ವಿಚಾರ ಕ್ರಾಂತಿಗೆ ಕುವೆಂಪು ಆಹ್ವಾನ – 50 ವರುಷ
ಜಾಲಗಾರ ,ಶೂದ್ರತಪಸ್ವಿ ,ಬೆರಳ್ಗೆ ಕೊರಳ್ ,ಮುಂತಾದ ಅತ್ಯಂತ ಪ್ರಗತಿಪರ ಬಂಡಾಯಧ್ವನಿಯ ಕೃತಿಗಳು ಡಾ ಕೆ ವಿ ಪುಟ್ಟಪ್ಪನವರಿಂದ ರಚಿಸಲ್ಪಟ್ಟವೋ ಅವತ್ತಿನಿಂದ ಅತ್ಯಂತ ಸಾಂಪ್ರದಾಯಿಕ ವೈದಿಕ ಮನಸ್ಸುಗಳ ಕೆಂಗಣ್ಣಿಗೆ ಕುವೆಂಪು ಗುರಿಯಾದರು. ಕುವೆಂಪು ಆಧ್ಯಾತ್ಮವಾದಿಗಳು ,ರಾಮಕೃಷ್ಣ ಪರಮಹಂಸರ , ಪ್ರಭಾವಕ್ಕೆ ಆರಂಭದಲ್ಲಿ ಒಳಗಾಗಿದ್ದರೂ ಸಹಿತ ಧಾರ್ಮಿಕ ಕರ್ಮಠತನ ವಿರೋಧಿಸಿದರು. ದೇವರ ಹೆಸರಿನಲ್ಲಿ ಶೋಷಣೆ ,ಸುಲಿಗೆ ಪೌರೋಹಿತ್ಯವನ್ನು ಧಿಕ್ಕರಿಸಿದರು.
ಅವರ ವಿಚಾರ ಕ್ರಾಂತಿಗೆ ಆಹ್ವಾನ – ಇದಕ್ಕೀಗ 50 ವರುಷ ನವೋದಯದ ನಂತರ ಪ್ರಗತಿ ಪರ ಸಾಹಿತ್ಯ ಎಂಬ ಸಣ್ಣ ಕಾಲ ಘಟ್ಟದ ಚಳುವಳಿಗೆ ಕುವೆಂಪು ನೇತಾರರು.
ವಿಚಾರ ಕ್ರಾಂತಿಗೆ ಆಹ್ವಾನ”_
ತಾ॥20/4/1974 ರಂದು ಮಹಾರಾಜ ಕಾಲೇಜಿನಲ್ಲಿ ಕರ್ನಾಟಕ ಪ್ರಗತಿಪರ ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ಉದ್ಘಾಟನೆಯಲ್ಲಿ ಕ್ರಾಂತಿ ಸಭೆಯನ್ನು ಉದ್ದೇಶಿಸಿ ರಾಷ್ಟ್ರಕವಿಗಳು ನುಡಿದ ನುಡಿಗಳು
ದಿನ-109ˌಪುಟ-62ˌಪ್ಯಾರಾ-29
*ಸಂಸ್ಕೃತಿ ಕ್ರಾಂತಿಗೆ ಕಹಳೆನಾಂದಿ !*
“ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?”
ಅವನ ಕಾಲಕ್ಕೆ ಏನಿತ್ತೋ ಅದನ್ನು ಅವನು ಬರೆದಿಟ್ಟˌ ಅದನ್ನು ಈ ಹೊತ್ತು ಕಾನೂನು ಕಟ್ಟಳೆ ಅಂತ ತೆಗೆದುಕೊಂಡರೆ ನಾವು ಶುದ್ಧ ಅವಿವೇಕಿಗಳಷ್ಟೆ.
“ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !
ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು?
ನೊಂದವರ ಕಂಬನಿಯೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲಿಬೇಕೇನು?
ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ
ದಡದಲ್ಲಿ ಮೀಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವೇನು?
ಅಂತು ಮನು ತಾನು ಹೇಳಿರಲಾರನಯ್ಯಯ್ಯೊ !”
