ಅನುರಾಗ ಬೆಸುಗೆಗಳು ದೂರಾದವು
ಎಂದು ಅಹಂ ಇದ್ದ ಮನದಿಂದ ಬರುವ ಮಾತುಗಳು ತುಪಾಕಿಗಳಾಗುತ್ತವೆ, ಇದರಿಂದ ಬೆಸೆದ‌ ಅನುರಾಗದ ಕೊಂಡಿ ಕಳಚಿಕೊಂಡು ದೂರವಾಗುತ್ತೇವೆ ಎನ್ನುತ್ತಾರೆ.
ಹಾಗಾಗಿ, ನಿಜವಾದ ಸುಮವನ್ನು ಅರಸಿ ಹೋಗಬೇಕೇ ಹೊರತು,
ಕಳ್ಳಿ ಸುಮದ ರಂಗಿಗೆ ಮರುಳಾಗಿ ಸುತ್ತುತಿದೆ ದುಂಬಿ
ಮಲ್ಲಿಗೆ ಸಿಹಿ ಮಧು ಸವಿಯುವ ಗಳಿಗೆಗಳು ದೂರಾದವು(೧೫)
ಎಂದು ಕಳ್ಳಿ ಸುಮದ ರಂಗಿಗೆ ಮರುಳಾದರೆ ಮತ್ತದೇ ದೂರವಾಗುವ ಕೆಟ್ಟ ಸಮಯ ಬರುತ್ತದೆಂದು ಹೇಳುತ್ತಾರೆ.

ಹೃದಯ ಕೇದಿಗೆ ವನದಲ್ಲಿ ಹರಿದಾಡುತಿವೆ ಘಟ ಸರ್ಪಗಳು
ಸಾಮರಸ್ಯ ವಿಲ್ಲದ ಬಾಳು ಎಷ್ಟು ದಿನ ಕಳೆದರೇನು ಫಲ(೭)
ಯಾವ ಮನದಲ್ಲಿ ವಿಷಜಂತುವಿನ ದುಷ್ಟತನ ಇರುತ್ತದೆಯೋ ಅಲ್ಲಿ ಸಾಮರಸ್ಯ ಇರುವುದಿಲ್ಲ. ಸಾಮರಸ್ಯ ಇಲ್ಲದ ಬಾಳು ಎಷ್ಟು ದಿನ ಕಳೆದರೂ ಫಲವಿಲ್ಲ ಎಂದು ವಿಷಾದಿಸುತ್ತಾ,
ನೋವಿನ ಹಿಮಪಾತದಲಿ ಮಸಣ ಸೇರಿವೆ ಬಯಕೆಯ ಎಲೆಗಳು
ಮಾಗಿಯ ಚಳಿಯಲಿ ಕೋಗಿಲೆ ವಸಂತನನು ಕರೆದರೇನು ಫಲ(೭)
ಬದುಕಲ್ಲಿ ಸಾಮರಸ್ಯ ಇರದಿದ್ದರೆ, ಬಯಕೆಯ ಎಲೆಗಳು ಮಸಣ ಸೇರಿದಂತೆ, ನಂತರ ವಸಂತನ ಆಗಮವಾದರೂ ಫಲವಿಲ್ಲ ಎಂದು ಸಾಮರಸ್ಯದ ಬದುಕು ಎಷ್ಟು ಅವಶ್ಯಕವಾಗಿದೆ ಎಂಬುದಾಗಿ ಇಂದಿನ ಯುವ ಸಮೂಹಕ್ಕೆ ಸಂಸಾರದ ಪಾಠ ಹೇಳುತ್ತಾರೆ.

