ಇಸ್ತ್ರೀ ಪೆಟ್ಟಿಗೆ ಬಲ್ಲಿರಾ

ಇಸ್ತ್ರೀ ಪೆಟ್ಟಿಗೆ ಬಲ್ಲಿರಾ


ಮಾನವ ಅನಾಗರಿಕತೆಯಿಂದ ಜೀವಿಸುತ್ತಿದ್ದ ಕಾಲದಲ್ಲಿ ಬಟ್ಟೆ, ಮಾನ, ಮರ್ಯಾದೆ ಮತ್ತು ಗೌರವ, ಗೌಪ್ಯತೆಗಳ ಬಗ್ಗೆ ಯಾವುದೇ ಚಿಂತನೆ ಮಾಡುತ್ತಿರಲಿಲ್ಲ. ಏಕೆಂದರೆ, ದೇಹ ರಕ್ಷಣೆಗೆ ಮರದ ಎಲೆ ಮತ್ತು ತೊಗಟೆಯನ್ನು ಬಳಸುತ್ತಿದ್ದು ಗವಿಗಳಲ್ಲಿ ವಾಸಿಸುತ್ತಿದ್ದನು.

ಇಸ್ತ್ರಿ ಪೆಟ್ಟಿಗೆ ಇತಿಹಾಸ:

ಸಾಮಾನ್ಯ ಶಕೆ ಪೂರ್ವ ೪೦೦ ರಲ್ಲಿ ಗ್ರೀಕರು ಅಗಲವಾದ ಕಲ್ಲಿನಡಿಯಲ್ಲಿ ಬಟ್ಟೆಯನ್ನಿಟ್ಟು ಅದರ ಸುಕ್ಕನ್ನು ತೆಗೆಯಲು ಪ್ರಯೋಗ ಮಾಡಿದ್ದರು.
ಯಾವಾಗ ವೈಚಾರಿಕ ಚಿಂತನೆ ಬೆಳೆದು ನಾಗರಿಕತೆ ಚಿಗುರೊಡೆದು ಬಂತೋ ಅಲ್ಲಿಂದ ನಂತರ ಶಿಸ್ತು, ಸ್ವಚ್ಛತಾ ಕ್ರಮಗಳ ಬಗ್ಗೆ ಗಮನಾರ್ಹ ಪ್ರಮಾಣದಲ್ಲಿ ಬದಲಾವಣೆ ತಂದುಕೊಂಡು ನಾವೀನ್ಯತೆಯ ಜೀವನಕ್ಕೆ ಅಡಿ ಇಟ್ಟನು ಮಾನವ.

ತಾನು ಹಾಕಿಕೊಳ್ಳುವ ಬಟ್ಟೆ ಬೆಚ್ಚಗಿರಬೇಕೆಂದು ಬಯಸಿ ಮಣ್ಣಿನ ಮಡಿಕೆಯಲ್ಲಿ ಕಟ್ಟಿಗೆ ಉರಿಸಿದ ನಂತರ ಸಿಗುವ ಇದ್ದಿಲನ್ನು ಹಾಕಿ ಅದರ ನುಣುಪಾದ ತಳದ ಭಾಗದಿಂದ ತೆಳುವಾಗಿ ಉಜ್ಜಿರಬಹುದು ಆಗ ಬಟ್ಟೆಯಲ್ಲಿ ಏನೋ ಒಂದು ರಚನಾತ್ಮಕ ಬದಲಾವಣೆ ಕಂಡ ನಮ್ಮ ಪೂರ್ವಜರು ಲೋಹದ ಯುಗದಲ್ಲಿ ತಂಬಿಗೆಯಂತಹ ಅಗಲವಾದ ತಳದ ಪಾತ್ರೆಯನ್ನು ಬಳಸಿ ಬಟ್ಟೆಯ ಮೇಲೆ ಬಿಸಿ ಮಾಡುತ್ತಾ ಹೊಳಪು, ಮೆರಗು ಬರುವಂತೆ ತೀಡಿರಬಹುದು ಮುಂದೆ ಇದನ್ನೇ ಮೂಲ ಆಕರವನ್ನಾಗಿಟ್ಟುಕೊಂಡು ಚೀನಿಯರು ಮೊದಲನೇ ಶತಮಾನದಲ್ಲಿ ಇಸ್ತ್ರೀ ಪೆಟ್ಟಿಗೆಯನ್ನು (ಬೆಂಕಿಯಿಂದ ಕಾಯಿಸುವ) ಬಳಕೆಗೆ ತಂದರು.

