ಕಿಟಕಿ

ಪ್ರಬಂಧ

ಕಿಟಕಿ


ಎಲ್ಲರ ಮನೆಗೆ ಕಿಟಕಿಳು ಇರುವುದು ಸ್ವಾಭಾವಿಕ ಹಿಂದಿನ ಕಾಲದಲ್ಲಿ ಹಳ್ಳಿ ಮನೆಗಳ ಕಿಟಕಿಗಳು ದೊಡ್ಡದಾಗಿ ಇರುತ್ತಿದ್ದವು. ಈಗಿನ ಬಾಗಿಲುಗಳೆ ಆಗಿನ ಕಿಟಕಿಗಳು ಎನ್ನಬಹುದು. ಮನೆಯಲ್ಲಿ ಒಳ್ಳೆಯ ಗಾಳಿ, ಬೆಳಕು ಬರಲಿ ಎನ್ನುವ ಉದ್ದೇಶವಿದ್ದರೂ ಅದರ ಬಳಕೆ ಮಾತ್ರ ಬೇರೆ ಬೇರೆ ಇರುತ್ತಿತ್ತು. ನಾವು ಸಣ್ಣವರಿದ್ದಾಗ ಮಾವನ ಮಗಳ ಜೊತೆಗೆ/ತಂಗಿಯ ಜೊತೆಗೆ ಕಿಟಕಿಯಲ್ಲಿ ಕುಳಿತು ಆಟವಾಡುತ್ತಿದ್ದೆವು. ಯಾರಾದರೂ ಬಯ್ದರೆ ಸಿಟ್ಟಾಗಿ ಕಿಟಕಿಯಲ್ಲಿ ಕುಳಿತು ದುಖಿಸುತ್ತಾ ಕುಳಿತು ಬಿಡುತ್ತಿದ್ದೆವು. ಸಣ್ಣ ಪುಟ್ಟ ವಸ್ತುಗಳನ್ನು ನಮ್ಮ ಶಾಲಾ ಪುಸ್ತಕ ಚೀಲಗಳನ್ನು ಕಿಟಕಿಯಲ್ಲಿ ಇಡುತ್ತಿದ್ದೆವು. ಈಗಿನ ಹಾಗೆ ವಾಡ೯ರೋಬ್ ಅಲಮಾರಿ ಇದ್ದಿಲ್ಲ.

ಕೆಲವೊಂದು ಕಿಟಕಿಗಳು ಬಣ್ಣದ ರಂಗಿನಿಂದ ಕಂಗೊಳಿಸುತ್ತಿದ್ದವು. ನಮ್ಮ ಅಜ್ಜಿಯಂತೂ ಪಕ್ಕದ ಮನೆಯವರಿಗೆ ಏನಾದರೂ ಕೈಗಡ ಹಿಟ್ಟು, ಸಕ್ಕರೆ. ಚಹಾಪುಡಿ ಹೀಗೆ ಸಣ್ಣಪುಟ್ಟ ವಸ್ತುಗಳನ್ನು ಕಿಟಕಿ ಮುಖಾಂತರ ಕೊರಿಯರ್ ಕಳಿಸುತ್ತಿದ್ದಳು. ಹೊರಗಿನವರಿಗೆ ಏನು ಕೊಟ್ಟಳು, ಎಷ್ಟು ಕೊಟ್ಟಳು ತಿಳಿಯುತ್ತಿರಲಿಲ್ಲ. ಎಷ್ಟೋ ಮಂದಿ ಕಿಟಕಿಯಿಂದ ಮನೆಯಲ್ಲಿ ಹಿರಿಯರು ಮಲಗಿದಾಗ ಹಲವು ವಸ್ತುಗಳನ್ನು ಕಿಟಕಿ ಮೂಲಕ ಪಾಸೆ೯ಲ್ ಮಾಡಿಕೊಂಡು ನಂತರ ಅಂಚೆ ಕಚೇರಿ ವಿಪಿ ಹಣದಂತೆ ಆಮೇಲೆ ಹಣ ಪಡೆಯುತ್ತಿದ್ದರು.

