ನಮ್ಮೊಳಗಿನ ದನಿ
ಅದೊಂದು ಸುಭಿಕ್ಷವಾದ ರಾಜ್ಯವಾಗಿತ್ತು. ಆ ರಾಜನಿಗೆ ನಾಲ್ಕು ಜನ ಹೆಂಡತಿಯರು. ಸಾಕಷ್ಟು ವರ್ಷ ಜವಾಬ್ದಾರಿಯತವಾಗಿ ವೈಭವದಿಂದ ರಾಜ್ಯವನ್ನು ಆಳಿದ ರಾಜ ನಂತರ ತನ್ನ ಮಕ್ಕಳಿಗೆ ಎಲ್ಲವನ್ನು ಬಿಟ್ಟುಕೊಟ್ಟು ವಾನಪ್ರಸ್ಥಾಶ್ರಮಕ್ಕೆ ಹೋಗಲು ನಿರ್ಧರಿಸಿದ.
ಇಷ್ಟು ವರ್ಷ ತನ್ನ ಜೊತೆಯಲ್ಲಿ ಇದ್ದ ಪತ್ನಿಯರು, ಪುತ್ರರು, ಅರಮನೆ, ಆಳು ಕಾಳು, ಸಂಪತ್ತು ಎಲ್ಲವನ್ನು ಬಿಟ್ಟು ಹೋಗಲೇಬೇಕು ಎಂದು ನಿರ್ಧರಿಸಿದ ಆತನಿಗೆ ತನ್ನ ಜೊತೆ ಒಬ್ಬ ಪತ್ನಿಯಾದರೂ ಬರಲಿ ಎಂಬ ಆಶಯ.
ಅಂತೆಯೇ ಅಂದು ಆತ ತನ್ನ ಅತ್ಯಂತ ಪ್ರೀತಿ ಪಾತ್ರ ಕಿರಿಯ ಪತ್ನಿಯ ಬಳಿ ತೆರಳಿದ. ತನ್ನ ಮನಸ್ಸಿನಲ್ಲಿ ಬಂದ ವಿಚಾರವನ್ನು ಹೇಳಿ ನನ್ನೊಂದಿಗೆ ನೀನು ಕೂಡ ವಾನಪ್ರಸ್ತಾಶ್ರಮಕ್ಕೆ ಬರುವೆಯ ಎಂದು ಅತೀವ ಕಾತುರದಿಂದ ಕೇಳಿದ.
ಉಹೂಂ..ಸಾಧ್ಯವೇ ಇಲ್ಲ. ನಾನು ನಿಮ್ಮೊಂದಿಗೆ ಬರುವುದು ಕನಸಿನಲ್ಲಿಯೂ ಸಾಧ್ಯವಿಲ್ಲ. ನೀನು ನನ್ನನ್ನು ಬಿಟ್ಟು ಹೊರಟ ಮರುಕಣವೇ ನಾನು ಮತ್ತೊಬ್ಬರ ಸ್ವತ್ತು ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಖಡಾ ಖಂಡಿತವಾಗಿ ಹೇಳಿದಾಗ ರಾಜ ನಿರಾಶನಾಗಿ ಅಲ್ಲಿಂದ ಕಾಲ್ತೆಗೆದ.
ಮೂರನೇ ಪತ್ನಿಯಾದರೂ ತನ್ನೊಂದಿಗೆ ಬರಬಹುದು ಅದೆಷ್ಟು ಆಸೆಯಿಂದ ಆಕೆಯನ್ನು ನಾನು ಮನೆಗೆ ಕರೆತಂದಿದ್ದೆ, ಆಕೆ ನನಗೆ ನಿರಾಶೆ ಮಾಡುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಮನಸ್ಸಿನಲ್ಲಿ ಯೋಚಿಸಿ ರಾಜ ತನ್ನ ಮೂರನೇ ಪತ್ನಿಯ ಕೋಣೆಗೆ ತೆರಳಿದ. ಪತಿಯನ್ನು ಸಕಲ ಆದರದಿಂದ ಬರಮಾಡಿಕೊಂಡ ಆಕೆಯ ಬಳಿ ತನ್ನ ಮನದ ಇಂಗಿತವನ್ನು ಅರುಹಿದ ರಾಜ ಅತ್ಯಂತ ಆಸ್ಥೆ ಯಿಂದ ನನ್ನೊಂದಿಗೆ ವಾನಪ್ರಸ್ತಾಶ್ರಮಕ್ಕೆ ಬರಲು ಸಾಧ್ಯವೇ ಎಂದು ಕೇಳಿದ.