ಕುವೆಂಪುರವರು ಸಂಪ್ರದಾಯತೆ ಮಡಿವಂತಿಕೆಯ ವಿರುದ್ಧ ಕಹಳೆಯನ್ನೂದಿದರು. ಅಕ್ಷರ ಜ್ಞಾನ ವಿದ್ಯೆ ಸಾಹಿತ್ಯವೆನ್ನುವುದು ಮೇಲ್ವರ್ಗದ ಬ್ರಾಹ್ಮಣಶಾಹಿಗಳಿಗೆ ಮಾತ್ರ ಮೀಸಲಾದ ಕಾಲ ಘಟ್ಟದಲ್ಲಿ ಬ್ರಾಹ್ಮಣ್ಯ ವಿರೋಧಿಯ ಅಗ್ರ ಪಂಥದ ಕವಿ ಕುವೆಂಪು ಒಬ್ಬ ಬಂಡಾಯ ಕವಿಯಾಗಿ ರೂಪಗೊಂಡರು . ಡಾ ಬಿ ಆರ್ ಅಂಬೇಡ್ಕರ ಅವರು 1927 ಡಿಸೆಂಬರ್ 25 ರಂದು ಹಿಂದೂ ಧರ್ಮದ ಕಟ್ಟಳೆ ಧರ್ಮ ಸೂತ್ರವೆನಿಸಿದ ಮನು ಸ್ಮೃತಿಯನ್ನು ಬಹಿರಂಗವಾಗಿ ಸುಟ್ಟು ಹಾಕಿದರು ,23 ವರ್ಷದ ಯುವಕ ಕುವೆಂಪುರವರ ಮೇಲೆ ಗಾಢವಾದ ಪರಿಣಾಮ ಬೀರಿತು. ಮುಂದೆ ಕುವೆಂಪು ಮನು ಸ್ಮೃತಿಯ ಬಗ್ಗೆ ತಮ್ಮ ಮಾತಿನಲ್ಲಿ ಕಾವ್ಯದಲ್ಲಿ ಬಹಿರಂಗವಾಗಿ ಟೀಕಿಸುತ್ತಾರೆ
ಕುವೆಂಪುರವರಿಗೆ ಜಾತಿ ಅಸಮಾನತೆ , ಧಾರ್ಮಿಕ ಕಂದಾಚಾರಗಳು, ವರ್ಗ ವರ್ಣ ಲಿಂಗ ಭೇದಗಳ ಕೊಳಕುತನವನ್ನು ಕಣ್ಣಾರೆ ಕಂಡು ಅದಕ್ಕೆ ಸ್ಪಂದಿಸಿ ತಮ್ಮ ಹಲವು ಕೃತಿಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಾವ್ಯ ಖಡ್ಗವಾಗಲಿ , ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು, ನೂರು ದೇವರನು ನೀನು ನೂಕಾಚೆ ದೂರ, ಗುಡಿಗಳು ಗುಡುಗುತಿವೆ ಬಂಗ್ಲೆಗಳು ನಡುಗುತಿವೆ ಎಲ್ಲೆಲ್ಲಿ ಮೊಳಗಿದೆ ನವಕ್ರಾಂತಿಯ ಗಾನ .
1974 -1975 ಕುವೆಂಪುರವರಿಗೆ ಜೆಪಿ ಚಳುವಳಿ ವಿನೋಬಾ ಭಾವೆ ಅವರ ಭೂದಾನ ಗೋದಾನ ಸಾಕಷ್ಟು ಪ್ರಭಾವ ಬೀರಿದ ಪ್ರಗತಿಪರ ಚಿಂತನೆಗಳು. ಜಯಪ್ರಕಾಶ ನಾರಾಯಣರವರ ಸಮಗ್ರ ಕ್ರಾಂತಿ ಭಾರತದ ಎರಡನೆಯ ಸ್ವತಂತ್ರ ಸಂಗ್ರಾಮ ಎಂದರೆ ತಪ್ಪಾಗಲಾರದು. ಕುವೆಂಪುರವರಿಗೆ ಬಸವಣ್ಣ ಒಬ್ಬ ದಿಟ್ಟ ಕ್ರಾಂತಿಕಾರಿಯಾಗಿ ಕಂಡನು.
ಇಂದು ಮತ್ತೆ ಮುಂದೆ ಸ್ವಾತಂತ್ರ್ಯವೆಂದರೇನು ಅದಕ್ಕೆ ಪ್ರಜೆಗಳು ಹೋರಾಡ ಬೇಕೇ ?ಎಂಬ ದ್ವಂದ್ವದಲ್ಲಿದ್ದೇವೆ. ಐವತ್ತು ವರುಷಗಳ ನಂತರ ಕನ್ನಡ ಸಾಹಿತ್ಯದಲ್ಲಿ ಮತ್ತೆ ಓಲೈಕೆ ಗುಂಪುಗಾರಿಕೆ ರಾಜಿ ಸೂತ್ರಗಳಿಗೆ ನಿಂತಿದ್ದೇವೆ ನಾವು ನೀವು . ಸಾಹಿತ್ಯ ಪರಿಷತ್ ಮತ್ತು ಮುಂತಾದ ಸಾಹಿತಿಕ ಸಾಂಸ್ಕೃತಿಕ ಸಂಘಟನೆಗಳು ಜಡತ್ವದಿಂದ ಕೂಡಿದೆ .ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಕ ವಾತಾವರಣ ಇರಲಿಲ್ಲ ಅದೊಂದು ರಾಜಕೀಯ ಸಮಾವೇಶ ಅಕ್ಷರ ಜಾತ್ರೆ ಉಂಡು ತಿಂದು ತೇಗುವವರ ಯಾತ್ರೆ , 30 ಕೋಟಿಯ ಅನುದಾನದಲ್ಲಿ ಸಾಹಿತ್ಯ ಸಮ್ಮೇಳನ ನಡೆದರೂ ಸಹಿತ ರಾಜಕೀಯ ವ್ಯಕ್ತಿಗಳ ಪಕ್ಷಗಳ ಓಲೈಕೆಗೆ ಮೀಸಲಾಗಿತ್ತು ಸಮ್ಮೇಳನ .
ಸ್ನೇಹಿತರೆ ಈಗಲಾದರೂ ಬನ್ನಿ ಮನುಜ ಮತಕೆ ವಿಶ್ವ ಪತಾಕೆ ಹೆಜ್ಜೆ ಹಾಕ ಬನ್ನಿ
ವಿಚಾರ ಕ್ರಾಂತಿಗೆ ಜಯವಾಗಲಿ.
-ಡಾ ಶಶಿಕಾಂತ ಪಟ್ಟಣ ರಾಮದುರ್ಗ