ಜನನ ಮರಣದ ಚಕ್ರದಲಿ ಬಳಲಿವೆ ವಿಶ್ವ ಮಾನವರು
ಸಿಗದ ಸಾಸವೆಗೆ ಮುಗುಳ್ನಗೆಯ ಸೂಸುತ ಮೌನಿಯಾದೆ(೯)
ಜನನ, ಮರಣ ಎಂಬುದು ವಿಶ್ವ ಮಾನವರಿಗೇ ತಪ್ಪಿಲ್ಲ. ಇನ್ನೂ ನಾವೆಲ್ಲ ಯಾವ ಲೆಕ್ಕ ಎಂಬುದಾಗಿ ಹೀಗೆ ಹೇಳುತ್ತಾರೆ. ಇಂತಹ ಎದುರುಗಳು ನನಗಾದರೆ ನಾ ಮುಗುಳ್ನಗುತ್ತ ಮೌನಿಯಾಗುತ್ತೇನೆ, ಎಲ್ಲರೂ ಈ ಸತ್ಯವನ್ನು ಅರಿತು ಜನನ, ಮರಣಗಳ ಚಕ್ರದಲ್ಲಿ ಮುಗುಳ್ನಗುತ್ತಲೇ ಭಾಗಿಯಾಗಬೇಕೆನ್ನುತ್ತಾರೆ.

ಪೌರಾಣಿಕ ಕಥೆಗಳಲ್ಲಿ ಪುರುಷರು ಹೆಣ್ಣನ್ನು ಹೇಗೆ ದಾಳವಾಗಿ ಬಳಸಿಕೊಂಡರು, ಮುಗ್ಧ ಸ್ತ್ರೀಯರನ್ನು ಹೇಗೆ ದುಃಖಕ್ಕೆ‌ ಗುರಿಯಾಗಿಸಿದರು ಎಂಬುದನ್ನು
ವಚನಕಾಗಿ ಸತಿ ಮಾರಿದವನನು ಏನೆಂದು ಕರೆಯಲಿ
ಮೋಜಿಗಾಗಿ ಪಣಕೆ ಇಟ್ಟವನನು ಏನೆಂದು ಕರೆಯಲಿ

ಕಪಟವ ತಿಳಿಯದೆ ಮುಗ್ಧತೆಯಲಿ ತನುವನು ಅರ್ಪಿಸಿದಳು
ನಿಜ ಅರಿಯದೆ ಶಿಲೆ ಮಾಡಿದವನನು ಏನೆಂದು ಕರೆಯಲಿ (೧೩)
ಹೀಗೆ ಮಾರ್ಮಿಕವಾಗಿ ಹೇಳಿ, ಅವರನ್ನು ಹೇಗೆ ದೇವರೆನ್ನಲಿ, ಹೇಗೆ ಸತ್ಯವಂತನೆನ್ನಲಿ, ಹೇಗೆ ರಾಜನೆನ್ನಲಿ ಏನೆಂದು ಕರೆಯಲಿ, ಏನೆಂದು ಕರೆಯಲಿ ಎಂದು ಆ ಘಟನೆಗಳನ್ನು ತಮ್ಮ ಸಾಲುಗಳಲ್ಲಿ ಕಟ್ಟಿಕೊಟ್ಟು ಓದುಗನ ಮನ ಕಲಕುತ್ತಾರೆ.

ಬಾನ ತಾರೆಗಳ ಎಣಿಸುತಾ ಮಲಗಿದೆ ಇರುಳು ಹೂ ಮಂಚದಲಿ
ಹುಣ್ಣಿಮೆಯ ಚಂದಿರನಾಗಿ ಎದೆ ಕಡಲು ಉಕ್ಕಿಸಲಿಲ್ಲ ಅವನು(೨೨)

ಹುಣ್ಣಿಮೆಯ ಇರುಳಲಿ ಮೌನ ಮುರಿಯಲು ನೀ ಬರಬೇಕಾಗಿತ್ತು
ಸಂಜೆ ಕೆಂಪಲಿ ಹೆಜ್ಜೆಯ ಹಾಕಲು ನೀ ಬರಬೇಕಾಗಿತ್ತು(೨೪)
ಸಂಗಾತಿಯ ಸಾಂಗತ್ಯ ಬಯಸಿದ ನಲ್ಲೆಗೆ ಅವನ ನಿರಾಸಕ್ತಿ ಮಾಡಿದ ಘಾಸಿಯನ್ನು ಈ ರೀತಿಯಾಗಿ ವ್ಯಕ್ತಪಡಿಸಿದ ಲೇಖಕಿ ಅವರು, ಮುಂದೆ

ಶೋಕ ಸಾಗರದಿ ಮುಳುಗಿ ಏಕಾಂಗಿಯಾಗಿದೆ ಮನವು ಇಂದು
ಪ್ರೇಮ ಲೋಕಕ್ಕೆ ಪಟ್ಟದರಸಿ ಮಾಡಿದವರು ನೀವಲ್ಲವೆ

