ಶೂನ್ಯ ಸಂಪಾದನೆಯ ಮೌಲ್ಯ ಪ್ರಕ್ಷಿಪ್ತತೆ ಹಾಗು ತಾರ್ಕಿಕ ನೆಲೆಗಟ್ಟು-ಒಂದು ಚಿಂತನೆ.

ಶೂನ್ಯ ಸಂಪಾದನೆಯ ಮೌಲ್ಯ ಪ್ರಕ್ಷಿಪ್ತತೆ ಹಾಗು ತಾರ್ಕಿಕ ನೆಲೆಗಟ್ಟು-ಒಂದು ಚಿಂತನೆ.

ಶೂನ್ಯ ಸಂಪಾದನೆಯ ನಾಲ್ಕು ಮುಖ್ಯ ಸಂಕಲನಕಾರರಿಂದ ರಚಿತಗೊಂಡ ಜಗವು ಕಂಡ ಅತ್ಯಂತ ಉತ್ಕೃಷ್ಟ ಕೃತಿಯಾಗಿದೆ. ಶೂನ್ಯ ಸಂಪಾದನೆ ಹಲವು ಶರಣರ ಚಾರಿತ್ರಿಕ ಸತ್ಯಗಳನ್ನು ನೀಡಿವೆಯಾದರೂ ಅಲ್ಲಿ ಬರುವ ಅನೇಕ ಪ್ರಸಂಗಗಳು ಅನುಮಾನ ಸಂದೇಹ ಹುಟ್ಟುವಂತೆ ಮಾಡುತ್ತವೆ.

1)ಅಕ್ಕ ಮಹಾದೇವಿ ಬೆತ್ತಲೆಯಾಗಿ ಕಲ್ಯಾಣ ಪುರ ಪ್ರವೇಶ ಮಾಡುವುದು ,ಕಿನ್ನರಿ ಬ್ರಹ್ಮಯ್ಯನ ಪ್ರಸಂಗ (ಅಕ್ಕನ ವೈರಾಗ್ಯ ಪರೀಕ್ಷಿಸಲು ಕಿನ್ನರಿ ಬ್ರಹ್ಮಯ್ಯ ಅವಳ ಗುಪ್ತಅಂಗಗಳ ಮೇಲೆ ಕೈ ಹಾಕಿ ಪರೀಕ್ಷಿಸಿದ ಅತ್ಯಂತ ನಂಬಲರ್ಹವಾಗದ ಸಂಗತಿ )
2) ಜೇಡರ ದಾಸಿಮಯ್ಯನು ಶಿವನಿಗೆ ಸೀರೆ ನೇಯ್ದು ಕೊಟ್ಟಿರುವ ಪ್ರಸಂಗ .
3) ನುಲಿಯ ಚಂದಯ್ಯ ನ ಲಿಂಗ ನೀರಲ್ಲಿ ಬಿದ್ದು ಲಿಂಗಯ್ಯನು ಚಂದಯ್ಯನ ಬೆನ್ನು ಹತ್ತಿ ಬಂದು ಮತ್ತೆ ಅವನ ಕೊರಳಲ್ಲಿ ಲಿಂಗವಾಗುವುದು.
4) ಆಯ್ದಕ್ಕಿ ಲಕ್ಕಮ್ಮನ ಮಾರಯ್ಯನ ಪ್ರಸಂಗ
5) ಅಲ್ಲಮರ ಆರೋಹಣ ಪ್ರಸಂಗ .
6) ಮುಕ್ತಾಯಕ್ಕನ ಪ್ರಸಂಗ
ಹೀಗೆ ಅನೇಕ ವಿಚಾರಗಳಲ್ಲಿ ಶೂನ್ಯ ಸಂಪಾದನೆ ಒಂದು ಮೌಲಿಕ ಕೃತಿಯಾದರೂ ಸಹಿತ ಅಲ್ಲಿ ಬರುವ ಅನೇಕ ಪುರಾಣ ಕಲ್ಪಿತ ಸಂಗತಿಗಳ ಮರು ಮೌಲ್ಯ ಮಾಪನಗಳ ಅಗತ್ಯವಿದೆ.