ಇನ್ನೂ ಪಕ್ಕದಲ್ಲಿ ತವರು ಮನೆ ಇದ್ದರಂತೂ ಸಾಕು ಈ ಕಿಟಕಿ ಸೇವೆ 24×7 ಸೇವೆ ಲಭ್ಯ. ಹಿಂದೆ ದೊಡ್ಡ ಮನೆಗಳಿಗೆ ಬಹಳಷ್ಟು ಕಿಟಕಿಗಳು ಇರುತ್ತಿದ್ದವು. ನಾವು ಚಿಕ್ಕವರಿದ್ದಾಗ ಸಿಟ್ಟಾಗಿ ಪೂರಾ ಹಿಂದೆ ಇರುವ ಕಿಟಕಿಯಲ್ಲಿ ಅಳುತ್ತಾ ಕುಳಿತು ಅಲ್ಲೇ ನಿದ್ರೆ ಮಾಡಿ ಬಿಡುತ್ತಿದ್ದೆವು. ನಂತರ ಮನೆಯವರೆಲ್ಲ “ಯಂಕೂ” (ನನ್ನ ಮುದ್ದಿನ ಹೆಸರು)ಎಲ್ಲಿ ಎಂದು ಎಲ್ಲ ಕಡೆಗೆ ಹಾದಿ ಬೀದಿ , ಓಣಿ ಕೇರಿ , ಹಿತ್ತಲ ಬಣವಿ ಹುಡುಕಿ ಗಾಬರಿಯಾಗಿ ಎಲ್ಲ ದೇವರಿಗೆ ಹರಕೆ ಹೊತ್ತು ದೇವರಿಗೆ ತುಪ್ಪದ ದೀಪ ಹಚ್ಚಿ ಸುರಕ್ಷಿತ ವಾಗಿರಲಿ ಬೇಗ ಮನೆ ಸೇರಲಿ ಇದ್ದಬಿದ್ದ ದೇವರನ್ನು ಬೇಡಿಕೊಳ್ಳುತ್ತಿದ್ದರು.

ನಂತರ ಆಳು ಸಿದ್ದ ಹಿಂದಿನ ಕೋಣೆಗೆ ಏನೊ ಸಾಮಾನು ತರಲು ಹೋದಾಗ “ಅಮ್ಮಾವರೆ ಸಣ್ಣ ಧಣಿ ಇಲ್ಲೇ ಕಿಡಕಿಯಾಗ ಮಲಗ್ಯಾನರ್ರೀ” ಎಂದು ಒದರಿ ಜೋರಾಗಿ ಹೇಳಿದಾಗ ಎಲ್ಲರೂ ಓಡಿ ಬಂದು ಎಬ್ಬಿಸಿ ಮುತ್ತು ಕೊಟ್ಟು ರಮಿಸಿ ಕರೆದುಕೊಂಡು ಹೋದ ನೆನಪುಈ ಕಿಟಕಿ ನೋಡಿದಾಗಲೆಲ್ಲ ಮನಸಿನಾಗ ಸಿನಿಮಾ ರೀಲ್ ನೆನಪಾತದರೀ.

ಆದರೆ ಅದೇ ನನಗ ಮೊದಲು ನಂತರ ಕೊನೆ ಕಿಟಕಿ ಆಯಿತು ನನ್ನ ಜೀವನದಾಗ. ಇನ್ನೂ ಮನೆದು ಇಷ್ಟ ಆದರ ಬಸ್, ರೈಲುಗಳಲ್ಲಿ ಕಿಟಕಿಯ ಸಲುವಾಗಿ ಬಡದಾಡದು ನೋಡಿದರ ಸಾಕು ಕಿಟಕಿ ಸಿಕ್ಕರೆ ಅದೆಷ್ಟು ಖುಷಿ ಅದೆಷ್ಟು ನಿರಾಳ ಕೊನೆಯವರೆಗೂ ಈ ಕಿಟಕಿ ನನ್ನದೇ ಎನ್ನುವ ಗತ್ತು, ಗಾಂಭೀರ್ಯ ನಮ್ಮದು ಅಲ್ಲವೆ ? ಬಸ್, ರೈಲು ಬಂದ ತಕ್ಷಣ ಕಿಟಕಿ ಯಿಂದ ಟವೆಲ್/ಕರಚೀಪ ಹಾಕಿ ನಂತರ ಕಿಟಕಿಯ ಸೀಟು ಅಧಿಕೃತಗೊಳಿಸುವದು ಸಾಮಾನ್ಯ. ಈ ಕಿಟಕಿ ಸಲುವಾಗಿ ಅದೆಷ್ಟೋ ಜಗಳಗಳು ನಡೆದು ಕೊನೆಗೆ ಕಂಡಕ್ಟರ್ ಬೇಸತ್ತು ತನ್ನ ನಿಗದಿತ ಕಿಟಕಿ ಬಿಟ್ಟು ಕೊಟ್ಟ ಪ್ರಸಂಗಗಳಿಗೆ ಏನೂ ಕಡಿಮೆ ಇಲ್ಲ ಎನ್ನಬಹುದು.
ಇನ್ನೂ ನನ್ನ ಜನ್ಮದಲ್ಲಿ ನನಗೂ ಕಿಟಕಿಗೂ ಯಾವಾಗಲೂ ವಿರುದ್ಧವೆ.. ನನಗೆ ಚಿಕ್ಕವನಿದ್ದಾಗ ಕಿಟಕಿ ಪಕ್ಕದಲ್ಲಿ ಕುಳಿತಿದ್ದು ಬಿಟ್ಟರೆ ಮತ್ತೆ ನನಗೆ ಆ ಅವಕಾಶ ತಪ್ಪಿ ಹೋಯಿತು. ಹೇಗಂತಿರಾ….!