ಅಮವಾಸ್ಯೆಯ ಇರುಳು ಗಗನದಲ್ಲಿ ಶಶಿಯ ಹುಡುಕುತಾ ಹೊರಟೆ
ಚಂದಿರನಾಗಿ ಹೃದಯ ಕಡಲು ಉಕ್ಕಿಸಿದವರು ನೀವಲ್ಲವೆ(೨೩)
ಎಂದು ಅದೇ ನಲ್ಲೆ, ನಲ್ಲ ಮನದುಂಬಿಸಿ ಒಲವ ಮಳೆ ಸುರಿಸಿದಾಗ ಹೇಗೆ ಸಂತೃಪ್ತಿ ಭಾವ ಹೊಂದುತ್ತಾಳೆ ಎಂದು ಅವಳ ಆನಂದವನ್ನು ಸಾಲುಗಳಲ್ಲಿ ತುಂಬಿದ್ದಾರೆ.

ಜನರ ನಡುವೆ ಭಾವೈಕ್ಯತೆಯನ್ನು ತುಂಬ ಬೇಕಾದುದು, ಸಮಾಜಕ್ಕೆ ಸ್ವಾಸ್ಥ್ಯದ ಸಂದೇಶವನ್ನು ಸಾರುವುದು ಸಾಹಿತಿಗಳ ಆದ್ಯ ಕರ್ತವ್ಯ. ಅಂತೆಯೇ ಲೇಖಕಿಯವರು ಧರ್ಮಗಳ ನಡುವಿನ ಜಗಳ, ಬಣ್ಣದ ಧ್ವಜಗಳ ಹಾವಳಿ, ರಂಗಿನ ಬಾವುಟಗಳ ಕದನಗಳ ಕುರಿತಾಗಿ ಹೇಳುತ್ತಾ,

ದೀಪಾವಳಿ ಪಟಾಕಿಯಂತೆ ಖುಷಿಯಲಿ ಸಿಡಿದಿವೆ ಪಟಾಕಿ
ಮುಗ್ಧ ಮನಗಳು ಹಿಡಿದ ಮುದ್ದು ಗುಂಡು ಕಸಿಯುವುದೇ ಒಳಿತು

ಒಲವಿರದ ಕೈಗಳು ತಲ್ವಾರ ತಿಕ್ಕುವ ಕೆಲಸ ನಡೆಸಿವೆ
ಮನೆ ಮನೆಯಲಿ ಕತ್ತಿ ಮಸೆಯುವುದನು ನಿಲ್ಲಿಸುವುದೇ ಒಳಿತು(೨೬)
ಎಂಬುದಾಗಿ ತಿಳಿಸಿ ಶಾಂತಿ ಸ್ಥಾಪನೆಗಾಗಿ ಏನೆಲ್ಲಾ ಮಾಡಬೇಕೆಂಬುದನು ಸಾರುತ್ತಾರೆ. ಈ ಹಿನ್ನೆಲೆಯಲ್ಲಿ ಲೇಖಕಿಯವರ  ಸಮಾಮಾಜಿಕ ಕಳಕಳಿ ಎದ್ದು ಕಾಣುತ್ತದೆ.

ಒಲವು ಎಂಬುದು ಜಗದ ಸಾರ್ವತ್ರಿಕ, ಸರ್ವಕಾಲಕೂ ಇರಬಹುದಾದ ಮಿಡಿತ. ಎಂದಿಗೂ ಪ್ರೇಮವಿಲ್ಲದೆ ಅರೆಕ್ಷಣವೂ ಜಗವು ಉಳಿಯುವುದಿಲ್ಲ. ಇದನ್ನೇ ಕೃತಿಕಾರರು ತಮ್ಮ ಗಜಲ್ ಸಾಲುಗಳಲ್ಲಿ…
ಕಿಟಕಿಯಲಿ ಬಂದ ಚಂದಿರಾ ಕಚಗುಳಿ ಇಡುತಾ ಕಾಡುವನು
ಬೆಳದಿಂಗಳ ನಿಶೆ ಅಪ್ಪುಗೆಯಲಿ ಕನವರಿಸುವಳು ನನಗಾಗಿ

