ಹೋಳಿ ದೇವನಿಗೊಂದು ಮನವಿ

ಹೋಳಿ ದೇವನಿಗೊಂದು ಮನವಿ

 

 

 

 

 

 

 

 

ಬಣ್ಣದ ಹಬ್ಬ ಬಂದಿದೆ ಎಂದು
ಕುಣಿದು ಕುಪ್ಪಳಿಸಿ ಅಬ್ಬರದಿ ಹಲಗೆ
ಬಡಿದು ಸಡಗರದಿ ರಂಗಿನಾಟವಾಡಿ
ನದಿಯಲ್ಲಿ ಮಿಂದೆದ್ದರೆ ಮೆಚ್ಚುವಿಯಾ
ಹೋಳಿ ದೇವಾ….

ನನ್ನ‌ ದೇಶ ನನ್ನದು ಎಂಬ ಭಾವ
ನನ್ನ ಜನರು ನನ್ನವರೆಂಬ ಪ್ರಾಣ.
ಅರಿತು ಬೆರೆತ ಭಾವೈಕ್ಯತೆಯ ಬಣ್ಣ
ಸದಾ‌ ಒಂದಾಗಿರಲಿ ಭಾರತ ಹರಸು
ಹೋಳಿ ದೇವಾ…

ಒಳಿತು ಕೆಡುಕುಗಳ ಮಧ್ಯೆ ಇರುವ
ತಾರತಮ್ಯ ಹೋಗಲಾಡಿಸಿ ಕೂಡಿ
ಬಾಳುವ ಭಾತೃತ್ವ‌ದ ಬಣ್ಣ ನೆಲೆಗೊಳಿಸು
ಭಾರತ ಮಾತೆಯ ಮಾತೃತ್ವದ ಮಡಿಲು
ಸದಾ ತಣ್ಣಗಿರಲಿ ಹೋಳಿ ದೇವಾ…

ಮೇಲು -ಕೀಳು, ಬಡವ -ಬಲ್ಲಿದ ಅಹಂ
ಸುಟ್ಟು ಕರಕಲಾಗಿ ಏಕತೆಯ ಬಣ್ಣ
ಮೆರೆಯುತ, ದ್ವೇಷ ದಳ್ಳುರಿ ಮರೆಯುತ
ಒಂದಾಗಿ ಚಂದಾಗಿ ಬಾಳುವ ವಿವೇಕದ ಬಣ್ಣ
ನೀಡು ಹೋಳಿ ದೇವಾ….

ಏನಿದ್ದರೇನು ದೇಶದ ಮೇಲೆ ಅಭಿಮಾನ
ಇರದಿರೆ‌,ಇದ್ದೂ ಸತ್ತಂತೆ ಎಂಬುದ ಅರಿತು
ಒಡಮೂಡಿ ಬರಲಿ ಪರಾಕ್ರಮದ ಬಣ್ಣ.
ಪ್ರತಿ ಹೃದಯದ ಡಂಗುರದಲಿ ರಾಷ್ಟ್ರಗಾನ ಓಲೈಸು ಹೋಳಿದೇವಾ ..

ದೌರ್ಬಲ್ಯ, ದುರಾಸೆ, ದುರಾಡಳಿತ ,ದುರಾಲೋಚನೆ, ದುರಹಂಕಾರ
ಇನ್ನಿಲ್ಲದಂತೆ ಹಸನು ಮಾಡಿ ಶಾಂತಿಯ
ಬಣ್ಣದಲಿ ಮಿಂದೆಂದು‌ ದೇಶದ ಸಂಸ್ಕೃತಿ ಉಳಿಸುವಂತೆ ಹಾರೈಸು ಹೋಳಿದೇವಾ

.
ಅಂದಿಗೂ ಇಂದಿಗೂ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಎಂದೆಂದಿಗೂ ಒಂದೇ
ಭಾವ ಮೊಳಗಿಸು ಹೇ ಹೋಳಿ ದೇವಾ….
ಕೇಸರಿ ಬಿಳಿ ಹಸಿರು ತ್ರಿವರ್ಣ ಧ್ವಜದ ಬಣ್ಣದಡಿ
ಬದುಕುವ‌ ನಾವು ಪ್ರಾಣ ಹೋದರೂ ಮಾನ
ಹೋಗದಂತೆ ದೇಶ ಕಾಯುವ ಸಾಹಸಿ ಬಣ್ಣದಲಿ ಒಂದಾಗಲಿ ಭಾರತ

ಗಡಿಕಾಯುವ ವೀರಯೋಧರ ಸ್ಮರಿಸುತ
ಈ ಮಣ್ಣಿನ ಪುಣ್ಯದ ಹೆಣ್ಣಿನ ಗೌರವದ ಬಣ್ಣ
ಈ ನೆಲದಲಿ ಒಕ್ಕುವ ಒಕ್ಕಲಿಗನಲಿ ಉಕ್ಕಲಿ
ಹಸಿರ ಸಿರಿಯ ಚೆಲುವಿನ ಬೆಳೆಯ ಬಣ್ಬ
ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಒಲವಬಣ್ಣ
ಮತ್ತೆ ಮತ್ತೆ ಮರುಕಳಿಸಲಿ ಹೋಳಿ ದೇವಾ…

ಜಯಶ್ರೀ.ಭ.ಭಂಡಾರಿ.
ಬಾದಾಮಿ.

Don`t copy text!