ಕಥೆ
” ಪರಿವರ್ತನೆ “
ಹಸಿರಿನಿಂದ ಕಂಗೊಳಿಸುವ ಸುಂದರ ಊರು ಚಿಕ್ಕಹಳ್ಳಿ. ಈ ಊರಿನಲ್ಲಿ ಕಮಲವ್ವ ಮತ್ತು ಅವಳ ಮಗ ಶಿವಲಿಂಗ ಒಂದು ಪುಟ್ಟ ಮನೆಯಲ್ಲಿ ವಾಸವಾಗಿದ್ದರು. ಕಮಲವ್ವನ ಗಂಡ ತೀರಿಹೋಗಿದ್ದನು. ಕಮಲವ್ವ ಕೂಲಿ ಮಾಡಿಕೊಂಡು ದುಡಿದು ಮಗನನ್ನು ಸಾಕುತ್ತಿದ್ದಳು. ಶಿವಲಿಂಗ ಪ್ರತಿಭಾವಂತ ಬಾಲಕ. ಓದಿನಲ್ಲಿ ಅಪ್ರತಿಮ. ಗುಣದಲ್ಲಿ ಅಪ್ಪಟ ಚಿನ್ನ. ಚಿಕ್ಕಹಳ್ಳಿಯಲ್ಲಿ ೫ ನೇ ತರಗತಿಯವರೆಗೆ ಮಾತ್ರ ಶಾಲೆ ಇದ್ದರಿಂದ ಶಿವಲಿಂಗನನ್ನು ೬ ನೇ ತರಗತಿಯಲ್ಲಿದ್ದಾಗ ಒಂದು ಪಟ್ಟಣದಲ್ಲಿ ವಸತಿಗೃಹದಲ್ಲಿ ಇಟ್ಟಿದ್ದಳು. ಅಲ್ಲಿ ಒಂದು ಕೋಣೆಯಲ್ಲಿ ಶಿವಲಿಂಗ ಹಾಗೂ ಮನೋಜ ಎಂಬಾತನು ಇರುತ್ತಿದ್ದರು. ವಸತಿಗೃಹದಿಂದ ಶಾಲೆಯು ೨ ಕಿ. ಮೀ. ದೂರವಿತ್ತು. ದಿನಾಲು ಶಾಲಾ ಬಸ್ಸಿನಲ್ಲಿ ಶಾಲೆಗೆ ಹೋಗುತ್ತಿದ್ದರು. ಶಿವಲಿಂಗ ಶಾಲೆಯಲ್ಲಿ ಏರ್ಪಡಿಸಿದ ಎಲ್ಲ ಸ್ಪರ್ಧೆಗಳಲ್ಲಿ ಗೆದ್ದು ಓದಿನಲ್ಲಿ ಹೆಚ್ಚು ಅಂಕ ಗಳಿಸಿ ಎಲ್ಲ ಶಿಕ್ಷಕರ ಪ್ರೀತಿಗೆ ಪಾತ್ರನಾಗಿದ್ದನು. ಮನೋಜನಿಗೆ ಓದು ಅಂದರೆ ಅಷ್ಟಕ್ಕಷ್ಟೆ. ಸ್ಪರ್ಧೆಗಳಲ್ಲೂ ಸೋಲಾಗುತ್ತಿತ್ತು. ಎಲ್ಲದರಲ್ಲಿ ಗೆಲ್ಲುತ್ತಿದ್ದ ಶಿವಲಿಂಗನನ್ನು ನೋಡಿ ಮನೋಜನಿಗೆ ಹೊಟ್ಟೆಕಿಚ್ಚು ಉಂಟಾಗಿತ್ತು.
ಒಮ್ಮೆ ತ್ರೈಮಾಸಿಕ ಪರೀಕ್ಷೆಯ ಮೊದಲನೆಯ ದಿನ ಮನೋಜನು ಬೆಳಿಗ್ಗೆ ಬೇಗನೆ ಎದ್ದು ತಯಾರಾದನು. ಹೊರಗಡೆ ಬಂದು ಕೋಣೆಯ ಬಾಗಿಲದ ಹೊರಗಿನ ಚೀಲಕವನ್ನು ಹಾಕಿ ಕೀಲಿ ಜಡಿದು ಶಾಲೆಗೆ ಹೋದನು. ಇತ್ತ ಶಿವಲಿಂಗ ತಯಾರಾಗಿ ಶಾಲೆಗೆ ಹೋಗಲು ಬಾಗಿಲ ತೆಗೆಯಲು ಮುಂದಾದನು. ಬಾಗಿಲು ಹೊರಗಿನಿಂದ ಕೀಲಿ ಹಾಕಿದ್ದರಿಂದ ತೆಗೆಯಲು ಆಗಲಿಲ್ಲ. ಬಾಗಿಲನ್ನು ಜೋರಾಗಿ ಬಾರಿಸಾತೊಡಗಿದನು. “ಬಾಗಿಲು ತೆಗೆಯಿರಿ ” ಎಂದು ಕೂಗತೊಡಗಿದನು.ಇವನಿಗೆ ತುಂಬಾ ಆತಂಕವಾಯಿತು. ಪರೀಕ್ಷೆ ಬರೆಯುವ ಸಮಯ ಶುರುವಾಯಿತು. ಈತನ ಕೂಗುವ ಧ್ವನಿಯನ್ನು ಕೇಳಿ ವಾರ್ಡನ್ ನಕಲಿ ಕೀಯನ್ನು ತಂದು ಕೀಲಿ ತೆಗೆದನು. ಆಗ ಶಿವಲಿಂಗ ಹೊರಗೆ ಬಂದು ಆಟೋದಲ್ಲಿ ಶಾಲೆಗೆ ಹೊರಟನು. ಹೋಗುವಾಗ ದಾರಿಯಲ್ಲಿ ಒಬ್ಬ ಮಹಿಳೆ ಬಿದ್ದಿದ್ದಳು. ಅವಳ ಸುತ್ತ ಜನರು ನೆರೆದಿದ್ದರು. ಅವಳಾರೆಂದು ಶಿವಲಿಂಗ ನೋಡಿದನು. ಅವಳನ್ನು ಎಲ್ಲೋ ನೋಡಿದ ನೆನಪು. ತನ್ನ ಜೊತೆ ಕೋಣೆಯಲ್ಲಿರುವ ಮನೋಜನ ಹತ್ತಿರ ಅವಳ ಫೋಟೋ ಇತ್ತು. “ಅವಳು ನನ್ನ ಅಮ್ಮ” ಎಂದು ಮನೋಜನು ಹೇಳಿದ್ದನು. ಓಹೋ ಇವಳು ಮನೋಜನ ತಾಯಿ ಎಂದು ತಿಳಿದನು. ಇವಳು ತನ್ನ ಮಗ ಮನೋಜನನ್ನು ನೋಡಲು ಬರುವಾಗ ಮೂರ್ಛೆ ತಪ್ಪಿ ದಾರಿಯಲ್ಲಿ ಬಿದ್ದಿದ್ದಳು. ಕೂಡಲೇ ಅವಳನ್ನು ಆಸ್ಪತ್ರೆಗೆ ಕರೆದೊಯ್ದು ಅವಳಿಗೆ ತುರ್ತು ಚಿಕಿತ್ಸೆ ಕೊಡಿಸಲು ವೈದ್ಯರಿಗೆ ತಿಳಿಸಿ ಶಾಲೆಗೆ ಬಂದನು.
ಇತ್ತ ಶಾಲೆಯಲ್ಲಿ ಮನೋಜನಿಗೆ ಶಿವಲಿಂಗ ಪರೀಕ್ಷೆಗೆ ಹಾಜರಾಗದಿರುವುದು ಖುಷಿಯಾಗಿತ್ತು. ಆದರೆ ಶಿವಲಿಂಗ ಬಂದದ್ದನ್ನು ಕಂಡು ಬೆರಗಾದ. ಗುರುಗಳು ತಡವಾಗಿ ಬಂದ ಕಾರಣ ಕೇಳಿದರು. ಅವನು ನಡೆದ ಘಟನೆಯನ್ನು ಹೇಳಿದನು. ಆಗ ಗುರುಗಳು ಈತನ ಪರೋಪಕಾರದ ಕಾರ್ಯವನ್ನು ಮೆಚ್ಚಿ ಪೇಪರ್ ಕೊಟ್ಟು ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟರು.
ಮನೋಜನು ತನ್ನ ತಾಯಿ ಆಸ್ಪತ್ರೆಯಲ್ಲಿರುವ ವಿಷಯ ತಿಳಿದು ದುಃಖಪಟ್ಟನು. “ತಾನು ಶಿವಲಿಂಗನಿಗೆ ಕೆಡಕು ಬಯಸಿದೆ. ಆದರೆ ಆತ ನನ್ನ ತಾಯಿಯನ್ನು ಆಸ್ಪತ್ರೆಗೆ ಸೇರಿಸಿ ಪುಣ್ಯದ ಕೆಲಸ ಮಾಡಿದ್ದಾನೆ “. ಎಂದು ಪಶ್ಚಾತ್ತಾಪಪಟ್ಟನು. ಮನೋಜನು ತಾನು ಮಾಡಿದ ಕುತಂತ್ರವನ್ನು ಎಲ್ಲರ ಮುಂದೆ ಹೇಳಿ ” ನನ್ನಿಂದ ಅಪರಾಧವಾಗಿದೆ. ನನ್ನನ್ನು ಕ್ಷಮಿಸು ಗೆಳೆಯಾ ” ಎಂದು ಕಣ್ಣೀರಿಟ್ಟನು. ಆಗ ಶಿವಲಿಂಗನು ಮನೋಜನಿಗೆ “ನಿನಗೆ ತಪ್ಪಿನ ಅರಿವಾಗಿದೆ. ಪಶ್ಚಾತ್ತಾಪದಿಂದ ನಿನ್ನ ಮನಸ್ಸು ಪರಿವರ್ತನೆಯಾಗಿದೆಯಲ್ಲಾ ಅಷ್ಟೆ ಸಾಕು ಗೆಳೆಯಾ ” ಎಂದನು. ಆಗ ಎಲ್ಲರೂ ಶಿವಲಿಂಗನ ಕ್ಷಮಾಗುಣವನ್ನು ಮೆಚ್ಚಿದರು.
–ಜಯಶ್ರೀ ಎಸ್ ಪಾಟೀಲ
ಧಾರವಾಡ