ಹೊಲದ ಬದುವಿಗಂಟಿದ ಹಬ್ಬಿದ ಬಳ್ಳಿ ಅರಳಿಸಿದೆ ಕುಸುಮಗಳ
ಸೆರಗಿಗೆ ಅಂಟಿದ ಕಂಪು ಹಾದಿಗೆ ಹರಡಿರುವಳು ನನಗಾಗಿ(೩೬)
… ಈ ರೀತಿಯಾಗಿ ವ್ಯಕ್ತಪಡಿಸುತ್ತಾರೆ. ಪ್ರೇಮ ಕೇವಲ ಮನಸಿಗಷ್ಟೇ ಸೀಮಿತವಾಗದೆ, ಎರಡು ದೇಹಗಳ ಸಮ್ಮಿಲನದಲ್ಲಿ ಪಕ್ವವಾಗುತ್ತದೆ ಮತ್ತು ಗಟ್ಟಿಯಾಗುತ್ತದೆ. ಈ ಸಾಂಗತ್ಯಕ್ಕೆ ಕಾಯುವ ಪ್ರೇಯಸಿ ಮನೋಕಾಮನೆಗಳ ಹೊರಹೊಮ್ಮುವಿಕೆಯೇ ಈ ಗಜಲ್, ಓದುಗನಿಗೆ ಆಪ್ತವಾಗುತ್ತದೆ.

ಅಂತೆಯೇ ಕೃತಿಕಾರರು ಒಬ್ಬ ಪ್ರೇಮಿ ತನ್ನ ಪ್ರೀತಿಯ (ನಲ್ಲೆ) ಗೆಳತಿ ಇಲ್ಲದ ಬದುಕನ್ನು..
ನೀನಿಲ್ಲದೆ ಓಣಿಯು ಮಸಣವಾಗಿದೆ ಗೆಳತಿ
ಬಳೆ ಸದ್ದು ಇಲ್ಲದೆ ಊಟ ಕಹಿಯಾಗಿದೆ ಗೆಳತಿ
ಒಂಟಿ ಹಾಸಿಗೆ ನೆಗ್ಗಿನ ಮುಳ್ಳಾಗಿದೆ ಗೆಳತಿ(೩೮)
ಎಂಬುದಾಗಿ ಬರೆದು ಆ ಪ್ರೇಮಿಯ ವಿರಹದ ತಾಪವನ್ನು ಓದುಗನಿಗೂ ರವಾನಿಸುತ್ತಾರೆ.

ಗುಲಾಬಿ ಜೊತೆಗೆ ಮುಳ್ಳು ಬೆಳೆಯುವುದು ರಕ್ಷಣೆಯಾಗಿದೆ ಮನಕೆ(೪೦)
ಎಂದು ಸ್ವಯಂ ರಕ್ಷಣೆಯ ಕುರಿತಾಗಿ ಹೇಳಿದರೆ,
ಹೆಣ್ಣಿನ ಸೆರಗು ವೈವಿಧ್ಯಮಯವಾಗಿ ಹೇಗೆ ನಮ್ಮ ಬದುಕಿಗೆ ರಕ್ಷಣೆಯಾಗಿದೆ, ಹೇಗೆ ನಮ್ಮ ಜೀವವಾಗಿದೆ, ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂಬುದನ್ನು..
ಅಳುವ ಕಂದನ ಕಂಬನಿಯನು ಒರೆಸುವುದು ಅವಳ ಸೆರಗು
ಕಾಮುಕ ನೋಟದಿ ಸದಾ ಕಾಪಾಡುವುದು ಅವಳ ಸೆರಗು
ನರಳಿ ಬೆಂದ ಮನಕೆ ದೈರ್ಯವ ತುಂಬುವುದು ಅವಳ ಸೆರಗು
ಮಗುವಿನ ಸುಖ ನಿದ್ರೆಗೆ ಲಾಲಿ ಹಾಡುವುದು ಅವಳ ಸೆರಗು(೪೩)
.. ಈ ರೀತಿಯ ಸಾಲುಗಳ ಮೂಲಕ ತಿಳಿಸುತ್ತಾರೆ.