ಅಕ್ಕ -ಬೆತ್ತಲೆಯಾಗಿ ಬಂದಿಲ್ಲ.-ಅರಸು ಕೌಶಿಕನನ್ನು ಧಿಕ್ಕರಿಸಿ ಉಟ್ಟ ತಡಿಯೊಂದಿಗೆ (ಉಟ್ಟ +ತಡಿ = ಉಡುತಡಿ) ತಡಿ ಅಂದರೆ ಹಾಸಿಗೆ ಅಥವಾ ಕಾಲಿಗೆ ಹಾಕುವ ಬಟ್ಟೆ .ತಾನು ಮನ ಭಾವ ಬಯಲು ಅಂದರೆ ಅವಳಲ್ಲಿ ನಿರ್ಮೋಹ ಭಾವವಿತ್ತು .ಹಾಗಂತ ಅವಳ ಮೊಲೆ ಗುಪ್ತಾ0ಗ ಬಿಚ್ಚಿ ತೋರುವ ಅಥವಾ ಪರೀಕ್ಷಿಸುವ ಅಗತ್ಯ ಶರಣರಿಗೆ ಇರುವದಿಲ್ಲ.
ವಾಸ್ತವಿಕ ಹಾಗು ಅಷ್ಟೇ ಸತ್ಯ ಸರಳ ನೆಲೆಗಟ್ಟಿನಲ್ಲಿ ಶೂನ್ಯ ಸಂಪಾದನೆಯನ್ನು ಕೂಡ ಪರಿಷ್ಕರಿಸಿ ಓದುವುದರಲ್ಲಿ ಹೆಚ್ಚಿನ ಆನಂದ ದೊರೆಯುತ್ತದೆ.
ವಚನಗಳಲ್ಲಿ ಬರುವ ನೈಜ ಅರ್ಥ ಆಶಯಗಳನ್ನು ಕಂಡು ಹಿಡಿಯಬೇಕು. ಸತ್ಯಾನ್ವೇಷಣೆಯ ಜಾಡು ಹಿಡಿಯುವವರು ಪುರಾಣ ಪುಣ್ಯ ಕಥೆಗಳಿಗೆ ಜೋತು ಬೀಳದೆ ಸತ್ಯದ ಪರಿ ಕಲ್ಪನೆಯನ್ನು ಕಾಣಬೇಕು .

ಓದುಗರ ತಾಳ್ಮೆ ಸಹನೆ ಮುಖ್ಯ ಇಂತಹ ಅತ್ಯಂತ ಹಳೆಯದಾದ ಶೂನ್ಯ ಸಂಪಾದನೆ ಪರಿಷ್ಕರಣೆ ಮಾಡುವಲ್ಲಿ ಸ್ವಲ್ಪ ಮಟ್ಟಿಗೆ ಪ್ರತಿರೋಧ ಬರುವುದು ವಿರೋಧ ವ್ಯಕ್ತವಾಗುವುದು ಸಾಮಾನ್ಯ.
ವಚನಕಾರರು ಮಹಾ ಮೌಲ್ಯಗಳ ಪ್ರತಿಪಾದಕರು ವೈಜ್ಞಾನಿಕ ವೈಚಾರಿಕ ನೆಲೆ ಗಟ್ಟಿನಲ್ಲಿ ಚಿಂತಿಸಿದವರು.
ಶೂನ್ಯ ಸಂಪಾದನೆ -ಜಗತ್ತಿನ ಶ್ರೇಷ್ಠ ಕೃತಿ ಮಹಾ ಗಣಪ್ರಸಾದಿ ,ಹಲಗೆಯಾರ್ಯ , ಗುಮ್ಮಳಾಪರವದ ಸಿದ್ಧಲಿಂಗ ಯತಿಗಳು ,ಗೂಳೂರು ವೀರಣ್ಣ ಒಡೆಯರು ಹೀಗೆ ಸಂಕಲನ ಗೊಂಡ ಈ ಕೃತಿಯ ಕಾವ್ಯ ಲಕ್ಷಣಗಳು ಮೌಲ್ಯ ಚಿಂತನೆ ಸಂಕಲನಕಾರರ ಜಾಣ್ಮೆ ನಿಪುಣತೆ ಕೌಶಲ್ಯ ಅತ್ಯಂತ ಉತ್ಕೃಷ್ಟವಾಗಿದೆ. ಆದರೆ ಅವುಗಳ ಪ್ರಚಲಿತ ದಿನಗಳಲ್ಲಿ ತಾತ್ವಿಕ ನೆಲೆಗಟ್ಟಿನ ಮೇಲೆ ಚರ್ಚಿಸುವುದು ಅಗತ್ಯ ಹಾಗು ಅನಿವಾರ್ಯವೆಂದು ನಾನು ತಿಳಿದಿರುವೆನು.
ವೈಭವೀಕರಣ ಸ್ವಲ್ಪಮಟ್ಟಿಗೆ ಹಿನ್ನೆಡೆಯಾದರೂ, ಪ್ರಕ್ಷಿಪ್ತತೆಯನ್ನು ಶುದ್ಧಿ ಕರಿಸುವ ಕೆಲಸವೊಂದಾಗಬೇಕು. ಇಂತಹ ಅನೇಕ ಕಾರ್ಯಗಳು ನಮ್ಮಿಂದ ಆಗಬೇಕಿದೆ . ಎಲ್ಲರೂ ಕೈ ಜೋಡಿಸಿದರೆ ಅದು ಸುಲಭ ಸಾಧ್ಯ .

 

 

 

-ಡಾ .ಶಶಿಕಾಂತ.ಪಟ್ಟಣ -ರಾಮದುರ್ಗ

Don`t copy text!