ಅದು ಹೇಗೆ ಸಾಧ್ಯವಾಗುತ್ತದೆ ಮಹಾರಾಜ… ನಾನು ನಿನ್ನೊಂದಿಗೆ ಬರಲಾರೆ. ನನಗಿನ್ನೂ ಆಯುಸ್ಸಿದೆ. ನಾನು ಬೇರೆಯ ವಿವಾಹವಾಗಿ ಸಂತೋಷದಿಂದ ಜೀವನವನ್ನು ಸಾಗಿಸುವೆ ಎಂದು ಆಕೆ ಹೇಳಿದಳು.
ತುಸು ನಿರಾಶೆಯಾದರೂ ಈ ಬಾರಿ ಮಹಾರಾಜ ಬೇಗನೆ ಚೇತರಿಸಿಕೊಂಡು ತನ್ನ ಎರಡನೇ ಪತ್ನಿಯ ಬಳಿ ಸಾರಿದ.
ಎರಡನೇ ಪತ್ನಿ ತುಂಬಾ ಜಾಣ್ಮೆಯುಳ್ಳ, ವ್ಯಾವಹಾರಿಕ ತಿಳುವಳಿಕೆಯುಳ್ಳ ಮತ್ತು ಲೋಕ ಜ್ಞಾನ ಉಳ್ಳವಳಾಗಿದ್ದಳು. ಈಕೆ ಖಂಡಿತವಾಗಿ ನನ್ನ ಮಾತನ್ನು ತಿರಸ್ಕರಿಸುವುದಿಲ್ಲ ಎಂಬ ಮಹದಾಶಯ ಜೊತೆಗೆ ನಿರಾಕರಿಸಿದರೆ ಎಂಬ ಭಯ ಎರಡನ್ನೂ ಮನದಲ್ಲಿ ತುಂಬಿಕೊಂಡ ಮಹಾರಾಜ ಅತ್ಯಂತ ಪ್ರೀತಿಯಿಂದ ಆಕೆಯನ್ನು ವಾನಪ್ರಸ್ತಾಶ್ರಮಕ್ಕೆ ನನ್ನೊಂದಿಗೆ ಬರುವೆಯ ಎಂದು ಕೇಳಿದ.
ಖಂಡಿತ ಸಾಧ್ಯವಿಲ್ಲ ಮಹಾರಾಜ, ನಾನು ನಿನ್ನ
ವಾನಪ್ರಸ್ತಾಶ್ರಮಕ್ಕೆ ಅವಶ್ಯಕವಾದ ಎಲ್ಲ ಸಿದ್ಧತೆಗಳನ್ನು ಮಾಡುತ್ತೇನೆ. ಕಾಡಿನ ಅಂಚಿನವರೆಗೂ ಬಂದು ನಿನ್ನನ್ನು ಬೀಳ್ಕೊಡುತ್ತೇನೆ,ಆದರೆ ಅದಕ್ಕೂ ಮುಂದೆ ವಾನಪ್ರಸ್ತಾಶ್ರಮಕ್ಕೆ ಬರಲು ಸಾಧ್ಯವಿಲ್ಲ ಎಂದು ಕಣ್ತುಂಬಿ ಹೇಳಿದಳು.