ನಾವು ಕಳೆದುಕೊಂಡದ್ದು ಬಹಳ ಇದೆ. ಭೌತಿಕವಾಗಿ ಕೆಲವಾದರೆ ಮಾನಸಿಕವಾಗಿ ಹಲವು. ಅವುಗಳನ್ನು ಮತ್ತೆ ಹುಡುಕುವ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಏನೇನೆಲ್ಲಾ ಹುಡುಕಬೇಕೆಂಬುದನ್ನು ಶ್ರಿಮತಿ ಪ್ರಭಾವತಿ ಅವರು ಈ ರೀತಿ ವಿಸ್ತೃತಪಡಿಸುತ್ತಾರೆ.
ಒಡೆದ ಹೃದಯ ಕನ್ನಡಿಯ ಚೂರುಗಳನು,
ಇರುಳಲಿ ಕಳೆದ ಒಲುಮೆಯ ಕನಸುಗಳನು,
ಬಳಸದೇ ಮಾಯವಾದ ನೇಗಿಲಗಳನು,
ಮರೆಯಾದ ಬಿಳಿಯ ಪಾರಿವಾಳಗಳನು
ಗಾಯಕೆ ಮುಲಾಮು ಹಚ್ಚುವ ಹಸ್ತಗಳನು ಹುಡುಕಬೇಕಿದೆ(೪೭)
ಅಷ್ಟೇ ಅಲ್ಲದೆ, ಗೋಮುಖ ವ್ಯಾಘ್ರಗಳನು, ಮುಖವಾಡ ತೊಟ್ಟ ದುಷ್ಟ ಶಕ್ತಿಗಳನೂ ಹುಡುಕಬೇಕಿದೆ, ಹುಡುಕಿ ಬದುಕನ್ನು ಸಹಜ ಸ್ಥಿತಿಗೆ‌ ಮರಳಿಸಬೇಕಿದೆ ಎಂಬ  ಕಾವ್ಯದ ಅಂತಃಸ್ಸತ್ವ ಓದುಗನಿಗೆ ತಲುಪಿ ಹೊಸ ಸತ್ಯ, ಪ್ರೇಮ ಲೋಕದ ದರ್ಶನವಾದಂತಾಗುತ್ತದೆ.

ನಮಗೆ ಎಲ್ಲವೂ ಗೊತ್ತು, ಎಲ್ಲರ ಮನಸೂ ನಮಗೆ ಅರ್ಥ ಆಗಿದೆ, ಎಂಬ ಭ್ರಮೆಯಲ್ಲಿ ನಾವು ನಮ್ಮ ಬದುಕನ್ನು ಕಲಿಕೆಯಿಂದ ವಿಮುಖರಾಗಿಸಿದ್ದೇವೆ. ಕೇವಲ ಕಲಿಕೆ ಅಷ್ಟೇ ಅಲ್ಲ, ಉತ್ತಮ ಬದುಕಿನಿಂದಲೂ ವಂಚಿತರಾಗುತ್ತೇವೆ. ಅದಕ್ಕೆ ಈ ಕೃತಿಕಾರರು …
ಆಡಿದ ಮಾತಿನ ಒಳ ಭಾವವನು ತಿಳಿ
ಹಮ್ಮು ತೊರೆದು ಸಂಸಾರ ಸುಖವನು ತಿಳಿ
ನಿಶೆ ಮುಸುಕು ಸರಿಸಿ ಜಗದ ಚೆಲುವನು ತಿಳಿ
ಒಲಿದ ಜೀವಿಯ ಹೃದಯ ಮಿಡಿತವನು ತಿಳಿ
ಜೊತೆ ಬಂದ ಸಂಗಾತಿಯ ನೋವನು ತಿಳಿ
ಒಲುಮೆಯಲಿ ಹೊಸೆದ ಪ್ರಭೆ ನಿಲುವನು ತಿಳಿ(೭೮)
ಎಂದು ನಾವು ಏನನ್ನು ಸಡಿಲಿಸಿ ತಿಳಿಯದೇ ಮುನ್ನುಗ್ಗುತ್ತಿದ್ದೇವೆಯೋ ಅವುಗಳನ್ನು ತಿಳಿಯಲು ಲೇಖಕಿ ಪ್ರಭಾವತಿ ಅವರು ಪ್ರೇರೇಪಿಸುತ್ತಾರೆ.

