ಸಮಾಜದ ನಿರ್ಮಾಣ ಮಕ್ಕಳ ಅಭಿವೃದ್ಧಿಯಿಂದ ಆರಂಭವಾಗಬೇಕು: ಕೃಷ್ಣಮೂರ್ತಿ ಬಿಳಿಗೆರೆ
e- ಸುದ್ದಿ ಧಾರವಾಡ
ನಾವು ಶೈಕ್ಷಣಿಕ ವ್ಯವಸ್ಥೆ ಎಂಬುವ ಕಟ್ಟಡಗಳನ್ನು ಮೇಲಿಂದ ಕಟ್ಟಲು ಹೊರಟಿರುವುದು ಸರಿಯಲ್ಲ. ಮೊದಲು ತಳಪಾಯ ಗಟ್ಟಿಯಾಗಬೇಕಿದೆ. ಶಾಲಾ ಹಂತದ ಮಕ್ಕಳ ಶಿಕ್ಷಣವನ್ನು ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಬಲಪಡಿಸಬೇಕಿದೆ. ಉನ್ನತ ಶಿಕ್ಷಣಕ್ಕೆ ಕೊಡುತ್ತಿರುವುದಕ್ಕಿಂತ ಹೆಚ್ಚಿನ ಒತ್ತನ್ನು ಮಕ್ಕಳ ಸೃಜನಶೀಲ ಬೆಳವಣಿಗೆಗೆ ಕೊಡುವ ಅಗತ್ಯವಿದೆ ಎಂದು ಮಕ್ಕಳ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಹೇಳಿದರು.
ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಮುಂಡರಗಿಯ ಕಲಾಶಿಸಂ ಪ್ರತಿಷ್ಠಾನ ಮತ್ತು ಧಾರವಾಡದ ಚಿಲಿಪಿಲಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ೨೦೨೪ನೇ ಸಾಲಿನ ಮಕ್ಕಳ ಸಾಹಿತ್ಯ ಗೌರವ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಯುಜಿಸಿ ತರಹದ ಸಂಸ್ಥೆಗಳು, ಪಿಎಚ್‌ಡಿ ಪದವಿ ಪಡೆದ ಬೋಧಕರ ಅಗತ್ಯತೆಯು ಉನ್ನತ ಶಿಕ್ಷಣಕ್ಕಿಂತ ಮಕ್ಕಳ ಶಿಕ್ಷಣದ ಹಂತದಲ್ಲಿ ಹೆಚ್ಚು ಇದೆ. ಮಕ್ಕಳ ಸಾಹಿತ್ಯದ ಕುರಿತು ಹೆಚ್ಚಿನ ಅಧ್ಯಯನ ಮತ್ತು ಗಮನ ಬೇಕಿದೆ. ನಮ್ಮ ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಮಕ್ಕಳ ಸಾಹಿತ್ಯದ ಕುರಿತು ಅಧ್ಯಯನ ವಿಭಾಗಗಳು ಇಲ್ಲದೇ ಇರುವುದು ವಿಪರ್ಯಾಸ. ನಮ್ಮ ಚಿತ್ತ ಮಕ್ಕಳ ಶಿಕ್ಷಣ ಮತ್ತು ಸಾಹಿತ್ಯದತ್ತ ಸಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ನಾಡಿನ ಹೆಸರಾಂತ ಮಕ್ಕಳ ಸಾಹಿತಿ ಚಂದ್ರಗೌಡ ಕುಲಕರ್ಣಿ ಅವರಿಗೆ ಕಲಾಶಿಸಂ ಪ್ರತಿಷ್ಠಾನದ ಗೌರವ ಪ್ರಶಸ್ತಿಯನ್ನು ಮತ್ತು ಲೇಖಕಿ ವಸು ವತ್ಸಲೆ ಅವರ ʼಅಂತರಿಕ್ಷದಲ್ಲಿ ವಿಹಾʼ ಕೃತಿಗೆ ಅತ್ಯುತ್ತಮ ಮಕ್ಕಳ ಪುಸ್ತಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗೌರವ ಪ್ರಶಸ್ತಿಯು ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದನ್ನು ಒಳಗೊಂಡಿದೆ. ಪುಸ್ತಕ ಪ್ರಶಸ್ತಿಯು ಪ್ರಶಸ್ತಿ ಫಲಕ ಮತ್ತು ಐದು ಸಾವಿರ ನಗದನ್ನು ಒಳಗೊಂಡಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಂಕರ ಹಲಗತ್ತಿ, ಐವತ್ತು ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು ಮತ್ತು ನಲವತ್ತು ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳು ಇದ್ದಾಗಲೂ, ಮಕ್ಕಳ ಸಾಹಿತ್ಯದ ಕೃತಿಗಳು ಮತ್ತು ಪತ್ರಿಕೆಗಳು ಮಾರಾಟವಾಗದಿರುವುದು ವಿಷಾದನೀಯ. ಶಿಕ್ಷಕರು ಮತ್ತು ಸಮಾಜ ಮಕ್ಕಳಲ್ಲಿ ಓದಿನ ಹವ್ಯಾಸವನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.
ಸಾಹಿತಿ ಆನಂದ ಪಾಟೀಲ ಮಾತನಾಡಿ, ಮಕ್ಕಳ ಸಾಹಿತ್ಯಕ್ಕೆ ಅಕಾಡೆಮಿಕ್ ಸ್ವರೂಪ ಬರಬೇಕಿದೆ. ಮಕ್ಕಳ ಸಾಹಿತ್ಯದ ಬೆಳವಣಿಗೆಗೆ ಕಲಾಶಿಸಂ ಪ್ರತಿಷ್ಠಾನ ಮತ್ತು ಡಾ. ನಿಂಗು ಸೊಲಗಿಯವರು ಮಾಡುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಶಶಿಧರ ತೋಡಕರ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಸುಮಿತಾ ಹಿರೇಮಠ ನಿರೂಪಿಸಿದರು.
ಗೌರವ ಪ್ರಶಸ್ತಿ ಪುರಸ್ಕಾರದೊಟ್ಟಿಗೆ ಒಂದಿಡೀ ದಿನ ಚಂದ್ರಗೌಡ ಕುಲಕರ್ಣಿಯವರ ಸಾಹಿತ್ಯದ ಕುರಿತು ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತ್ತು.