ಅತ್ಯಂತ ನಿರಾಶೆ ಮತ್ತು ದುಃಖದಿಂದ ಮಹಾರಾಜ
ಮರಳಿ ಹೊರಡುತ್ತಿರಲು ದೂರದಿಂದ ಓರ್ವ ಹೆಣ್ಣು ಮಗಳು ನಾನು ತಮ್ಮೊಂದಿಗೆ ವಾನಪ್ರಸ್ತಾಶ್ರಮಕ್ಕೆ ಬರಲು ಸಿದ್ಧ ಮಹಾರಾಜ ಎಂದು ಕೂಗಿ ಹೇಳಿದಳು.
ಹಿಂತಿರುಗಿ ನೋಡಿದ ರಾಜನಿಗೆ ಕಂಡದ್ದು ತನ್ನ ಮೊದಲ ಪತ್ನಿ. ಅತ್ಯಂತ ಕೃಶವಾಗಿದ್ದ ಆಕೆ ಸಾಧಾರಣವಾದ ಉಡುಗೆಯಲ್ಲಿದ್ದಳು. ಕೇವಲ ತನ್ನ ಸಾನಿಧ್ಯವನ್ನು ಹೊರತುಪಡಿಸಿ ತನ್ನಿಂದ ಏನನ್ನೂ ಬಯಸದ ಆಕೆಯನ್ನು ತಾನು ಯಾವಾಗಲೂ ಕಡೆಗಣಿಸುತ್ತಿದ್ದ, ಯಾವುದೇ ಆಭರಣಗಳನ್ನು ಧರಿಸದೆ ನಿರಾಡಂಬರವಾಗಿದ್ದ ಸೊರಗಿದ ಮೊಗವನ್ನು ಹೊತ್ತ ಆಕೆಯನ್ನು ಕಂಡ ರಾಜ ಇಷ್ಟು ದಿನ ಆಕೆಯನ್ನು ಲಕ್ಷಿಸದೆ ಇದ್ದುದನ್ನು ನೆನೆದು ನಾಚಿಕೆಯಿಂದ ತಲೆ ತಗ್ಗಿಸಿದ. ತಾನು ಕೇಳದೆ ತನಗೆ ಎಲ್ಲವನ್ನು ಕೊಡ ಮಾಡಿದ ಆಕೆಯನ್ನು ತಾನು ಜೀವನದಲ್ಲಿ ಮುಖ್ಯ ಎಂದು ಪರಿಗಣಿಸದೆ ಇದ್ದುದಕ್ಕಾಗಿ ಪಶ್ಚಾತಾಪ ಪಟ್ಟ.
ಸ್ನೇಹಿತರೆ… ಈ ರಾಜ ಮತ್ತಾರು ಅಲ್ಲ. ನಾವು ನೀವು ಎಲ್ಲರೂ ಈ ರಾಜನ ಪರಿಸ್ಥಿತಿಯಲ್ಲಿದ್ದೇವೆ. ನಾವೆಲ್ಲರೂ ಈ ಪ್ರಪಂಚಕ್ಕೆ ಬಂದ ಅತಿಥಿಗಳು. ನಮ್ಮ ಕೆಲಸ ಮುಗಿದ ಮೇಲೆ ನಾವು ಇಲ್ಲಿಂದ ನಿರ್ಗಮಿಸಲೇಬೇಕು. ಇರುವವರೆಗೂ ನಾನು ನನ್ನದು ನನ್ನಿಂದ ಎಂಬ ಅಹಮಿಕೆಯಲ್ಲಿ ನಾವು ಬಹಳಷ್ಟು ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ಐಹಿಕ ಬದುಕಿನ ಸುಖ ಭೋಗಗಳಲ್ಲಿ ನಾವು ಕಳೆದು ಹೋಗುತ್ತೇವೆ.