ದಿನದ ಅಂತ್ಯಕ್ಕೆ, ಗಾಣದ ಎತ್ತು ಸುತ್ತಿ ಸುತ್ತಿ ಕೊನೆಗೆ ಗೂಟದ ಬಳಿ ಬಂದು, ಅದೇ ಶಾಶ್ವತ ಸ್ಥಾನ ಎಂದು ಕೂರುವಂತೆ ಮನುಜ ತನ್ನ ಶಕ್ತಿಯೇ ಅಂತಿಮ ಎಂಬ ಮೂಢನಂಬಿಕೆಯಿಂದಲೇ ಬದುಕಿ; ಬದುಕಿನ ಕೊನೆಗೊಮ್ಮೆ ನನ್ನದೇನಿಲ್ಲ ಎಲ್ಲವೂ ಆ ಪರಮಾತ್ಮನದೇ ಎಂದು ಆಧ್ಯಾತ್ಮಿಕದ ಕಡೆಗೆ ವಾಲಿ ಆ ಪರಶಿವನನ್ನು ಕೂಡಲು ಹಂಬಲಿಸುತ್ತಾನೆ. ಇದನ್ನು ಲೇಖಕಿಯವರು ಗಜಲ್ ನಲ್ಲಿ ಬಹಳ ಅರ್ಥಪೂರ್ಣವಾಗಿ ಕಟ್ಟಿಕೊಟ್ಟು ಶಿವನನ್ನು ನಾವು ಕೂಡಬೇಕು(೮೭) ಎನ್ನುತ್ತಾರೆ. ಜೊತೆಗೆ ಈ ಲೋಕಪಾಲಕನ ಮೆಚ್ಚಿದ ಮಹಾದೇವಿ ಶಕ್ತಿ ಸ್ವರೂಪಿಣಿ, ಯುಕ್ತಿ ಸ್ವರೂಪಿಣಿ, ಭಕ್ತಿ ಸ್ವರೂಪಿಣಿ, ಉಕ್ತಿ ಸ್ವರೂಪಿಣಿ, ಮುಕ್ತಿ ಸ್ವರೂಪಿಣಿ(೮೮) ಎಂದು ಧ್ಯಾನಿಸುತ್ತಾರೆ.

ಎದೆ ಹೊಲದಿ ಬಿತ್ತದೆ ಕಸ ಬೆಳೆದು ಬೀಳಾಗಿತ್ತು
ಅವಳು ಮನೆ ತುಂಬಿದ ಮೇಲೆ ಉಲ್ಲಾಸವಾಗಿದೆ(೯೨)

ಮರಗಳನು ನೆಟ್ಟು ಹಸಿರು ಉಳಿಸಿ ಇಳೆ ತೊರೆಯಬೇಕು
ಸಜ್ಜನರ ಸಾಂಗತ್ಯವ ಗಳಿಸಿ ಇಳೆ ತೊರೆಯಬೆಕು(೯೩)

ಅವಳ ಕಕ್ಕುಲಾತಿಯ ಅನ್ನವು ಬೇಯುತ್ತಿತ್ತು ಅಂದು
ಎಲ್ಲರ ಮೊಗದಲಿ ನಲಿವಿನ ನಗೆ ಆಡುತ್ತಿತ್ತು ಅಂದು(೯೪)

ಕಿಚ್ಚಿಲ್ಲದ ಆವಿಗೆಯಲಿ ತನುವು ಬೆಂದು ಕರಕಾಗಿದೆ
ಹುಣ್ಣಿಮೆಯಲಿ ಹೊಳೆವ ಪ್ರಭೆ ಕರಗುತಿದೆ ಕಾರಣ ತಿಳಿಯದು(೧೦೦)