ನಾನು ಮದುವೆಯಾದ ಮೇಲೆ ಹೊಸತನದಲಿ ನನ್ನವಳನ್ನು ಕರೆದುಕೊಂಡು ಮಾವನ ಊರಿಗೆ, ದೇವಸ್ಥಾನಗಳಿಗೆ, (ಆಗಿನ್ನೂ ಹನಿಮೂನ್ ಭಾಗ್ಯ ಇರಲಿಲ್ಲ) ಹೋಗುವ ಸಂದರ್ಭದಲ್ಲಿ ಬಸ್ ಹತ್ತಿದ ಕ್ಷಣ ಅವಳಿಗೆ ಕಿಟಕಿ ಬಿಡಬೇಕು. ಅವರ ತವರಿನವರು ನನ್ನ ಮನೆಯವರು ಎಲ್ಲರೂ ಅವಳಿಗೆ ಸುರಕ್ಷಿತವಾಗಿ ಹೋಗಿ ಬರಲು ಮತ್ತು ಜಾಗ್ರತೆ ವಹಿಸಲು ಹಾಗೂ ಊರು ದಾಟಿ ಕಿಲೋಮೀಟರ್ ಬಂದರೂ ಟಾಟಾ ಮಾಡಲು ಅವಳಿಗೆ ಕಿಡಕಿ ಬೇಕು. ಅಲ್ಲದೆ ಅವಳ ಹೆಗಲ ಮೇಲೆ ಕೈ ಹಾಕಿ ಕುಳಿತುಕೊಳ್ಳಲು ನನಗೂ ಒಂದು ಒಳೊಳಗಿನ ಖುಷಿಯ ಅವಕಾಶ ಎಂದು ಹಾಗೂ ಅವಳು ಈ ಕಡೆ ಕುಳಿತರೆ ಪಕ್ಕದಲ್ಲಿ ಬೇರೆ ಗಂಡಸರು ನಿಂತರೆ ಇವಳಿಗೆ ಸಂಕೋಚವೆಂತಲೂ ಮನೆಯಲ್ಲಿ ಸಹ ಅಮ್ಮ ಸಹ ಕಿಟಕಿ ಹತ್ತಿರ ಅವಳನ್ನು ಕೂಡಿಸಲು ಉಪದೇಶ ಇಷ್ಟೆಲ್ಲಾ ವಿಷಯ ಇದ್ದ ಮೇಲೆ ಅವಳಿಗೆ ಅನಿವಾರ್ಯವಾಗಿ ಕಿಟಕಿ ಬಿಟ್ಟು ಕೊಡುತ್ತಿದ್ದೆ. ನಂತರ ಕೆಲ ತಿಂಗಳ ನಂತರ ಅವಳು ಗಭಿ೯ಣಿಯಾದ ಮೇಲೆ ಆಸ್ಪತ್ರೆಗೆ ಹೋಗಲು ತಿಂಗಳ ತಪಾಸಣೆಗೆ ಅವಳಿಗೆ ಕಡ್ಡಾಯವಾಗಿ ಕಿಟಕಿ ಬಿಡಲೇ ಬೇಕಾಯಿತು ಏಕೆಂದರೆ ಯಾರ ಮೇಲಾದರೂ ವಾಂತಿ ಮಾಡಿದರೆ ಇಡೀ ಬಸ್ ಜನ ಬಯ್ದು ಬಿಡುತ್ತಾರೆ ಎನ್ನುವ ಭಯದಿಂದ ಅವಳಿಗೂ ಸ್ವಲ್ಪ ಗಾಳಿ ಬಂದರೆ ಸಮಾಧಾನ ಎಂದು ಕಿಟಕಿ ಅವಳಿಗೆ ಬಿಡುತ್ತಿದ್ದೆ. ನಂತರ ಹೆರಿಗೆ ಆದ ಮೇಲು ಸಹ ಬಸ್ಸಿನಲ್ಲಿ ಮುದುಕಿ ಮಗುಗೆ ಗಾಳಿ ಬರಲಿ ಎಂದು ಅಳುವ ಮಗುವನ್ನು ನೋಡಿ ನನಗೆ ಆದೇಶಿಸುತ್ತಿದ್ದರು. ಸರಿ ಎಂದು ಆಗಲೂ ಅವಳಿಗೆನೇ ಕಿಟಕಿ. ನಂತರ ಮಕ್ಕಳು ಸ್ವಲ್ಪ ದೊಡ್ಡವರಾದಂತೆ ಎರಡೂ ಮಕ್ಕಳು ಕಿಟಕಿಗಾಗಿ ಕಿತ್ತಾಟ,ರಂಪ ತಾಯಿಯನ್ನು ಪೀಡಿಸುವುದು, ಅಳುವುದು ಹೀಗೆ ಭವಿಷ್ಯೋತ್ತರ ಕಿಟಕಿ ಪುರಾಣ ಪ್ರಾರಂಭವಿಗಿ ಈ ಕಿಟಕಿ ಸಹವಾಸವೇ ಬೇಡ ಎಂದು ಬೇರೆ ಕಡೆ ಕೂಡಬೇಕಾಯಿತು. ನಂತರ ವಯಸ್ಸಾದಂತೆ ನನ್ನವಳಿಗೆ ಎಲ್ಲರಂತೆ ಸಕ್ರಿ ರೋಗ, ಬಿಪಿ, ಮೊಣಕಾಲು ನೋವು ಇವುಗಳು ಬಳುವಳಿಯಾಗಿ ಬಂದು ಆಗಲೂ ಆಯಾಸವಾಗುತ್ತದೆ ಕಿಟಕಿ ಬಿಡ್ರೀ ಎಂದು ಆಜ್ಞೆ. ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ ಎನ್ನವಂತೆ ನನ್ನ ಪರಿಸ್ಥಿತಿ. ಕೊನೆಯವರೆಗೂ ಕಿಟಕಿಗೂ ನನಗೂ ಅದೇನು ಮುನಿಸು. ಈಗ ವಯಸ್ಸಾದ ಮೇಲು ಸಹ ಮಕ್ಕಳು ಅಪ್ಪ ಕಿಟಕಿ ಹತ್ತಿರ ಬೇಡ ಗಾಳಿ ಬಹಳ ಬಂದು ನೆಗಡಿ, ಜ್ವರ ಬರಬಹುದು. ಈ ವಯಸ್ಸಿನಲ್ಲಿ ಅತೀ ಗಾಳಿ ಒಳ್ಳೆಯದು ಅಲ್ಲ ಎಂದು ಉಪದೇಶಿಸಿದಾಗ ” ನಾ ಹೆತ್ತ ಮಕ್ಕಳಿಂದ ತಂದೆಗೆ ಉಪದೇಶವೇ ಹರೀ ಹರೀ ಏನಿದು ಲೀಲೆ” ಎನ್ನುವ ಡೈಲಾಗ್ ನೆನಪಾಗಿ ಸುಮ್ಮನೆ ಮುದುರಿ ಕೊನೆಗೆ ಕುಳಿತೆ.
ಇನ್ನೂ ನಮ್ಮ ಕಾಲದಲ್ಲಿ ಪ್ರೇಮಿಗಳ ಗುಸುಗಸು ಮಾತು, ಚೀಟಿ ವಿನಿಮಯ , ಜಾತ್ರೆಯಲ್ಲಿ ತಂದ ಬಳೆ ಕಿಟಕಿಯಿಂದಲೇ ವಿನಿಮಯ. ಹೊರಗೆ ಏನಾದರೂ ಗದ್ದಲ ನಡೆದರೆ ಮೊದಲು ಕಿಟಕಿಯಿಂದ ವೀಕ್ಷಣೆ. ಇದೊಂದು ಸಿನಿಮಾ ರೀಲ್ ಬಿಡುವ ಸಂದಿನಂತೆ ಸಣ್ಣ ಕಂಬಿಗಳ ಮೂಲಕ ವ್ಯವಹಾರ.