ಈ ರಾಜನ ಕಥೆಯಲ್ಲಿ ಬರುವ ನಾಲ್ಕನೆಯ ಪತ್ನಿ ನಾವು ಖರೀದಿಸಿದ ಎಲೆಕ್ಟ್ರಾನಿಕ್ ಡಿವೈಸ್ ಗಳಾದ
ಲ್ಯಾಪ್ಟಾಪ್, ಮೊಬೈಲ್, ಟಿವಿ ಮುಂತಾದವುಗಳು.
ನಾವು ಗಳಿಸಿದ ಆಸ್ತಿ ಪಾಸ್ತಿ, ಒಡವೆ ವಸ್ತ್ರಗಳು. ನಾವು ಇಲ್ಲವಾದ ನಂತರ ಅವುಗಳಿಗೆ ವಾರಸುದಾರರು ಬೇರೆಯೇ ಇರುತ್ತಾರೆ. ಆದರೂ ಇರುವವರೆಗೆ ನಾವು ಅವುಗಳನ್ನು ಅತಿಯಾಗಿ ಪ್ರೀತಿಸುವ ಅವುಗಳಿಲ್ಲದೆ ನಮ್ಮ ಬದುಕೇ ಇಲ್ಲ ಎಂಬ ತಪ್ಪು ಕಲ್ಪನೆಗೆ ಈಡಾಗುತ್ತೇವೆ.ನಮ್ಮಿಂದ ಅವುಗಳ ಅಸ್ತಿತ್ವವೇ ಹೊರತು ಅವುಗಳೇ ನಮ್ಮ ಬದುಕನ್ನು ಆಳಬಾರದು. ಇದರ ಅರಿವಿಲ್ಲದೆ ನಾವು ಇಂತಹ ವಸ್ತುಗಳಿಗೆ ಅತಿ ಹೆಚ್ಚು ಅಡಿಯಾಳಾಗುತ್ತೇವೆ. ನಮ್ಮ ಅಸ್ತಿತ್ವವೇ ಇಲ್ಲವಾದಾಗ ಅವು ಪರರ ಪಾಲಾಗುತ್ತದೆ.
ಮೂರನೆಯ ಪತ್ನಿ ನಮ್ಮ ವೈವಾಹಿಕ ಸಂಗಾತಿ, ಪಾಲಕರು, ಮಕ್ಕಳು ಸಂಬಂಧಿಕರು ಇತ್ಯಾದಿ. ನಾವು ಸತ್ತ ನಂತರ ನಮ್ಮನ್ನು ಕಾಡಿನಂಚಿನ ಸ್ಮಶಾನದವರೆಗೂ ಬಂದು ಬೀಳ್ಕೊಡುವ ಇವರು ಅದಕ್ಕೂ ಮುಂದೆ ನಮ್ಮೊಂದಿಗೆ ನಡೆಯಲು ಸಾಧ್ಯವಿಲ್ಲ. ನಮ್ಮ ನಂತರದ ಎಲ್ಲಾ ಅಪರ ಕ್ರಿಯೆಗಳನ್ನು ನಿರ್ವಹಿಸುವ ನಮ್ಮ ಆಸ್ತಿ ಪಾಸ್ತಿಗಳಿಗೆ ಹಕ್ಕುದಾರರಾಗುವವರು.
