ಈ ದೃಷ್ಯವನ್ನ ಮತ್ತೆ ಮತ್ತೆ ನೋಡಿ ಕಣ್ತುಂಬಿಕೊಂಡಿದ್ದೇನೆ …. ಕಂಬನಿಗರೆದಿದ್ದೇನೆ…
ನಮ್ಮ ಶಾಲೆಯ ಮಕ್ಕಳ ತಾಯಂದಿರು ಹೀಗೆ ಒಟ್ಟಾಗಿ ಬಂದು ನಮಗೆಲ್ಲ ಹೊಟ್ಟೆಯನ್ನೂ ಹೃದಯವನ್ನೂ ತುಂಬಿಸಿದರು.
ನಮ್ಮ ಅಂಬೇಡ್ಕರ್ ನಗರದ ಕಟ್ಟಡ ಕಾರ್ಮಿಕ ತಂದೆಯಂದಿರು ಊಟದ ಜವಾಬ್ದಾರಿವಹಿಸಿಕೊಂಡಿದ್ದರು. ಎಲ್ಲವೂ ಸಿದ್ಧಗೊಂಡಿತ್ತು. ಚಪಾತಿ ಮಾಡಲು ಬರಬೇಕಿದ್ದ ಅಡುಗೆಯವರು ಬರಲಿಲ್ಲ. ಸಮಯ ತುಂಬಾ ಕಡಿಮೆ ಇತ್ತು.
ನಾವೆಲ್ಲ ಇನ್ನೆರಡು ಮೂರು ಘಂಟೆಯಲ್ಲಿ ಏಳೆಂಟು ನೂರು ಜನಕ್ಕೆ ಚಪಾತಿ ಮಾಡಿಸುವುದು ಹೇಗೆ ಅಂತ ಒದ್ದಾಡುತ್ತಿರುವಾಗ ಹೇಗೋ ನಮ್ಮ ತಾಯಂದಿರಿಗೆ ವಿಷಯ ತಿಳಿಯಿತು. ಮಾತು ಮನೆಯಿಂದ ಮನೆಗೆ ಮನದಿಂದ ಮನಕ್ಕೆ ಹರಡಿತು.
ಮನೆ ಮನೆಯಿಂದ ಪರಾತ ಲಟ್ಟಿಸೊ ಮಣಿಗಳೊಂದಿಗೆ ಶಾಲಾ ಆವರಣಕ್ಕೆ ಹಾಜರಾದರು. ನಮಗೆಲ್ಲ ಆಶ್ಚರ್ಯ.
“ನಮ್ಮ ಶಾಲೆಯದ್ದಿದೆ ಸರ್, ನಮ್ಮ ಮಕ್ಕಳದ್ದು… ನಾವೆಲ್ಲ ಅಡಿಗೆ ಮಾಡಿಕೊಡ್ತೀವಿ, ಚಿಂತಿ ಮಾಡಬ್ಯಾಡ್ರಿ…” ಅಂತ ಧೈರ್ಯ ತುಂಬಿದರು.
ತುಂಬಾ ಪ್ರೀತಿಯಿಂದ ಎಲ್ಲರೂ ಸೇರಿಕೊಂಡು ಚಪಾತಿ ಲಟ್ಟಿಸಲು ಶುರುಮಾಡಿದರು.
ಇಲ್ಲಿ ಎಲ್ಲರೂ ಇದ್ದರು.
ನಾನು ಆ ತಾಯಂದಿರಿಗೆ ಶಿರಸಾವಹಿಸಿ ನಮಸ್ಕರಿಸಿ ಕಣ್ತುಂಬಿಕೊಂಡೆ. ಒಳಗೊಳಗೆ ಸಂಭ್ರಮದಿಂದ ಅತ್ತೆ.
ಈ ದೃಷ್ಯವನ್ನ ಎಷ್ಟು ಸಾರಿ ನೋಡಿದರೂ ನನಗೆ ಸಾಕು ಎನ್ನಿಸುತ್ತಿಲ್ಲ.
ಪ್ರತಿಯೊಬ್ಬರೂ ಅದೆಷ್ಟು ತನ್ಮಯತೆಯಿಂದ ಪ್ರೀತಿಯಿಂದ ಮಮತೆಯಿಂದ ಕಕ್ಕುಲಾತಿಯಿಂದ ತಮ್ಮ ತಮ್ಮ ಕಾರ್ಯ ದಲ್ಲಿ ತೊಡಗಿಕೊಂಡಿದ್ದಾರೆ!
ನನಗೆ ಅಂಬೇಡ್ಕರ್ ನಗರವನ್ನ ಈ ಶಾಲೆಯನ್ನ ಬಿಟ್ಟುಹೋಗಲಿಕ್ಕೆ ಹತ್ತಾರು ಕಾರಣಗಳಿದ್ದವು. ಆದರೆ ಈಗ ಇಲ್ಲೇ ಈ ಶಾಲೆಯಲ್ಲೇ ಅಂಬೇಡ್ಕರ್ ನಗರದಲ್ಲೇ ಇರಲು, ನಾನು ಬದುಕಿರುವವರೆಗೂ ಇಲ್ಲೇ ಸೇವೆ ಸಲ್ಲಿಸಲು ನೂರಾರು ಕಾರಣಗಳು ಸಿಕ್ಕುತ್ತಿವೆ…
ಇದಲ್ಲವೇ ಜಾದೂ… ಬದುಕು ನಿಜಕ್ಕೂ ಆಶ್ಚರ್ಯ ಗಳ ಮೂಟೆ… ಹೊತ್ತು ಸಾಗುವ ಹೃದಯ ಮತ್ತು ಅಂತಃಶಕ್ತಿ ಇದ್ದರೆ ಸಾಕು… ಬದುಕು ತುಂಬಾ ಸಲೀಸು, ನೆಮ್ಮದಿದಾಯಕ ಮತ್ತು ಸಂಭ್ರಮದ್ದು….
ಎಲ್ಲ ತಾಯಂದಿರಿಗೆ ಶರಣ್ರವ್ವೋ ಶರಣು…
– ವೀರಣ್ಣ ಮಡಿವಾಳರ