ಸಿನಿಮಾ ದಲ್ಲೂ ಸಹ ಅದರಲ್ಲೂ ಹಿಂದಿ ಸಿನಿಮಾದಲಿ “ಮೇರೆ ಸಾಮನೆ ವಾಲೆ ಕಿಟಕಿ ಮೆ ಏಕ್ ಸುಂದರ ಲಡಕೀ ರಹತಾ ಹೈ” ಹಾಡು ಕೇಳಿದಾಗ ಕಿಟಕಿಯ ಮಧುರ ಕ್ಷಣಗಳು ಮರಯಲುಂಟೆ..? ಏಷ್ಟೋ ಪ್ರೇಮಿಗಳ ಪ್ರೇಮ ಪ್ರಾರಂಭವಾದದ್ದೆ ಈ ಕಿಟಕಿಯಿಂದಲೇ ಈ ಕಿಟಕಿಗಳು ಪ್ರೇಮದ ಹೆಬ್ಬಾಗಿಲು ಎಂದರೂ ಸೈ. ಕಿಟಕಿಯಲ್ಲಿ ಹಣಕಿ ನೋಡಿ ಬಯ್ಯಸಿಕೊಂಡವರೂ ಇದ್ದಾರೆ. ಇನ್ನೊಬ್ಬರ ವಿಷಯ ನಮಗ್ಯಾಕೆ ಎಂದು ಬಯ್ದು ಸಿಟ್ಟಿನಿಂದ ಢಮಾರು ಎಂದು ಕೆನ್ನೆಗೆ ಹೋಡೆದಂತೆ ಕಿಟಕಿ ಬಾಗಿಲು ಮುಚ್ಚಿ ಆಕ್ರೋಶ ತೋರಿಸಿದವರು ಇದ್ದಾರೆ. ಇದೇ ಸಿಟ್ಟಿನಲ್ಲಿ ಕಿಟಕಿಯಲ್ಲಿ ಬೆರಳು ಕೈ ಗಾಯ ಮಾಡಿಕೊಂಡು ಶಪಿಸಿದವರು ಇದ್ದಾರೆ. ಇನ್ನೂ ಕಿಟಕಿ ಕೆಳಗೆ ಕುಳಿತು ಏಳುವಾಗ ಕಿಟಕಿ ಬಾಗಿಲು ತಲೆಗೆ ಬಡಿದು ಎಷ್ಟೋ ಹೊತ್ತು ತಲೆ ಸವರೀಕೊಂಡವರು ಇದ್ದು ನೋಡಿ ಏಳಬಾರದೆ ಎಂದು ಗಾಯಕ್ಕೆ ಉಪ್ಪು ಸುರಿದಂತೆ ವ್ಯಂಗ್ಯವಾಡಿದ್ದಾರೆ.
ಹೀಗೆ ಕಿಟಕಿಯ ಭವಿಷ್ಯೋತ್ತರ ಪುರಾಣ ಬರೆದಂತೆ ಬರೆಯಬೇಕೆನಿಸುತ್ತದೆ. ಆದರೆ ಬರೆದಷ್ಷು ನನ್ನ ಕಿಟಕಿ ಶತೃಗಳು ಎದ್ದು ಕಾಣಿಸಿಕೊಳ್ಳುತ್ತಾರೆ ಕಾರಣ ಆ ಭಯಕ್ಕೆ ನನ್ನ ಬರವಣಿಗೆಯ ಕಿಟಕಿ ಬಾಗಿಲು ಮುಚ್ಚಿ ಕೂಡುತ್ತೇನೆ.
ಕಿಟಕಿಯಲಿ ಕಂಡ ಹುಡುಗಿ
ಮೊಟಕಾಗಾಗಿ ನನ್ನ ಕೇಳಿ
ಕಿಟಕಿ ಏಕೆ ಮುಚ್ಚಿರಿವೆ ಗೆಳೆಯ
ಚುಟುಕಾಗಿ ಮಾತನಾಡಲಾರೆಯಾ ?
ಶ್ರೀ ಕಿಟಕಿ ಕ್ಷೇಮ ರಸ್ತು

 

 

 

 

 

 

 

 

 

 

-ಪಿ.ವೆಂಕಟೇಶ್ ಬಾಗಲವಾಡ

Don`t copy text!