ಹೀಗೆ ಒಟ್ಟು ೧೦೨ ಗಜಲ್ ಗಳಲ್ಲಿ ಅನೇಕ ಗಜಲ್ ಗಳ ಸಾಲುಗಳು ನಮಗೆ, ಪ್ರೇಮ, ಸಂಗಮ, ಸತ್ಸಂಗ, ದಾಂಪತ್ಯ, ವಿರಹ ವೇದನೆ, ಅಹಂಕಾರ, ಮಮಕಾರ, ಉಪಕಾರ ಸ್ಮರಣೆ, ತಪ್ಪಿದ ದಾರಿ ಸರಿಪಡಿಸಿಕೊಳ್ಳುವ ಮಾರ್ಗೋಪಾಯ, ದ್ವೇಷ ದಳ್ಳುರಿಯಲ್ಲಿ ಬೆಂದ ಬಗೆ, ಅದರಿಂದ ಹೊರಬಂದು ಪ್ರೀತಿ ಹಂಚುವ ಪರಿ, ದೈವತ್ವ, ಜನನ, ಮರಣ, ತಾಯಿಯ ಸೆರಗು, ಅವಳ ವಾತ್ಸಲ್ಯ, ಅವಳ ತ್ಯಾಗ ಶರಣರ ಸಂಗ ಮುಂತಾಗಿ ಅನೇಕ ವಿಷಯಗಳನ್ನು  ಪರಿಣಾಮಕಾರಿಯಾಗಿ ತಿಳಿಸುತ್ತಾ ಸಾಗುತ್ತವೆ. ಪ್ರತೀ ಗಜಲ್ ಬಗೆಗೂ ಇಲ್ಲಿ  ಮಾತಾಗಬೇಕೆಂಬಂತಹ ಮನಸು ನನಗೆ ಮೂಡುತ್ತಿದೆ ಆದರೂ ಅಸಂತೃಪ್ತಿಯಿಂದ ಇದನ್ನು ಇಲ್ಲಿಗೆ ಮೊಟಕುಗೊಳಿಸುತ್ತೇನೆ.
ಈ ಕೃತಿ ಮತ್ತು ಕೃತಿಕಾರರ ಕುರಿತಾಗಿ ಸಂಶೋಧನಾ ಪ್ರಬಂಧವನ್ನು ಮಂಡಿಸಲು PhD ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡರೆ ಬಹಳ ಉನ್ನತ, ಉತ್ತಮ ಎನಿಸುತ್ತದೆ. ಇಷ್ಟು ಪ್ರಬುದ್ಧವಾದ ಬರಹದ ಕುರಿತಾಗಿ ಮತ್ತು ಕೃತಿಯ ಕೆಲವೇ ಕೆಲವು ಸಾಲುಗಳ ಕುರಾತಾಗಿ ಮಾತನಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತಾ, ಸರ್ವರೂ ಪುಸ್ತಕ ಕೊಂಡು ಓದಿ ಕೃತಿಕಾರರನ್ನೂ, ಪ್ರಕಾಶಕರನ್ನೂ ಮತ್ತು ಪ್ರಕಾಶಕರ ಸದುದ್ದೇಶದ ಮಹಾನ್ ಕಾರ್ಯವನ್ನೂ ಉತ್ತೆಜಿಸಿ ಪ್ರೋತ್ಸಾಹಿಸಬೇಕೆಂದು ಪ್ರಾರ್ಥಿಸುತ್ತೇನೆ.
ಕೊನೆಯಲ್ಲಿ, ಇಂತಹ ಮೇರು ಕೃತಿಯನ್ನು ಹೊರ ತಂದ ದೇವನಾಂಪ್ರಿಯ ಪ್ರಕಾಶನದ ಶ್ರೀಯುತ ವೀರೇಶ ಸೌದ್ರಿ ಅವರಿಗೂ, ಕೃತಿಕಾರರೂ, ಹಿರಿಯರೂ ಆದ ಶ್ರೀಮತಿ ಪ್ರಭಾವತಿ ಎಸ್.ದೇಸಾಯಿ ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಾ ನನ್ನ ಮನದ ತೊದಲು ತುಡಿತದ ಅನಿಸಿಕೆಗಳನ್ನು ಮುಗಿ‌ಸುತ್ತೇನೆ.

ವರದೇಂದ್ರ ಕೆ ಮಸ್ಕಿ
9945253030

ಕೃತಿಗಳಿಗಾಗಿ ಸಂಪರ್ಕಿಸಿ
—– ದೇವನಾಂಪ್ರಿಯ ಪ್ರಕಾಶನ ಮಸ್ಕಿ
9448805067

Don`t copy text!