ಯುರೋಪಿನಲ್ಲಿ ಸಾ. ಶ. ೧೩೦೦ ರಲ್ಲಿ ಅಗಲವಾದ ಕಬ್ಬಿಣದ ತುಂಡನ್ನು ಬಿಸಿ ಮಾಡಿ ಬಟ್ಟೆ ಇಸ್ತ್ರಿ ಮಾಡಲು ಕಲಿತರು ೧೫ನೇ ಶತಮಾನದಲ್ಲಿ ಈ ಸ್ವರೂಪದಲ್ಲಿ ಸ್ವಲ್ಪ ಬದಲಾವಣೆ ಮೂಡಿ ಬಂದಿತು, ನಂತರ ೧೯ನೇ ಶತಮಾನದಲ್ಲಿ ಕ್ರಾಂತಿಕಾರಕ ಬದಲಾವಣೆ ಆಯಿತು.

ಸಾ. ಶ. ೧೮೮೨ ರಲ್ಲಿ ಅಮೇರಿಕಾದ ಹೆನ್ರಿ ಸೀಲಿ ಎಂಬ ವಿಜ್ಞಾನಿ ಮೊಟ್ಟ ಮೊದಲಿಗೆ ವಿದ್ಯುತ್ ಸಂಪರ್ಕ ಹೊಂದಿರುವ ಇಸ್ತ್ರಿ ಪೆಟ್ಟಿಗೆ ಕಂಡುಹಿಡಿದನು.

ಅಲ್ಲಿಂದ ಇಲ್ಲಿಯವರೆಗೆ ಅನೇಕ ಆವಿಷ್ಕಾರಗಳು ಆಗಿ, ಸ್ಟೀಮ್ ಇಸ್ತ್ರಿಪೆಟ್ಟಿಗೆ, ಕಾರ್ಡಲೆಸ್ ಇಸ್ತ್ರಿ ಪೆಟ್ಟಿಗೆ ಬಳಕೆಗೆ ಬಂದಿವೆ.

ಇಸ್ತ್ರಿ ಪೆಟ್ಟಿಗೆ ಒಂದು ಸರಳವಾದ ಸಾಧನವಾಗಿದ್ದರೂ ಮಾನವರ ಮತ್ತು ಮಾವನವರ ಜೀವನದಲ್ಲಿ ಬಹು ಪ್ರಮುಖ ಪಾತ್ರ ವಹಿಸುತ್ತಿವೆ.ನಮ್ಮ ಬಟ್ಟೆಗಳನ್ನು ಅಚ್ಚುಕಟ್ಟಾಗಿ ಇಟ್ಟು ನಮಗೆ ಹೆಚ್ಚು ಗೌರವವನ್ನು ಇಸ್ತ್ರಿ ಬಟ್ಟೆಗಳು ತಂದು ಕೊಡುವುದರಲ್ಲಿ ಯಾವುದೇ ಅನುಮಾನಗಳಿಲ್ಲ.ಏನಂತೀರಾ?

 

 

 

 

 

 

 

 

 

 

ಶಂಕರ್. ಜಿ. ಬೆಟಗೇರಿ ಹೂವಿನಹಡಗಲಿ
ಲೇಖಕರು

Don`t copy text!