ಎರಡನೆಯ ಪತ್ನಿ ನಮ್ಮ ಶರೀರ. ನಾವು ಇಹಲೋಕವನ್ನು ತ್ಯಜಿಸಿದ ನಂತರ ಸ್ಮಶಾನದವರೆಗೂ ನಮ್ಮ ದೇಹವನ್ನು ತಂದು ಅಂತಿಮ ವಿಧಿ ವಿಧಾನಗಳನ್ನು ಪೂರೈಸುತ್ತಾರೆ. ಅಲ್ಲಿಗೆ ದೇಹ ಮತ್ತು ನಮ್ಮ ಸಂಬಂಧ ಮುಗಿದು ಹೋಗುತ್ತದೆ. ಅದೆಷ್ಟೇ ನಾವು ನಮ್ಮ ಜೀವಿತಾವಧಿಯಲ್ಲಿ ಶಿಸ್ತಿನಿಂದ, ಪ್ರೀತಿಯಿಂದ ನಮ್ಮ ದೇಹವನ್ನು, ದೈಹಿಕ ಸೌಂದರ್ಯವನ್ನು ಕಾಪಾಡಿಕೊಂಡರೂ ಅದು ನಮ್ಮೊಂದಿಗೆ ಕೊನೆಯವರೆಗೂ ಇರಲಾರದು. ಸೌಂದರ್ಯ ಎಂಬುದೇ ಕ್ಷಣಿಕತೆಗೆ ಮತ್ತೊಂದು ಹೆಸರು. ಅದೆಷ್ಟೇ ಗಟ್ಟಿ ಮುಟ್ಟಾಗಿದ್ದರೂ ಜೀವ ಹೋದ ಮೇಲೆ ಶವ ಎಂದು ಕರೆಯುತ್ತಾರೆ. ಚಿತೆಯವರೆಗೆ ಮಾತ್ರ ನಮ್ಮ
ಮತ್ತು ದೇಹದ ಸಂಬಂಧ.
ಮೊದಲನೆಯ ಪತ್ನಿ ಕೊನೆಯದಾಗಿ ನಮ್ಮೊಂದಿಗೆ ಬರುವುದು ನಮ್ಮ ಆತ್ಮ. ಆತ್ಮವಿಲ್ಲದ ದೇಹಕ್ಕೆ ಯಾವುದೇ ಬೆಲೆ ಇಲ್ಲ. ಆದರೂ ಕೂಡ ಆತ್ಮವನ್ನು ನಾವು ಕಾಳಜಿ ಮಾಡುವುದೇ ಇಲ್ಲ. ನಮ್ಮ ಅಂತರ್ಮನದ ತುಡಿತಗಳಿಗೆ ನಾವು ಕಿವಿಗೊಡುವುದಿಲ್ಲ ಆದ್ದರಿಂದಲೇ ರಾಜನ ಮೊದಲ ಪತ್ನಿಯಂತೆ ನಮ್ಮ ಅಂತರ್ಮನ ಸದಾ ಪ್ರೀತಿಗಾಗಿ ಕಾಳಜಿಗಾಗಿ ಹಾತೊರೆದು ಬಡವಾಗಿರುತ್ತದೆ. ನಮ್ಮ
ಅಂತರಂಗದ ದನಿಗೆ ನಾವು ಕಿವಿಯಾಗದಿದ್ದರೂ, ಅದೆಷ್ಟೇ ನಾವು ನಿರ್ಲಕ್ಷಿಸಿದರೂ ನಮ್ಮೊಂದಿಗೆ ಕೊನೆಯವರೆಗೆ ಇರುವುದು ನಮ್ಮ ಆತ್ಮ….ನಮ್ಮ ಮನಸ್ಸಾಕ್ಷಿ ನಮ್ಮ ಅಂತರಾತ್ಮ. ನಮ್ಮ ದೇಹದಲ್ಲಿ ಅಂತರ್ಗತವಾಗಿರುವ ನಮ್ಮ ಅಂತರಾತ್ಮದ ದನಿಯನ್ನು ನಾವು ಆಲಿಸಬೇಕು. ಅದು ಇರುವ ಕಾರಣಕ್ಕೆ ನಾವು ಜೀವಂತ ಎನಿಸಿಕೊಂಡಿದ್ದು ನಮ್ಮ ಮನದ ಭಾವನೆಗಳಿಗೆ ಮಿಡಿತಗಳಿಗೆ ನಾವು ಸ್ಪಂದಿಸಬೇಕು.
ಸ್ನೇಹಿತರೆ ಇನ್ನಾದರೂ ನಮ್ಮೊಳಗಿನ ದನಿಗೆ
ನಾವು ಕಿವಿಯಾಗೋಣವೇ?
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್